ಲಘು ಬರಹದಿಂದ ಪ್ರೇರಣೆ ಅನುಮಾನ

7

ಲಘು ಬರಹದಿಂದ ಪ್ರೇರಣೆ ಅನುಮಾನ

Published:
Updated:
ಲಘು ಬರಹದಿಂದ ಪ್ರೇರಣೆ ಅನುಮಾನ

ಶಿವಮೊಗ್ಗ: ಸೃಜನಶೀಲ ಮತ್ತು ಗಂಭೀರ ಸಾಹಿತ್ಯಕ್ಕಿಂತ ಸಿದ್ಧಆಹಾರದಂತಿರುವ ಲಘು ಬರಹದ ಕಡೆ ಓದುಗ ಆಕರ್ಷಿತನಾಗುತ್ತಿದ್ದು, ಇದರಿಂದ ನಿಜವಾಗಿಯೂ ಪ್ರೇರಣೆ ಸಿಗುತ್ತದೆ ಎಂಬುದರ ಬಗ್ಗೆ ಅನುಮಾನಗಳಿವೆ ಎಂದು ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ಗೀತಾಂಜಲಿ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ ಪ್ರೊ.ಎಂ.ಎನ್. ಸುಂದರರಾಜ್ ಅವರ ಅಂಕಣ ಬರಹ ~ಹಿರಿಯರ ಹಾದಿ~ ಹಾಗೂ ಸಾಹಿತಿ ಮುದ್ದು ತೀರ್ಥಹಳ್ಳಿ ಅವರ `ಒಂದು ಚಂದ್ರನ ತುಂಡು~ ಕೃತಿಗಳನ್ನು ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಹಿತ್ಯದಲ್ಲಿ ಸದ್ಯ ಮತ್ತು ಶಾಶ್ವತದ ಪ್ರಶ್ನೆ ಸದಾ ಇದೆ. ಓದುಗ ಕೂಡ ಇಂದು ಆಯಾಸ ಪಟ್ಟು ಗಂಭೀರ ಸಾಹಿತ್ಯ ಓದಲು ಮನಸ್ಸು ಮಾಡುತ್ತಿಲ್ಲ; ಗ್ರಾಹಕನಂತೆ ಸಿದ್ಧ ಆಹಾರಕ್ಕೆ ಎದುರು ನೋಡುತ್ತಿದ್ದಾನೆ. ಆದರೆ, ಗಂಭೀರ ಸಾಹಿತ್ಯ ಮನುಷ್ಯನನ್ನು ಅರಳಿಸುತ್ತದೆ. ಒಳ್ಳೆಯದಕ್ಕೆ ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.ಮೌಲ್ಯಯುತ ಸಮಾಜ ಕಟ್ಟುವ ಬರಹಗಾರರ ಬದುಕೇ ಇಂದು ಪ್ರಶ್ನಾರ್ಹವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೃತಿಕಾರ ಮುಖ್ಯನಲ್ಲ; ಕೃತಿ ಮುಖ್ಯ ಎಂಬುದು ಪಾಶ್ಚಿಮಾತ್ಯ ಸಿದ್ಧಾಂತ. ಆದರೆ, ಕುವೆಂಪು ಪ್ರಕಾರ, ಕೃತಿ ಜತೆ ಕೃತಿಗಾರರ ಬದುಕು ಮುಖ್ಯ. ಅಪ್ರಾಮಾಣಿಕ ಮನುಷ್ಯನ ಸಾಹಿತ್ಯ ಒಳ್ಳೆಯ ಸಾಹಿತ್ಯವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.ಒಳ್ಳೆಯ ಸಾಹಿತ್ಯ ತನ್ನ ಕಾಲದ ಕೇಡುಗಳನ್ನು ತಿದ್ದುವ ಕೆಲಸ ಮಾಡಬೇಕು. ಆದರೆ, ಸಾಹಿತಿಗಳೆಂಬ ಆತ್ಮವಂಚಕರ ಕೂಟ ಇಂದು ಪ್ರಭುತ್ವದ ಜತೆ ಅನೈತಿಕ ಸಖ್ಯ ಬೆಳೆಸಿಕೊಂಡಿದೆ ಎಂದು ದೂರಿದರು.

ಕೃತಿಗಳನ್ನು ಬಿಡುಗಡೆ ಮಾಡಿದ ಚಿತ್ರದುರ್ಗದ ಶಿವಮೂರ್ತಿ ಮುರುಘ ಶರಣರು ಮಾತನಾಡಿ, ಸಾಹಿತ್ಯ, ವಿಚಾರ ಪ್ರಧಾನವಾಗಿರಬೇಕು ಎಂದರು.ಸಾಹಿತಿ ಡಾ.ಕಾಳೇಗೌಡ ನಾಗವಾರ, ಬರಹಗಾರ ಸರ್ಜಾಶಂಕರ ಹರಳಿಮಠ ಕೃತಿಗಳನ್ನು ಕುರಿತು ಮಾತನಾಡಿದರು. ಕೃತಿಕಾರರಾದ ಪ್ರೊ.ಎಂ.ಎನ್.ಸುಂದರರಾಜ್, ಮುದ್ದು ತೀರ್ಥಹಳ್ಳಿ ಮಾತನಾಡಿದರು.

ಬಸವ ಮರುಳಸಿದ್ಧ ಸ್ವಾಮೀಜಿ, ಪ್ರಕಾಶಕ ಜಿ.ಬಿ.ಟಿ. ಮೋಹನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry