ಲಾಬಿ ವಿವಾದದಲ್ಲಿ ವಾಲ್‌ಮಾರ್ಟ್

7

ಲಾಬಿ ವಿವಾದದಲ್ಲಿ ವಾಲ್‌ಮಾರ್ಟ್

Published:
Updated:

ಸುದ್ದಿ ಹಿನ್ನೆಲೆ...

ಬಹುಬ್ರಾಂಡ್ ಚಿಲ್ಲರೆ ಮಾರಾಟ ರಂಗದ ಬಹುರಾಷ್ಟ್ರೀಯ ದೈತ್ಯ ಸಂಸ್ಥೆ `ವಾಲ್‌ಮಾರ್ಟ್', ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಇರುವ ಅಡಚಣೆಗಳನ್ನೆಲ್ಲ ನಿವಾರಿಸಿಕೊಳ್ಳಲು ಅಮೆರಿಕದ ಜನಪ್ರತಿನಿಧಿಗಳಿಗೆ ನಾಲ್ಕು ವರ್ಷಗಳಲ್ಲಿ ರೂ 125 ಕೋಟಿಗಳನ್ನು ವೆಚ್ಚ ಮಾಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಣ ಯಾರ ಜೇಬಿಗೆ ಹೋಗಿದೆ, ಎಷ್ಟು ಪ್ರಮಾಣದಲ್ಲಿ ಹಣ ಕೈಬದಲಾಯಿಸಿದೆ ಮತ್ತು ಎಲ್ಲಿ ಹಣ ಸಂದಾಯವಾಗಿದೆ ಎನ್ನುವ ಪ್ರಶ್ನೆಗಳೂ ಉದ್ಭವವಾಗಿವೆ.ಭಾರತದ ಮಾರುಕಟ್ಟೆ ಪ್ರವೇಶಿಸಲು `ವಾಲ್‌ಮಾರ್ಟ್' ಭ್ರಷ್ಟಾಚಾರ ನಡೆಸಿದೆ ಎಂದು ಬಹುಬ್ರಾಂಡ್ ಚಿಲ್ಲರೆ ಮಾರಾಟ ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ವಿರೋಧಿಸುತ್ತಿರುವವರು ಟೀಕಿಸುತ್ತಿದ್ದಾರೆ.ಏನಿದು ಲಾಬಿ?

ಕಾನೂನು ರಚಿಸುವ ಜನಪ್ರತಿನಿಧಿಗಳ ಮೇಲೆ ನಿರ್ದಿಷ್ಟ ಹಿತಾಸಕ್ತರ ಪರವಾಗಿ ಪ್ರಭಾವ ಬೀರಲು ಯತ್ನಿಸುವುದೇ ಲಾಬಿ ಮಾಡುವುದು ಎಂದರ್ಥ. ಜನಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು ನಡೆಯುವ ವ್ಯವಸ್ಥಿತ ಪ್ರಯತ್ನವೂ ಇದಾಗಿದೆ. ಉದಾಹರಣೆಗೆ- ಗರ್ಭಪಾತ ನಿಷೇಧ ವಿರೋಧಿಸುವ, ಮದ್ಯಪಾನ ನಿಷೇಧ ವಿರೋಧಿಸುವ... ಹೀಗೆ ವಿಭಿನ್ನ ಹಿತಾಸಕ್ತಿಗಳ ರಕ್ಷಣೆಗಾಗಿ ಅಮೆರಿಕದಲ್ಲಿ ಉದ್ದಿಮೆ ಸಂಸ್ಥೆಗಳು ಜನಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತವೆ.ಅಮೆರಿಕದಲ್ಲಿ `ಲಾಬಿ' ನಡೆಸುವುದು ನಿಯಮಕ್ಕೆ ವಿರುದ್ಧವಾದದ್ದು ಏನಲ್ಲ ಎಂದರೂ ವಿವಾದಾತ್ಮಕವಂತೂ ಆಗಿದೆ. ವಾಲ್‌ಮಾರ್ಟ್ ಒಂದೇ ಅಲ್ಲ, ಅಮೆರಿಕ ಮೂಲದ ಹಲವಾರು ಉದ್ದಿಮೆ ಸಂಸ್ಥೆಗಳು ತಮ್ಮ ಹಿತಾಸಕ್ತಿ ರಕ್ಷಣೆಗಾಗಿ ಕಾನೂನು ರಚನೆ ಮತ್ತಿತರ ಸಂದರ್ಭಗಳಲ್ಲಿ ತಮ್ಮ ಪರವಾಗಿ ಲಾಬಿ ನಡೆಸಲು ಲಕ್ಷಾಂತರ ಡಾಲರ್‌ಗಳನ್ನು ವೆಚ್ಚ ಮಾಡುತ್ತವೆ.ಲಾಬಿ ನಡೆಸುವವರ ನೇಮಕ

ನಿರ್ದಿಷ್ಟ ಶಸ್ತ್ರಾಸ್ತ್ರಗಳ ಖರೀದಿ ಅಗತ್ಯದಿಂದ ಹಿಡಿದು ಕ್ಯಾನ್ಸರ್ ಸಂಶೋಧನೆಗೆ ಹೆಚ್ಚು ಅನುದಾನ ಸಿಗಬೇಕು ಎನ್ನುವುದನ್ನು ಮನವರಿಕೆ ಮಾಡಿಕೊಡಲು ಅಥವಾ ಈ ಬಗ್ಗೆ ಕಾನೂನು ರಚನೆ ಸಂದರ್ಭದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳು ರೂಪುಗೊಳ್ಳಲು ಅನೇಕ ಸಂಸ್ಥೆಗಳು ಜನಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತವೆ. ತಮ್ಮ ಇಂತಹ ಕೆಲಸ ಮಾಡಿಸಿಕೊಳ್ಳಲು ಜನರನ್ನು, ಸಂಸ್ಥೆಗಳನ್ನು ನೇಮಿಸಿಕೊಳ್ಳುತ್ತವೆ. ಅಮೆರಿಕದಲ್ಲಿ `ಪ್ರಭಾವ ಬೀರುವ' ಕೆಲಸ ಮಾಡುವ ಸಾವಿರಾರು ಸಂಖ್ಯೆಯ ಜನರಿದ್ದಾರೆ. ತಮ್ಮ ಗ್ರಾಹಕರ ಪರವಾಗಿ ಶಾಸನ ಸಿದ್ಧಪಡಿಸುವ, ಆಡಳಿತಾತ್ಮಕ ನಿಯಮ ರೂಪಿಸುವಂತೆ ಜನಪ್ರತಿನಿಧಿಗಳ ಮೇಲೆ ನಯವಾಗಿ ಒತ್ತಾಯಿಸುವುದೇ ಇವರ ಮುಖ್ಯ ಕೆಲಸ.ಪಾರದರ್ಶಕ ವಂತಿಗೆ

ಅಮೆರಿಕದ ಕೆಲ ಸಂಸ್ಥೆಗಳು ಮತ್ತು ಪಕ್ಷಗಳು ಕೂಡ, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಕಾಣಿಕೆ ನೀಡಿ ಲಾಭ ಬಾಚಿಕೊಳ್ಳುತ್ತವೆ. ಈ ಎಲ್ಲ ಕಾಣಿಕೆಗಳು ಪಾರದರ್ಶಕವಾಗಿರುತ್ತವೆ. ತಮ್ಮ ಪರವಾಗಿ ಕೆಲಸ ಮಾಡಿಸಿಕೊಳ್ಳಲು ಸಂಸ್ಥೆಗಳು ಮಾಡುವ ವೆಚ್ಚವು ಎಲ್ಲ ಸಂದರ್ಭಗಳಲ್ಲಿ ಲಾಭದಾಯಕ ಆಗಿರುತ್ತದೆ ಎಂದೂ ಹೇಳಲು ಬಾರದು. ಮಾಡಿದ ವೆಚ್ಚಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆಗಳು ಕಡಿಮೆಯಾದ ಸಂದರ್ಭದಲ್ಲಿ ಸಂಸ್ಥೆಗಳು `ಲಾಬಿ'ಗೆ ಮಾಡುವ ವೆಚ್ಚಕ್ಕೆ ಕಡಿವಾಣ ವಿಧಿಸುತ್ತವೆ.ಪ್ರಭಾವ-ಲಂಚ ಬೇರೆ,ಬೇರೆ

ರಾಜಕಾರಣಿಗಳ ಮೇಲೆ ಪ್ರಭಾವ ಬೀರುವುದು ಮತ್ತು ಅವರಿಗೆ ಲಂಚ ನೀಡುವುದು ಎರಡೂ ಬೇರೆ, ಬೇರೆಯಾಗಿವೆ. ಅಮೆರಿಕದಲ್ಲಿ `ಲಾಬಿ ನಡೆಸುವುದು' (ಪ್ರಭಾವ ಬೀರುವುದು) ಕಾನೂನುಬದ್ಧ. ಇದನ್ನು ಬಹಿರಂಗವಾಗಿಯೇ ಮಾಡಲಾಗುತ್ತದೆ. ಇಲ್ಲಿ ಹಣ ರಾಜಕಾರಣಿಗಳ ಕಿಸೆಗೆ ನೇರವಾಗಿ ಹೋಗಲಾರದು. ಒಂದು ಸಂಸ್ಥೆಯ ಪರವಾಗಿ ಅಥವಾ ಒಬ್ಬರ ಪರವಾಗಿ, ಇನ್ನೊಬ್ಬ ವ್ಯಕ್ತಿ ಜತೆ ಮಾತನಾಡಲು / ಮನವೊಲಿಸಲು / ಅಭಿಪ್ರಾಯ ಬದಲಿಸುವಂತೆ ಪ್ರಭಾವ ಬೀರುವ ಪ್ರಯತ್ನಗಳಿಗೆ ಇಂತಹ ಹಣ ವೆಚ್ಚ ಮಾಡಲಾಗುವುದು.ಬುದ್ಧಿಪೂರ್ವಕ ಮತ್ತು ಉದ್ದೇಶಪೂರ್ವಕ ವೆಚ್ಚವೂ ಇದಾಗಿರುತ್ತದೆ. ಪ್ರಭಾವಶಾಲಿ ರಾಜಕಾರಣಿಗಳ ಆಪ್ತ ಸಿಬ್ಬಂದಿಯನ್ನೂ ಲಾಬಿ ನಡೆಸಲು ಬಳಸಲಾಗುತ್ತದೆ. ರಾಜಕಾರಣಿಗಳ ಆಪ್ತರ ಆಹಾರ, ಪ್ರವಾಸ ಮತ್ತಿತರ ವೆಚ್ಚಗಳನ್ನೆಲ್ಲ ಲಾಬಿ ನಡೆಸುವ ಸಂಸ್ಥೆಗಳೇ ನೋಡಿಕೊಳ್ಳುತ್ತವೆ.ಭಾರತದ ಸಂಸ್ಥೆಗಳ ಲಾಬಿ

ಇಲ್ಲಿ `ವಾಲ್‌ಮಾರ್ಟ್' ಒಂದೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವುದಿಲ್ಲ. ಅಮೆರಿಕದಲ್ಲಿ ತಮ್ಮ ವಹಿವಾಟು ವಿಸ್ತರಿಸಲು ಭಾರತದ ಅನೇಕ ಸಂಸ್ಥೆಗಳೂ ಲಾಬಿಗಾಗಿ ಸಾಕಷ್ಟು ದುಡ್ಡು ವೆಚ್ಚ ಮಾಡಿವೆ. ಭಾರತದ ಕನಿಷ್ಠ 20 ಉದ್ದಿಮೆ ಸಂಸ್ಥೆಗಳು ತಮ್ಮ ವಹಿವಾಟು ಹಿತಾಸಕ್ತಿಗಾಗಿ ಅಮೆರಿಕದ ಲಾಬಿ ನಡೆಸುವ ಸಂಸ್ಥೆಗಳ ಸೇವೆ ಪಡೆದುಕೊಂಡಿವೆ.ಅಮೆರಿಕದ ಜನಪ್ರತಿನಿಧಿಗಳ ಸಭೆಯ ಅಂತರಜಾಲ ತಾಣವೊಂದರಲ್ಲಿ ಇದರ ಬಗ್ಗೆ ವಿವರಗಳು ಲಭ್ಯ ಇವೆ.   ರಿಲಯನ್ಸ್ ಇಂಡಿಯಾ, ಟಾಟಾಸನ್ಸ್, ರ‌್ಯಾನ್‌ಬಾಕ್ಸಿ ಲ್ಯಾಬ್, ನಾಸ್ಕಾಂ, ಅಕ್ಕಿ ರಫ್ತು ಉತ್ತೇಜನಾ ಮಂಡಳಿ ಮುಂತಾದವು ಈ ಪಟ್ಟಿಯಲ್ಲಿ ಇವೆ.ವಾಲ್‌ಮಾರ್ಟ್‌ನ ಲಾಬಿ ಸಂಸ್ಥೆಗಳಲ್ಲಿ ಒಂದಾಗಿರುವ `ಪ್ಯಾಟನ್ ಬಾಗ್ಸ್'ನ ಸೇವೆಯನ್ನು ಅಮೆರಿಕದಲ್ಲಿನ ಭಾರತದ ರಾಯಭಾರ ಕಚೇರಿಯು 2008ರಲ್ಲಿ ಭಾರತ - ಅಮೆರಿಕ ಅಣ್ವಸ್ತ್ರ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಪಡೆದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry