ಲಾಬಿಗೆ ಮಣಿಯುವುದಿಲ್ಲ: ಸಚಿವ ವಿಜಯಶಂಕರ್

7

ಲಾಬಿಗೆ ಮಣಿಯುವುದಿಲ್ಲ: ಸಚಿವ ವಿಜಯಶಂಕರ್

Published:
Updated:

ಮೈಸೂರು: ‘ನಾನು ಯಾವುದೇ ಲಾಬಿಗೆ ಮಣಿಯುವುದಿಲ್ಲ. ಅರಣ್ಯ ಇಲಾಖೆಯ ಒಂದು ಇಂಚು ಭೂಮಿಯೂ ದುರುಪಯೋಗವಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಅರಣ್ಯ ಸಚಿವ ಸಿ.ಎಚ್.ವಿಜಯ ಶಂಕರ್ ಭಾನುವಾರ ತಿಳಿಸಿದರು.ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ‘ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿರುವ ಹೆಚ್ಚುವರಿ ಭೂಮಿಯನ್ನು ಇಲಾಖೆಗೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಸ್ವಾಧೀನಕ್ಕೆ ಪಡೆದ ಭೂಮಿಯನ್ನು ಬೇರೆಯವರಿಗೆ ನೀಡಬೇಕು ಎಂದು ನಿರ್ಧರಿಸಿದ್ದೆ. ಆದರೆ ಆ ನಿರ್ಧಾರವನ್ನು ಕೈಬಿಟ್ಟಿದ್ದೇನೆ’ ಎಂದು ತಿಳಿಸಿದರು.‘ಇಲ್ಲಿಯವರೆಗೆ ಕಾಡಿನ ಸಂಪತ್ತಿಗೆ ಮಾತ್ರ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಇದೀಗ ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೂ ಗಮನ ಹರಿಸಲಾಗುವುದು. ಅಚ್ಚುಕಟ್ಟು ಪ್ರದೇಶದಲ್ಲಿ ಸೀಗೆ, ಹೊಂಗೆ, ಬೇವು, ಹುಣಸೆ, ನೆಲ್ಲಿಯಂತಹ ಮರಗಳನ್ನು ಬೆಳೆಸಲಾಗುವುದು’ ಎಂದು ಹೇಳಿದರು.‘ಇಲಾಖೆ ವತಿಯಿಂದ ರೈತರ ಮನೆ ಬಾಗಿಲಿಗೆ ಸಸಿಗಳನ್ನು ಇನ್ನು ಮುಂದೆ ವಿತರಣೆ ಮಾಡಲಾಗುವುದು.  ಸಸಿಗಳು ದುರುಪಯೋಗ ಆಗಬಾರದು ಎಂಬ ನಿಟ್ಟಿನಲ್ಲಿ ಶೇ.25ರಷ್ಟು ಹಣ ಕಟ್ಟಿಸಿಕೊಳ್ಳಲಾಗುವುದು. ಮೊದಲನೇ ವರ್ಷ ರೂ.10 ಎರಡನೇ ವರ್ಷ ರೂ.20 ಹಾಗೂ ಮೂರನೇ ವರ್ಷ ರೂ.30ನ್ನು ರೈತರಿಗೆ  ಸಬ್ಸಿಡಿ ನೀಡಲಾಗುವುದು’ ಎಂದು ತಿಳಿಸಿದರು.‘ಮಗುವಿಗೆ-ಶಾಲೆಗೆ ಒಂದು ಸಸಿ’
: ‘ಹಸಿರು ಉಳಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಶಾಲೆಗಳಿಗೆ ಮತ್ತು  ಪ್ರತಿ ಮಗುವಿಗೆ ತಲಾ ಒಂದು ಸಸಿಗಳನ್ನು ನೀಡಲಾಗುತ್ತದೆ. ಪರಿಸರ ಕಾಳಜಿಯಿಂದ ಸಸಿಯನ್ನು ಬೆಳೆಯುತ್ತೇನೆ ಎಂಬ ಪ್ರಮಾಣವನ್ನು ಮಗುವಿನಿಂದ ಪಡೆಯಲಾಗುತ್ತದೆ. ಉತ್ತಮವಾಗಿ ಗಿಡಗಳನ್ನು ಬೆಳೆಸಿದಂತಹ ಶಾಲೆಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ’ ಎಂದರು.ನೀಲಗಿರಿ, ಅಕೇಶಿಯ ಮರ ನಿಷೇಧ: ‘ನೀಲಗಿರಿ ಮತ್ತು ಅಕೇಶಿಯ ಮರ ಅರಣ್ಯ ನೀತಿಗೆ ವಿರುದ್ಧವಾಗಿವೆ. ಅವುಗಳಿಂದ ಪ್ರಯೋಜನ ಅಷ್ಟಕಷ್ಟೆ. ಇದನ್ನು ಅರಿತು ರಾಜ್ಯದಲ್ಲಿ ಅವುಗಳನ್ನು  ಬೆಳೆಯುವುದನ್ನು ನಿಷೇಧಿಸಲಾಗಿದೆ. ಆ ಮರಗಳನ್ನು ನಂಬಿ ಅನೇಕ ಸಣ್ಣ ಕೈಗಾರಿಕೆಗಳು ನಡೆಯುತ್ತಿವೆ.   ಹಾಗಾಗಿ ಹಂತ ಹಂತವಾಗಿ ಆ ಮರಗಳನ್ನು ಬೆಳೆಯುವುದನ್ನು ನಿಷೇಧ ಮಾಡಲಾಗುವುದು’ ಎಂದು   ತಿಳಿಸಿದರು.‘ಕಬ್ಬನ್ ಪಾರ್ಕ್ ಮಾದರಿಯಲ್ಲಿ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳ 10 ಕಿ.ಮೀ. ವ್ಯಾಪ್ತಿಯ ಒಳಗೆ ಉದ್ಯಾನವನವನ್ನು ನಿರ್ಮಾಣ ಮಾಡಲಾಗುವುದು. ರಜಾ ದಿನಗಳಲ್ಲಿ ನಾಗರಿಕರು ಮಕ್ಕಳೊಂದಿಗೆ ಉದ್ಯಾನಕ್ಕೆ ಬಂದು ವಿಶ್ರಾಂತಿ ಪಡೆಯಲು ಇವು ಸಹಕಾರಿಯಾಗುವುದು. ಆ ನಿಟ್ಟಿನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.ನಗರಕ್ಕೆ 4 ವಿಶೇಷ ಕೊಡುಗೆ: ‘ಚಾಮುಂಡಿ ಬೆಟ್ಟದಲ್ಲಿ ದೇವ ವನ ನಿರ್ಮಾಣ ಮಾಡಲಾಗುವುದು. ಮೂರು ತಿಂಗಳ ಒಳಗೆ ಇದಕ್ಕೆ ದೇವ ವನ ಯೋಜನೆಗೆ ಚಾಲನೆ ನೀಡಲಾಗುವುದು. ಕಾರಂಜಿ ಕೆರೆಯ ಮಾದರಿಯಲ್ಲಿ ಲಿಂಗಾಂಬುಧಿಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ  ವಿವಿಧ ಬಗೆಯ ಮರಗಳನ್ನು ಬೆಳೆಸಲಾಗುವುದು. ಇಲವಾಲ ಸಮೀಪ ಇರುವ ಅಲೋಕ ಪಾರಂಪರಿಕ  ಕಟ್ಟಡವನ್ನು ಸಂಗ್ರಹಾಲಯವಾಗಿ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.ದೇವ ವನ ಯೋಜನೆ: ‘ರಾಜ್ಯದ ಸಾಂಪ್ರದಾಯಿಕ ಬೆಟ್ಟಗಳಿಗೆ ಅಂದರೆ ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ‘ದೇವ ವನ’ ನಿರ್ಮಾಣ ಮಾಡಲಾಗುವುದು. ಬನ್ನಿ, ಬಿಲ್ವಪತ್ರೆ,  ರುದ್ರಾಕ್ಷಿ, ಆಲದಂತಹ ಸಾಂಪ್ರದಾಯಿಕ ಗಿಡಗಳನ್ನು ಈ ಪ್ರದೇಶದಲ್ಲಿ ಬೆಳೆಯಲಾಗುವುದು. ಧಾರ್ಮಿಕ  ಸ್ಥಳಕ್ಕೆ ಬಂದ ಭಕ್ತರು ದೇವರು ಕಂಡಷ್ಟೆ ತೃಪ್ತಿ ದೇವವನ ಕಂಡಾಗ ಆನಂದಿಸಬೇಕು. ಚಾಮುಂಡಿ ಬೆಟ್ಟದಲ್ಲಿ  ದೇವ ವನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪೂಜೆ ಮಾಡಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.ನಿಯಂತ್ರಣ ಕೊಠಡಿ: ‘ಅರಣ್ಯ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ನಿಯಂತ್ರಣ ಕೊಠಡಿ ಕೆಲಸ  ಮಾಡುತ್ತಿರಲಿಲ್ಲ. ಅದನ್ನು ಸರಿಪಡಿಸಿ ಚಾಲನೆ ನೀಡಲಾಗಿದೆ. ಸಹಾಯವಾಣಿ ಸಹ ಆರಂಭಿಸಲಾಗಿದ್ದು, ಅರಣ್ಯ  ಇಲಾಖೆಗೆ ಸಂಬಂಧಿಸಿದ ದೂರುಗಳು, ಮಾರ್ಗದರ್ಶನವನ್ನು ಸಾರ್ವಜನಿಕರು ಇದರ ಮುಖೇನ ನೇರವಾಗಿ  ತಿಳಿಸಬಹುದು. ಸಲಹೆ, ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು’ ಎಂದು ಹೇಳಿದರು.‘ಅರಣ್ಯದ ಹೆಸರಿನಲ್ಲಿ ಅರಣ್ಯ ನೀತಿಯನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಪರಿಸರ ಹೆಸರಿನಲ್ಲಿ ಪ್ರಾಕೃತಿಕ  ಅಸಮಾತೋಲನ ಉಂಟು ಮಾಡಲಾಗುತ್ತಿದೆ. ನರ್ಸರಿ ಮತ್ತು ಪ್ಲಾಂಟೇಷನ್ ಬಗ್ಗೆ ಸರಿಯಾದ ಸ್ಪಷ್ಟತೆ  ಸಿಬ್ಬಂದಿಗೆ ಇಲ್ಲ. ಹಾಗಾಗಿ ನರ್ಸರಿ ಮತ್ತು ಪ್ಲಾಂಟೇಷನ್ ಪ್ರತ್ಯೇಕ ವಿಭಾಗ ಮಾಡಲಾಗುತ್ತಿದ್ದು, ಅದಕ್ಕೆ ಸಿದ್ಧತೆ ನಡೆದಿದೆ. ಸಾಮೂಹಿಕ ಜವಾಬ್ದಾರಿ ಇದ್ದರೆ ಸಿಬ್ಬಂದಿ ನುಣುಚಿಕೊಳ್ಳುತ್ತಾರೆ. ಹಾಗಾಗಿ ಪ್ರತ್ಯೇಕ ವಿಭಾಗ ಮಾಡಿ ಜವಾಬ್ದಾರಿ ವಹಿಸಲಾಗುವುದು’ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪ್ರಭುರಾಜನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry