ಗುರುವಾರ , ಮೇ 13, 2021
22 °C

ಲಾಭ-ಜನಕ್ಕೆಷ್ಟು... ಪಕ್ಷಕ್ಕೆಷ್ಟು?

ಭೀಮಸೇನ ಚಳಗೇರಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಬರ ಪರಿಸ್ಥಿತಿಯನ್ನು ಅರಿಯಲು ಜಿಲ್ಲೆಯಿಂದಲೇ ತಮ್ಮ ಪ್ರವಾಸ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯದ ಮಟ್ಟಿಗೆ ಜಿಲ್ಲಾ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದಾರೆ.ಏ. 4ರಂದು ಜಿಲ್ಲೆಯ ಕೊಪ್ಪಳ ಹಾಗೂ ಯಲಬುರ್ಗಾ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿರುವ ಯಡಿಯೂರಪ್ಪ ರಸ್ತೆ, ಕುಡಿಯುವ ನೀರಿನ ಕಾಮಗಾರಿ, ಗೋಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಒಟ್ಟು 2-3 ಗಂಟೆಗಳ ಕಾಲ ಜಿಲ್ಲೆಯಲ್ಲಿ ಮಿಂಚಿನ ಪ್ರವಾಸ ಮಾಡಲಿರುವ ಯಡಿಯೂರಪ್ಪ ಎಷ್ಟರ ಮಟ್ಟಿಗೆ ಬರ ಪರಿಸ್ಥಿತಿಯನ್ನು ಗ್ರಹಿಸುತ್ತಾರೆ, ಜನರ ತಾಪತ್ರಯ ಅರಿಯುತ್ತಾರೆ ಎಂಬ ಬಗ್ಗೆ ಪಕ್ಷದ ಮುಖಂಡರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.ಒಂದು ವೇಳೆ ಸಮಸ್ಯೆಗಳು ಕಂಡು ಬಂದರೂ ಹೆಚ್ಚುವರಿ ಅನುದಾನದ ಭರವಸೆ ನೀಡುವರೇ, ಸೂಕ್ತ ಪರಿಹಾರ ಒದಗಸುವುರೇ ಎಂಬ ಪ್ರಶ್ನೆಗಳೂ ಪಕ್ಷದ ಮುಖಂಡರನ್ನಲ್ಲದೇ ಜನರನ್ನೂ ಕಾಡುತ್ತಿವೆ.

ಆದರೆ, ಬರ ಪರಿಸ್ಥಿತಿಯನ್ನು ಅವಲೋಕಿಸುವ ಉದ್ದೇಶದೊಂದಿಗೆ ಪಕ್ಷದ ಸಂಘಟನೆ ಹಾಗೂ ತಮಗಿರುವ ಬೆಂಬಲವನ್ನೂ ಅರಿತುಕೊಳ್ಳುವ ಪ್ರಯತ್ನ ಈ ಭೇಟಿಯ ಹಿಂದಿದೆ ಎಂದೂ ಹೇಳಲಾಗುತ್ತಿದೆ.ಅದೂ ಅಲ್ಲದೇ, ಅಧಿಕಾರ ಕಳೆದುಕೊಂಡ ನಂತರ ಹಾಗೂ ಶಾಸಕ ಸ್ಥಾನಕ್ಕೆ ಸಂಗಣ್ಣ ಕರಡಿ ಅವರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ ಯಡಿಯೂರಪ್ಪಗೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಗೆಲುವನ್ನು ತಂದು ಕೊಟ್ಟಿದ್ದು ಇತಿಹಾಸ.ಉಪಚುನಾವಣೆ ಸಂದರ್ಭದಲ್ಲಿ ಅವರೇ ಹೇಳುತ್ತಿದ್ದಂತೆ ಅಗ್ನಿ ಪರೀಕ್ಷೆ~ಯಲ್ಲೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತದಾರರು ಯಡಿಯೂರಪ್ಪಗೆ ಯಶಸ್ಸು ತಂದು ಕೊಟ್ಟಿದ್ದಾರೆ. ಹೀಗಾಗಿ ರಾಜಕೀಯ ಬಿಕ್ಕಟ್ಟಿನಲ್ಲಿಯೂ ತಮಗೆ ಬಲ ತಂದು ಕೊಟ್ಟಿರುವ ಈ ಕ್ಷೇತ್ರದಿಂದಲೇ ಈ ಪ್ರವಾಸ ಆರಂಭಿಸುತ್ತಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.ಆದರೆ, ಕಳೆದ 2 ವರ್ಷಗಳ ಅವಧಿಯಲ್ಲಿ ನಡೆದ ರಾಜಕೀಯ ಮೇಲಾಟಗಳಲ್ಲಿ ಜಿಲ್ಲೆಯ ಶಾಸಕರು ಪದೇಪದೇ ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದರಿಂದಾಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಪಕ್ಷದಲ್ಲಿಯೇ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿಯಿಂದಾಗಿ ದಿಕ್ಕು ತೋಚದಂತಿರುವ ಇಲ್ಲಿನ ಕಾರ್ಯಕರ್ತರಿಗೆ ಯಡಿಯೂರಪ್ಪ ಭೇಟಿ ಉತ್ಸಾಹ ತರಬಲ್ಲದೇ? ತಾವು ಬಿಜೆಪಿ ಕಾರ್ಯಕರ್ತರು ಎಂಬುದಾಗಿ ಹೇಳಿಕೊಳ್ಳಲು ಸಹ ನಾಚಿಕೆಯಾಗುತ್ತಿದೆ ಎಂದು ಕೊರಗುತ್ತಿರುವ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಕೊನರುವುವಂತೆ ಮಾಡುವುದೇ ಎಂಬ ಪ್ರಶ್ನೆಗಳು ಸ್ವತಃ ಕಾರ್ಯಕರ್ತರನ್ನು ಕಾಡುತ್ತಿವೆ.ಈ ನಡುವೆ ಏ. 20ರಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜಿಲ್ಲೆಯ 200ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಸೇರುವ ಸಿದ್ಧತೆ ನಡೆದಿದೆ. ಈ ಬೆಳವಣಿಗೆ ಮೇಲೂ ಯಡಿಯೂರಪ್ಪ ಅವರ ಪ್ರವಾಸ ಪ್ರಭಾವ ಬೀರಬಹುದೇ ಕಾದು ನೋಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.