ಲಾಡಸಾಹೇಬರೆಂಬ ಬಡಾ ಕಲಾವಿದರು

ಮಂಗಳವಾರ, ಜೂಲೈ 23, 2019
20 °C
ರಂಗಭಿನ್ನಹ

ಲಾಡಸಾಹೇಬರೆಂಬ ಬಡಾ ಕಲಾವಿದರು

Published:
Updated:

ಆಧುನಿಕ ರಂಗಭೂಮಿಯ ಸಂದರ್ಭದಲ್ಲಿ ಉತ್ತರ ಕರ್ನಾಟದ ವೃತ್ತಿರಂಗಭೂಮಿಯ ಎರಡನೇ ತಲೆಮಾರಿನ ಪ್ರತಿಭಾವಂತ ಕಲಾವಿದರಲ್ಲಿ ಲಾಡಸಾಹೇಬ ಅಮೀನಗಡ (1914-2013) ಒಬ್ಬರು. ಇವರು ಏಣಗಿ ಬಾಳಪ್ಪ, ಎಲಿವಾಳ ಸಿದ್ದಯ್ಯ, ಡಿ.ದುರ್ಗದಾಸ ಮುಂತಾದ ವೃತ್ತಿರಂಗಭೂಮಿ ಕಲಾವಿದರ ಸಮಕಾಲೀನರು. ನಟರಾಗಿ, ಕಂಪನಿಯ ಮಾಲೀಕರಾಗಿ ಕನ್ನಡ ರಂಗಭೂಮಿಗೆ ತಮ್ಮ ಜೀವನವನ್ನು ಮುಡುಪಿಟ್ಟು ದುಡಿದ ಪ್ರತಿಭಾನ್ವಿತ ಕಲಾವಿದರು ಲಾಡಸಾಹೇಬರು.ಸ್ತ್ರೀ-ಪುರುಷ, ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಲಾಡಸಾಹೇಬರು ಬೇಡಿಕೆಯ ನಟರಾಗಿದ್ದರು. ಬಾಗಲಕೋಟೆ ಜಿಲ್ಲೆಯ ಅಮೀನಗಡ ಇವರ ಹುಟ್ಟೂರು. ಮೂಲತಃ ಇವರು ನೇಕಾರ ಮನೆತನದವರು. 1928ರಲ್ಲಿ ವೃತ್ತಿರಂಗಭೂಮಿಯ ನಂಟು ಬೆಳೆಸಿದರು. ಎಸ್.ಆರ್. ಕಂಠಿ (ಕಂಠಿ ಸಿದ್ಧಲಿಂಗಪ್ಪ) ಅವರ ನಾಟಕ ಮಂಡಳಿಯಲ್ಲಿ ಶಾಲೆ, ನಾಟಕ ಕಲೆತು, ಬಾಲಪಾತ್ರಗಳಿಂದ ರಂಗಪ್ರವೇಶ ಪಡೆದರು. ನಂತರ ಶಿರಹಟ್ಟಿ ವೆಂಕೋಬರಾಯರ `ಶ್ರೀ ಮಹಾಲಕ್ಷ್ಮೀ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ'ಯಲ್ಲಿ (1903) ನಾಟಕಗಳಲ್ಲಿ ಅಭಿನಯಿಸಿದ್ದರು.ಭೀಮಪ್ಪ ಹೂಗಾರರ ಅಥಣಿಯ `ಶ್ರೀ ಭಾಗ್ಯೋದಯ ನಾಟಕ ಮಂಡಳಿ' (1933)ಯಲ್ಲಿ `ಹೇಮರಡ್ಡಿ ಮಲ್ಲಮ್ಮ' ನಾಟಕದಲ್ಲಿ ನಾಗಮ್ಮನ ಪಾತ್ರ ಮಾಡಿದರು. `ಉತ್ತರಭೂಪ' ನಾಟಕದಲ್ಲಿ ಉತ್ತರಭೂಪ, ಅನಸೂಯಾ, ಮತ್ತು ಆದಿಶಕ್ತಿ ಪಾತ್ರಗಳಿಗೆ ಜೀವತುಂಬಿದರು. `ಭೌಮಾಸೂರ' ನಾಟಕದಲ್ಲಿ ನಾರದನ ಪಾತ್ರ ಮಾಡಿದರು.ದೇಸಾಯಿಯರ `ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ'ದ `ಕಿತ್ತೂರ ಚೆನ್ನಮ್ಮ' ನಾಟಕದಲ್ಲಿ (1966) ಮಲ್ಲಪ್ಪಶೆಟ್ಟಿ ಪಾತ್ರವನ್ನು ಮಾಡಿದರು. ಮಲ್ಲಪ್ಪಶೆಟ್ಟಿ ಪಾತ್ರ ನೋಡಲು ಬಾದಾಮಿ, ಬಾಗಲಕೋಟೆಯ ಆಮಂತ್ರಿತ ಜನರು ಆಗಮಿಸಿದ್ದರು.30-40ರ ದಶಕದ ನಾಟಕಗಳಲ್ಲಿ ರಂಗಸಂಗೀತ ಸಂಭ್ರಮಿಸುತ್ತಿತ್ತು. ಹಿಂದೂಸ್ತಾನಿ ಸಂಗೀತದಲ್ಲಿ ಹೆಸರು ಮಾಡಿದವರು ಅನೇಕರಿದ್ದರು. ಕಂಪನಿ ಮಾಲೀಕರು ತಮ್ಮ ಮಂಡಳಿ ಉನ್ನತ ಸ್ಥಿತಿ ತಲುಪಲು ಕಲಾವಿದರ ಸಂಗೀತ ಜ್ಞಾನ ಅಗತ್ಯವೆಂದು ನಂಬಿದ್ದರು. ವೆಂಕೋಬರಾಯರು ಬುವಾಗಳನ್ನು ಕಂಪನಿಗಳಿಗೆ ಆಹ್ವಾನಿಸುತ್ತಿದ್ದರು. ಅದರಲ್ಲಿ ನಿಪ್ಪಾಣಿಯ ರಾಚಪ್ಪ ಗವಾಯಿಗಳು, ಶಂಕರಭಟ್ಟರು, ಧಾರವಾಡದ ಗುರುರಾವ ದೇಶಪಾಂಡೆ (ಗ್ವಾಲಿಯರ್ ಘರಾಣೆಯ ಪ್ರಸಿದ್ಧ ಗಾಯಕರಾದ ರಾಮಕೃಷ್ಣ ಬುವಾ ವಝೆಯವರ ಶಿಷ್ಯ) ಅಂದಿನ ನಾಟಕಗಳಲ್ಲಿ ಸಂಗೀತ ಕಲಿಸುವ ದೊಡ್ಡ ಗವಾಯಿಗಳು.`ನನಗೂ ಸಂಗೀತ ಕಲಿಸ್ರೀ ಅಂತ ಕೇಳ್ದೆ, ಅದ್ಕ ಅವ್ರ ಸರಿಗಮಪದನಿಸ ಸನಿದಪಮಗರಿಸ, ಲೇ ಸಾಬ ಹೊರಗೋಗೋ ಅಂತಿದ್ರು. ಎಲ್ರೂ ಹಿಂದೂಗಳು, ನಾನೊಬ್ಬ ಮುಸಲ್ಮಾನ್ರವ, ಹಿಂಗಾಗಿ ನನಗ ರಂಗಸಂಗೀತ ಕಲಿಸ್ತಿರಲಿ' ಎಂದು ಲಾಡಸಾಹೇಬರು ಬೇಸರದಿಂದ ಹೇಳಿಕೊಂಡಿದ್ದಾರೆ. ಒಳ್ಳೆಯ ಗುರುಗಳು ಸಿಗದೆ ಅವರು ಸಂಗೀತವನ್ನು ಬಿಟ್ಟು ಹಾಸ್ಯ ಪಾತ್ರಗಳಿಗೆ ಹೊರಳಿಕೊಂಡರು.ಲಾಡಸಾಹೇಬರು ಭೀಮಪ್ಪ ಹೂಗಾರರ ಅಥಣಿಯ `ಶ್ರೀ ಭಾಗ್ಯೋದಯ ನಾಟಕ ಮಂಡಳಿ'ಯಲ್ಲಿ (1933) ಹೆಚ್ಚಾಗಿ ಹಾಸ್ಯ ಪಾತ್ರಗಳನ್ನು ಮಾಡಿದರು. ಶ್ರೀಕಂಠಶಾಸ್ತ್ರಿಗಳು ವಿರಚಿತ `ಪ್ರಪಂಚ ಪರೀಕ್ಷೆ ಅರ್ಥಾತ್ ರಾಜಾ ಭರ್ತೃಹರಿ' ನಾಟಕದ ಹಾಸ್ಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು.1934ರಲ್ಲಿ ಡಿ. ದುರ್ಗಾದಾಸರು ಮತ್ತು ಲಾಡಸಾಹೇಬರು ಸೇರಿ ಧಾರವಾಡದಲ್ಲಿ `ಸ್ನೇಹವಿಲಾಸ ನಾಟ್ಯ ಸಂಘ' ಸ್ಥಾಪಿಸಿದರು. ಈ ಕಂಪನಿಯಲ್ಲಿ ಸಾಹೇಬರು `ಸತ್ಯ ಹರಿಶ್ಚಂದ್ರ' ನಾಟಕದಲ್ಲಿ ತಾರಾಮತಿಯಾದರೆ, ದುರ್ಗಾದಾಸರು ಹರಿಶ್ಚಂದ್ರನ ಪಾತ್ರ ನಿರ್ವಹಿಸುತ್ತಿದ್ದರು. ಎಲಿವಾಳ ಸಿದ್ದಯ್ಯನವರು ಹಾಸ್ಯ ಪಾತ್ರ ಮಾಡುತ್ತಿದ್ದರು.ಹೀಗೆ ಕಂಪನಿ ಸುಸೂತ್ರವಾಗಿ ನಡೆಯುವಾಗ ಮನಸ್ತಾಪಗೊಂಡು ದುರ್ಗಾದಾಸರು ಅರ್ಧಕ್ಕೆ ಬಿಟ್ಟು ಹೋದರು. ಮುಂದೆ ಲಾಡ ಸಾಹೇಬರು ಮುಂದುವರಿಸಿದರಾದರೂ ಕಂಪನಿ ನಷ್ಟವನ್ನು ಅನುಭವಿಸಿತು. ಇದನ್ನೂ ಕೈಬಿಟ್ಟರು. ಆನಂತರ ತಳಕಲ್‌ನ `ಶ್ರೀರಂಜನಿ ನಾಟಕ ಮಂಡಳಿ' (1938), ನ್ಯಾಮತಿಯ `ಶ್ರೀ ಮಹೇಶ ನಾಟ್ಯಸಂಘ' (1942) ಮುಂತಾದ ನಾಟಕ ಕಂಪನಿಗಳಲ್ಲಿ ಅಭಿನಯಿಸಿದರು.1934ರ ಸಂದರ್ಭದಲ್ಲಿ ಮುಧೋಳದಲ್ಲಿ ಅಮೀರಬಾಯಿ ಕರ್ನಾಟಕಿ ಹಾಗೂ ಗೋಹರ್‌ಬಾಯಿ ಕರ್ನಾಟಕಿ ಅಕ್ಕ-ತಂಗಿಯರ ನಾಟಕ ಕಂಪನಿ ಸಣ್ಣ ಮಠದಲ್ಲಿ ಕ್ಯಾಂಪ್ ಮಾಡಿತ್ತು. ಅದೇ ಊರಲ್ಲಿ ಶಿರಹಟ್ಟಿ ವೆಂಕೋಬರಾಯರ ಕಂಪನಿ ಮೊಕ್ಕಾಂ ಹೂಡಿತ್ತು. ಈ ಕಂಪನಿಯಲ್ಲಿ ನಟರಾಗಿ ಲಾಡ ಸಾಹೇಬರು ಸೇವೆ ಸಲ್ಲಿಸುತ್ತಿದ್ದರು. ಅಂದಿನ ನಾಟಕದಲ್ಲಿ ಸಾಹೇಬರು ನಾರದನ ಪಾತ್ರದಲ್ಲಿ ಅಭಿನಯಿಸಿದ್ದರು. ಆ ನಾಟಕವನ್ನು ನೋಡಲು ಅಮೀರಬಾಯಿಯವರು ಬಂದಿದ್ದರು. ಮುಧೋಳದ ಅಂದಿನ ಜನರು ಲಾಡ ಸಾಹೇಬರನ್ನು ಕಂಡು `ಅಮೀರಬಾಯಿಯವರ ದತ್ತಕ ಮಗ ಇವ್ಹಾ' ಎಂದು ಸಂಬೋಧಿಸುತ್ತಿದ್ದದ್ದು ಉಂಟು.ಲಾಡ ಸಾಹೇಬರ ಸಮಕಾಲೀನರಲ್ಲಿ ಬಹುತೇಕರು ಈಗ ಉಳಿದಿಲ್ಲ. ಹಳೆಯ ಕಲಾವಿದರು ಬದುಕಿರುವಾಗಲೇ ಅವರ ರಂಗಭೂಮಿಯ ಕಲಾಬದುಕನ್ನು ಗ್ರಂಥವಾಗಿಸಿದರೆ ಸಾಧಕರಿಗೂ ಒಂದು ನೆಮ್ಮದಿ. ಆ ಕೃತಿ ಮುಂದಿನ ಪೀಳಿಗೆಗೆ, ಅಧ್ಯಯನಕಾರರಿಗೆ ಇತಿಹಾಸವನ್ನು ಪರಿಚಯಿಸಿದಂತೆ ಆಗುತ್ತದೆ. ಲಾಡ ಸಾಹೇಬರಂಥ ಕಲಾವಿದರನ್ನು ಸಾಂಸ್ಕೃತಿಕ ದೃಷ್ಟಿಯಿಂದ ಚರ್ಚಿಸುವ ಅಗತ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry