ಲಾಭ ತಂದ ಮೀನುಗಾರಿಕಾ ಋತು

ಬುಧವಾರ, ಜೂಲೈ 24, 2019
28 °C

ಲಾಭ ತಂದ ಮೀನುಗಾರಿಕಾ ಋತು

Published:
Updated:

ಮಂಗಳೂರು: ಮುಕ್ತಾಯದ ಹಂತದಲ್ಲಿರುವ ಪ್ರಸಕ್ತ ಸಾಲಿನ ಮೀನುಗಾರಿಕಾ ಋತುವಿನಲ್ಲಿ ಎಲ್ಲಾ ಬಗೆಯ ಮೀನುಗಳ ಬೆಲೆ ಗಗನಕ್ಕೇರಿದ ಪರಿಣಾಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರ     ಮೊಗದಲ್ಲಿ ನಗುವಿನ ಅಲೆ ಹೊಮ್ಮಿದೆ.2010ರ ಏಪ್ರಿಲ್‌ನಿಂದ ಆರಂಭಗೊಂಡು 2011ರ ಮಾರ್ಚ್‌ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ರೂ. 560.90 ಕೋಟಿ ಮೌಲ್ಯದ 1,34,739 ಮೆಟ್ರಿಕ್ ಟನ್, ಉಡುಪಿ ಜಿಲ್ಲೆಯಲ್ಲಿ ರೂ. 471.52 ಕೋಟಿ ಮೌಲ್ಯದ 1,17,803 ಮೆಟ್ರಿಕ್ ಟನ್ ಮೀನು ಹಿಡುವಳಿಯಾಗಿದೆ.

ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೂ. 407. 63 ಕೋಟಿ ಮೌಲ್ಯದ 90,345 ಮೆಟ್ರಿಕ್ ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ ರೂ. 357. 23 ಕೋಟಿ ಮೌಲ್ಯದ 99,422 ಮೆಟ್ರಿಕ್ ಟನ್ ಮೀನು ಹಿಡುವಳಿಯಾಗಿತ್ತು ಎಂದು ದಕ್ಷಿಣ ಕನ್ನಡ ಮೀನುಗಾರಿಕಾ ಇಲಾಖೆ ನಿರ್ದೇಶಕ ಸುರೇಶ್ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಎಲ್ಲಾ ಬಗೆಯ ಮೀನುಗಳಿಗೆ ಸ್ಥಳೀಯ, ಹೊರ ರಾಜ್ಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಶೇ 50ರಿಂದ 60ರಷ್ಟು ಬೆಲೆ ಹೆಚ್ಚಳವಾಗಿದೆ. `ಮಾಂಜಿ~ ಮೀನಿನ ಬೆಲೆ ಕೆ.ಜಿ.ಗೆ ರೂ. 250ರಿಂದ ರೂ. 400ಕ್ಕೆ ಮತ್ತು `ಅಂಜಲ್~ ಮೀನಿನ ಬೆಲೆ ರೂ. 70ರಿಂದ ರೂ. 180ಕ್ಕೆ ಹೆಚ್ಚುವ ಮೂಲಕ ಹೊಸ ದಾಖಲೆ ಬರೆದಿದೆ. ಬೊಂಡಾಸ್‌ಗೆ ರೂ. 90ರಿಂದ ರೂ. 130ಕ್ಕೆ, ರಾಣಿ ಮೀನಿಗೆ ರೂ. 30ರಿಂದ ರೂ. 45ಕ್ಕೆ ಮತ್ತು 4ರಿಂದ 5 ರೂಪಾಯಿ ಇದ್ದ ಬಂಗುಡೆ ಮೀನೊಂದಕ್ಕೆ ಪ್ರಸ್ತುತ 12ರಿಂದ 16 ರೂಪಾಯಿಗೆ ಏರಿದೆ (ಕಳೆದ ವರ್ಷ ಕೆ.ಜಿ.ಗೆ ರೂ. 20ರಿಂದ 30 ಇದ್ದ ಬಂಗುಡೆ ಬೆಲೆ ಈಗ 70ರಿಂದ 80 ರೂಪಾಯಿ ತಲುಪಿದೆ). ಮತ್ಸ್ಯ ಮಾರುಕಟ್ಟೆ ಎರಡು ವರ್ಷಗಳ ಬಳಿಕ ಗಣನೀಯ ಏರಿಕೆ ಕಂಡಿದೆ. ಆದರೆ ಸೀಗಡಿ ದರದಲ್ಲಿ ಏರಿಕೆಯಾಗದೆ ಕೆ.ಜಿ.ಗೆ 180 ರೂಪಾಯಿ ಯಥಾ ಸ್ಥಿತಿ ಇದೆ.ಪ್ರಸಕ್ತ ಮೀನುಗಾರಿಕಾ ಋತುವಿನ ಕುರಿತು `ಪ್ರಜಾವಾಣಿ~ ಜತೆ ಮಾತನಾಡಿದ ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಹಕಾರಿ ಸಂಘದ ಕಾರ್ಯದರ್ಶಿ ನಾಗೇಶ್ ಬೊಳಾರ್, `ಪ್ರಸ್ತುತ ಮೀನಿನ ಹಿಡುವಳಿಯಲ್ಲಿ ಅಂತಹ ಏರಿಕೆ ಕಂಡುಬಂದಿಲ್ಲ, ಆದರೆ ಎಲ್ಲಾ ಬಗೆಯ ಮೀನುಗಳಿಗೂ ಬೆಲೆ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೀಸಾಡುವ ಮೀನುಗಳಿಗೂ ಉತ್ತಮ ಬೆಲೆ ಬರುವ ಮೂಲಕ ಮೀನುಗಾರಿಕೆ ಪ್ರಸಕ್ತ ವರ್ಷ ಲಾಭದಾಯಕವಾಗಿದೆ~ ಎಂದರು.

`ಪ್ರಸಕ್ತ ಋತುವಿನಲ್ಲಿ ಬಂಗುಡೆ, ಬೂತಾಯಿ ಹೇರಳವಾಗಿ ಸಿಕ್ಕಿದೆ. ಮದ್ಮಲ್ (ಮದುಮಗಳು), ಪಾಂಬಲ್(ಹಾವು ಮೀನು) ಕಲ್ಲೂರು, ಪಾಂಪ್ರೇಟ್ ಬಲೆಗೆ ಬಿದ್ದಿದ್ದು ಕಡಿಮೆ. ಅಂಜಲ್ ಹಿಡುವಳಿ ಸಾಧಾರಣವಾಗಿತ್ತು. ಸರ್ಕಾರದ ಸಹಾಯಧನದ ಡೀಸೆಲ್ ಕೋಟಾ ಮೇ 28ಕ್ಕೆ ಮುಕ್ತಾಯವಾಗದಿರುತ್ತಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆ ನಡೆಸಬಹುದಿತ್ತು. ಹಾಗಾಗಿ, ಮೀನುಗಾರಿಕೆ ರಜೆಗೆ 11 ದಿನ ಬಾಕಿ ಇರುವಾಗಲೇ ದೋಣಿಗಳು ದಡ ಸೇರುತ್ತಿವೆ~ ಎಂದರು.`ಈ ವರ್ಷ ಮೀನುಗಾರಿಕೆಗೆ ಯಾವುದೇ ತೊಂದರೆಯಾಗಿಲ್ಲ, ಉತ್ತಮ ಬೆಲೆ ಸಿಕ್ಕಿದೆ. ಬೇಡಿಕೆಯೂ ಅಧಿಕವಿದೆ~ ಎಂದು ಮಂಗಳೂರಿನಿಂದ ಚೆನ್ನೈ, ಕೇರಳ ಮತ್ತು ಗೋವಾಕ್ಕೆ ಮೀನು ಕಳುಹಿಸುವ ಇಕ್ಬಾಲ್ ತಿಳಿಸಿದರು.2009-10ರ ಮೀನುಗಾರಿಕಾ ಋತುವಿನ ಆರಂಭ ಮತ್ತು ಅಂತ್ಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ದೋಣಿಗಳು ವಾರಗಟ್ಟಲೆ ಕಡಲಿಗೆ ಇಳಿಯದೆ ಸಾಕಷ್ಟು ತೊಂದರೆಯಾಗಿತ್ತು. ಆದರೆ ಪ್ರಸಕ್ತ ವರ್ಷ ಅನುಕೂಲಕರ ಹವಾಮಾನ ಇದ್ದ ಕಾರಣ ಮೀನುಗಾರಿಕೆ ಲಾಭದಾಯಕವಾಗಿ ಪರಿಣಮಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry