ಲಯಬದ್ಧ ಹೋರಾಟ ಕೂಗಾಟ!

7

ಲಯಬದ್ಧ ಹೋರಾಟ ಕೂಗಾಟ!

Published:
Updated:

ನೀಲಿ ಜೀನ್ಸ್, ಕಪ್ಪು ಟೀಶರ್ಟ್ ತೊಟ್ಟು ಬಂದ ಪುನೀತ್ ರಾಜ್‌ಕುಮಾರ್ ಕಾಫಿ ಹೀರುತ್ತಲೇ ಗೆಳೆಯರತ್ತ ಕೈ ಬೀಸಿದರು. ಸಂಭಾಷಣೆಕಾರ ಗುರುಪ್ರಸಾದ್ ಕಂಡಾಕ್ಷಣ ಕೈ ಕುಲುಕಿ ಬಾಚಿ ತಬ್ಬಿದರು. ಅದು `ಯಾರೇ ಕೂಗಾಡಲಿ' ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಪುನೀತ್ ಅತಿಥಿಗಳನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಳ್ಳುತ್ತಿದ್ದರು. ಕಾರ್ಯಕ್ರಮ ಶುರು ಆದುದು ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಪ್ರಾರ್ಥನೆ ಹಾಡುವ ಮೂಲಕ.ಮಾತನಾಡುವ ಮೂಡ್‌ನಲ್ಲಿದ್ದ ರಾಘವೇಂದ್ರ ರಾಜ್‌ಕುಮಾರ್, ತಮ್ಮ ಗೆಳೆಯನ ಒತ್ತಾಯಕ್ಕೆ ಮಣಿದು ತಮಿಳಿನ `ಪೊರಾಲಿ' ಚಿತ್ರವನ್ನು ರೀಮೇಕ್ ಮಾಡಿದ್ದಾಗಿ ಹೇಳಿಕೊಂಡರು. ಚಿತ್ರದ ಮೂಲ ನಿರ್ದೇಶಕರೇ ಬಂದು `ಯಾರೇ ಕೂಗಾಡಲಿ' ನಿರ್ದೇಶಿಸಿರುವುದು ಅವರ ಖುಷಿಯನ್ನು ಇಮ್ಮಡಿಸಿದೆ.

ನಿರ್ದೇಶಕ ಸಮುದ್ರ ಖಣಿ ಅವರ ಬದ್ಧತೆ ಇಷ್ಟವಾಗಿದೆ. ಕ್ಯಾಮೆರಾಮನ್ ಒಬ್ಬರನ್ನು ಮಾತ್ರ ಕರೆತರುವುದಾಗಿ ಹೇಳಿ ಉಳಿದಂತೆ ವಜ್ರೇಶ್ವರಿ ಸಂಸ್ಥೆಯ ತಂಡವನ್ನೇ ಬಳಸಿದ ಖಣಿ ಅವರನ್ನು ಪ್ರಶಂಸಿಸಿದ ರಾಘವೇಂದ್ರ, `ಪುನೀತ್ ಮತ್ತು ಯೋಗೀಶ್ ಒಟ್ಟೊಟ್ಟಿಗೆ ಸಿನಿಮಾ ಮಾಡುತ್ತಲೇ ಇರಬೇಕು' ಎಂದರು. ಚಿತ್ರದಲ್ಲಿ ನಟಿಸಿರುವ ಗಿರೀಶ್ ಕಾರ್ನಾಡ್, ಸಾಧುಕೋಕಿಲ, ಶೋಭರಾಜ್, ಮಾಳವಿಕಾ ಮುಂತಾದವರ ನಟನೆಗೆ ಅವರ ಮೆಚ್ಚುಗೆ ಮುದ್ರೆ ಸಿಕ್ಕಿತು.ನಿರ್ದೇಶಕರ ಕೆಲಸ ಪುನೀತ್‌ಗೂ ಇಷ್ಟವಾಗಿದೆ. `ಪೈರಸಿ ಮೊರೆ ಹೋಗದೇ ಸೀಡಿ ಖರೀದಿಸಿ ಹಾಡುಗಳನ್ನು ಕೇಳಿ' ಎಂಬ ಕಳಕಳಿಯ ಮನವಿ ಅವರಿಂದ ಬಂತು. ಜೊತೆಗೆ ಸಿನಿಮಾಗಳನ್ನುಥಿಯೇಟರ್‌ಗಳಲ್ಲಿಯೇ ನೋಡಿ ಎಂಬ ಕಾಳಜಿಯೂ ಇತ್ತು.ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಅಲ್ಲಿಯೇ ಒಬ್ಬರಾಗಿ ಹೋಗಿರುವುದಾಗಿ ಹೇಳಿಕೊಂಡರು ಸಂಗೀತ ನಿರ್ದೇಶಕ ಹರಿಕೃಷ್ಣ. `ಯಾರೇ ಕೂಗಾಡಲಿ' ಚಿತ್ರದಲ್ಲಿ ಅಪರೂಪ ಎನಿಸುವ ಸನ್ನಿವೇಶಗಳಿಗೆ ರಾಗ ಸಂಯೋಜನೆ ಮಾಡಬೇಕಾಗಿ ಬಂದದ್ದನ್ನು ನೆನಪಿಸಿಕೊಂಡ ಅವರು `ಕತೆಗೆ ಅಗತ್ಯ ಇರುವಷ್ಟು ಹಾಡುಗಳು ಮಾತ್ರ ಇದರಲ್ಲಿ ಇವೆ. ಅನಗತ್ಯವಾಗಿ ಏನನ್ನೂ ಸೇರಿಸಿಲ್ಲ' ಎಂದರು.ನಿರ್ದೇಶಕ ಸಮುದ್ರ ಖಣಿ ಅವರ ಮಾತಿನಲ್ಲಿ ನಿರ್ಮಾಪಕರು ಮತ್ತು ಕಲಾವಿದರ ಬಗ್ಗೆ ಮೆಚ್ಚುಗೆ ಇತ್ತು. ಹೆಚ್ಚು ಮಾತನಾಡದ ಅವರು `ದೇವರು ದೊಡ್ಡವನು' ಎಂದಷ್ಟೇ ಹೇಳಿ ಕುಳಿತರು.ಸಂಭಾಷಣೆ ಬರೆದಿರುವ ಗುರುಪ್ರಸಾದ್ ಹೋರಾಟಗಾರ ಎಂಬ ಅರ್ಥಸೂಸುವ `ಪೊರಾಲಿ'ಗೆ ಸೂಕ್ತವಾಗಿ `ಯಾರೇ ಕೂಗಾಡಲಿ' ಎಂಬ ಹೆಸರನ್ನು ಸೂಚಿಸಿದ್ದಾಗಿ ಹೇಳಿಕೊಂಡರು.

ಇತ್ತೀಚೆಗೆ ಸಿನಿಮಾ ನೋಡಿ, ಅವರು ಖುಷಿಪಟ್ಟರಂತೆ. ನಟಿ ಮಾಳವಿಕಾ ಅವರಿಗೆ ಇದೇ ಮೊದಲು ಪಾರ್ವತಮ್ಮ ರಾಜಕುಮಾರ್ ಅವರ ಸಹಿ ಇದ್ದ ಚೆಕ್ ಸಿಕ್ಕಿತಂತೆ. ಅದು ಅವರಲ್ಲಿ ಸಾರ್ಥಕಭಾವ ಮೂಡಿಸಿದೆಯಂತೆ. ಉಳಿದಂತೆ ಕಲಾ ನಿರ್ದೇಶಕ ಕಲೈಮಾಮಣಿ, ಛಾಯಾಗ್ರಾಹಕ ಸುಕುಮಾರನ್ ವಜ್ರೇಶ್ವರಿ ಸಂಸ್ಥೆಯ ಆತಿಥ್ಯಕ್ಕೆ ವಂದಿಸಿದರು. ನಟಿಯರಾದ ಸಿಂಧು ಲೋಕನಾಥ್ ಮತ್ತು ನಿವೇದಿತಾ ಅವಕಾಶ ನೀಡಿದ್ದಕ್ಕೆ ಧನ್ಯ ಎಂದರು. ಕಾರ್ಯಕ್ರಮದ ಕಡೆಯಲ್ಲಿ ಚಿತ್ರ ತಂಡದವರೆಲ್ಲಾ ಸೇರಿ ಚಿತ್ರದ ದನಿಮುದ್ರಿಕೆ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry