ಮಂಗಳವಾರ, ಮೇ 24, 2022
25 °C

ಲಲಿತಕಲೆಯಿಂದ ಚೇತೋಹಾರಿ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ಲಲಿತ ಕಲೆಗಳು ಮನುಷ್ಯನಿಗೆ ಚೇತೋಹಾರಿ ಅನುಭವವನ್ನು ನೀಡುತ್ತವೆ ಎಂದು ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ಕನ್ನಡ ಮಿತ್ರ ಸಂಘದ ವತಿಯಿಂದ ಪಟ್ಟಣದ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ‘ಸತ್ರು ಅಂದ್ರೆ ಸಾಯ್ತಾರಾ?’ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.ಬದುಕು ಸಂಕೀರ್ಣವಾಗಿದ್ದು ಬರಿ ಹೊಟ್ಟೆ ತುಂಬಿಸಿಕೊಳ್ಳುವುದೇ ಜೀವನದ ಗುರಿಯಲ್ಲ. ಬದುಕಿನ ಸಾರವನ್ನು ಅನುಭವದ ಮೂಲಕ ಅರಗಿಸಿಕೊಂಡು ಕ್ರಿಯಾಶೀಲರಾಗಿ ಪ್ರತಿಭೆಯನ್ನು ಹೊರಹಾಕುವುದು ಬದುಕಿನ ಮೂಲ ಉದ್ದೇಶವಾಗಬೇಕು ಎಂದು ಅವರು ತಿಳಿಸಿದರು. ಆತ್ಮಸಾಕ್ಷಿಯನ್ನು ಜೀವಂತವಾಗಿಟ್ಟುಕೊಳ್ಳಲು ನಾಡಿನ ಸಾಂಸ್ಕೃತಿಕ ಜಾಗೃತಿಯನ್ನುಂಟುಮಾಡಲು ಕಲೆ ಸಹಕಾರಿಯಾಗುತ್ತದೆ ಎಂದು ಅವರು ವಿವರಿಸಿದರು.ಪ್ರಸ್ತುತ ನಾಟಕವನ್ನು ಇತ್ತೀಚೆಗೆ ಅಗಲಿದ ಸರಳ, ಸಜ್ಜನಿಕೆಯ, ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರಿಗೆ ಅರ್ಪಿತ ಎಂದು ಅವರು ತಿಳಿಸಿದರು.ರಂಗಭಾರತಿಯ ಮೂಲಕ ರಂಗಭೂಮಿಗೆ ಜೀವಂತಿಕೆಯನ್ನು ತುಂಬಿದ, ಕಲಾವಿದರನ್ನು ಪ್ರೋತ್ಸಾಹಿಸಿದ ಎಂ.ಪಿ. ಪ್ರಕಾಶ್‌ರಿಗೆ ನಾಟಕ ಪ್ರದರ್ಶನದ ಮೂಲಕ ಕ್ಷೇತ್ರದ ಶಾಸಕರು ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ ಎಂದರು.ವೇದಿಕೆಯಲ್ಲಿ ಪ.ಪಂ ಅಧ್ಯಕ್ಷೆ ಸೌಭಾಗ್ಯಮ್ಮ ಕೊತ್ಲಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಂ. ರವಿಕುಮಾರ್, ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ್, ಸಾಹಿತಿಗಳಾದ ಮೇಟಿ ಕೊಟ್ರಪ್ಪ, ಹುರುಕಡ್ಲಿ ಶಿವಕುಮಾರ, ಅಂಗಡಿ ಸಿದ್ದಣ್ಣ, ಬ್ಯಾಳಿ ವಿಜಯಕುಮಾರಗೌಡ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕನ್ನಡ ಮಿತ್ರ ಸಂಘದ ಅಧ್ಯಕ್ಷ ಆರ್.ಕೆ. ಶೆಟ್ರು ವಹಿಸಿದ್ದರು. ಶಿಕ್ಷಕ ನಂದಿಬಸವರಾಜ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕೆ.ಎಂ.ವೀರೇಶ್  ನಿರೂಪಿಸಿದರು.‘ಸತ್ರು ಅಂದ್ರೆ ಸಾಯ್ತಾರಾ?’ ಕನ್ನಡ ಮಿತ್ರ ಸಂಘದ ವತಿಯಿಂದ ಹವ್ಯಾಸಿ ಕಲಾವಿದರು ಅಭಿನಯಿಸಿದ ಭಾರತೇಂದು ಹರಿಶ್ಚಂದ್ರ ಅವರ ಸತ್ರು ಅಂದ್ರೆ ಸಾಯ್ತಾರಾ? ನಾಟಕ ಸಮಕಾಲೀನ ಪರಿಸ್ಥಿತಿಯನ್ನು ವಿಡಂಬಿಸುವ ಪ್ರಹಸನವಾಗಿದೆ.ಸಮಾಜದಲ್ಲಿನ ಮುಗ್ದರನ್ನು ಎಚ್ಚರಿಸುವ ನಿಟ್ಟಿನಲ್ಲಿ ನಾಟಕದ ಕಥಾವಸ್ತು ಯಶಸ್ವಿಯಾಗಿದೆ. 1881ರಲ್ಲಿ ಹಿಂದಿ ಲೇಖಕ ಒಂದೇ ದಿನದಲ್ಲಿ ಬರೆದ ಈ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದವರು ಲೇಖಕಿ ವೈದೇಹಿ. ಅಂದಿನ ಬ್ರಿಟಿಷ್ ಆಡಳಿತವನ್ನು ವಿಡಂಬಿಸುವ ನಾಟಕ ಅಧಿಕಾರಿಶಾಹಿಯ ನ್ಯಾಯ ವ್ಯವಸ್ಥೆಯಲ್ಲಿನ ಲೋಪವನ್ನು ಎತ್ತಿತೋರುತ್ತದೆ. ಅಜ್ಞಾನಿ ರಾಜಕಾರಣಿಗಳ ಅಮಲಿನಿಂದಾಗುವ ತಪ್ಪುಗಳನ್ನು, ಅದಕ್ಕೆ ಬಲಿಯಾಗುವ ಮುಗ್ಧರನ್ನು ಹಾಸ್ಯದ ಮೂಲಕ ಎಚ್ಚರಿಸುವುದು ನಾಟಕದ ಗುರಿಯಾಗಿದೆ. ನಾಟಕದಲ್ಲಿನ ಪಾತ್ರಧಾರಿಗಳೆಲ್ಲರೂ ಉಪನ್ಯಾಸಕರು, ವಿದ್ಯಾರ್ಥಿಗಳಾಗಿದ್ದುದು ವಿಶೇಷವಾಗಿದೆ. ಕನ್ನಡ ಮಿತ್ರ ಸಂಘ ಇದೇ ಪ್ರಥಮ ಬಾರಿಗೆ ನಾಟಕ ಪ್ರದರ್ಶನವನ್ನು ನೀಡಿದೆ. ನೀನಾಸಂನಲ್ಲಿ ತರಬೇತಿ ಪಡೆದ ತಾಲ್ಲೂಕಿನ ಬಡೇಲಡುಕು ಗ್ರಾಮದ ಶಿಕ್ಷಕ ಶಿವನಾಯಕ ದೊರೆ ರಂಗವಿನ್ಯಾಸ, ವಸ್ತ್ರವಿನ್ಯಾಸ, ಪ್ರಸಾಧನ ಹಾಗೂ ನಾಟಕವನ್ನು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಪಾತ್ರಧಾರಿಗಳು ಪ್ರದರ್ಶಿಸಿರುವ ಪ್ರಥಮ ನಾಟಕವಾಗಿದ್ದರೂ ಎಲ್ಲೂ ತಡವರಿಸದೇ ನಾಟಕವನ್ನು ಮನಮುಟ್ಟುವಂತೆ ಅಭಿನಯಿಸಿದರು.

 

ರಂಗಾಯಣದ ಸಾಜಿದ್‌ರಿಂದಾಗಿ ಬೆಳಕಿನ ವ್ಯವಸ್ಥೆ ನಾಟಕಕ್ಕೆ ಪೂರಕವಾಗಿತ್ತಾದರೂ ಧ್ವನಿವರ್ಧಕದ ತಾಂತ್ರಿಕ ತೊಂದರೆಯಿಂದಾಗಿ ಪ್ರೇಕ್ಷಕರು ಕೆಲಕಾಲ ಸಹನೆಯಿಂದ ಕಾಯಬೇಕಾಯ್ತು. ಗಾಮನಹಳ್ಳಿ ಸ್ವಾಮಿ ಮಂಡ್ಯ ಹಾಗೂ ಸತ್ಯಂ, ಡಾ.ಡಿ.ಪಿ. ತಿಪ್ಪೇಸ್ವಾಮಿಯವರ ಸಂಗೀತ ನಾಟಕಕ್ಕೆ ನ್ಯಾಯವನ್ನೊದಗಿಸಿತು.ನಾಟಕದಲ್ಲಿ ಉಪನ್ಯಾಸಕರಾದ ಡಾ.ಶಿವಕುಮಾರ ಕಂಪ್ಲಿ, ಶಿವಕುಮಾರ ದಂಡಿನ, ಡಾ.ಹನುಮಂತಯ್ಯ ಪೂಜಾರ, ಬಿ. ಬೊಮ್ಮಯ್ಯ, ಜಿ.ಬಸವರಾಜ್, ಎ.ಸಿದ್ದಣ್ಣ, ಎಸ್.ಪಾಪಣ್ಣ, ಡಾ.ಎಚ್. ಬಸವರಾಜ್, ಎಚ್.ಜಿ. ಹನುಮಂತಪ್ಪ, ನೀನಾಸಂನ ಶಶಿಕಲಾ, ವಿದ್ಯಾರ್ಥಿಗಳಾದ ಎಸ್.ಚೌಡೇಶ್, ತಳವಾರ ಕುಮಾರಸ್ವಾಮಿ ಪಾತ್ರಧಾರಿಗಳಾಗಿ ನಾಟಕವನ್ನು ಯಶಸ್ವಿಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.