ಬುಧವಾರ, ಜೂನ್ 16, 2021
21 °C

ಲಾಭದಾಯಕ ಹರಿವೆ ಸೊಪ್ಪು ಸರಳ ಕೃಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ ತಾಲ್ಲೂಕಿನ ರೈತರು ಸಾಂಪ್ರದಾಯಿಕವಾಗಿ ತೋಟಗಳಲ್ಲಿ ಅಡಿಕೆ ಮತ್ತು ಗದ್ದೆಗಳಲ್ಲಿ ಭತ್ತ ಬೆಳೆಯುತ್ತಾರಾದರೂ ಅಡಿಕೆ ತೋಟದಲ್ಲಿ ಉಪ ಬೆಳೆಯಾಗಿ ಕಾಫಿ, ಕಾಳುಮೆಣಸು, ವೆನಿಲ್ಲಾ, ಏಲಕ್ಕಿ, ಬಾಳೆ ಕೃಷಿಯನ್ನೂ ನಡೆಸುತ್ತಾರೆ. ಆದರೆ ಗದ್ದೆಗಳಲ್ಲಿ ಭತ್ತ ಹೊರತುಪಡಿಸಿ ತರಕಾರಿ ಅಥವಾ ಇತರೆ ಬೆಳೆ ಬೆಳೆಯುವವರು ತೀರಾ ಅಪರೂಪ.ಅದರಲ್ಲೂ ಆರ್ಥಿಕವಾಗಿ ಲಾಭ ಪಡೆದುಕೊಳ್ಳುವಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆಯುವವರು ಕಡಿಮೆ. ತಾಲ್ಲೂಕಿನ ಕಾಂಚೀನಗರದ ರೈತ ಶೃಂಗೇಶ್ವರರಾವ್ 20 ವರ್ಷಗಳಿಂದ ಹರಿವೆ ಬೆಳೆದು ಲಾಭ ಗಳಿಸುತ್ತಿದ್ದಾರೆ.ಹರಿವೆ ಗಿಡ ಬೀಜ ಬಿತ್ತಿದರೆ ತನ್ನಷ್ಟಕ್ಕೆ ಬೆಳೆಯುತ್ತದೆ ಎಂದುಕೊಳ್ಳಬಹುದು. ಆದರೆ ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡಿನಲ್ಲಿ ಅದರಲ್ಲೂ ವರ್ಷಕ್ಕೆ 150 ಇಂಚಿಗೂ ಹೆಚ್ಚು ಮಳೆ ಬೀಳುವ ಶೃಂಗೇರಿ ತಾಲ್ಲೂ ಕಿನಲ್ಲಿ ರೈತರಿಗೆ ಜಮೀನಿನಲ್ಲಿ ತರಕಾರಿ ಬೆಳೆಯುವುದಕ್ಕಿಂತ ಅಂಗಡಿಗಳಲ್ಲಿ  ಕೊಳ್ಳುವುದೇ ಮಿತವ್ಯಯ ಎನಿಸಬಹುದು.ಅಧಿಕ ಮಳೆಯಿಂದಾಗಿ ಬಹುತೇಕ ಭತ್ತದ ತಾಟು ಗಳು ಭೂಸವೆತಕ್ಕೆ ಒಳಗಾಗಿ ಮರಳು ಗದ್ದೆ ಗಳಾಗುತ್ತಿವೆ. ಇನ್ನು ಮಳೆಗಾಲದಲ್ಲಿ ಧಾರಾಕಾರ ಮಳೆ, ಹೊಳೆ ಹಳ್ಳಗಳನ್ನು ತುಂಬಿ ಹರಿಯುವಂತೆ ಮಾಡಿದರೂ ಭೂಮಿಯ ಮೇಲ್ಮೈ ಏರು ತಗ್ಗುಗಳಿಂದ ಕೂಡಿರುವುದರಿಂದ ನೀರನ್ನು ಹಿಡಿದಿಟ್ಟುಕೊಳ್ಳದೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುವಂತಾ ಗುತ್ತದೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಮಂಗಗಳ ಕಾಟವೂ ಹೆಚ್ಚಾಗಿದೆ.

 

ಕೆಲವೆಡೆ ಕಾಡು ಹಂದಿ, ಕಾಡುಕೋಣಗಳ ದಾಳಿಯಿಂದಾಗಿ ರೈತರಿಗೆ ಬೆಳೆದುನಿಂತ ಪೈರನ್ನು ಉಳಿಸಿಕೊಳ್ಳುವುದೇ ಕಷ್ಟ. ಇದರ ನಡುವೆ ತರಕಾರಿ ಬೆಳೆಯ ನಿರ್ವಹಣಾ ವೆಚ್ಚವೂ ಬಯಲು ಪ್ರದೇಶಕ್ಕಿಂತ ಅಧಿಕವೇ ಆದ ಕಾರಣ ತರಕಾರಿ ಬೆಳೆಯುವ ಸಾಹಸಕ್ಕೆ ಕೈಹಾಕುವವರೇ ವಿರಳ. ಈ ಎಲ್ಲಾ ಕಾರಣಗಳೇ ರೈತ ಶೃಂಗೇಶ್ವರರಾವ್ ಅವರ ಹರಿವೆ ಕೃಷಿ ಗಮನ ಸೆಳೆಯುತ್ತದೆ.1 ಎಕರೆಯಲ್ಲಿ ಹರಿವೆ ಬೆಳೆದಿರುವ ಶೃಂಗೇಶ್ವರ ರಾವ್, ಮಳೆಗಾಲದ ಭತ್ತ ಕುಯಿಲಿನ ನಂತರ ಡಿಸೆಂಬರ್ ಕೊನೆವಾರದಲ್ಲಿ ಹರಿವೆ ಬೀಜ ಬಿತ್ತನೆ ಮಾಡಿ 20 ದಿನ ತುಂಬುತ್ತಲೇ ಗಿಡಗಳನ್ನು ಮಾರುಕಟ್ಟೆಗೆ ಒಯ್ದು ಮಾರುತ್ತಾರೆ. ಮಾರ್ಚ್ ಕೊನೆವಾರದವರೆಗೂ ಹರಿವೆ ಮಾರಾಟ ನಡೆದಿರುತ್ತದೆ. ತಾಜಾ ಹರಿವೆಗೆ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇದೆ.ಬೆಳೆಯುವ ವಿಧಾನ:  ಹಿಂದಿನ ವರ್ಷ ತಾವೇ ಬೆಳೆದ ಹರಿವೆಯಿಂದ ಸಂಗ್ರಹಿಸಿದ ಬೀಜವನ್ನು ಮರುವರ್ಷ ಬಿತ್ತನೆ ಮಾಡುವುದಕ್ಕೂ ಮುನ್ನ ಒಣಗಿ ಪುಡಿಪುಡಿ ಯಾದ ಸಗಣಿ ಗೊಬ್ಬರವನ್ನು ಮಣ್ಣಿಗೆ ಬೆರೆಸುತ್ತಾರೆ. ಬೀಜ ಬಿತ್ತಿ ಚಿಗುರೊಡೆದ ನಂತರ ಪ್ರತಿಸಂಜೆ ತುಂತುರು ನೀರಾವರಿ ಸಿಂಪಡನೆ, ವಾರದಲ್ಲಿ ಎರಡು ದಿನ ಗೊಬ್ಬರ ಮಿಶ್ರಿತ ನೀರು ಸಿಂಪಡಿಸುತ್ತಾರೆ. ಬೆಳೆಗೆ ಯಾವುದೇ ಕೀಟನಾಶಕ ಬಳಸದಿರುವ ಕಾರಣ ನಿರ್ವ ಹಣಾ ವೆಚ್ಚ ತಗ್ಗುತ್ತದೆ ಎಂದು ಅವರ ಅಭಿಪ್ರಾಯ.ಖರ್ಚು- ಆದಾಯ: ಮನೆಗೆಲಸದ ನಡುವೆಯೇ ಹೆಚ್ಚಿನ ಕೃಷಿ ಕೆಲಸವಿಲ್ಲದ ಸಮಯದಲ್ಲಿ ಮನೆಯವರೇ ಕೆಲಸ ನಿರ್ವಹಿಸುವುದರಿಂದ ಮತ್ತು ಬಿತ್ತನೆ ಬೀಜವನ್ನೂ ಸ್ವಂತವಾಗೇ ಹೊಂದಿಸಿಕೊಳ್ಳುವುದರಿಂದ ಒಟ್ಟು ಆದಾಯದಲ್ಲಿ ಶೇ. 80ರಷ್ಟು ಲಾಭವೇ ಇರುತ್ತದೆ. ಏನಿಲ್ಲವೆಂದರೂ ಏಕರೆಗೆ 40ರಿಂದ 50 ಸಾವಿರ ರೂಪಾಯಿ ಆದಾಯ ನಿರೀಕ್ಷಿಸಬಹುದು ಎನ್ನುವ ಶೃಂಗೇಶ್ವರರಾವ್ ಅಚ್ಚರಿ ಮೂಡಿಸುತ್ತಾರೆ.

ಒಂದರ್ಥದಲ್ಲಿ ಹರಿವೆ ಅವರಿಗೆ ಸಿರಿ ತಂದುಕೊಡುತ್ತಿದೆ ಎನ್ನಬಹುದು.

ಹೆಚ್ಚಿನ ಮಾಹಿತಿಗೆ ಮೊ: 9481651270.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.