ಲಾಡ್‌ ರಾಜೀನಾಮೆಗೆ ಆಗ್ರಹ

7

ಲಾಡ್‌ ರಾಜೀನಾಮೆಗೆ ಆಗ್ರಹ

Published:
Updated:

ಬೆಂಗಳೂರು: ‘ಅಕ್ರಮ ಗಣಿಗಾರಿಕೆಯಲ್ಲಿ ಭಾಗಿ­ಯಾಗಿರುವ ‘ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌’ ಕಂಪೆನಿ­ಯಲ್ಲಿ ವಾರ್ತಾ ಸಚಿವ ಸಂತೋಷ್‌ ಲಾಡ್‌ ಅವರು ಪಾಲುದಾರಿಕೆ ಹೊಂದಿರುವುದು ದಾಖಲೆ­ಗಳಿಂದ ಸಾಬೀತಾಗಿದೆ. ಆದ್ದರಿಂದ ಸಂತೋಷ್‌ ಲಾಡ್‌ ಅವರು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀ­ನಾಮೆ ನೀಡಬೇಕು’ ಎಂದು ಸಮಾಜ ಪರಿ­ವರ್ತನಾ ಸಮು­ದಾಯದ ಮುಖ್ಯಸ್ಥ ಎಸ್‌.­ಆರ್‌.­ಹಿರೇಮಠ ಒತ್ತಾಯಿಸಿದರು.ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌ ಕಂಪೆನಿಯಲ್ಲಿನ ಪಾಲುದಾರಿಕೆಗೆ ಸಂಬಂಧಿಸಿದ ಕರಾರು ಪತ್ರದ ದಾಖಲೆ­ಗಳನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಅವರು, ಈ ಪ್ರಕರಣದಲ್ಲಿ ಶಾಸಕ ಅನಿಲ್‌ ಲಾಡ್‌ ಹೊಂದಿರುವಷ್ಟೇ ಪಾತ್ರ­ವನ್ನು ಸಚಿವ ಸಂತೋಷ್‌ ಲಾಡ್‌ ಕೂಡ ಹೊಂದಿದ್ದಾರೆ ಎಂದು ಹೇಳಿದರು.‘2006ರ ಫೆಬ್ರುವರಿ 23ರಂದು ವಿ.ಎಸ್‌ ಲಾಡ್‌ ಅಂಡ್‌ ಸನ್ಸ್‌ ಸಂಸ್ಥೆಯ ಪಾಲುದಾರಿಕೆ ಕರಾರಿಗೆ ಸಂತೋಷ್‌ ಲಾಡ್‌ ಸಹಿ ಹಾಕಿದ್ದಾರೆ. ಏಕನಾಥ್‌ ವಿ. ಲಾಡ್‌, ವಿಶ್ವಾಸ್‌ ವಿ. ಲಾಡ್‌, ಸಂತೋಷ್‌ ಎಸ್‌.­ಲಾಡ್‌, ಅನಿಲ್‌ ಎಚ್‌.ಲಾಡ್‌,  ಅಕ್ಷಯ್‌ ಎ.ಲಾಡ್‌ ಮತ್ತು ನವೀನ್‌ ಎ.ಲಾಡ್‌  ಈ ಸಂಸ್ಥೆಯಲ್ಲಿ  ಪಾಲುದಾರಿಕೆ ಹೊಂದಿದ್ದರು.ಭಾರತೀಯ ಪಾಲು­ದಾರಿಕೆ ಕಾಯ್ದೆ 1932ರ ಪ್ರಕಾರ ಯಾವುದೇ ಸಂಸ್ಥೆಯ ಪಾಲುದಾರ ಆ ಸಂಸ್ಥೆಯ ಲಾಭ, ನಷ್ಟ ಸೇರಿ­ದಂತೆ ಅಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರ­ಗಳಲ್ಲಿಯೂ ಸಮಪಾಲನ್ನು ಹೊಂದಿರುತ್ತಾನೆ. ಈ ಕಾಯ್ದೆ ಪ್ರಕಾರ ಸಂತೋಷ್‌ ಲಾಡ್‌ ಸಹ ಈ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಯುತ್ತದೆ’ ಎಂದರು.    ಇದಕ್ಕೂ ಮುನ್ನ 2004ರ ಏಪ್ರಿಲ್‌ 1ರಂದು ಮಾಡಿಕೊಂಡಿದ್ದ ಪಾಲುದಾರಿಕೆ ಕರಾರಿನ ಪ್ರಕಾರ ದಿವಂಗತ ಹೀರೋಜಿ ವಿ.ಲಾಡ್‌, ಏಕನಾಥ್‌, ವಿಶ್ವಾಸ್‌ ಹಾಗೂ ಸಂತೋಷ್‌ ಲಾಡ್‌ ಸಂಸ್ಥೆಯ ವ್ಯವಹಾರ­ವನ್ನು ನಡೆಸಿಕೊಂಡು ಹೋಗುತ್ತಿದ್ದರು. ಆದರೆ 2006ರ ಫೆಬ್ರುವರಿ 22ರಲ್ಲಿ ಹೀರೋಜಿ ವಿ.ಲಾಡ್‌ ಅವರ ಮರಣದ ನಂತರ ಈ ಪಾಲು­ದಾರಿಕೆ ಕರಾರಿಗೆ ಹೀರೋಜಿ ಅವರ ಮೊಮ್ಮಕ್ಕ­ಳಾದ ಅಕ್ಷಯ್‌ ಹಾಗೂ ನವೀನ್‌ ಅವರನ್ನು ಸೇರ್ಪಡೆ ಮಾಡಲಾಗಿದೆ ಎಂದು ಕರಾರಿನಲ್ಲಿ ಸ್ಪಷ್ಟವಾಗಿದೆ ಎಂದು ವಿವರಿಸಿದರು.2006 ರ ಕರಾರಿನ ಪ್ರಕಾರ ಸಂಸ್ಥೆಯಲ್ಲಿ ಏಕನಾಥ್‌ ಲಾಡ್‌, ವಿಶ್ವಾಸ್‌ ಲಾಡ್‌, ಸಂತೋಷ್‌ ಲಾಡ್‌ ತಲಾ ಶೇಕಡ 25ರಷ್ಟು, ಅನಿಲ್‌ ಲಾಡ್‌ ಶೇಕಡ 12.50 ರಷ್ಟು ಮತ್ತು ಅಕ್ಷಯ್‌ ಲಾಡ್‌ ಹಾಗೂ ನವೀನ್‌ ಲಾಡ್‌ ತಲಾ ಶೇಕಡ 6.25 ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಎಂದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ ಎಂದರು.ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌ ಸಂಸ್ಥೆಗೆ 2000ದ ಡಿಸೆಂಬರ್‌ 11ರಂದು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ 105.06 ಹೆಕ್ಟೇರ್‌ ವಿಸ್ತೀರ್ಣದ ಗಣಿ ಗುತ್ತಿಗೆ­ಯನ್ನು 20 ವರ್ಷಗಳ ಅವಧಿಗೆ ನೀಡಲಾಗಿತ್ತು. ಗಣಿ ಗುತ್ತಿಗೆ ಸಂಖ್ಯೆ 2,290 ಎಂದು ದಾಖಲೆ­ಯಲ್ಲಿ ನಮೂದಿಸಲಾಗಿದೆ. ಅದ­ರಲ್ಲೂ ಈ ಸಂಸ್ಥೆಗೆ ಕೇವಲ 10 ಸಾವಿರ ಟನ್‌ ಅದಿ­ರನ್ನು ತೆಗೆಯಲು ಮಾತ್ರ ಅನುಮತಿ ನೀಡಲಾಗಿತ್ತು ಎಂದರು.ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 2011ರ ಜುಲೈ 27ರಂದು ಅಂದಿನ ಲೋಕಾಯುಕ್ತರು ಸಲ್ಲಿಸಿರುವ ಎರಡನೇ ವರದಿಯಲ್ಲಿ ಬೇಲೆಕೇರಿ ಬಂದರಿಗೆ ಬಂದಿರುವ ಅದಿರಿನಲ್ಲಿ 67,054 ಟನ್‌ ಅದಿರು ವಿಎಸ್‌ಎಲ್‌ ಸಂಸ್ಥೆಗೆ ಸೇರಿದ್ದು ಎಂದು ಹೇಳಿದ್ದಾರೆ. ಗಣಿ ಗುತ್ತಿಗೆ ಸಂಖ್ಯೆ 2290ರ ಪ್ರದೇಶದಿಂದಲೇ ಈ ಅದಿರು ರವಾನೆ ಆಗಿತ್ತು ಎಂಬ ಅಂಶ ವರದಿಯಲ್ಲಿದೆ. ವರದಿಯಲ್ಲಿ ನಮೂದಿಸಿ­ರುವಂತೆ ವಿಎಸ್‌ಎಲ್‌ ಸಂಸ್ಥೆ ಎಂದರೆ ವಿ.ಎಸ್‌. ಲಾಡ್‌ ಅಂಡ್‌ ಸನ್ಸ್‌ ಎಂದೇ ಆಗಿರುತ್ತದೆ’ ಎಂದು ಹೇಳಿದರು.ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿ­ಕೊಂಡಿದ್ದ ಒಟ್ಟು ಅದಿರಿನಲ್ಲಿ 67,054 ಟನ್‌ ಅದಿರನ್ನು ವಿ.ಎಸ್‌. ಲಾಡ್‌ ಅಂಡ್‌ ಸನ್ಸ್‌ ಸಂಸ್ಥೆ ಕಳವು ಮಾಡಿ ಮಾರಾಟ ಮಾಡಿದೆ ಎಂದು ಆರೋಪಿಸಿದರು.ಇಷ್ಟೇ ಅಲ್ಲದೆ ಪಿ.ಕೆ ಪೊನ್ನುರಾಜ್‌ ಒಡೆತನದ ‘ಸತ್ಯ ಗ್ರಾನೈಟ್ಸ್‌’ ಕಡೆಯಿಂದ ರಫ್ತಾದ 10,718,12 ಟನ್‌ ಅದಿರು ಸಹ ಲಾಡ್‌ ಸಂಸ್ಥೆ­ಯಿಂದ ಬಂದಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ್ದ ‘ಕೇಂದ್ರ ಉನ್ನತಾಧಿಕಾರ ಸಮಿತಿ’ (ಸಿಇಸಿ) 2012ರಲ್ಲಿ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ ಎಂದರು.ಬೇಲೆಕೇರಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಆದೇಶಿಸಿದೆ. ವಿಎಸ್‌ಎಲ್‌ ಸಂಸ್ಥೆಯ ಗಣಿಯನ್ನು ‘ಸಿ‘ ವರ್ಗಕ್ಕೆ ಸೇರಿಸಲಾಗಿದೆ ಎಂದು  ಆದೇಶದಲ್ಲಿ ತಿಳಿಸಲಾಗಿದೆ. ಇದೇ 16ರಂದು ವಿಎಸ್‌ಎಲ್‌ ಸಂಸ್ಥೆಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿ­ಸುವಂತೆ ಸಿಬಿಐಗೆ ಸುಪ್ರೀಂ­ಕೋರ್ಟ್‌ ಆದೇಶ ನೀಡಿದೆ ಎಂದು ಅವರು ತಿಳಿಸಿದರು.‘ಸಂತೋಷ್‌ ಲಾಡ್‌ ಅವರು ಮಾಡಿರುವ ಅಕ್ರಮಗಳನ್ನು ಸಾಬೀತು­ಪಡಿಸುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇನ್ನು ಒಂದು ವಾರದಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟವನ್ನು  ರೂಪಿಸಲಾಗುವುದು’ ಎಂದು ಹೇಳಿದರು.‘ದಾಖಲೆ ಮುಂದಿಟ್ಟಿದ್ದೇನೆ’

