ಭಾನುವಾರ, ನವೆಂಬರ್ 17, 2019
29 °C

ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ

Published:
Updated:

ಬೆಂಗಳೂರು: `ಸಾಮಾಜಿಕ ಬದ್ಧತೆ ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಕ್ಲಬ್ ಜನಪರ ಕಾರ್ಯಕ್ರಮಗಳಿಂದ ಖ್ಯಾತಿ ಗಳಿಸುತ್ತಿದೆ~ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ವ್ಯವಸ್ಥಾಪಕ  ನಿರ್ದೇಶಕ ಎನ್.ಶಿವಶೈಲಂ ಶ್ಲಾಘಿಸಿದರು.

ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್- ಡಿಸ್ಟ್ರಿಕ್ಟ್ 317 ಇ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿರುವವರು ಈ ಸಂಸ್ಥೆಯ ಸದಸ್ಯರಾಗಿರುವುದರಿಂದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಲಿ~ ಎಂದರು.

ಡಿಸ್ಟ್ರಿಕ್ಟ್ ಗರ್ವನರ್ ಸಿ.ಕೆ.ಕೃಷ್ಣಮೂರ್ತಿ ಮಾತನಾಡಿ, `ಪ್ರತಿ ವರ್ಷವು ಲಯನ್ಸ್ ಕ್ಲಬ್‌ಗೆ ಸೇರುವ ಸದಸ್ಯರ ಸಂಖ್ಯೆ ಹೆಚ್ಚುತ್ತಿದ್ದು, ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ~ ಎಂದು ತಿಳಿಸಿದರು. `ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಪರಿಸರವನ್ನು ಮಲಿನಗೊಳಿಸುವ ಅಂಶಗಳ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು~ ಎಂದರು. ವರ್ಷ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಶಿಬಿರದಲ್ಲಿ ಐವತ್ತು ಸಾವಿರ ಮಂದಿ ಭಾಗವಹಿಸಿದ್ದು, ಅದರಲ್ಲಿ ಸುಮಾರು ಹತ್ತು ಸಾವಿರ ಮಂದಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆರೋಗ್ಯ, ಶುಚಿತ್ವ ಕುರಿತ ಅರಿವು ಕಾರ್ಯಕ್ರಮಕ್ಕೆ ಹೆಚ್ಚಿ ಒತ್ತು ನೀಡಲಾಗುವುದು~ ಎಂದು ತಿಳಿಸಿದರು.

ಸಾರ್ವಜನಿಕ ಬಳಕೆಗೆ ಅಂಬುಲೆನ್ಸ್‌ನ್ನು ಕೊಡುಗೆಯಾಗಿ ನೀಡಲಾಯಿತು. ಆರ್.ಟಿ.ನಗರ ಪಬ್ಲಿಕ್ ಶಾಲೆಯು ಇದರ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿದೆ. ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಆರ್ಥಿಕವಾಗಿ ಹಿಂದುಳಿದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಅಂಗವಿಕಲರಿಗೆ ಗಾಲಿಕುರ್ಚಿಗಳನ್ನು ನೀಡಲಾಯಿತು.

ಸದಸ್ಯ ಕಾರ್ಯದರ್ಶಿ ಪಿ.ಉನ್ನಿಕೃಷ್ಣನ್ ನಾಯರ್, ಖಚಾಂಚಿ ಬಿ.ಎಸ್.ನಾಗರಾಜ್,  ಕಾರ್ಯ ದರ್ಶಿಗಳಾದ ಬಿ.ಎ.ದಾಸೇಗೌಡ, ಪಿ.ಜಗನ್‌ಮೋಹನ ರೆಡ್ಡಿ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ  ಬಿ.ಮೋಹನ್, ಜಿ.ಕೆ.ಮನೋಹರ್ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)