ಲಾರಿ ಡಿಕ್ಕಿ: ಬೈಕ್ ಸವಾರ ಸಾವು

7

ಲಾರಿ ಡಿಕ್ಕಿ: ಬೈಕ್ ಸವಾರ ಸಾವು

Published:
Updated:

ಬೆಂಗಳೂರು: ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಯಲಹಂಕ ಸಮೀಪದ ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.ಗಿರಿನಗರ ಬಳಿಯ ಮುನೇಶ್ವರ ಬ್ಲಾಕ್ ನಿವಾಸಿ ಯೋಗೀಶ್ (40) ಸಾವನ್ನಪ್ಪಿದವರು. ಅವರು ಹೋಟೆಲ್ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ತಂದೆ ರಾಮಚಂದ್ರ ಅವರ ಜತೆ ಬೈಕ್‌ನಲ್ಲಿ ಯಲಹಂಕಕ್ಕೆ ಬಂದಿದ್ದ ಯೋಗೀಶ್ ಮನೆಗೆ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಬಳ್ಳಾರಿ ರಸ್ತೆ ಕಡೆಯಿಂದ ಬಂದ ಲಾರಿ ಬಲ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ, ವಿರುದ್ಧ ದಿಕ್ಕಿನ ಸಿಗ್ನಲ್‌ನಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಯೋಗೀಶ್ ಅವರಿಗೆ ಡಿಕ್ಕಿ ಹೊಡೆದಿದೆ.ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರುತಿಳಿಸಿದ್ದಾರೆ.ಘಟನೆಯಲ್ಲಿ ರಾಮಚಂದ್ರ ಅವರಿಗೂ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು

ಯುವಕನೊಬ್ಬ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಯಲಹಂಕ ಬಳಿಯ ಕೋಗಿಲು ಲೇಔಟ್‌ನಲ್ಲಿ ನಡೆದಿದೆ.ಕೋಗಿಲು ಲೇಔಟ್ ನಿವಾಸಿ ಗೋಪಾಲ್ (22) ಮೃತಪಟ್ಟವರು. ಟೈಲರ್ ಆಗಿದ್ದ ಅವರು ಸಂಜಯನಗರದಲ್ಲಿ ಅಂಗಡಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಭಾನುವಾರ (ಜ.29) ಮಧ್ಯಾಹ್ನ ಅವರು ಮನೆಯ ಸಮೀಪದ ನೀರಿನ ಹೊಂಡದ ಬಳಿ ಬಹಿರ್ದೆಸೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರು ಕಾಲು ಜಾರಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದರು. ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಹೊಂಡದಲ್ಲಿ ಗೋಪಾಲ್ ಅವರ ಶವ ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಶವವನ್ನು ಹೊಂಡದಿಂದ ಹೊರ ತೆಗೆಯಲಾಗಿದೆ. ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಲಹಂಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಬಂಧನ

ಚಲನಚಿತ್ರಗಳ ನಕಲಿ ಡಿವಿಡಿ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ನಕಲಿ ಡಿವಿಡಿ ವಶಪಡಿಸಿಕೊಂಡಿದ್ದಾರೆ.ಕೆಂಪಾಪುರ ಅಗ್ರಹಾರದ ಆರ್.ನಾಗರಾಜ್ (28), ಎಂ.ಎಸ್.ಪಾಳ್ಯದ ಎಸ್.ಪ್ರಭು (21), ಮಾಗಡಿ ರಸ್ತೆ ಬಳಿಯ ಮಂಜುನಾಥನಗರದ ಕಿರಣ್ (26), ಕಾಮಾಕ್ಷಿಪಾಳ್ಯದ ಬಾಲು (23) ಮತ್ತು ಮೂಡಲಪಾಳ್ಯದ ಕೃಷ್ಣನಾಯಕ್ (19) ಬಂಧಿತರು.ಆರೋಪಿಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ `ಅಗ್ನಿಪಥ್~, `ಡಾನ್-2~ ಚಿತ್ರದ ಹಾಗೂ ತಮಿಳು ಭಾಷೆಯ ಹೊಸ ಚಿತ್ರಗಳ ನಕಲಿ ಡಿವಿಡಿಗಳನ್ನು ನಾಗರಬಾವಿ ಮುಖ್ಯರಸ್ತೆಯ ಬಳಿ ಪಾದಚಾರಿ ಮಾರ್ಗದಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಅವರನ್ನು ಬಂಧಿಸಿ ವಿವಿಧ ಭಾಷೆಯ ಚಲನಚಿತ್ರಗಳ 4,450 ನಕಲಿ ಡಿವಿಡಿ ಮತ್ತು ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಸಿಸಿಬಿ ಎಸಿಪಿ ಜಿ.ಟಿ.ಅಜ್ಜಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಕೆ.ನಾಗರಾಜ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry