ಮಂಗಳವಾರ, ಆಗಸ್ಟ್ 3, 2021
28 °C

ಲಾಡೆನ್ ಹತ್ಯೆ ಮೈಲಿಗಲ್ಲು : ಗಡ್ಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪು, (ಪಿಟಿಐ) : ಒಸಾಮ ಬಿನ್ ಲಾಡೆನ್ ಹತ್ಯೆ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಒಂದು ಮೈಲಿಗಲ್ಲು ಎಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಮುಂಬೈ ಮೇಲೆ 26/11ರಲ್ಲಿ ದಾಳಿ ನಡೆಸಿದ ಉಗ್ರರ ಮೇಲೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರು ಪಾಕ್‌ನಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಯುಪಿಎ ಸರ್ಕಾರಕ್ಕೆ ತಾಕತ್ತಿದ್ದರೆ ಅಮೆರಿಕ ಉಗ್ರರನ್ನು ಸದೆ ಬಡಿದಂತೆ ಈ ಉಗ್ರರನ್ನು ಸೆರೆ ಹಿಡಿದು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸವಾಲು ಹಾಕಿದರು.

‘ಲಾಡೆನ್ ಹತನಾದ ಮಾತ್ರಕ್ಕೆ ಉಗ್ರರ ವಿರುದ್ಧ ಹೋರಾಟ ನಿಂತಂತೆ ಅಲ್ಲ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಲು ವಿಶ್ವ ಸಮುದಾಯವು ಮತ್ತಷ್ಟು ಶ್ರಮಿಸಬೇಕು’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಉರ್ದು ಪತ್ರಿಕೆಗಳ ಶಂಕೆ

ಹೈದರಾಬಾದ್ ವರದಿ: ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿ ಒಸಾಮ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಲಾಗಿದೆ ಎಂಬ ಅಮೆರಿಕದ ಘೋಷಣೆಯ ಬಗ್ಗೆ ಭಾರತದ ಅನೇಕ ಉರ್ದು ಪತ್ರಿಕೆಗಳು ಸಂಶಯ ವ್ಯಕ್ತಪಡಿಸಿವೆ.

ಬಹುಶಃ ಲಾಡೆನ್ ಬಹು ಹಿಂದೆಯೇ ಸಾವನ್ನಪ್ಪಿರಬಹುದು. ಆದರೆ ಅಮೆರಿಕ ಆತನನ್ನು ನಾವು ಕೊಂದೆವು ಎಂದು ಈಗ ಹೇಳಿಕೊಳ್ಳುತ್ತಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕುಸಿಯುತ್ತಿರುವ ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಈ ರೀತಿ ಹೇಳಿದ್ದಾರೆ ಎಂದು ಉರ್ದು ಪತ್ರಿಕೆಗಳು ಅಭಿಪ್ರಾಯಪಟ್ಟಿವೆ.

ಅಮೆರಿಕ ಈಗ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಆಂತರಿಕ ಸಮಸ್ಯೆಗಳು, ಒಬಾಮ ಅವರ ಜನ್ಮ ಪ್ರಮಾಣ ಪತ್ರದ ಬಗ್ಗೆ ಎದ್ದಿರುವ ವಿವಾದಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಅಮೆರಿಕ ಅಧ್ಯಕ್ಷರು ಈ ತಂತ್ರಗಾರಿಕೆ ಮಾಡುತ್ತಿರಬಹುದು ಎಂದು ಪತ್ರಿಕೆಗಳು ಸಂದೇಹಿಸಿವೆ.

ಲಾಡೆನ್ ಹತ್ಯೆಯ ನಂತರವು ಸಹ ಅಮೆರಿಕ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ತನ್ನ ಭಯೋತ್ಪಾದನೆ ವಿರುದ್ಧ ಹೋರಾಟವನ್ನು ವಿಶ್ವದಾದ್ಯಂತ ಮುಂದುವರಿಸಲಿದೆ ಎಂದು ಕೆಲವು ಉರ್ದು ಪತ್ರಿಕೆಗಳು ಹೇಳಿವೆ.

ಕೆಲವು ಪತ್ರಿಕೆಗಳು ಲಾಡೆನ್ ಶವವನ್ನು ಸಮುದ್ರದಲ್ಲಿ ಸಮಾಧಿ ಮಾಡಿರುವುದಕ್ಕೆ ಟೀಕಿಸಿವೆ.

ಖಂಡನೆ: ಒಸಾಮ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾ ಕಾರ್ಯಾಚರಣೆ ಮೂಲಕ ಹತ್ಯೆ ಮಾಡಿರುವುದನ್ನು ಹುರಿಯತ್ ಕಾನ್ಫರೆನ್ಸ್‌ನ ತೀವ್ರಗಾಮಿ ಗುಂಪಿನ ಮುಖಂಡ ಸೈಯದ್ ಅಲಿ ಗಿಲಾನಿ ಖಂಡಿಸಿದ್ದಾರೆ.

‘ಮುಸ್ಲಿಮರ ಹಿತರಕ್ಷಣೆಯನ್ನೇ ಗುರಿಯಾಗಿಟ್ಟುಕೊಂಡಿದ್ದ ಒಸಾಮ ಬಿನ್ ಲಾಡೆನ್, ಅಮೆರಿಕವನ್ನು ಎದುರಿಸುವ ಶಕ್ತಿಯಂತಿದ್ದ. ಆದರೆ ಅವನಿಗೆ ಅಮೆರಿಕನ್ನರ ಬಗ್ಗೆ ದ್ವೇಷ ಇರಲಿಲ್ಲ. ಅಮೆರಿಕದ ಸೇನಾ ಕಾರ್ಯಾಚರಣೆಗೆ ಬಲಿಯಾಗಿರುವ ಆತ ಹುತಾತ್ಮನಾಗಿದ್ದಾನೆ’ ಎಂದು 80ರ ದಶಕದ ಇಳಿವಯಸ್ಸಿನ ಗಿಲಾನಿ ಸುದ್ದಿ ಸಂಸ್ಥೆಗೆ ಸೋಮವಾರ ತಿಳಿಸಿದರು.

‘ಉಗ್ರರು ನಡೆಸಿದ 9/11ರ ದಾಳಿಯನ್ನು ನಾವು ಖಂಡಿಸುತ್ತೇವೆ. ಆದರೆ, ಆ ನಂತರ ಅಮೆರಿಕವು ಆಫ್ಘಾನಿಸ್ತಾನ, ಇರಾಕ್ ಮತ್ತು ಲಿಬಿಯಾದಲ್ಲಿ ಲಕ್ಷಾಂತರ ಮುಸ್ಲಿಮರನ್ನು ಹತ್ಯೆ ಮಾಡಿದೆ’ ಎಂದು ದೂರಿದರು.

ಕಾಶ್ಮೀರದ ಮತ್ತೆ ಯಾವುದೇ ಪ್ರತ್ಯೇಕವಾದಿ ಸಂಘಟನೆಗಳು ಲಾಡೆನ್ ಹತ್ಯೆಯ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅನೇಕ ಗುಂಪುಗಳು ಖಾಸಗಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದು, ಅಮೆರಿಕದ ಕಾರ್ಯಾಚರಣೆಯನ್ನು ಪ್ರಶ್ನಿಸಿವೆ.

ಲಾಡೆನ್ ಹತ್ಯೆಗೆ ಕಾಶ್ಮೀರದಲ್ಲಿ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ. ವ್ಯಾಪಾರ- ವಹಿವಾಟು ಸುಗಮವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಇಡೀ ಕಾಶ್ಮೀರದಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.

‘ಅಬೋಟಾಬಾದ್‌ನಲ್ಲಿ ಸೇನೆಯ ಅಕಾಡೆಮಿ ಬಳಿಯಲ್ಲೇ ಇದ್ದ ಮನೆಯೊಂದರ ಮೇಲೆ ಅಮೆರಿಕ ಕಾರ್ಯಾರಚಣೆ ನಡೆಸಿ ಲಾಡೆನ್‌ನನ್ನು ಕೊಂದಿದೆ. ಅದೂ ಆ ರಾಷ್ಟ್ರದ (ಪಾಕ್) ಗಮನಕ್ಕೂ ಬಂದಿಲ್ಲ ಎಂದರೆ ಹೇಗೆ?’ ಎಂದು ಉಪನ್ಯಾಸಕರೊಬ್ಬರು ಪ್ರಶ್ನಿಸಿದ್ದಾರೆ.

ಭಯೋತ್ಪಾದನೆ ಕೊನೆಯಾಗದು

ನವದೆಹಲಿ ವರದಿ: ಅಲ್ ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆಯಿಂದಾಗಿ ಭಯೋತ್ಪಾದನೆ ಅಂತ್ಯವಾಗದು ಎಂದು ಸಿಪಿಎಂ ಮಂಗಳವಾರ ಹೇಳಿದೆ.

‘ಲಾಡೆನ್ ಹತ್ಯೆಯಿಂದಾಗಿ ಅಲ್ ಖೈದಾ ಸಂಘಟನೆಗೆ ಹಿನ್ನಡೆಯಾದರೂ, ಮೂಲಭೂತವಾದದ ಹಿಂಸಾಚಾರ ಕೊನೆಗೊಳ್ಳದು’ ಎಂದು ಪಕ್ಷವು  ಪ್ರಕಟಣೆಯಲ್ಲಿ  ತಿಳಿಸಿದೆ.

‘ಲಾಡೆನ್ ಹಲವು ವರ್ಷಗಳಿಂದ ಪಾಕಿಸ್ತಾದಲ್ಲಿ ನೆಲೆಸಿದ್ದ.  ಪಾಕ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಕೆಲವು ಉಗ್ರ ಸಂಘಟನೆಗಳಿಗೂ ಅಲ್ಲಿನ ಭದ್ರತಾ ಸಂಸ್ಥೆಗಳಿಗೂ ಸಂಬಂಧವಿದೆ ಎಂಬುದನ್ನು ಲಾಡೆನ್ ಹತ್ಯೆ ಪ್ರಕರಣ ತೋರಿಸುತ್ತದೆ’ ಎಂದೂ ಸಿಪಿಎಂ ಹೇಳಿದೆ.

ಇದೇ ಸಂದರ್ಭದಲ್ಲಿ ಅಮೆರಿಕ ಪ್ರಾಯೋಜಿತ ‘ಭಯೋತ್ಪಾದಕರ ವಿರುದ್ಧದ ಹೋರಾಟ’ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ ಎಂದು ಹೇಳಿರುವ ಸಿಪಿಎಂ, ಈ ಹೋರಾಟದಿಂದಾಗಿ ಆಫ್ಘಾನಿಸ್ತಾನ ಮತ್ತು ಇರಾಕಿನಲ್ಲಿ ಸಾವಿರಾರು ಮುಗ್ಧರು ಹತ್ಯೆಯಾಗಿದ್ದಾರೆ ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.