ಲಾಟರಿ: ಸಚಿವರ ವಜಾಕ್ಕೆ ಆಗ್ರಹ

7

ಲಾಟರಿ: ಸಚಿವರ ವಜಾಕ್ಕೆ ಆಗ್ರಹ

Published:
Updated:
ಲಾಟರಿ: ಸಚಿವರ ವಜಾಕ್ಕೆ ಆಗ್ರಹ

ಬೆಂಗಳೂರು:  ರಾಜ್ಯದಲ್ಲಿ ಹೆಚ್ಚುತ್ತಿರುವ ಒಂದಂಕಿ ಲಾಟರಿ ಹಾವಳಿ ತಡೆಯಲು ಗೃಹ ಸಚಿವ ಕೆ.ಜೆ.ಜಾರ್ಜ್ ವಿಫಲ­ರಾದರೆ, ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ಇಲ್ಲಿ ಒತ್ತಾಯಿಸಿದರು.‘ಲಾಟರಿ ಹಾವಳಿ ವಿರುದ್ಧ 15 ದಿನಗಳ ಹಿಂದೆಯೇ ಎಚ್ಚರಿಸಿದ್ದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಅದನ್ನು ಅಲ್ಲಗಳೆದಿದ್ದರು. ಆದರೆ, ಇತ್ತೀಚೆಗೆ ಕನಕಪುರದಲ್ಲಿ ಈ ಕೃತ್ಯ ಎಸಗಿದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಾದ ನಂತರವೂ ಅವರು ಲೋಪ ಒಪ್ಪಲು ತಯಾರಿಲ್ಲ. ಒಂದಂಕಿ ಲಾಟರಿಯಲ್ಲಿ ತೊಡಗಿದ್ದವರ ವಿರುದ್ಧ ಮೊಕದ್ದಮೆ ದಾಖಲಿಸದಂತೆ ಗೃಹ ಸಚಿವರ ಕಚೇರಿಯಿಂದಲೇ ಕನಕಪುರ ಪೊಲೀಸರಿಗೆ ದೂರವಾಣಿ ಕರೆ ಹೋಗಿದೆ’ ಎಂದೂ ಅವರು  ಪತ್ರಿಕಾಗೋಷ್ಠಿಯಲ್ಲಿ ದೂರಿದರು.‘ನನ್ನ ಆರೋಪಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿ, ಪ್ರತಿಪಕ್ಷದ ನಾಯಕರ ಬೇಜವಾಬ್ದಾರಿ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದರು. ಅವರಿಗೂ ವಿರೋಧ ಪಕ್ಷದ ನಾಯಕ­ನಾಗಿ ಕೆಲಸ ಮಾಡಿದ ಅನುಭವ ಇದೆ. ಆಗ ಅವರು ಮಾಡುತ್ತಿದ್ದ ಟೀಕೆಗಳು ಬೇಜವಾಬ್ದಾರಿ­ಯಾಗಿ ಇದ್ದವೇ’ ಎಂದೂ ಪ್ರಶ್ನಿಸಿದರು.ಎತ್ತಂಗಡಿ: ‘ಗೃಹ ಸಚಿವರ ಕಚೇರಿಯ ಆದೇಶ ಪಾಲಿಸದ ಕನಕಪುರ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರನ್ನು ಗುಡ್ಡಗಾಡು ಪ್ರದೇಶಕ್ಕೆ ಎತ್ತಂಗಡಿ ಮಾಡಲಾಗಿದೆ. ಎಲ್ಲಿಯವರೆಗೆ ಠಾಣೆಗಳಿಂದ ವಸೂಲಿ ನಿಲ್ಲುವುದಿಲ್ಲವೊ ಅಲ್ಲಿಯವರೆಗೂ ಲಾಟರಿ ನಿಷೇಧ ಆಗುವುದಿಲ್ಲ. ಇದರ ವಿರುದ್ಧ ಮುಖ್ಯಮಂತ್ರಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಗೃಹ ಸಚಿವರು ವಿಫಲರಾದರೆ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದೂ ಅವರು ಒತ್ತಾಯಿಸಿದರು.ಎಲ್ಲಿದೆ ಬದ್ಧತೆ?: ‘ಅಕ್ರಮ ಗಣಿಗಾರಿಕೆ ವಿರುದ್ಧ ರಾಜಾರೋಷದ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 4 ತಿಂಗಳಾಗಿದೆ. ಇದು­ವ­ರೆಗೂ ಲೋಕಾಯುಕ್ತ ವರದಿ ಆಧಾರದ ಮೇಲೆ ಕ್ರಮ ಕೈಕೊಂಡಿಲ್ಲ. ಇವರ ಬದ್ಧತೆ ಏನು ಎನ್ನು­ವುದು ಜನರಿಗೂ ಅರ್ಥ­ವಾಗಿದೆ’ ಎಂದು ಮೂದಲಿಸಿದರು.ಕಾಂಗ್ರೆಸ್‌ ಕಂಪೆನಿಗಳು: ‘ಸಿ’ ಪ್ರವರ್ಗದ ಗಣಿಗಳನ್ನು ರದ್ದುಪಡಿಸಿರುವ ಸರ್ಕಾರ ಆ ಸಂಸ್ಥೆಗಳಿಂದ ಆಗಿರುವ ನಷ್ಟ ವಸೂಲಿಗೆ ಕ್ರಮ ತೆಗೆದುಕೊಂಡಿಲ್ಲ. ಕಾರಣ ಈ ಪ್ರವರ್ಗದಲ್ಲಿರುವ ಬಹುತೇಕ ಗಣಿ ಕಂಪೆನಿಗಳು ಕಾಂಗ್ರೆಸ್‌ ಪಕ್ಷದ­ವರಿಗೇ ಸೇರಿವೆ. ಈ ಕಾರಣಕ್ಕೆ ಪರವಾನಗಿ ರದ್ದು ಮಾಡಿ ಮುಖ್ಯಮಂತ್ರಿ ತೆಪ್ಪಗಾಗಿದ್ದಾರೆ. ಆಗಿರುವ ನಷ್ಟ ವಸೂಲಿಗೆ ಮುಂದಾಗಿಲ್ಲ ಎಂದು ಆರೋಪಿಸಿದರು.‘ಮುಖ್ಯಮಂತ್ರಿಯವರು ನನಗೆ ಯಾವ ಇಲಾಖೆಯ ಮಾಹಿತಿಯೂ ಸಿಗದಂತೆ  ಮಾಡಿದ್ದಾರೆ. ಸಿ ಪ್ರವರ್ಗದ ಗಣಿ ಕಂಪೆನಿಗಳಿಂದ ರಾಜ್ಯಕ್ಕೆ ಆಗಿರುವ ನಷ್ಟದ ಕುರಿತು ಮಾಹಿತಿ ಕೇಳಿದರೆ ಅಧಿಕಾರಿಗಳು ಅದನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಯಾರು ಎಷ್ಟೇ ಅಡ್ಡಿ ಮಾಡಿದರೂ ಮಾಹಿತಿ  ಸಂಗ್ರಹಿಸುವುದನ್ನು ಬಿಡುವುದಿಲ್ಲ’ ಎಂದೂ ಸವಾಲು ಹಾಕಿದರು.ನಿವೃತ್ತ ಅಧಿಕಾರಿ ಸೂತ್ರಧಾರಿ:ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಹೇಗೆ ನಡೆ­ಯಿತು ಎನ್ನುವುದು ಮಾಜಿ ಪೊಲೀಸ್‌ ಅಧಿಕಾರಿಯೊಬ್ಬರ ಮನೆಗೆ ಹೋಗಿದ್ದರೆ ಗೊತ್ತಾಗುತ್ತಿತ್ತು. ಅವರ ಮನೆಯ ಸುತ್ತ ಹಲವು ಜೀಪು– ಕಾರುಗಳು ನಿಂತಿರುತ್ತಿ­ದ್ದವು. ಅಲ್ಲೇ ಎಲ್ಲವೂ ನಿರ್ಧಾರ ಆಗುತ್ತಿತ್ತು ಎಂದು ಕುಮಾರಸ್ವಾಮಿ ವರ್ಗಾವರ್ಗಿ ಬಗ್ಗೆ  ಟೀಕಿಸಿದರು.ಸಿ.ಎಂ ವಿರುದ್ಧವೂ ಇದೆ ಸರಕು

‘ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಮಾಡಿದ ಹಾಗೆ ನಾನು ಸಂತೆ ಭಾಷಣ ಮಾಡಲಿಲ್ಲ. ಬದಲಿಗೆ,  ದಾಖಲೆಗಳ ಸಮೇತ ಎಲ್ಲ ಅಕ್ರಮಗಳನ್ನೂ ಬಯಲಿಗೆ ಎಳೆದಿದ್ದೇನೆ. ನನ್ನ ಯಾವುದೇ ಹೇಳಿಕೆ ಬೇಜವಾ­ಬ್ದಾರಿಯಿಂದ ಕೂಡಿರುವುದಿಲ್ಲ. ಇದನ್ನು ಮುಖ್ಯಮಂತ್ರಿ ಅರ್ಥ ಮಾಡಿ ಕೊಳ್ಳಬೇಕು. ಅವರ ವಿರುದ್ಧವೂ ನನ್ನ ಬಳಿ ಸರಕು ಇದೆ. ಸ್ವಲ್ಪ ದಿನದ ನಂತರ ಎಲ್ಲವನ್ನೂ ಹೇಳುತ್ತೇನೆ’

–ಎಚ್‌.ಡಿ. ಕುಮಾರಸ್ವಾಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry