ಬುಧವಾರ, ಏಪ್ರಿಲ್ 14, 2021
24 °C

ಲಾಕಪ್‌ಡೆತ್ ಪ್ರಕರಣ: ಮೂವರು ಅಧಿಕಾರಿಗಳ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಪೊಲೀಸರ ವಶದಲ್ಲಿ ಎಚ್.ಸಿ.ಮಂಜುನಾಥ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ.ಪವಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.ಶಿಡ್ಲಘಟ್ಟ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎನ್.ರಮೇಶ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.`ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ನಂತರ ಹಿರಿಯ ಅಧಿಕಾರಿಗಳಿಗೆ ವರದಿ ನೀಡಬೇಕಿತ್ತು. ನ್ಯಾಯಾಲಯದ ಎದುರು ಹಾಜರುಪಡಿಸಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೇ ಅವರು ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆ ಎಂದರು.ಮಂಜುನಾಥ್ ಸಾವು ಕುರಿತು ಪಾರದರ್ಶಕ ತನಿಖೆ ನಡೆಸಲಾಗುವುದು. ಮಂಜುನಾಥ್ ಶವದ ಮರಣೋತ್ತರ ಪರೀಕ್ಷೆ  ವರದಿಯಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.`ಕಳೆದ ಅಕ್ಟೋಬರ್ 2ರಂದು  ಆಂಧ್ರಪ್ರದೇಶ ರಾಯಚೂಟಿಯಿಂದ ಬರುತ್ತಿದ್ದ ಸಿಮೆಂಟ್ ಲಾರಿಯನ್ನು ನಾಲ್ವರು ಆರೋಪಿಗಳು ಮದನಪಲ್ಲಿ ಬಳಿ ತಡೆದರು. ಅದರಲ್ಲಿ ಹತ್ತಿದ ಆರೋಪಿಗಳು ಚಿಂತಾಮಣಿ ಸಮೀಪದ ಮಾಡಿಕೆರೆ ಕ್ರಾಸ್ ಬಳಿ ಚಾಲಕ ಮತ್ತು ಕ್ಲೀನರ್‌ನನ್ನು ಹಗ್ಗಳಿಂದ ಕಟ್ಟಿಹಾಕಿ, ಲಾರಿಯೊಂದಿಗೆ ಪರಾರಿಯಾಗಿದ್ದರು.ಈ ಪ್ರಕರಣವು ನಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಶಿಡ್ಲಘಟ್ಟದ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎನ್.ರಮೇಶ್ ಐವರು ಆರೋಪಿಗಳನ್ನು ಬಂಧಿಸಿ ಗ್ರಾಮಾಂತರ ಠಾಣೆಯ ವಶಕ್ಕೆ ನೀಡಿದ್ದರು~ ಎಂದು ಮಾಹಿತಿ ನೀಡಿದರು.ಆದರೆ ಮಂಗಳವಾರ ಸಂಜೆ ಮಂಜುನಾಥ್ ಹೊಟ್ಟೆನೋವು ಎಂದು ಹೇಳಿದ್ದರಿಂದ ಅವರಿಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಅವರು ಸ್ಪಷ್ಟಪಡಿಸಿದರು.ಕುಟುಂಬಕ್ಕೆ ಆಘಾತ, ರೋದನ

ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಎಚ್.ಸಿ.ಮಂಜುನಾಥ್ ಸಾವಿನಿಂದಾಗಿ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ. ದಿಕ್ಕು ತೋಚದ ಸ್ಥಿತಿ ಎದುರಿಸುತ್ತಿದ್ದಾರೆ.ಹೊಸಕೋಟೆ ತಾಲ್ಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ವಾಸವಿದ್ದ ಮಂಜುನಾಥ್ ಲಾರಿಯನ್ನು ನಂಬಿ ಜೀವನ ನಡೆಸುತ್ತಿದ್ದರು. ಆರ್ಥಿಕ ಸಮಸ್ಯೆ ಮತ್ತು ಇನ್ನಿತರ ಸಂಕಷ್ಟಗಳಿದ್ದರೂ ಎಲ್ಲವನ್ನೂ ನಿಭಾಯಿಸುತ್ತಿದ್ದರು.ಯಾವುದೇ ತಂಟೆ-ತಕರಾರಿಗೆ ಹೋಗುತ್ತಿರಲಿಲ್ಲ. ಆದರೆ ದಿಢೀರನೇ ಅವರು ಸಾವನ್ನಪ್ಪಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ~ ಎಂದು ಸಂಬಂಧಿಕರು ದುಃಖ ತೋಡಿಕೊಂಡರು.`ಮೃತರಿಗೆ ತಾಯಿ, ಪತ್ನಿ ಭಾಗ್ಯಮ್ಮ ಮತ್ತು ಎರಡು ವರ್ಷದ ಮಗಳಿದ್ದಾಳೆ. ಇಡೀ ಕುಟುಂಬ ಮಂಜುನಾಥ್ ಅವರನ್ನು ಅವಲಂಬಿಸಿತ್ತು. ಅವರ ಕುಟುಂಬ ಅನಾಥವಾಗಿದೆ. ಪೊಲೀಸರ ಚಿತ್ರಹಿಂಸೆಯಿಂದಲೇ ಮಂಜುನಾಥ್ ಸಾವನ್ನಪ್ಪಿದ್ದಾರೆ.

 

ಪದೆಪದೆ ಠಾಣೆಗಳನ್ನು ಬದಲಾಯಿಸಿದ ಪೊಲೀಸರು ಮನಬಂದಂತೆ ಥಳಿಸಿದರು. ಲಾರಿ ಪ್ರಕರಣವನ್ನು ಮುಚ್ಚಿಹಾಕಲು ರೂ 6 ಲಕ್ಷ ನೀಡುವಂತೆ ಮಂಜುನಾಥ್‌ಗೆ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದರು~ ಎಂದು ಸಂಬಂಧಿಕರು ನೇರ ಆರೋಪ ಮಾಡಿದರು.ಬಿಗಿ ಭದ್ರತೆ


ಎಚ್.ಸಿ.ಮಂಜುನಾಥ್ ಸಾವು ಪ್ರಕರಣದಿಂದ ನಗರದಲ್ಲಿ ಬುಧವಾರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಉದ್ವಿಗ್ನ ಪರಿಸ್ಥಿತಿ ತಲೆದೋರದಂತೆ ತಡೆಯಲು ಮತ್ತು ಅಹಿತಕರ ಘಟನೆ ನಡೆಯದಂತೆ ನಿಯಂತ್ರಿಸಲು ನೂರಾರು ಪೊಲೀಸರಿಂದ ದಿಗ್ಬಂಧನ ವಿಧಿಸಲಾಗಿತ್ತು.ಮಂಗಳವಾರ ರಾತ್ರಿಯೇ ಕೇಂದ್ರ ವಲಯದ ಐಜಿಪಿ ಅಮರ್‌ಕುಮಾರ್ ಪಾಂಡೆ ಠಾಣೆಗೆ ಭೇಟಿ ನೀಡಿ ಅಗತ್ಯ ಸಲಹೆ-ಸೂಚನೆ ನೀಡಿದ್ದರು. ಜಿಲ್ಲಾ ಎಸ್ಪಿ ಡಾ.ಟಿ.ಡಿ.ಪವಾರ್ ನಗರದಲ್ಲಿ ಮೊಕ್ಕಾಂ ಮಾಡಿದ್ದರು.ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ಹಾಗೂ ಅಧಿಕಾರಿಗಳನ್ನು ರಾತ್ರೋರಾತ್ರಿ ಕರೆಸಿಕೊಂಡು ಬೆಳಗಾಗುತ್ತಲೇ ನಗರದ ಜೋಡಿ ರಸ್ತೆಯಲ್ಲಿರುವ ಪೊಲೀಸ್ ಠಾಣೆಗಳು ಖಾಕಿದಾರಿಗಳಿಂದ ಪೊಲೀಸ್‌ಮಯವಾಗಿತ್ತು. ನಗರದಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.