ಹಿರೇಮಠ ಅವರ ಬಳಿ ದಾಖಲೆಗಳು ಇದ್ದರೆ ಅದನ್ನು ತೋರಿಸಲಿ ಎಂದು ಇತ್ತೀಚೆಗೆ ಸಂತೋಷ್‌ ಲಾಡ್‌ ಹುಬ್ಬಳ್ಳಿ­ಯಲ್ಲಿ ಹೇಳಿಕೆ ನೀಡಿದ್ದರು. ಅದಕ್ಕೆ ಪೂರಕ­ ದಾಖಲೆ ಈಗ ಸಾರ್ವಜನಿಕರ ಮುಂದೆ ಇಟ್ಟಿದ್ದೇನೆ.

– ಎಸ್‌.ಆರ್‌.ಹಿರೇಮಠಎರಡೂ ಕಂಪೆನಿ ಬೇರೆ ಬೇರೆ: ಸಚಿವ ಲಾಡ್‌

ಬೆಂಗಳೂರು:
ಬೇಲೆಕೇರಿ ಬಂದರಿನ ಮೂಲಕ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಆರೋಪ ಎದುರಿಸುತ್ತಿರುವ ವಿಎಸ್‌ಎಲ್‌ ಮೈನಿಂಗ್‌ ಕಂಪೆನಿ­ಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ವಾರ್ತಾ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಅವರ ಆರೋಪ­ಗಳ ಕುರಿತು ಲಿಖಿತ ಪ್ರತಿಕ್ರಿಯೆ ನೀಡಿರುವ ಸಚಿವರು, ‘ವಿಎಸ್‌ಎಲ್‌ ಎಂದರೆ ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌ ಕಂಪೆನಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ವಿಎಸ್‌­ಎಲ್‌ ಮತ್ತು ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌ ಕಂಪೆನಿ­ಗಳೆರಡೂ ಬೇರೆಯೇ ಆಗಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.‘ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌ ಕಂಪೆನಿಯು ಲಾಡ್‌ ಕುಟುಂಬದ ಪಾಲುದಾರಿಕೆ ಕಂಪೆನಿ. ಅದರಲ್ಲಿ ನಾನೂ ಒಬ್ಬ ಪಾಲುದಾರ. ಈ ಕಂಪೆನಿ 1956ರಿಂದ ಗಣಿಗಾರಿಕೆ ನಡೆಸುತ್ತಿದೆ.  ಲೋಕಾಯುಕ್ತ ವರದಿ­ಯಲ್ಲಿ ತಮ್ಮ ಕಂಪೆನಿ ವಿರುದ್ಧ ತಪ್ಪಾಗಿ ಆರೋಪ ಮಾಡಲಾಗಿತ್ತು. ಈ ಕುರಿತು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ಪ್ರತಿಕ್ರಿಯೆ ಸಲ್ಲಿಸಲಾಗಿತ್ತು’.‘ವಿಎಸ್‌ಎಲ್‌ ಮೈನಿಂಗ್‌ ಕಂಪೆನಿ ಸಂಪೂರ್ಣ­ವಾಗಿ ಶಾಸಕ ಅನಿಲ್‌ ಲಾಡ್‌ ಕುಟುಂಬದ ಒಡೆತನದಲ್ಲಿದೆ. ಅವರು ಮತ್ತು ಅವರ ಪತ್ನಿ ಆರತಿ ಲಾಡ್‌ ಕಂಪೆನಿಯ ಪಾಲುದಾರರಾಗಿದ್ದಾರೆ. ಇದು 2005ರಿಂದ ಅದಿರು ಖರೀದಿ ಮತ್ತು ರಫ್ತು ವ್ಯವಹಾರದಲ್ಲಿ ತೊಡಗಿತ್ತು. ವಿಎಸ್‌ಎಲ್‌ ಮೈನಿಂಗ್‌ ಕಂಪೆನಿ ಯಾವುದೇ ಗಣಿ ಗುತ್ತಿಗೆಯನ್ನೂ ಹೊಂದಿಲ್ಲ’ ಎಂದು ತಿಳಿಸಿದ್ದಾರೆ.‘ವಿಎಸ್‌ಎಲ್‌ ಮೈನಿಂಗ್‌ ಕಂಪೆನಿ ಮತ್ತು ವಿ.ಎಸ್‌.ಲಾಡ್‌ ಅಂಡ್‌ ಸನ್ಸ್‌ ಕಂಪೆನಿ ಒಂದೇ ಎಂದು ತಪ್ಪಾಗಿ ತಿಳಿದು ನನ್ನ ವಿರುದ್ಧ ಆರೋಪ ಮಾಡ­ಲಾಗುತ್ತಿದೆ. ಎರಡೂ ಪ್ರತ್ಯೇಕ ಕಂಪೆನಿಗಳು. ವಿ.ಎಸ್‌.­ಲಾಡ್‌ ಅಂಡ್‌ ಸನ್ಸ್‌ ಬೇಲೆಕೇರಿ ಬಂದರಿನ ಮೂಲಕ ಅದಿರು ರಫ್ತು ಮಾಡಿಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry