ಲಾಭದ ಬೆಳೆ ಬೇಬಿ ಕಾರ್ನ್

7

ಲಾಭದ ಬೆಳೆ ಬೇಬಿ ಕಾರ್ನ್

Published:
Updated:
ಲಾಭದ ಬೆಳೆ ಬೇಬಿ ಕಾರ್ನ್

ಉತ್ತರ ಭಾರತೀಯ ಸಸ್ಯಾಹಾರಿ ಖಾದ್ಯಗಳಲ್ಲಿ ತರಕಾರಿಯಾಗಿ ಬಳಸುವ ಎಳೆಯ ಮೆಕ್ಕೆಜೋಳದ ತೆನೆಗಳನ್ನು ಬೆಳೆಯುವುದು ಲಾಭದಾಯಕ. ಬಿಡದಿ ಹೋಬಳಿಯ ಹಲವಾರು ರೈತರು ಬೇಬಿ ಕಾರ್ನ್ ಬೆಳೆಯುತ್ತಾರೆ.ರಾಮನಗರ ಜಿಲ್ಲೆಯ ಹಲವು ರೈತರು ಕಡಿಮೆ ಖರ್ಚಿನಲ್ಲಿ ಮೆಕ್ಕೆ ಜೋಳ ಬೆಳೆದು ಎಳೆಯ ತೆನೆಗಳನ್ನು ಕಿತ್ತು ಮಾರಾಟ ಮಾಡುತ್ತಿದ್ದಾರೆ. `ಬೇಬಿ ಕಾರ್ನ್~ ಎಂದೇ ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಮೆಕ್ಕೆ ಜೋಳದ ಎಳೆಯ ತೆನೆಗಳಿಗೆ  ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.ತೆನೆಗಳು ಬಲಿಯುವವರೆಗೆ ಕಾಯದೆ ಎಳೆಯ ತೆನೆಗಳನ್ನು ಕಿತ್ತು ಮಾರಾಟ ಮಾಡುವುದು ಲಾಭದಾಯಕ ಎನ್ನುವುದು ಅನೇಕ ರೈತರ ಅಭಿಪ್ರಾಯ.ಎಳೆಯ ತೆನೆಗಳನ್ನು ಕೊಯ್ಲು ಮಾಡಿದ ನಂತರ ಉಳಿಯುವ ಮೆಕ್ಕೆ ಜೋಳದ ದಂಟನ್ನು ದನಕರುಗಳಿಗೆ ಮೇವಾಗಿ ಬಳಸುತ್ತಾರೆ.

 

ಮೆಕ್ಕೆಜೋಳ ಬೆಳೆಯಲು ಹೆಚ್ಚು ಪರಿಶ್ರಮ ಬೇಕಿಲ್ಲ. ತೆಂಗಿನ ತೋಟಗಳ ನೆರಳಿನಲ್ಲೂ ಬೆಳೆಯಬಹುದು. ಬಿತ್ತನೆಯ ನಂತರ ರಾಸಾಯನಿಕ ಗೊಬ್ಬರವನ್ನು ಎರಡು ಸಲ ಹಾಕಿದರೆ ಸಾಕು. |ತೆನೆಗಳು ಬಲಿಯುವವರೆಗೆ ಕಾಯುವ ಅಗತ್ಯ ಇಲ್ಲ. ಎಳೆಯ ತೆನೆಗಳನ್ನು ಕಿತ್ತು ಮಾರಾಟ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಹಣ ಕೈಗೆ ಬರುತ್ತದೆ. ಮೆಕ್ಕೆ ಜೋಳದ ಬೇಸಾಯಕ್ಕೆ ಹೆಚ್ಚಿನ ಕೃಷಿ ಕಾರ್ಮಿಕರೂ ಬೇಕಿಲ್ಲ.ಬಿಡದಿ ಹೋಬಳಿ ಅವರಗೆರೆ ಗ್ರಾಮದ ರೈತ ದೇವರಾಜು ಎರಡು ಎಕರೆ ನೀರಾವರಿ ಜಮೀನಿನಲ್ಲಿ ಕಳೆದ ಎಂಟು ವರ್ಷಗಳಿಂದ ಬೇಬಿ ಕಾರ್ನ್ ಬೆಳೆಯುತ್ತಿದ್ದಾರೆ.ತಲಾ 30 ಗುಂಟೆಯಲ್ಲಿ 15 ದಿನಗಳ ಅಂತರದಲ್ಲಿ  ಮೂರು ಹಂತಗಳಲ್ಲಿ ಬೆಳೆಯುತ್ತಾರೆ. ಒಂದು ಎಕರೆಗೆ 5 ಕೆಜಿ ಬಿತ್ತನೆ ಬೀಜ ಬಳಸುತ್ತಾರೆ. ಬಿತ್ತನೆ ಬೀಜವನ್ನು ಕೇಜಿಗೆ 300 ರೂ ಬೆಲೆ ಕೊಟ್ಟು ಬೆಂಗಳೂರಿನಲ್ಲಿ ಖರೀದಿಸುತ್ತಾರೆ.ಬಿತ್ತನೆ ಮಾಡಿದ 20 ಮತ್ತು 45 ದಿನಗಳ ನಂತರ ಯೂರಿಯಾ ಮತ್ತು ಡಿ.ಎ.ಪಿ. ಗೊಬ್ಬರ ಹಾಕಿ ವಾರಕ್ಕೆ ಎರಡು ಬಾರಿ ನೀರು ಹಾಯಿಸುತ್ತೇನೆ. ಬಿತ್ತನೆ ನಂತರದ ಎರಡು ತಿಂಗಳಲ್ಲಿ ತೆನೆಗಳು ಕೊಯ್ಲಿಗೆ ಬರುತ್ತವೆ ಎನ್ನುತ್ತಾರೆ ದೇವರಾಜು. ಮೆಕ್ಕೆ ಜೋಳದ ಪೈರು ಬಹು ಬೇಗ ಬೆಳೆಯುತ್ತವೆ. ಹೊಲದಲ್ಲಿ ಕಳೆ ಕೀಳುವ ಅಗತ್ಯ ಇರುವುದಿಲ್ಲ.50 ದಿನಗಳ ವೇಳೆಗೆ ಪೈರಿನಲ್ಲಿ ತೆನೆಗಳು ಕಾಣಿಸಿಕೊಳ್ಳುತ್ತವೆ. ಒಂದು ಪೈರು ಕನಿಷ್ಠ ಮೂರು ತೆನೆ ಬಿಡುತ್ತದೆ. 60 ದಿನಗಳಲ್ಲಿ ಕೊಯ್ಲು ಮಾಡಿ ಮುಗಿಸಬಹುದು. ಒಂದು ಎಕರೆಗೆ ನಾಲ್ಕು ಟನ್ ಬೇಬಿಕಾರ್ನ್ ಸಿಗುತ್ತದೆ ಎನ್ನುತ್ತಾರೆ ದೇವರಾಜು. ಎರಡು ದಿನಗಳಿಗೊಮ್ಮೆ ಎಳೆಯ ತೆನೆಗಳನ್ನು ಕೊಯ್ಲು ಮಾಡಿ, ಒಂದು ಟನ್ ಆಗುವವರೆಗೆ ಸಂಗ್ರಹಿಸಿಟ್ಟು  ನಂತರ ಬೆಂಗಳೂರಿಗೆ ಒಯ್ದು ಮಾರಾಟ ಮಾಡುತ್ತಾರೆ. ಕೆ.ಆರ್ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕನಿಷ್ಠ 10 ರೂ ಮಾರಾಟವಾದರೂ ಬೆಳೆದವರಿಗೆ ಲಾಭವಿದೆ.ಮದುವೆ ಸುಗ್ಗಿಯಲ್ಲಿ ಒಂದು ಕೇಜಿ ಬೇಬಿಕಾರ್ನ್‌ಗೆ 20 ರೂ. ದರ ಇರುತ್ತದೆ. ದೇವರಾಜು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ಒಂದು ಬೆಳೆಗೆ ಬಿತ್ತನೆ ಬೀಜ, ಬೇಸಾಯದ ಖರ್ಚು, ಗೊಬ್ಬರ ಇತ್ಯಾದಿಗಳಿಗೆ ಐದು ಸಾವಿರ ರೂ  ಖರ್ಚು ಮಾಡುತ್ತಾರೆ.

 

ನಿವ್ವಳ 20,000 ರೂ ಆದಾಯ ಬರುತ್ತದೆ ಎನ್ನುತ್ತಾರೆ ದೇವರಾಜು.ಮೆಕ್ಕೆ ಜೋಳದ ಎಳೆಯ ತೆನೆಗಳನ್ನು ತರಕಾರಿಯಾಗಿ ಬಳಸುವ ಪದ್ಧತಿ ಉತ್ತರ ಭಾರತ ಹಾಗೂ ವಿದೇಶಗಳಲ್ಲಿದೆ. ಉತ್ತರ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಬೇಬಿಕಾರ್ನ್ ಮಂಚೂರಿ, ಬೇಬಿಕಾರ್ನ್ ಪೆಪ್ಪರ್ ಡ್ರೈ ಇತ್ಯಾದಿ ಹೆಸರಿನ ಖ್ಯಾದ್ಯಗಳು ಜನಪ್ರಿಯವಾಗಿವೆ.ಯುವಜನರಿಗೆ ಬೇಬಿಕಾರ್ನ್‌ನಿಂದ ಮಾಡಿದ ಖಾದ್ಯಗಳು ಇಷ್ಟ. ಎಳೆಯ ತೆನೆಗಳನ್ನು ಹಸಿಯಾಗಿ ತಿನ್ನುವವರೂ ಇದ್ದಾರೆ. ಆಂಧ್ರಪ್ರದೇಶ ಮತ್ತು  ತಮಿಳುನಾಡಿಗೆ ಬೆಂಗಳೂರು ಸುತ್ತಮುತ್ತ ಬೆಳೆಯುವ ಬೇಬಿ ಕಾರ್ನ್ ಹೆಚ್ಚಾಗಿ ಸರಬರಾಜಾಗುತ್ತದೆ.  ತರಕಾರಿ ಉದ್ದೇಶಕ್ಕೆ ಮೆಕ್ಕೆ ಜೋಳ ಬೆಳೆಯುವುದು ಲಾಭದಾಯಕ ಎನ್ನುವುದು ನಮ್ಮ ರೈತರಿಗೆ ಗೊತ್ತಿಲ್ಲ. ಎಲ್ಲ ರೈತರೂ ಬೇಬಿಕಾರ್ನ್‌ಗಾಗಿ ಮೆಕ್ಕೆ ಜೋಳ ಬೆಳೆಯಲು ಹೊರಟರೆ ನಷ್ಟವಾಗುತ್ತದೆ.ಆದರೆ ಬೆಂಗಳೂರು ಸೇರಿದಂತೆ ನಗರಗಳ ಹೊರ ವಲಯದ ರೈತರು ಬೇಬಿ ಕಾರ್ನ್ ಬೆಳೆಯಬಹುದು. ಮಾರುಕಟ್ಟೆಯಲ್ಲಿ ಬೇಡಿಕೆ ನೋಡಿಕೊಂಡು ಬೆಳೆಯುವುದು ಅಥವಾ ಒಪ್ಪಂದ ಮಾಡಿಕೊಂಡು ಬೆಳೆಯುವುದು ಜಾಣತನವಾದೀತು.ಮೆಕ್ಕೆ ಜೋಳದ ಹಸಿಯ ದಂಟುಗಳನ್ನು ದನಕರುಗಳು ಇಷ್ಟಪಟ್ಟು ತಿನ್ನುತ್ತವೆ. ದಂಟಿನಲ್ಲಿ ಸಿಹಿಯ ಅಂಶವಿದೆ. ದನಗಳು ತಿನ್ನದೆ ಬಿಟ್ಟ ಬಲಿತ ದಂಟುಗಳನ್ನು ಸಣ್ಣದಾಗಿ ಕತ್ತರಿಸಿ ತಿಪ್ಪೆಗೆ ಹಾಕಿದರೆ ಕೊಳೆತು ಉತ್ಕೃಷ್ಟ ಗೊಬ್ಬರವಾಗುತ್ತದೆ. ಅದನ್ನೇ ಬಳಸಿಕೊಂಡು ಮತ್ತೆ ಬೇಬಿಕಾರ್ನ್ ಬೆಳೆಯಬಹುದು.ಆಸಕ್ತರು ದೇವರಾಜು  ಅವರ ಜೊತೆ ಮಾತನಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅವರ ಮೊಬೈಲ್ ನಂಬರ್- 98441 33409.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry