ಬುಧವಾರ, ಮೇ 12, 2021
18 °C
ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಹೆದ್ದಾರಿಯಲ್ಲಿ ಕಾರ್ಯಕರ್ತರ ಕಾವಲು

ಲಘು ಲಾಠಿ ಪ್ರಹಾರ, ಬಂಧನ-ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಬಿಜೆಪಿ ಕಾರ್ಯಕರ್ತರಿಂದ ಹೆದ್ದಾರಿಯಲ್ಲೇ ಚೆಕ್‌ಪೋಸ್ಟ್...! ವಾಹನಗಳ ತಪಾಸಣೆ. ದಿಢೀರ್ ಪ್ರತಿಭಟನೆ, ಎಸ್‌ಪಿ- ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಡುವೆ ಮಾತಿನ ಚಕಮಕಿ, ಲಘು ಲಾಠಿ ಪ್ರಹಾರ. ಕಲ್ಲು ತೂರಾಟ, 37 ಜನರ ಬಂಧನ, ಬಿಡುಗಡೆ. ಕೊನೆಗೂ ಸಿನಿಮೀಯ ರೀತಿಯಲ್ಲಿ ಪೊಲೀಸ್ ವಾಹನಗಳ ಬೆಂಗಾವಲಲ್ಲಿ ರೊಯ್ಯನೆ ಕಾರುಗಳಲ್ಲಿ ಜಿಲ್ಲಾ ಪಂಚಾಯ್ತಿಗೆ ಆಗಮಿಸಿದ ಬಿಜೆಪಿ ಸದಸ್ಯರು...

ಇದು ಬುಧವಾರ ಇಲ್ಲಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ನಡೆದ ಆತಂಕಕಾರಿ ಪ್ರಹಸನ.ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಾಂಗ್ರೆಸ್‌ನ ಜನಾರ್ದನ ಹುಲಿಗಿ ಮತ್ತು ಬಿಜೆಪಿಯ ಅಮರೇಶ್ ಕುಳಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಸದಸ್ಯರ‌್ಯಾರೂ ಪತ್ತೆಯೇ ಇರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯ ವ್ಯಾಪ್ತಿಯ 500 ಮೀಟರ್ ಪ್ರದೇಶದಲ್ಲಿ ಸೆ.144ರ ಅಡಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಬೆಳಿಗ್ಗೆ11.30ರ ವೇಳೆಗೆ ಜಿ.ಪಂ. ಮುಂಭಾಗದ ಹೆದ್ದಾರಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಜಮಾಯಿಸಿದರು. ನಗರದ ಪ್ರವೇಶ ದ್ವಾರ ಹಾಗೂ ನಗರದಿಂದ ಜಿಲ್ಲಾಡಳಿತ ಭವನದ ರಸ್ತೆಯ ಎರಡೂ ಪಾರ್ಶ್ವಗಳಲ್ಲಿ ಕಾರ್ಯಕರ್ತರು ಕಾವಲಿಗೆ ನಿಂತರು. ಹೆದ್ದಾರಿಯಲ್ಲಿ ಸಂಚರಿಸುವ ಬಸ್ಸು, ಇತರ ವಾಹನಗಳನ್ನು ಹದ್ದಿನಕಣ್ಣಿನಿಂದ ತಪಾಸಣೆ ನಡೆಸಿದರು.ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಲು ಪೊಲೀಸರು ನಗರ ಪ್ರವೇಶ ದ್ವಾರದ ಆಚೆಗಿದ್ದ ಬಿಜೆಪಿ ಕಾರ್ಯಕರ್ತರನ್ನು ಜಾಗ ಖಾಲಿ ಮಾಡಲು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಎರಡು ಬಾರಿ ವಿನಂತಿಸಿದರೂ ಕಾರ್ಯಕರ್ತರು ಕದಲಲಿಲ್ಲ. `ನಾವೇಕೆ ಕದಲಬೇಕು? ಏನಪ್ಪಾ ನಿಂದು...' ಎಂದು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಲ ಶೇಷಗಿರಿ ರಾವ್ ಎಸ್‌ಪಿ ಅವರನ್ನೇ ಪ್ರಶ್ನಿಸಿದರು.ಮಾತಿಗೆ ಮಾತು ಬೆಳೆಯಿತು. ರೇಗಿದ ಎಸ್‌ಪಿ ಅವರು ಶೇಷಗಿರಿ ರಾವ್, ಅಧ್ಯಕ್ಷ ಸ್ಥಾನಾಕಾಂಕ್ಷಿ  ಬಿಜೆಪಿ ಸದಸ್ಯ ಅಮರೇಶ್ ಕುಳಗಿ ಅವರ ಮಾವ ಶರಣಪ್ಪ ಕುಳಗಿ ಅವರನ್ನು ಬಂಧಿಸಿದರು. ಈ ಮಧ್ಯೆ ಸಾಕಷ್ಟು ನೂಕಾಟ ತಳ್ಳಾಟ ನಡೆಯಿತು. ಉದ್ರಿಕ್ತ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕೆಲವು ಪೊಲೀಸರೂ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಸುದ್ದಿವಾಹಿನಿಯ ಕ್ಯಾಮೆರಾಮನ್ ಒಬ್ಬರಿಗೆ ಕಲ್ಲೇಟು ಬಿದ್ದಿದೆ.ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನೂ ಪೊಲೀಸರು ಚದುರಿಸಿದರು. ಪೊಲೀಸರು ಕಾಂಗ್ರೆಸ್ ಪರ ಕಾರ್ಯನಿರ್ವಹಿಸಿ ತಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಬಳಿಕ ಮಾಜಿ ಶಾಸಕ ಕರಡಿ ಸಂಗಣ್ಣ, ಪರಣ್ಣ ಮುನೋಳಿ, ವಿಧಾನಪರಿಷತ್ ಸದಸ್ಯ ಹಾಲಪ್ಪಾಚಾರ್, ಎಸ್‌ಪಿ  ನಡುವೆ ಮಾತುಕತೆ ನಡೆದು ಪರಿಸ್ಥಿತಿ ತಿಳಿಯಾಯಿತು.ಸಿನಿಮೀಯ ರೀತಿ ಪ್ರವೇಶ: ರಡೂ ಕಡೆ ಜಮಾಯಿಸಿದ್ದ ಉಭಯ ಪಕ್ಷಗಳ ಕಾರ್ಯಕರ್ತರನ್ನು ಅತ್ತಿಂದಿತ್ತ ಓಡಾಡಿಸಿ ಪರಿಸ್ಥಿತಿ ತಿಳಿಗೊಳಿಸುತ್ತಿದ್ದಂತೆಯೇ ಮಧ್ಯಾಹ್ನ 2.26ರ ವೇಳೆಗೆ ದಿಢೀರನೆ ಪೊಲೀಸ್ ವ್ಯಾನ್ ಮುನಿರಾಬಾದ್ ಕಡೆಯಿಂದ ಬಂದಿತು. ಅದರ ಹಿಂದೆ ಬೆಂಗಾವಲು ವಾಹನ ಬಳಿಕ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಕಾರು ಅದರ ಹಿಂದೆ ಸುಮಾರು 5 ಕಾರುಗಳಲ್ಲಿ `ನಾಪತ್ತೆ'ಯಾಗಿದ್ದ ಬಿಜೆಪಿ ಸದಸ್ಯರು ಆಗಮಿಸಿದರು. ವಾಹನಗಳ ವೇಗ ಕಂಡು ಉಭಯ ಕಡೆ ಜಮಾಯಿಸಿದ್ದ ಕಾರ್ಯಕರ್ತರು ಬದಿಗೆ ಸರಿದರು. ವಾಹನದೊಳಗೇ ಕುಳಿತು ನಗೆಬೀರಿ ಸಾಗುತ್ತಿದ್ದ ಸದಸ್ಯರನ್ನು ಕಂಡು ಕೈ ಕೈ ಹೊಸಕಿಕೊಂಡ ಬಿಜೆಪಿ ಕಾರ್ಯಕರ್ತರು ಅಸಹಾಯಕರಾಗಿ ಧಿಕ್ಕಾರ ಕೂಗುವುದಷ್ಟೇ ನಡೆಯಿತು.ಬಂಧನ: ಸದಸ್ಯರ ಆಗಮನಕ್ಕೆ ಅಡ್ಡಿಪಡಿಸಿದ್ದು, ಪ್ರತಿಭಟನೆ ನಡೆಸಿದ್ದಕ್ಕಾಗಿ ಸಂಸತ್ ಸದಸ್ಯ ಶಿವರಾಮಗೌಡ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಹಾಲಪ್ಪಾಚಾರ್, ಮಾಜಿ ಶಾಸಕರಾದ ಕರಡಿ ಸಂಗಣ್ಣ, ಪರಣ್ಣ ಮುನವಳ್ಳಿ ಸೇರಿದಂತೆ 37 ಮಂದಿಯನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.