ಮಂಗಳವಾರ, ಮೇ 17, 2022
26 °C

ಲಾಂಚ್ ಪ್ರಯಾಣ ಎಷ್ಟು ಸುರಕ್ಷಿತ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷಾಂತರ ಜನರು ಪ್ರಯಾಣಿಸುವ ದ್ವೀಪದ ಸಾರಿಗೆ ಕೊಂಡಿ `ಲಾಂಚ್ ಪ್ರಯಾಣ~ ಸುಖಕರ ಅನ್ನಿಸಬಹುದು ಆದರೆ, ಸುರಕ್ಷಿತವಾ..?, ಈಚೆಗಂತೂ ಜನಜಂಗುಳಿಯಿಂದ ತುಂಬಿ ಹೋಗುತ್ತಿರುವ ಲಾಂಚ್‌ನಲ್ಲಿ ಅವಘಡಗಳನ್ನು ಎದುರಿಸಲು ರಕ್ಷಿತ ಸಾಧನ ಅಥವಾ ಯಾವ ಪೂರ್ವೆಚ್ಚರದ ಕ್ರಮ ಕೈಗೊಳ್ಳಲಾಗಿದೆ..?ಇಂತಹದೊಂದು ಪ್ರಶ್ನೆಗೆ ಉತ್ತರ ತಲಾ ಲಾಂಚಿನಲ್ಲಿ ಚಾಲಕರ ಸುರಕ್ಷತೆಗಾಗಿ ಮೂರು ಹಳೇ ಕಾಲದ ಚಕ್ರದಾಕಾರದ ತೇಲು ಸಾಧನಗಳು, ಸಮುದ್ರಯಾನದಲ್ಲಿ ಹಡಗಿನ ಕ್ಯಾಪ್ಟನ್ ಅವಘಡದ ಸಂದರ್ಭದಲ್ಲಿ ಎಲ್ಲರನ್ನು ರಕ್ಷಿಸಿ ಕೊನೆಗೆ ತನ್ನನ್ನು ರಕ್ಷಿಸಿಕೊಳ್ಳಬೇಕು ಎಂಬುದು ನಿಯಮ ಮತ್ತು ನೈತಿಕ ಸಂಪ್ರದಾಯ, ಆದರೆ, ದ್ವೀಪದ ಲಾಂಚ್‌ನಲ್ಲಿ ಚಾಲಕರಿಗೆ ಮಾತ್ರವೇ ಸುರಕ್ಷೆ..! ಪಯಣಿಗರ ಜೀವ ತುಂಬ ಅಗ್ಗ.ಹೌದು. ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಜಂಟಿ ಲಾಂಚ್ ಮುಳುಗುವುದಿಲ್ಲ ಎಂಬ ನಂಬಿಕೆಯ ಮೇಲೆ ಚಲಿಸುತ್ತಿದೆ. ಈಚೆಯ ದಿನಗಳಲ್ಲಿ ಒಂದು ಬಾರಿಗೆ ಕನಿಷ್ಠ ಸಾವಿರಕ್ಕೂ ಹೆಚ್ಚು ಜನರನ್ನು ಏಕಕಾಲದಲ್ಲಿ ಲಾಂಚ್ ಹೊತ್ತೊಯ್ಯುತ್ತದೆ. ಅಕಸ್ಮಾತಾಗಿ ಲಾಂಚ್‌ನ ಮುಂದಿನ ಇಳಿಬಾಗಿಲಿನ ಸರಪಳಿ ತುಂಡಾದರೆ ಇಡೀ ಲಾಂಚ್‌ಗೆ ಅಪಾಯ ಕಟ್ಟಿಟ್ಟ ಬುತ್ತಿ.ನಲವತ್ತು ವರ್ಷದಲ್ಲಿ ಹತ್ತಾರು ಬಾರಿ ಈ ರೀತಿ ಇಳಿ ಬಾಗಿಲು ಕಟ್ಟಾಗಿದೆ, ಆದರೆ, ಅದೃಷ್ಟವಶಾತ್ ಎಲ್ಲವೂ ಕಡಿಮೆ ಪ್ರಯಾಣಿಕರಿರುವಾಗ ಬೇಸಿಗೆಯಲ್ಲೇ ಆಗಿದೆ. ಆದರೆ, ಈಚೆಯ ವರ್ಷಗಳಲ್ಲಿ ಜನಜಂಗುಳಿ ಆರಂಭವಾದ ಮೇಲೆ ಸರಪಳಿ ತುಂಡಾಗಿಲ್ಲ. ಮಳೆಗಾಲದ ಭಾರೀ ಜಡಿಗಾಳಿಯಲ್ಲಿ  ಸರಪಳಿ ತುಂಡಾದರೆ...?ಇಂತಹದೊಂದು ಪ್ರಶ್ನೆಯನ್ನು ಒಳನಾಡು ಮತ್ತು ಜಲಸಾರಿಗೆ ಇಲಾಖೆಯಾಗಲೀ, ಸ್ವತಃ ಜಿಲ್ಲಾಡಳಿತವಾಗಲೀ ಈವರೆಗೆ ಕೇಳಿಕೊಂಡಿಲ್ಲ. ಕೊನೆಯ ಪಕ್ಷ ಜೀವರಕ್ಷಕ ಜಾಕೆಟ್‌ಗಳ ಸಂಗ್ರಹ, ತುರ್ತು ಸಂದರ್ಭದಲ್ಲಿ ಬಳಸಲು ಯಂತ್ರ ಚಾಲಿತ ದೋಣಿಗಳನ್ನು ಹೊಂದದೇ ಲಾಂಚ್ ಸೇವೆ ನೀಡುವ ಸರ್ಕಾರದ ಕ್ರಮ ಎಷ್ಟು ಸರಿ ಎಂಬುದು ಸ್ಥಳೀಯ ಪ್ರಜ್ಞಾವಂತರ ಪ್ರಶ್ನೆಯಾಗಿದೆ.ಇದರ ನಡುವೆ ಲಾಂಚ್‌ನ ಸಾಮರ್ಥ್ಯ ಎಷ್ಟು..?, ಅದು ಎಷ್ಟು ಜನ ಪ್ರಯಾಣಿಗರನ್ನು ವಾಹನಗಳನ್ನು ಕೊಂಡೊಯ್ಯಬಹುದು..?, ಲಾಂಚ್‌ನಿಂದ ಆಯತಪ್ಪಿ ಪ್ರಯಾಣಿಕ ಬಿದ್ದರೆ ರಕ್ಷಿಸಲು ಏನು ಉಪಕರಣ ಇದೆ ಎಂದು ಲಾಂಚ್ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅದೆಲ್ಲ ನಮಗೆ ಗೊತ್ತಿಲ್ಲ ಎಂದು ಮುಗ್ಧವಾಗಿ ಉತ್ತರಿಸುತ್ತಾರೆ

ನಿಯಮಾವಳಿ ರೂಪಿಸುವ ಸರ್ಕಾರವೇ ದ್ವೀಪದ ಲಾಂಚ್ ಸೇವೆಯಲ್ಲಿ ನಿಯಮಾವಳಿಗಳನ್ನು ಮುರಿದಿದೆ. ಅವಘಡ ಸಂಭವಿಸಿದ ಮೇಲೆ ಅಲವತ್ತುಕೊಳ್ಳುವ ಬದಲು ಸೂಕ್ತವಾದ ಸುರಕ್ಷತೆಯ ಕ್ರಮಗಳಿಗೆ ಜಿಲ್ಲಾಡಳಿತ ತಕ್ಷಣವೇ ಮುಂದಾಗಬೇಕಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.