ಶುಕ್ರವಾರ, ಮೇ 29, 2020
27 °C

ಲಾನ್ಸೊ ಅಂತರರಾಷ್ಟ್ರೀಯ ಸೂಪರ್ ಹಾಕಿ ಸರಣಿ: ಭಾರತ-ಪಾಕ್ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾನ್ಸೊ ಅಂತರರಾಷ್ಟ್ರೀಯ ಸೂಪರ್ ಹಾಕಿ ಸರಣಿ: ಭಾರತ-ಪಾಕ್ ಪಂದ್ಯ ಡ್ರಾ

ಪರ್ತ್ (ಪಿಟಿಐ): ಮೊದಲ ಪಂದ್ಯದ ಆಘಾತದಿಂದ ಹೊರಬಂದ ಭಾರತ ತಂಡದವರು ಚೇತರಿಕೆಯ ಆಟವಾಡಿ ಲಾನ್ಸೊ ಅಂತರರಾಷ್ಟ್ರೀಯ ಸೂಪರ್ ಹಾಕಿ ಸರಣಿಯ ತಮ್ಮ ಎರಡನೇ ಪಂದ್ಯವನ್ನು ಪಾಕಿಸ್ತಾನ ವಿರುದ್ಧ 1-1 ಗೋಲಿನಿಂದ ಡ್ರಾ ಮಾಡಿಕೊಂಡರು.

ಭಾರತಕ್ಕೆ ಸರಣಿಯ ಆರಂಭದ ಪಂದ್ಯದಲ್ಲಿ ನಿರಾಸೆ ಕಾಡಿತ್ತು. ಪ್ರಬಲ ಹೋರಾಟ ನಡೆಸಿದರೂ 3-6 ಗೋಲುಗಳ ಅಂತರದಿಂದ ನ್ಯೂಜಿಲೆಂಡ್ ವಿರುದ್ಧ ಪರಾಭವಗೊಂಡಿತ್ತು. ಆದರೆ ಸಾಂಪ್ರದಾಯಿಕ ಎದುರಾಳಿ ಪಾಕ್ ಎದುರು ಸೋಲಿನ ಅಪಾಯಕ್ಕೆ ಅವಕಾಶ ನೀಡಲಿಲ್ಲ.

ಶುಕ್ರವಾರ ನಡೆದ ಪಂದ್ಯವು ಡ್ರಾ ಆಗಿದ್ದು ಅದೃಷ್ಟ ಎಂದೇ ಹೇಳಬೇಕು. ಪಾಕಿಸ್ತಾನ ತಂಡದವರು ಪೆನಾಲ್ಟಿ ಸ್ಟ್ರೋಕ್ ಅವಕಾಶದಲ್ಲಿ ತಪ್ಪು ಮಾಡದಿದ್ದರೆ ಭಾರತಕ್ಕೆ ನಿರಾಸೆ ಆಗುವ ಆತಂಕವಿತ್ತು. ಉತ್ತರಾರ್ಧದ ಆಟದಲ್ಲಿ ನಾಯಕ ಭರತ್ ಚೆಟ್ರಿ ಅವರ ಬದಲಿಗೆ ಅಂಗಳಕ್ಕಿಳಿದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರ ಅದ್ಭುತ ರಕ್ಷಣೆಯೇ ಭಾರತವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದು.

ಪಂದ್ಯದ ಕೊನೆಯ ಕೆಲವೇ ನಿಮಿಷಗಳ ಆಟವು ಬಾಕಿ ಇದ್ದಾಗ ಪಾಕ್‌ಗೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ಸಿಕ್ಕಿತು. ಆಗ ವಾಸೀಮ್ ಅಹ್ಮದ್ ಅವರು ಬಲವಾಗಿ ತಳ್ಳಿದ ಚೆಂಡನ್ನು ಶ್ರೀಜೇಶ್ ಸರಿಯಾದ ಸಮಯಕ್ಕೆ ಮುನ್ನುಗ್ಗಿ ಹೊರಗೆ ತಳ್ಳಿದರು. ಆಗ ಭಾರತ ತಂಡವನ್ನು ಬೆಂಬಲಿಸಲು ಬಂದಿದ್ದ ಭಾರಿ ಸಂಖ್ಯೆಯ ಪ್ರೇಕ್ಷಕರಿಗೆ ಸಮಾಧಾನ.

ಪಾಕ್ ಈ ಪಂದ್ಯದಲ್ಲಿ ಬೇಗ ಮುನ್ನಡೆ ಸಾಧಿಸಿತು. 12ನೇ ನಿಮಿಷದಲ್ಲಿ ಅನುಭವಿ ಆಟಗಾರ ವಾಸೀಮ್ ಅಹ್ಮದ್ ಅವರು ಗೋಲ್ ಆವರಣದಲ್ಲಿ ನಿಯಂತ್ರಣಕ್ಕೆ ಸಿಕ್ಕ ಚೆಂಡನ್ನು ಅಷ್ಟೇ ಸಲೀಸಾಗಿ ಗುರಿ ಮುಟ್ಟಿಸಿದರು. ಇದರಿಂದಾಗಿ ಭಾರತದವರು ಗೋಲ್ ಗಳಿಸಲೇಬೇಕು ಎನ್ನುವಂಥ ಒತ್ತಡದಲ್ಲಿ ಸಿಲುಕಿ ಚಡಪಡಿಸಿದರು. ಆದರೆ ಈ ಆತಂಕವು ಕೇವಲ ಒಂದೇ ನಿಮಿಷದಲ್ಲಿ ಕಳೆದು ಹೋಯಿತು.

ಮನ್‌ಜೀತ್ ಕುಲ್ಲು ಹಾಗೂ ವಿ.ರಘುನಾಥ್ ಹೊಂದಾಣಿಕೆಯಿಂದ ಗೋಲ್ ಆವರಣಕ್ಕೆ ಸಾಗಿಸಿದ ಚೆಂಡನ್ನು ನಿಯಂತ್ರಿಸಿದ ರವಿ ಪಾಲ್ ಅವರು ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಬಾರಿಸಿದರು.

ವಿರಾಮ ನಂತರದ ಆಟದಲ್ಲಿ ಭಾರತವು ಮುನ್ನಡೆ ಸಾಧಿಸುವುದಕ್ಕೆ ಕೆಲವು ಅವಕಾಶಗಳು ಸಿಕ್ಕವು. ಆದರೆ ಎದುರಾಳಿ ಗೋಲ್ ಕೀಪರ್ ಇಮ್ರಾನ್ ಷಾ ರಕ್ಷಣೆಯಲ್ಲಿ ತಪ್ಪು ಮಾಡಲಿಲ್ಲ. ಸುನಿಲ್ ಹಾಗೂ ತುಷಾರ್ ಖಾಂಡೇಕರ್ ಅವರು ಗೋಲು ಗಳಿಸಲು ಮಾಡಿದ ಪ್ರಯತ್ನಗಳನ್ನು ಇಮ್ರಾನ್ ವಿಫಲಗೊಳಿಸಿದ ರೀತಿಯಂತೂ ಅದ್ಭುತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.