ಶುಕ್ರವಾರ, ಮೇ 14, 2021
31 °C

ಲಘು ಲಾಠಿ ಪ್ರಹಾರ: ಒಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಭದ್ರಾ ಜಲಾಶಯಕ್ಕೆ ಹೋಗುವ ಮುಖ್ಯರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಸಂಪರ್ಕ ರಸ್ತೆಯ ನಡುವಿನ ಚಾನಲ್ ಕಟ್ಟಡ ಕುಸಿದು ಬಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.ಗ್ಯಾರೇಜ್ ಕ್ಯಾಂಪ್, ಶಂಕರಘಟ್ಟ, ಶಾಂತಿನಗರ ಗ್ರಾಮದ ನೂರಾರು ಮಂದಿ ಬೆಳಿಗ್ಗೆ 8ರಿಂದ ಜಲಾಶಯಕ್ಕೆ ಹೋಗುವ ರಸ್ತೆ ಬಳಿ ಷಾಮಿಯಾನ ಹಾಕಿ ಸಂಚಾರಕ್ಕೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ತಹಶೀಲ್ದಾರ್ ಅಭಿಜಿನ್ ಅವರು, ಸ್ಥಳಕ್ಕೆ ಭೇಟಿ ನೀಡಿ ಮುಖಂಡರ ಜತೆ ಮಾತುಕತೆ ನಡೆಸಿದರು. ಈ ಹಂತದಲ್ಲಿ ಮುಂದಿನ ಕೆಲವು ದಿನದಲ್ಲಿ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸಹ ಅವರು ನೀಡಿದರು.ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಪರಿಶೀಲಿಸಬೇಕು ಎಂದು ಆಗ್ರಹಿಸಿ ಹೋರಾಟ ಮುಂದುವರಿಸಿದರು. ಮಧ್ಯಾಹ್ನ 2ಕ್ಕೆ ಕಳೆದರೂ ಸಂಚಾರಕ್ಕೆ ಅವಕಾಶ ನೀಡಿದ ಕಾರಣ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಯಿತು.ಲಘು ಲಾಠಿ ಪ್ರಹಾರ: ಪ್ರತಿಭಟನೆ ಹಿಂದಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆಡಿವೈಎಸ್‌ಪಿ ಶ್ರೀಧರ್ ಮನವಿ ಮಾಡಿದರು. ಇದಕ್ಕೆ ಜಗ್ಗದ ಸಂದರ್ಭದಲ್ಲಿ ಷಾಮಿಯಾನ ಕಿತ್ತ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಗಾಯಗೊಂಡಿದ್ದಾರೆ. ಅವರನ್ನು ಬಿಆರ್‌ಪಿ ಸಂಯುಕ್ತ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ವೈದ್ಯಾಧಿಕಾರಿ ಸೂಚನೆ ನೀಡಿದರು.ಈ ಘಟನೆ ನಂತರ ಸಹ ರಸ್ತೆಯ ಒಂದು ಮಗ್ಗುಲಲ್ಲಿ ಗ್ರಾಮಸ್ಥರು ತಮ್ಮ ಪ್ರತಿಭಟನೆ ನಡೆಸಿದರು. ಸಂಜೆ ವೇಳೆಗೆ ಜಿಲ್ಲಾಧಿಕಾರಿ ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತಾ ಸ್ಥಳಕ್ಕೆ ಭೇಟಿ ನೀಡಿ ಜನರ ಬೇಡಿಕೆ ಆಲಿಸಿದರು.ಸ್ಥಳಕ್ಕೆ ನೀರಾವರಿ ಇಲಾಖೆ ಎಂಜನಿಯರ್‌ಗಳಾದ ನಂದೀಶ್, ತಿಮ್ಮಪ್ಪ, ಬಸವರಾಜ್ ಸೇರಿದಂತೆ ಇನ್ನಿತರ ಆಗಮಿಸಿ, ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿದರು. ಮುಂದಿನ ಮೂರು ತಿಂಗಳಿನಲ್ಲಿ ಇದರ ದುರಸ್ತಿಗೆ ಕ್ರಮ ತೆಗೆದುಕೊಳ್ಳುವ ಭರವಸೆ ಸಿಕ್ಕ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ತಾ.ಪಂ. ಸದಸ್ಯ ಗಿರೀಶ್, ರಮೇಶ್, ಶ್ರೀನಿವಾಸ್ ಇತರ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜೆಡಿಎಸ್ ಘಟಕ ಅಧ್ಯಕ್ಷ ಆರ್. ಕರುಣಾಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.