ಶುಕ್ರವಾರ, ಫೆಬ್ರವರಿ 26, 2021
19 °C

ಲಾಭದ ಗಣಿ ಲಾವಂಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಭದ ಗಣಿ ಲಾವಂಚ

ಪೊದೆಯಾಗಿ ಬೆಳೆಯುವ, ದರ್ಬೆಯಂತೆ ಕಾಣುವ ಲಾವಂಚ ಎಂಬ ಹುಲ್ಲು ನಮ್ಮ ರೈತರಿಗೆ ಅಪರೂಪದ ಕೃಷಿಯೇನೂ ಅಲ್ಲ. ಸುಗಂಧ ದ್ರವ್ಯಕ್ಕಾಗಿ ಬಳಸ ಬಹುದಾದ ಈ ಹುಲ್ಲನ್ನು ವ್ಯಾಪಕ ಬೆಳೆದು ಆರ್ಥಿಕ ಲಾಭ ಮಾಡಿಕೊಳ್ಳುವ ಯತ್ನ ಮಾಡುವವರೇ ಕಮ್ಮಿ.ನೆಟ್ಟು ಹತ್ತು ತಿಂಗಳಲ್ಲಿಯೇ ಇದರ ಬೇರನ್ನು ಕತ್ತರಿಸಿ ತೈಲ ತೆಗೆಯಬಹುದು.  ಕತ್ತರಿಸುತ್ತಿದ್ದಂತೆಯೇ ಶೀಘ್ರದಲ್ಲಿ ಮೊತ್ತೊಂದು ಕೊಯ್ಲಿಗೆ ಸಿಗುವ ಲಾವಂಚ ಬಹುವಾರ್ಷಿಕ ಬೆಳೆಯೂ ಹೌದು. ಇದರ ಹುಲ್ಲಿನ ಕೆಳಭಾಗದಲ್ಲಿ ತಂತುಗಳಾಗಿ ಹರಡುವ ಬೇರುಗಳಿದ್ದು, ಸುಗಂಧಿತ ತೈಲವನ್ನು ಅದರಿಂದ ಭಟ್ಟಿಯಿಳಿಸುತ್ತಾರೆ.ಇದೇ ಬೇರುಗಳಿಂದ ಕಂಪು ಬೀರುವ ಬೀಸಣಿಕೆಗಳು, ಚಾಪೆಗಳು, ಟೋಪಿಗಳು, ಹಾರಗಳು ತಯಾರಾಗಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಬೇರುಗಳನ್ನು ಹೊಸೆದಿರುವ ಕುರ್ಚಿ, ಮಂಚಗಳೂ ಬೇಡಿಕೆ ಪಡೆದಿವೆ. ಈ ಪರಿಕರಗಳಿಗೆ ನೀರು ಸಿಂಪಡಿಸಿದರೆ ಮನೆ ತುಂಬ ಪರಿಮಳ ಬೀರುತ್ತದೆ. ಕುಡಿಯುವ ನೀರಿಗೆ ಲಾವಂಚದ ಬೇರು ಹಾಕಿದರೆ ನೀರು ಸುಗಂಧ ಭರಿತವಾಗುವುದಲ್ಲದೆ ಆರೋಗ್ಯಕರವೂ ನಿಜ. ನೀರನ್ನು ಶುದ್ಧೀಕರಿಸುವ ವಿಶೇಷ ಶಕ್ತಿ ಇದಕ್ಕಿದೆ.ಪಶ್ಚಿಮ ಮತ್ತು ಉತ್ತರ ಭಾರತದ ಕೃಷಿಕರಿಗೆ ಸಾಕಷ್ಟು ಪರಿಚಯವಿದೆ ಲಾವಂಚದ ಕೃಷಿ. ಆದರೆ ಇದರ ಸದುಪಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೃಷಿ ಇಲಾಖೆಯಿಂದ ನಡೆದಿಲ್ಲದ ಕಾರಣ ದಕ್ಷಿಣ ಭಾರತದಲ್ಲಿ ಪ್ರಮಾಣ ಕಡಿಮೆ. ಇದು ಲಾಭದ ಗಣಿಯೆಂಬುದರ ತಿಳಿವಳಿಕೆ ರೈತರಿಗಿಲ್ಲ.ಅದ್ಭುತ ಶಕ್ತಿ

ಇದರ ಹುಲ್ಲನ್ನು ಕತ್ತರಿಸದೆ ಬೆಳೆಯಲು ಬಿಟ್ಟರೆ ಬೇರುಗಳು ಮಣ್ಣಿನಲ್ಲಿ ಎರಡು ಮೀಟರ್ ತನಕ ಹರಡಿ ಆಳವಾಗಿ ಇಳಿಯುತ್ತವೆ. ಮೇಲ್ಮುಖವಾಗಿ ಹರಿಯುವ ನೀರನ್ನು ನೆಲದಾಳಕ್ಕಿಳಿಸಿ ಭುವಿಗೆ ನೀರಿಂಗಿಸುವಂತೆ ಮಾಡುವ ಶಕ್ತಿ ಇದಕ್ಕಿದೆ. ನೀರಿನಾಶ್ರಯ ಕಡಿಮೆ ಇರುವ ಹೊಲದ ಬದುಗಳಲ್ಲಿ ಈ ಗಿಡ ಬೆಳೆಸು ವುದರಿಂದ ನೀರನ್ನು ಹಿಡಿದಿಡಲು ನೆರವಾಗುತ್ತದೆ. ಅಲ್ಲದೆ ಅದರ ಬೇರುಗಳು ತೀವ್ರವಾದ ಮಳೆಯ ಹೊಡೆತದಿಂದ ಮಣ್ಣಿನ ಸವಕಳಿಯಾಗುವುದನ್ನು ತಡೆಯುತ್ತವೆ.ವೈಜ್ಞಾನಿಕವಾಗಿ ವೆಟಿವೇರಿಯಾ ಝಿಜಿನಾಯ್ಡಸ್ ಎಂದು ಹೆಸರಿರುವ ಲಾವಂಚವನ್ನು ಮುಡಿವಾಳ, ರಾಮಚ್ಚ, ವೆಟಿವರ್ ಹುಲ್ಲು ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಜೌಗು ಮಣ್ಣಿನಲ್ಲಿ ಬಹು ಪ್ರೀತಿಯಿಂದ ಬೆಳೆಯುವ ಈ ಹುಲ್ಲು ಒಂದೂವರೆ ಮೀಟರ್ ಎತ್ತರವಾಗುತ್ತದೆ. ಇದರಲ್ಲಿ ಕೆಲವು ಜಾತಿಗಳಿದ್ದರೂ ಎಲ್ಲವೂ ಬೇರಿನಿಂದ ತೈಲ ಕೊಡುತ್ತವೆ. ತೈಲದಲ್ಲಿ ಬೆಂಜೋಯಿಕ್ ಆಮ್ಲ, ಪಾಮಿಟಿಕ್ ಆಮ್ಲ, ವೆಟಿವೆರೋನ್ ವರ್ಗದ ಮೂವತ್ತಕ್ಕಿಂತ ಹೆಚ್ಚು ಸಂಖ್ಯೆಯ ರಾಸಾಯನಿಕ ಧಾತುಗಳು ಅಡಗಿವೆ.ಅದರ ನಾಟಿಗೆ ಮಳೆಗಾಲ ಆರಂಭವೇ ಪ್ರಶಸ್ತ ವಾದುದರಿಂದ ಬೆಳೆಗೆ ನೀರು ಬೇಡ. ಗೊಬ್ಬರ ಬಯಸುವುದಿಲ್ಲ. ಹತ್ತು ತಿಂಗಳ ಬಳಿಕ ಬೇರುಸಹಿತ ಕಿತ್ತು ಬೇರನ್ನು ಬೇರ್ಪಡಿಸುತ್ತಾರೆ. ನೆರಳಿಗೆ ಒಣಗಿಸಿ ಶುಚಿಗೊಳಿಸಿ ಭಟ್ಟಿಯಿಳಿಸುತ್ತಾರೆ. ಹೆಕ್ಟೇರಿಗೆ ಗರಿಷ್ಠ ನಾಲ್ಕು ಟನ್ ಬೇರು ದೊರೆಯುತ್ತದೆ.ಲಾವಂಚದ ಹುಲ್ಲಿನಲ್ಲಿ ಶೇ 13ರಷ್ಟು ಪ್ರೊಟೀನ್, ಶೇ3ರಷ್ಟು ಕೊಬ್ಬು ಇರುವುದರಿಂದ ದನ, ಆಡು, ಕುರಿ, ಕುದುರೆಗಳಿಗೆ ಉತ್ತಮ ಮೇವು ಎನಿಸಿ ಕೊಂಡಿದೆ. ಒಣಗಿಸಿ ದಾಸ್ತಾನು ಮಾಡಿ ಉಪಯೋಗಿಸ ಬಹುದು. ಕಳೆ ನಿಯಂತ್ರಣ ದೃಷ್ಟಿಯಿಂದಲೂ ಕಾಫಿ, ಕೋಕೋ, ಚಹಾ ತೋಟಗಳಲ್ಲಿ ಇದರ ಕೃಷಿ ಮಾಡುತ್ತಾರೆ. ಉತ್ತರ ಭಾರತದ ಕಾಡುಗಳಲ್ಲಿ ತಾನಾಗಿ ಬೆಳೆಯುವ ಲಾವಂಚದಲ್ಲಿ ತೈಲದ ಪ್ರಮಾಣ ಕಡಿಮೆಯಾದರೂ ಗುಣಮಟ್ಟದಲ್ಲಿ ಮೊದಲ ಸ್ಥಾನವಿದೆ.ಇದರಲ್ಲಿ ಹೂಬಿಟ್ಟು ಬೀಜವಾಗುವ ಕಾರಣ ಕೃಷಿ ಮಾಡದೆ ಹರಡುತ್ತದೆ. ದಕ್ಷಿಣ ಭಾರತದಲ್ಲಿ ಕೃಷಿ ಮಾಡುವ ಹುಲ್ಲಿನಲ್ಲಿ ಅಧಿಕ ತೈಲ ಸಿಕ್ಕಿದರೂ ಬೆಲೆ ಕಡಿಮೆ. ಬೀಜವಾಗದ ಕಾರಣ ಕೆಲವು ವರ್ಷಕ್ಕೊಮ್ಮೆ ನೆಟ್ಟು ಬೆಳೆಸುವುದು ಅನಿವಾರ್ಯ. ಇದರಲ್ಲಿ ಕೇಂದ್ರೀಯ ಔಷಧ ಮತ್ತು ಸುಗಂಧದ್ರವ್ಯ ಮಂಡಳಿ ಸುಧಾರಿತ ತಳಿಗಳನ್ನು ರೂಪಿಸಿದ್ದು ಹೆಕ್ಟೇರಿಗೆ ಇಪ್ಪತ್ತೊಂದು ಟನ್ ಇಳುವರಿ ಹಾಗೂ ಶೇ 14ಷ್ಟು ತೈಲ ಕೊಡಬಲ್ಲ ತಳಿಯೂ ಅದರಲ್ಲಿದೆ.ಬಹೂಪಯೋಗಿ ಬೆಳೆ

ಲಾವಂಚದ ಕೃಷಿಯಲ್ಲಿ ರೈತರಿಗೆ ನಿರಾಸಕ್ತಿ ಬರಲು ಮೂಲ ಕಾರಣ ಅದರ ಬೇರುಗಳಿಗೆ ನೇರ ಮಾರುಕಟ್ಟೆಯಿಲ್ಲ. ಭಾಷ್ಪೀಕರಣ ವಿಧಾನದಿಂದ ತೈಲವನ್ನು ಭಟ್ಟಿಯಿಳಿಸಲು ಕನಿಷ್ಠ ಹದಿನಾಲ್ಕು ತಾಸು ಬೇಕು. ಕೆಲವೆಡೆ ಸತತ ನಾಲ್ಕು ದಿನಗಳ ಕಾಲ ಶ್ರಮಿಸಬೇಕಾಗುತ್ತದೆ. ಹೀಗೆ ತೆಗೆದ ತೈಲದಲ್ಲಿ ಸುವಾ ಸನೆ ಮತ್ತು ಬಣ್ಣ ಬರಲು ಆರು ತಿಂಗಳ ಕಾಲ ಭದ್ರವಾಗಿ ಭರಣಿಗಳಲ್ಲಿ ಮುಚ್ಚಿಡಬೇಕಾಗುತ್ತದೆ.ಬಟ್ಟೆಗಳಿಗೆ ಘಮಘಮ ತರುವ ದ್ರವ್ಯಗಳ ತಯಾರಿಕೆಗೆ ಬಹುಪಾಲು ತೈಲ ಬಳಕೆಯಾಗುತ್ತದೆ. ಅಗರಬತ್ತಿ, ಸ್ನಾನದ ಸಾಬೂನು, ಸೌಂದರ್ಯ ಪ್ರಸಾಧನಗಳ ತಯಾರಿಕೆಯಲ್ಲೂ ಅದರ ಪಾತ್ರವಿರುವುದರಿಂದ ತುಂಬ ಬೆಲೆಯೂ ಇದೆ.  ಚರ್ಮ ರಕ್ಷಣೆಯಲ್ಲಿ ಲಾವಂಚದ ತೈಲ ಮಹತ್ವದ ಪಾತ್ರ ವಹಿಸುವುದು ಸಾಬೀತಾಗಿರುವುದರಿಂದ ಇದರ ಕ್ರೀಮುಗಳಿಗೆ ಬೇಡಿಕೆಯಿದೆ. ಮೊಡವೆ ಮತ್ತು ನೋವು ನಿವಾರಿಸುವ ಗುಣ ಹೊಂದಿರುವ ಇದನ್ನು ಸಂಧಿವಾತ, ಕಟಿನೋವು, ಬೆನ್ನುನೋವು ನಿವಾರಣೆಗೆ ಬಳಸುತ್ತಾರೆ.ಚಿಂತೆ, ಕೋಪ, ಅಪಸ್ಮಾರ, ಉನ್ಮಾದ ಚಿಕಿತ್ಸೆಗೂ ಅದು ವಿಶೇಷವೆನಿಸಿದೆ. ಮನೆಯ ದುರ್ಗಂಧ ನಿವಾರಣೆಯಾಗಿ ಸುಗಂಧ ಹರಡುವ ಸಿಂಪಡಿಕೆಗಳಲ್ಲೂ ಇದು ಬೆರೆಯುತ್ತದೆ. ಸೊಳ್ಳೆ ಮುಂತಾದ ಕೀಟಗಳನ್ನು ನಿವಾರಿಸುತ್ತದೆ. ಪೆಟ್ಟಿಗೆ, ಕಪಾಟುಗಳಲ್ಲಿ ಲಾವಂಚದ ಬೇರುಗಳನ್ನಿರಿಸಿದರೆ ಜಿರಳೆ, ತಿಗಣೆಯಂತಹ ಕೀಟಗಳಿಂದ ಬಟ್ಟೆಬರೆಗಳನ್ನು ಸುರಕ್ಷಿತವಾಗಿಡುತ್ತದೆ. ವಿಷಪ್ರಾಶನವಾದವರಿಗೆ ಬಲವಂತವಾಗಿ ವಾಂತಿ ಮಾಡಿಸಲು ಉಪಯೋಗ ವಿದೆ. ನಂಜುನಿರೋಧಕ. ಮೆದುಳಿನ ಉರಿಯೂತ ವನ್ನು ಶಮನಗೊಳಿಸುತ್ತದೆ.ಲಾವಂಚದ ತೈಲಕ್ಕೆ ಸಕ್ಕರೆ ಬೆರೆಸಿ ಸಿರಪ್ ತಯಾರಿಸುತ್ತಾರೆ. ಲಸ್ಸಿ, ಮಿಲ್ಕ್ ಶೇಕ್, ಐಸ್ಕ್ರೀಮ್, ಮಿಶ್ರ ಪಾನೀಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕೃಷಿ ಭೂಮಿಯಲ್ಲಿ ಲಾವಂಚ ನೆಟ್ಟರೆ ಮಣ್ಣಿನ ಗೆದ್ದಲಿನ ಬಾಧೆಯನ್ನು ಸಮರ್ಪಕವಾಗಿ ತಡೆಯುತ್ತದೆ. ಭತ್ತದ ಬೆಳೆಗೆ ಬರುವ ಕಾಂಡಕೊರಕ ಹುಳಗಳನ್ನು ತನ್ನತ್ತ ಆಕರ್ಷಿಸಿ ಕೊಲ್ಲುತ್ತದೆಂದು ಹೇಳಲಾಗಿದೆ.ಅದರ ಬೇರಿನಿಂದ ಹಲವು ಕಾಯಿಲೆಗಳಿಗೆ ಚಿಕಿತ್ಸೆಯನ್ನೂ ಮಾಡುತ್ತಾರೆ. ಹೊಟ್ಟೆ ನೋವು ಮತ್ತು ಕ್ರಿಮಿನಾಶಕವಾಗಿ ಚಿಕಿತ್ಸೆಗೆ ಉಪಯೋಗವಾಗುವ ಲಾವಂಚದ ಬೇರು ಕಫಮೇಹಕ್ಕೆ ಮದ್ದಾಗುತ್ತದೆ. ಹಳೆಯ ತುಪ್ಪದಲ್ಲಿ ಅರೆದು ಹಚ್ಚಿದರೆ ಅಂಗಾಲು ಒಡೆಯುವ ಬಾಧೆ ಶಮನವಾಗುತ್ತದೆ. ಇದರ ಕಷಾಯ ಮಕ್ಕಳ ಕಫ, ಪಿತ್ಥಜ್ವರ, ಕೆಮ್ಮು, ಉಬ್ಬಸ, ವಾಂತಿಗಳನ್ನು ಗುಣಪಡಿಸುತ್ತದೆ.ಲಾವಂಚವು ಮರಳುಮಿಶ್ರಿತವಾದ ಕೆಂಪು ಅಥವಾ ಕಪ್ಪು ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ಅದನ್ನು ಅಲ್ಪ ಪ್ರಮಾಣದಲ್ಲಿ ಗೋಣಿಚೀಲ, ಪ್ಲಾಸ್ಟಿಕ್ ಚೀಲ, ಬಕೆಟ್ ಇತ್ಯಾದಿಗಳಲ್ಲಿ ಮನೆಯ ಅಂಗಳ ಅಥವಾ ತಾರಸಿಯಲ್ಲಿಯೂ ಬೆಳೆಯಬಹುದು. ಖರ್ಚು ಕಡಿಮೆ, ಶ್ರಮವೂ ಹೆಚ್ಚಿಲ್ಲದೆ ಇದರ ಕೃಷಿ ಸಾಧ್ಯ. ಬೇರನ್ನು ಕತ್ತರಿಸಿ ನೀರಿನಿಂದ ತೊಳೆದು ಶುಚಿಗೊಳಿಸಿ ಒಣಗಿದ ಬಳಿಕ ಕಟ್ಟು ಮಾಡಿದರೆ ಬಹುಕಾಲ ದಾಸ್ತಾನಿಡಬಹುದು. ವಿದೇಶಗಳಿಂದ ಅದರ ತೈಲಕ್ಕೆ ಅಪಾರ ಬೇಡಿಕೆಯಿದ್ದರೂ ಲಾವಂಚದ ವ್ಯವಸ್ಥಿತ ವ್ಯವಸಾಯ ನಮ್ಮಲ್ಲಿ ನಡೆಯುತ್ತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.