ಶುಕ್ರವಾರ, ನವೆಂಬರ್ 15, 2019
22 °C

ಲಾಡ್ ನಾಮಪತ್ರ, ಕಣಕ್ಕಿಳಿಯದ ರೆಡ್ಡಿ

Published:
Updated:

ಬಳ್ಳಾರಿ: ಕಳೆದ ಬಾರಿಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ ಬಳ್ಳಾರಿ ನಗರ ಕ್ಷೇತ್ರದಿಂದ ಈ ಬಾರಿ ಜಿ.ಸೋಮಶೇಖರ ರೆಡ್ಡಿ ಸ್ಪರ್ಧಿಸುತ್ತಿಲ್ಲ.ಬದಲಿಗೆ, ಅವರ ವಿರುದ್ಧ 1020 ಮತಗಳ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್‌ನ ಅನಿಲ್ ಲಾಡ್ ಪಕ್ಷದ ಜಿಲ್ಲಾ ಮುಖಂಡರ ಗೈರು ಹಾಜರಿಯ ನಡುವೆಯೇ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ಬುಧವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಕೆಯ ಕೊನೆಯ ದಿನವೂ ಪಕ್ಷದ ಮುಖಂಡರು ಮತ್ತು ಬೆಂಬಲಿಗರು ಸ್ಪರ್ಧಿಸುವಂತೆ ಮಾಡಿಕೊಂಡ ಕೋರಿಕೆಯನ್ನು ಮನ್ನಿಸದ ರೆಡ್ಡಿ, ನಾಮಪತ್ರ ಸಲ್ಲಿಸದ್ದರಿಂದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಎಸ್.ಮುರಳಿಕೃಷ್ಣ ಅವರು ನಾಮಪತ್ರ ಸಲ್ಲಿಸಿದರು.ಪಕ್ಷದ ಮುಖಂಡರಾದ ಬಿ.ಶ್ರೀರಾಮುಲು, ಎಸ್.ಗುರುಲಿಂನಗೌಡ, ಎಸ್‌ಜೆವಿ ಮಹಿಪಾಲ್, ಶಶಿಕಲಾ, ಗೋವಿಂದರಾಜುಲು ಮತ್ತಿತರರು ಮನವೊಲಿಕೆಗೆ ಕೊನೆಯ ಕ್ಷಣದವರೆಗೆ ಪ್ರಯತ್ನಿಸಿದರಾದರೂ, ಸ್ಪಷ್ಟವಾಗಿ ನಿರಾಕರಿಸಿದ ಸೋಮಶೇಖರರೆಡ್ಡಿ, `ನನ್ನ ಆರಾಧ್ಯದೈವ ಆಂಜನೇಯ ಸ್ವಾಮಿ ಈ ಬಾರಿ ಸ್ಪರ್ಧಿಸದಂತೆ ಸೂಚಿಸಿದ್ದರಿಂದ ಸ್ಪರ್ಧೆ ಸಾಧ್ಯವೇ ಇಲ್ಲ' ಎಂದು ಹೇಳಿದರು.ಪ್ರಮುಖರು ಗೈರು: ಮಾಜಿ ಸಚಿವ ಎಂ.ದಿವಾಕರ್‌ಬಾಬು ಅವರಿಗೆ ಟಿಕೆಟ್ ನೀಡದಿದ್ದರೆ ಪಕ್ಷ ತೊರೆಯುವುದಾಗಿ ಮಹಾನಗರ ಪಾಲಿಕೆಯ ನೂತನ ಸದಸ್ಯರು ನೀಡಿದ ಬೆದರಿಕೆಯ ನಡುವೆಯೂ ಕಾಂಗ್ರೆಸ್‌ನಿಂದ ಅನಿಲ್ ಲಾಡ್ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.ಟಿಕೆಟ್ ಆಕಾಂಕ್ಷಗಿಳಾಗಿದ್ದ ಪಕ್ಷದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ದಿವಾಕರ ಬಾಬು, ಕಲ್ಲುಕಂಬ ಪಂಪಾಪತಿ, ಹೋತೂರ್ ಇಕ್ಬಾಲ್ ಅಹಮ್ಮದ್ ಮತ್ತಿತರ ಯಾವುದೇ ಪ್ರಮುಖರು ಅನಿಲ್ ಲಾಡ್ ನಾಮಪತ್ರ ಸಲ್ಲಿಕೆಯ ವೇಳೆ ಉಪಸ್ಥಿತರಿರಲಿಲ್ಲ. ಟಿಕೆಟ್ ಆಕಾಂಕ್ಷಿಯಾಗಿದ್ದ ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಸ್. ಆಂಜನೇಯುಲು ಮಾತ್ರ ಹಾಜರಿದ್ದದ್ದು ವಿಶೇಷವಾಗಿತ್ತು.

ಪ್ರತಿಕ್ರಿಯಿಸಿ (+)