ಲಾಡಿಹುಳು: ನಾಯಿಯಿಂದ ನರನಿಗೆ

7

ಲಾಡಿಹುಳು: ನಾಯಿಯಿಂದ ನರನಿಗೆ

Published:
Updated:

ಮನೆಯ ಗೇಟಿನ ಸದ್ದಾದೊಡನೆ ಬೌ ಬೌ ಎನ್ನುವ ನಾಯಿ ಯಾರೋ ಬಂದರೆಂಬ ಸೂಚನೆ ನೀಡುತ್ತದೆ. ಹೀಗೆ ಬೊಗಳಿದರೆ ಮಾಲೀಕನಿಗೆ ಮೆಚ್ಚುಗೆಯೂ ಹೌದು.

`ಬೊಗಳದಿದ್ದರೆ ನಾಯಿ ತನ್ನ ಕರ್ತವ್ಯ ನಿರ್ವಹಿಸಿದಂತೆ ಆಗುವುದಿಲ್ಲ. ಚೆನ್ನಾಗಿ ತಿಂದು ನಿದ್ದೆ ಮಾಡುತ್ತೆ, ಏನೂ ಪ್ರಯೋಜನವಿಲ್ಲ~ ಎಂದು ಮಾಲೀಕ ಮೂದಲಿಸುತ್ತಾನೆ.ನಾಯಿಯನ್ನು ಸಾಕುವುದು ನಮಗಾಗಿ. ನಮ್ಮ ಜೀವ ಆಸ್ತಿ ಪಾಸ್ತಿ ರಕ್ಷಣೆಗಾಗಿ. ಹಾಗೆಂದ ಮೇಲೆ ಅದರ ಆರೋಗ್ಯ ಪಾಲನೆಯ ಜವಾಬ್ದಾರಿಯನ್ನು ನಾವು ಹೊರಬೇಕಾಗುತ್ತದೆ. ಕಾಲಕಾಲಕ್ಕೆ ಶಿಫಾರಸ್ಸು ಮಾಡಿದ ಮುಂಜಾಗ್ರತಾ ಲಸಿಕೆಗಳು ಮತ್ತು ಜಂತುನಾಶಕ ಔಷಧಿಗಳನ್ನು ಕೊಡಬೇಕಾಗುತ್ತದೆ. ನಾಯಿಯನ್ನು ಬಾಧಿಸುವ ಜಂತುಗಳು ಹಲವಾರು. ಅವುಗಳಲ್ಲಿ ಲಾಡಿಹುಳು (Tapeworm)ತನ್ನ ಜೀವನಚಕ್ರವನ್ನು ಪೂರ್ಣಗೊಳಿಸಲು ಇತರ ಸಾಕು ಪ್ರಾಣಿಗಳನ್ನಲ್ಲದೆ ಮನುಷ್ಯನನ್ನು ಸಹ ಉಪಯೋಗಿಸಿಕೊಳ್ಳುತ್ತದೆ. ಪ್ರಾಣಿ ಮೂಲದ ಸೋಂಕು ರೋಗಗಳಲ್ಲಿ ವಿಶ್ವದಲ್ಲೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಈ ಲಾಡಿಹುಳು ಬಾಧೆ.ಹೈಡಟಿಡ್ ಪೂತಿಕೋಶ

ಎಕೈನೋಕಾಕಸ್ ಗ್ರಾನ್ಯುಲೋಸಸ್, ಎಕೈನೋಕಾಕಸ್ ಮಲ್ಟಿಲಾಕ್ಯುಲಾರಿಸ್, ಎಕೈನೋಕಾಕಸ್ ವೊಗೇಲಿ ಮತ್ತು ಎಕೈನೋಕಾಕಸ್ ಆಲಿಗಾರ್ಥಸ್ ಎಂಬ ವಿಧದ ಲಾಡಿಹುಳುಗಳು ನಾಯಿಗಳನ್ನು ಬಾಧಿಸುತ್ತವೆ.

 

ಇವುಗಳಲ್ಲಿ ಮುಖ್ಯವಾಗಿ ಗ್ರಾನ್ಯುಲೋಸಸ್ ಮನುಷ್ಯರ ಯಕೃತ್ತು, ಶ್ವಾಸಕೋಶಗಳು ಮತ್ತು ಹೃದಯದಲ್ಲಿ ಜಲಪೂರಿತ ಕೋಶಗಳ (ಸಿಸ್ಟ್) ಉತ್ಪತ್ತಿಗೆ ಕಾರಣವಾಗಿದೆ. ನೈಸರ್ಗಿಕವಾಗಿ ನಾಯಿ ಮತ್ತು ಇತರ ಮಾಂಸಾಹಾರಿ ಪ್ರಾಣಿಗಳು ಈ ಲಾಡಿಹುಳುವಿನ ಅತಿಥೇಯರು ಅಥವಾ ಆಶ್ರಯದಾತರು. ಮನುಷ್ಯರು ಆಕಸ್ಮಿಕವಾಗಿ ಈ ಸೋಂಕಿಗೆ ಒಳಗಾಗುತ್ತಾರೆ.ಲಾಡಿಹುಳುಗಳು ನಾಯಿಯ ಸಣ್ಣ ಕರುಳಿನಲ್ಲಿ ನೆಲೆಸಿರುತ್ತವೆ. ಸುಮಾರು 7 ಮಿಮೀ ಉದ್ದವಿದ್ದು, ಬೆಳೆದಂತೆಲ್ಲಾ ಮೊಟ್ಟೆಗಳನ್ನು ತುಂಬಿಕೊಂಡಿರುವ ಹಿಂತುದಿಯ ತುಣುಕುಗಳು ಕಳಚಿ ಮಲದಲ್ಲಿ ವಿಸರ್ಜಿಸಲ್ಪಡುತ್ತವೆ.

 

ಶ್ವಾನ ಪಾಲಕರು ಬೆಳಗಿನ ವಾಕಿಂಗ್ ವೇಳೆಯಲ್ಲಿ ತಮ್ಮ ನಾಯಿಯನ್ನು ನಿತ್ಯಕರ್ಮಗಳಿಗಾಗಿ ತೆಗೆದುಕೊಂಡು ಹೋದಾಗ ಅಥವಾ ದನ,ಕುರಿ, ಮೇಕೆಗಳು ಮೇಯುವ ಸ್ಥಳಗಳಲ್ಲಿ ಬೀದಿ ನಾಯಿಗಳು ಮಲ ವಿಸರ್ಜನೆ ಮಾಡಿದಾಗ ಮೊಟ್ಟೆಗಳು ಅಲ್ಲಿ ಮೇಯ್ದ ಪ್ರಾಣಿಗಳ ಉದರವನ್ನು ಸೇರಿ ಬಿಡುತ್ತವೆ.

 

ನಾಯಿಗಳನ್ನು ಅಪ್ಪಿ ಮುದ್ದಾಡುವ ಶ್ವಾನಪ್ರಿಯರು ಸೋಂಕಿತ ನಾಯಿಯು ಹೊರಹಾಕಿದ ಲಾಡಿಹುಳುವಿನ ಮೊಟ್ಟೆಗಳನ್ನು ಅರಿವಿಲ್ಲದೆ ಸೇವಿಸುವ ಸಾಧ್ಯತೆಗಳು ಅಧಿಕ. ಇವು ಸಣ್ಣ ಕರುಳಿನಲ್ಲಿ ಬೆಳೆಯುತ್ತವೆ.ಅಲ್ಲಿ ಮೊಟ್ಟೆಗಳನ್ನು ಒಡೆದು ಹೊರಬಂದ ಲಾರ್ವಾಗಳು ತಮ್ಮ ವಿಶೇಷ ಮುಳ್ಳಿನ ರಚನೆಯ ಸಹಾಯದಿಂದ ಕರುಳನ್ನು ತೂರಿ ರಕ್ತನಾಳಗಳ ಮೂಲಕ ಯಕೃತ್ತನ್ನು ತಲುಪುತ್ತವೆ. ಮನುಷ್ಯರಲ್ಲಿ ಸುಮಾರು ಶೇ 60ರಷ್ಟು ಲಾರ್ವಾಗಳು ಇಲ್ಲಿಯೇ ನೆಲೆಯೂರುತ್ತವೆ.ಉಳಿದ ಲಾರ್ವಾಗಳು ರಕ್ತ ಸಂಚಾರದಲ್ಲಿ ಸೇರಿ ಶೇ 20ರಷ್ಟು ಶ್ವಾಸಕೋಶಗಳಲ್ಲಿ ಮತ್ತು ಇನ್ನುಳಿದವು ಹೃದಯ, ಮೂತ್ರಪಿಂಡ, ಪ್ಲೀಹ, ಮೆದುಳು, ಮೂಳೆ ಇತ್ಯಾದಿ ಅಂಗಗಳನ್ನು ತಲುಪುತ್ತವೆ. ದನ, ಕುರಿ, ಮೇಕೆಗಳಲ್ಲಿ ಶ್ವಾಸಕೋಶಗಳಲ್ಲಿ ನೆಲೆಸಿರುವ ಪ್ರಕರಣಗಳು ಹೆಚ್ಚು.ಲಾರ್ವಾಗಳ ಸುತ್ತಲೂ ಮೂರು ಪದರಗಳ ದ್ರವಪೂರಿತ ಚೀಲ ಅಥವಾ ಪೂತಿ ಕೋಶ ರಚನೆಯಾಗುತ್ತದೆ. ಈ ಕೋಶದೊಳಗೆ ಭಾವೀ ಲಾಡಿಹುಳುಗಳ ಶಿರಸ್ಸುಗಳಿರುತ್ತವೆ.ಒಳ ಪದರದಲ್ಲಿ ಹೊಸದಾಗಿ ಹಲವು ಕೋಶಗಳ ಬೆಳೆಯಬಹುದು. ಹೆಚ್ಚು ಸಂಖ್ಯೆಯ ಮತ್ತು ಗಾತ್ರದ ಕೋಶಗಳು ಹೇರುವ ಒತ್ತಡದಿಂದ ಅಲ್ಲಿರುವ ಅಂಗಾಂಶವು ನಶಿಸುತ್ತದೆ. ಹೃದಯದ ಎಡ ಹೃತ್ಕುಕ್ಷಿಯಲ್ಲಿದ್ದ ಕೋಶವು ಒಡೆದು ಲಾರ್ವಾಗಳು ಮೆದುಳನ್ನು ತಲುಪಿ ಕೋಶಗಳಾಗಿ ಬೆಳೆದ ಹಲವಾರು ಪ್ರಕರಣಗಳು ವರದಿಯಾಗಿವೆ.ದನ, ಕುರಿ, ಮೇಕೆ, ಒಂಟೆಗಳು ಲಾಡಿಹುಳುವಿನ ಜೀವನ ಚಕ್ರದಲ್ಲಿ ಮಧ್ಯಂತರ ಅತಿಥೇಯರು. ಕಸಾಯಿಖಾನೆಗಳಲ್ಲಿ ಯಕೃತ್ತು, ಹೃದಯ ಮತ್ತು ಶ್ವಾಸಕೋಶಗಳನ್ನು ಪರಿಶೀಲಿಸಿದಾಗ ಕೋಶಗಳು ನೋಡಲು ಸಿಗುತ್ತವೆ. ಕಸಾಯಿದಾರರು ಇವುಗಳನ್ನು ಗಮನಿಸಿರುತ್ತಾರೆ. ಆದರೆ ಅವುಗಳ ಬಗ್ಗೆ ಅಷ್ಟೇನೂ ಅವರಿಗೆ ತಿಳಿಯದು.

 

ಆದ್ದರಿಂದ ಕೋಶಗಳಿರುವ ಅಂಗಗಳನ್ನು ತಮ್ಮ ಅಂಗಡಿಯ ಮುಂದಿರುವ ಬಿಡಾಡಿ ನಾಯಿಗಳಿಗೆ ಉದಾರವಾಗಿ ಎಸೆದು ಬಿಡುತ್ತಾರೆ. ಇದು ಗ್ರಾಹಕರ ಗಮನಕ್ಕೆ ಬರುವುದು ಸಹ ವಿರಳ.ಸತ್ತ ಸೋಂಕಿತ ಪ್ರಾಣಿಯ ಭಕ್ಷಣೆಯಿಂದಲೂ ನಾಯಿಗಳು ಸೋಂಕಿಗೆ ಗುರಿಯಾಗುತ್ತವೆ. ಕೋಶಗಳಿರುವ ಅಂಗಗಳನ್ನು ತಿಂದಾಗ ಅದರಲ್ಲಿರುವ ಭಾವೀ ಲಾಡಿಹುಳುಗಳು ನಾಯಿಯ ಉದರವನ್ನು ಸೇರಿಕೊಳ್ಳುತ್ತವೆ. ಹೀಗೆ ಲಾಡಿಹುಳುವಿನ ಜೀವನಚಕ್ರ ಮುಂದೆ ಸಾಗುತ್ತದೆ.ಸೋಂಕಿತರಲ್ಲಿ ಶೇ 25ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಈ ರೋಗಕ್ಕೆ ಸಂಬಂಧಿಸಿದ ಯಾವುದೇ ಚಿಹ್ನೆಗಳನ್ನು ತೋರ್ಪಡಿಸದೇ ಇರಬಹುದು. ಕೆಲವೊಮ್ಮೆ ಕೋಶಗಳು ಗಾತ್ರದಲ್ಲಿ ಸ್ವಯಂ ಕುಗ್ಗಿ ನಶಿಸಬಹುದು. ಕೆಲವು ಕೋಶಗಳಲ್ಲಿ ನಾರಿನಂಶ ಬೆಳೆದು ಕ್ರಮೇಣ ಕ್ಯಾಲ್ಷಿಯಂ ಲವಣ ಶೇಖರಣೆಯಾಗಿ ಕಲ್ಲಿನಂತೆ ಗಟ್ಟಿಯಾಗುತ್ತವೆ. ಇಂಥವುಗಳಲ್ಲಿ ಭಾವೀ ಲಾಡಿಹುಳುಗಳು ಜೀವಂತವಾಗಿರುವುದಿಲ್ಲ.ಶರೀರದಲ್ಲಿ ಇತರೆ ಸೋಂಕು ಉಂಟಾದಾಗ ಕೋಶಗಳಲ್ಲಿಯೂ ಸೋಂಕುಂಟಾಗಿ ಕೀವಾಗಬಹುದು. ಯಕೃತ್ತಿನ ಬಹುಭಾಗವನ್ನು ಕೋಶಗಳು ಆವರಿಸಿದಾಗ ಕಾಮಾಲೆ ರೋಗದ ಲಕ್ಷಣ ಕಂಡುಬರುತ್ತದೆ.ಯಕೃತ್ತಿನ ಊತದಿಂದ ಬಲಪಕ್ಕೆಯಲ್ಲಿ ನೋವಿರುತ್ತದೆ. ಶ್ವಾಸಕೋಶದಲ್ಲಿ ಕೋಶಗಳು ಹೆಚ್ಚಾದರೆ ಉಸಿರಾಟದ ತೊಂದರೆ ಮತ್ತು ಕ್ರಮೇಣ ನಿಶ್ಯಕ್ತಿ ಕಂಡುಬರುತ್ತವೆ. ಕೋಶಗಳು ದೇಹದೊಳಗೆ ಒಡೆದಾಗ ಅವುಗಳಲ್ಲಿರುವ ದ್ರವವು ರಕ್ತಕ್ಕೆ ಸೇರಿ ಚರ್ಮದ ತುರಿಕೆ ಕಂಡುಬರುತ್ತದೆ.ಸೋಂಕಿಗೆ ಒಳಗಾದ ಜಾನುವಾರುಗಳಲ್ಲಿ ಹಾಲು, ಮಾಂಸ, ಉಣ್ಣೆ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತದೆ. ಉತ್ಪನ್ನಗಳ ಗುಣಮಟ್ಟವೂ ಕಡಿಮೆ.

ಅಲ್ಟ್ರಾಸೌಂಡ್, ಎಂಆರ್‌ಐ, ಸಿಟಿ ಸ್ಕ್ಯಾನ್ ಮತ್ತು ರೇಡಿಯೋಗ್ರಫಿ ಮೂಲಕ ದೇಹದಲ್ಲಿ ಕೋಶಗಳಿರುವುದನ್ನು ಪತ್ತೆ ಮಾಡಬಹುದು.

 

ರಕ್ತಸಾರದ ವಿವಿಧ ಪರೀಕ್ಷೆಗಳಿಂದಲೂ ಸೋಂಕಿನ ಇರುವಿಕೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಮೂಲಕ ಈ ಕೋಶಗಳನ್ನು ತೆಗೆದು ಸೂಕ್ತ ಜಂತುನಾಶಕ ಔಷಧಿಗಳನ್ನು ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೋತ್ತರ ಸಮಸ್ಯೆಗಳು ಇಲ್ಲವೆನ್ನಲಾಗದು.ಮುನ್ನೆಚ್ಚರಿಕೆ


ಭಾರತವನ್ನೂ ಒಳಗೊಂಡಂತೆ ಕುರಿ ಸಾಕಣೆ ಅಧಿಕವಾಗಿರುವ ದೇಶಗಳಲ್ಲಿ ಈ ಸೋಂಕಿನ ಪ್ರಕರಣಗಳು ಹೆಚ್ಚು. ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಪ್ರಾಣಿ ಆರೋಗ್ಯ ಯೋಜಕರು ಮತ್ತು ಕಾರ್ಯನೀತಿ ನಿರ್ಣಾಯಕರು ಅಗತ್ಯವಾಗಿ ಈ ಸೋಂಕಿನ ಬಗ್ಗೆ ಚಿಂತನೆ ನಡೆಸಬೇಕಾಗಿದೆ.ಕಸಾಯಿಖಾನೆಗಳಲ್ಲಿ ನಿತ್ಯ ಕಟ್ಟುನಿಟ್ಟಿನ ಮಾಂಸ ತಪಾಸಣೆ ಮಾಡಬೇಕು. ಯಾವುದೇ ಪ್ರಾಣಿಯಲ್ಲಿ ಸೋಂಕು ಕಂಡುಬಂದರೆ ಮೂಲ ಹಿಂಡನ್ನು ಪತ್ತೆ ಮಾಡಿ ಸೂಕ್ತ ಕ್ರಮಗಳನ್ನು ವಹಿಸಬೇಕು. ಕಸಾಯಿದಾರರಿಗೆ ಈ ಸೋಂಕಿನ ಬಗ್ಗೆ ತಿಳಿವಳಿಕೆ ನೀಡಬೇಕು.ನಾಯಿ ಪಾಲಕರು ಕಾಲಕಾಲಕ್ಕೆ ಪಶುವೈದ್ಯರ ಶಿಫಾರಸಿನಂತೆ ಲಾಡಿಹುಳು ನಿವಾರಕ ಔಷಧಿಯನ್ನು ತಮ್ಮ ನಾಯಿಗೆ ಕೊಡಬೇಕು. ಹಸಿ ಮಾಂಸವನ್ನು ತಿನ್ನಿಸಬಾರದು. ಸತ್ತ ಪ್ರಾಣಿಯ ಅಂಗಗಳನ್ನು ತಿನ್ನಲು ಅವಕಾಶ ಕೊಡಬಾರದು. ನಾಯಿಯನ್ನು ಮುಟ್ಟಿದ ನಂತರ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

 

ನಾಯಿಯೊಡನೆ ಮಕ್ಕಳ ಒಡನಾಟವನ್ನು ನಿಯಂತ್ರಿಸುವುದು ಒಳ್ಳೆಯದು. ನಾಯಿಗಳು ಸಾಮಾನ್ಯವಾಗಿ ಓಡಾಡುವ ಸ್ಥಳಗಳಲ್ಲಿ ಬೆಳೆದ ಸೊಪ್ಪು, ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry