ಲಾಠಿ ಪ್ರಹಾರ ಖಂಡಿಸಿ ಪ್ರತಿಭಟನೆ

7

ಲಾಠಿ ಪ್ರಹಾರ ಖಂಡಿಸಿ ಪ್ರತಿಭಟನೆ

Published:
Updated:

ಹಾಸನ: ಬೆಳಗಾವಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಮಾದಿಗ ದಂಡೋರ ಸಮಿತಿಯ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿ, ಕೆಲವರ ವಿರುದ್ಧ ಮೊಕದ್ದಮೆ ದಾಖಲಿಸಿರುವುದನ್ನು ಖಂಡಿಸಿ ದಂಡೋರ ಜಿಲ್ಲಾ ಸಮಿತಿಯ ಕಾರ್ಯ ಕರ್ತರು ಬುಧವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದರು.`ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಿ ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಜಾರಿ ಮಾಡುವಂತೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಹತ್ತು ವರ್ಷದಿಂದ ಒತ್ತಾಯಿಸುತ್ತಿದೆ.ವರದಿ ಜಾರಿಮಾಡ ದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ 15ದಿನದ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಸ್ವೀಕರಿಸದ ಕಾರಣ ದಂಡೋರ ಸಮಿತಿಯ ಕಾರ್ಯ ಕರ್ತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಅಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಿದ್ದರು. ಪೊಲೀಸರು ಕಿಡಿಗೇಡಿ ಗಳನ್ನು ಬಂಧಿಸುವ ಬದಲಾಗಿ ದಂಡೋರ ಕಾರ್ಯಕರ್ತರನ್ನು ಬಂಧಿಸ್ದಿದಾರೆ ಎಂದು ಆರೋಪಿಸಿದರು.ದಂಡೋರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ದ.ಸಂ.ಸ ಸಂಚಾಲಕ ಸಂದೇಶ್, ದಲಿತ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹೆತ್ತೂರು ನಾಗರಾಜ್, ಆರ್.ಪಿ.ಐ ಜಿಲ್ಲಾಧ್ಯಕ್ಷ ಸತೀಶ್, ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ಸಂಚಾಲಕ ಮರಿಜೋಸೆಫ್, ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ ಹಾಗೂ ದಂಡೋರದ ಕಾನೂನು ಸಲಹೆಗಾರ ಲೋಕೇಶ್ವರ ಇತರರು ಇದ್ದರು.ಅರಸೀಕೆರೆ ವರದಿ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ ಕ್ರಮ ಖಂಡಿಸಿ ತಾಲ್ಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಬುಧವಾರ ಪ್ರತಿಭಟನೆ ನಡೆಸಿತು.ತಾಲ್ಲೂಕು ಕಚೇರಿ ಮುಂದೆ ತಾಲ್ಲೂಕು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಎ.ಪಿ. ಚಂದ್ರಯ್ಯ, ಮುಖಂಡ ಎಂ.ಡಿ ಸೋಮಶೇಖರ್, ದಲಿತ ಸಂಘರ್ಷ ಸಮಿತಿ ಮುಖಂಡ ಮಾಡಾಳು ಚಂದ್ರಪ್ಪ, ನಾಗವೇದಿ ಕರಿಯಪ್ಪ ಹಾಗೂ ಕಾರ್ಯಕರ್ತರು ಧರಣಿ ನಡೆಸಿದರು. ರಾಜ್ಯ ಸರ್ಕಾರದ ವಿರುದ್ದ್ಧ ಘೋಷಣೆ ಕೂಗಿದರು.`ಸಮಿತಿ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರನ್ನು ತಕ್ಷಣ ಬಿಡುಗಡೆ ಮಾಡ ಬೇಕು. ಆಯೋಗದ ವರದಿಯಂತೆ ಒಳ ಮೀಸಲಾತಿ ವರ್ಗಿಕರಣಕ್ಕೆ ಶಿಪಾರಸು ಮಾಡಬೇಕು' ಎಂದು ಒತ್ತಾಯಿಸಿದರು.ಚನ್ನರಾಯಪಟ್ಟಣ ವರದಿ: ಒಳ ಮೀಸಲಾತಿ ನೀಡುವಂತೆ ಬೆಳಗಾವಿಯ ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಾದಿಗ ದಂಡೋರ ಹೋರಾಟ ಸಮಿತಿಯ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿದ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ  ಪ್ರತಿಭಟನೆ ನಡೆಸಿದರು.ಕೆ.ಆರ್. ವೃತ್ತದಿಂದ ಜೋಡಿ ತಮಟೆಯೊಂದಿಗೆ ದಲಿತ ಸೇನಾ ಪಡೆ, ಮಾದಿಗ ದಂಡೋರ ಹೋರಾಟ ಸಮಿತಿ, ಶಿವಶರಣರ ಮಾದಾರ ಚನ್ನಯ್ಯ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ  ಕೂಗಿದರು.ಪದಾಧಿಕಾರಿಗಳಾದ ಸಿ.ಎನ್. ಮಂಜುನಾಥ್, ಎಂ.ಎಲ್. ರಂಗ ಸ್ವಾಮಿ, ಕೆ.ಟಿ.ಲಕ್ಷ್ಮಯ್ಯ,ಸಿ.ಪಿ. ಅಣ್ಣಪ್ಪ,  ಕುಮಾರಸ್ವಾಮಿ, ನರಸಿಂಹ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry