ಗುರುವಾರ , ನವೆಂಬರ್ 14, 2019
19 °C

ಲಮಾಣಿ ಆತ್ಮಕಥನ ಲೋಕಾರ್ಪಣೆ: ಕಾವ್ಯದಲ್ಲಿ ಆತ್ಮಕತೆ ಅಪರೂಪ

Published:
Updated:

ಮೈಸೂರು: `ಆತ್ಮಕತೆಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗಿವೆ. ಆದರೆ ಕಾವ್ಯದಲ್ಲಿ ಪ್ರಕಟವಾಗಿರುವುದು ಮಾತ್ರ ಅಪರೂಪ~ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ಹೂಟಗಳ್ಳಿಯ ಒಡನಾಡಿ ಸೇವಾ ಸಂಸ್ಥೆಯಲ್ಲಿ ಭಾರತೀಯ ಜನಕಲಾ ಸಮಿತಿ (ಇಪ್ಟಾ), ಅನಿಕೇತನ ಸಂಸ್ಥೆ ಆಶ್ರಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಶಿರಗಾನಹಳ್ಳಿ ಶಾಂತನಾಯ್ಕರ `ಲಮಾಣಿ-ಆತ್ಮಕಥನ~, `ಬರವಣಿಗೆ ಮತ್ತು ಸಿದ್ಧಾಂತಗಳು~-ವೈಚಾರಿಕ ಲೇಖನಗಳ ಸಂಗ್ರಹ ಹಾಗೂ ಶ್ರೀದೇವಿ ಕೆರೆಮನೆ ಅವರ `ಪ್ರೀತಿ ಎಂದರೆ ಇದೇನಾ?~ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.`ದ.ರಾ.ಬೇಂದ್ರೆ ಅವರು `ಸಖಿ~ ಕವನ ಸಂಕಲನದಲ್ಲಿ ತಮ್ಮ ನೋವು, ನಲಿವುಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಆದರೆ ನೇರವಾಗಿ ಅದನ್ನು ಆತ್ಮಕತೆ ಎಂದು ಹೇಳಿಕೊಂಡಿಲ್ಲ. ಡಾ.ಸಿದ್ದಲಿಂಗಯ್ಯನವರ ಆತ್ಮಕಥನ `ಊರು-ಕೇರಿ~, ಡಾ.ಅರವಿಂದ ಮಾಲಗತ್ತಿ ಅವರ `ಗೌರ‌್ನಮೆಂಟ ಬ್ರಾಹ್ಮಣ~ ಆತ್ಮಕಥನಗಳಲ್ಲಿ ದಲಿತರ ನೋವು-ನಲಿವುಗಳನ್ನು ಕಾಣಬಹುದು. ಆದರೆ, ಕಾವ್ಯದಲ್ಲಿ ಆತ್ಮಕತೆ ಬರೆದಿರುವುದು ಅಪರೂಪದ ಮತ್ತು ಶ್ಲಾಘನೀಯ ಕೆಲಸ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಬರವಣಿಗೆ ಮತ್ತು ಸಿದ್ಧಾಂತ ಕೃತಿಗಳಲ್ಲಿ ಪ್ರಗತಿಪರ ವಿಚಾರಧಾರೆಗಳ ಕುರಿತು ಬೆಳಕು ಚೆಲ್ಲಲಾಗಿದೆ. ಲಂಬಾಣಿ ಭಾಷೆಯ ವೈವಿಧ್ಯತೆಯ ಸೊಗಡನ್ನು ಈ ಕೃತಿಯಲ್ಲಿ ಕಾಣಬಹುದು. ಅದೇ ರೀತಿ ಕುವೆಂಪು ಅವರ ಅನಿಕೇತನ ಕಾವ್ಯಕ್ಕೆ ಆಧುನಿಕತೆಯ ಲೇಪ ಕೊಟ್ಟು ವಿಶಾಲ ದೃಷ್ಟಿಕೋನದಿಂದ ನೋಡುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಹೋಗದಿರುವ ಬಗ್ಗೆ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ. ಎಲ್ಲ ರೀತಿಯಲ್ಲೂ ಇದೊಂದು ಉತ್ತಮ ಕೃತಿಯಾಗಿದೆ~ ಎಂದರು.`ಶ್ರೀದೇವಿ ಕೆರೆಮನೆ ಅವರ `ಪ್ರೀತಿ ಎಂದರೆ ಇದೇನಾ?~ ಕೃತಿಯು ಪ್ರೇಮ ಪತ್ರಗಳ ಬರಹದ ಸಂಗ್ರಹವಾಗಿದೆ. ಲವಲವಿಕೆಯ, ನವಿರಾದ ಬರಹವನ್ನು ಈ ಕೃತಿಯಲ್ಲಿ ಕಾಣಬಹುದು. ಆಧುನಿಕ ಕಾಲದಲ್ಲಿ ಲಭ್ಯವಿರುವ ಮೊಬೈಲ್ ಮತ್ತು ಎಸ್‌ಎಂಎಸ್‌ಗಳ ನಂತರದ ಅವಧಿಯಲ್ಲಿ ಪ್ರೀತಿ, ಪ್ರೇಮ ಮೂಡಿ ಬಂದ ಬಗೆಯನ್ನು ಲೇಖಕಿ ಸೃಜನಶೀಲ ಬರವಣಿಗೆಯ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ. ಆ ಮೂಲಕ ಪ್ರೀತಿಯ ವಿಭಿನ್ನ ಆಯಾಮಗಳನ್ನು ತೆರೆದಿಟ್ಟಿದ್ದಾರೆ~ ಎಂದು ಅಭಿಪ್ರಾಯಪಟ್ಟರು.`ಬರವಣಿಗೆ ಮತ್ತು ಸಿದ್ಧಾಂತಗಳು~ ಕೃತಿಯ ಕುರಿತು ಸಂಗೀತ ವಿ.ವಿ ಕುಲಸಚಿವ ಪ್ರೊ. ನೀಲಗಿರಿ ಎಂ.ತಳವಾರ್, `ಲಮಾಣಿ-ಆತ್ಮಕಥನ ಕಾವ್ಯ~ ಕುರಿತು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಜಿ.ಕೆ.ರವೀಂದ್ರಕುಮಾರ್ ಮಾತನಾಡಿದರು.ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಇಪ್ಟಾ ಸಂಸ್ಥೆಯ ಅಧ್ಯಕ್ಷ ಎಚ್.ಬಿ.ರಾಮಕೃಷ್ಣ, ಕಾರ್ಯದರ್ಶಿ ಗುರುಪ್ರಕಾಶ್, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)