ಲಾರಿ ಡಿಕ್ಕಿ ಹೊಡೆದು ಸರಣಿ ಅಪಘಾತ

ಶನಿವಾರ, ಮೇ 25, 2019
28 °C

ಲಾರಿ ಡಿಕ್ಕಿ ಹೊಡೆದು ಸರಣಿ ಅಪಘಾತ

Published:
Updated:

ಮೂರು ವರ್ಷದ ಮಗು ಸಾವು

ಬೆಂಗಳೂರು: ಬಿಬಿಎಂಪಿಯ ತ್ಯಾಜ್ಯ ವಿಲೇವಾರಿ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಳೆ ಮದ್ರಾಸ್ ರಸ್ತೆಯ ತಂಬುಚೆಟ್ಟಿಪಾಳ್ಯ ಜಂಕ್ಷನ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.ರಾಮಮೂರ್ತಿನಗರ ನಿವಾಸಿ ನಿತ್ಯಾನಂದ ಎಂಬುವರ ಮಗು ನಿಖಿಲ್ ಮೃತಪಟ್ಟಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೇ ಎರಡು ಕಾರು, ಆಟೊ ಮತ್ತು ಬೈಕ್ ಜಖಂಗೊಂಡಿವೆ.ವ್ಯಾಪಾರಿಯಾಗಿರುವ ನಿತ್ಯಾನಂದ ಅವರು ಮಗು ನಿಖಿಲ್ ಮತ್ತು ತಮ್ಮ ತಾಯಿ ಮರಿಯಾ ಜಗದಾ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು, ತಂಬುಚೆಟ್ಟಿಪಾಳ್ಯದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ತಂಬುಚೆಟ್ಟಿಪಾಳ್ಯ ಜಂಕ್ಷನ್‌ನಲ್ಲಿ ಕೆಂಪು ಸಿಗ್ನಲ್ ಇದ್ದ ಕಾರಣ ನಿತ್ಯಾನಂದ ಅವರು ರಸ್ತೆಯ ಬಲ ಭಾಗದಲ್ಲಿ ಬೈಕ್ ನಿಲ್ಲಿಸಿಕೊಂಡು ಕಾಯುತ್ತಿದ್ದರು. ಇತರೆ ವಾಹನಗಳು ಸಹ ಜಂಕ್ಷನ್‌ನಲ್ಲಿ ನಿಂತಿದ್ದವು.ಅದೇ ವೇಳೆಗೆ ಹಿಂದಿನಿಂದ ಬಂದ ಕಸದ ಲಾರಿಯ ಚಾಲಕ, ಎಡ ಭಾಗದಿಂದ ಮುಂದೆ ಹೋಗುವ ಯತ್ನದಲ್ಲಿ ನಿತ್ಯಾನಂದ ಅವರ ಬೈಕ್‌ಗೆ ಹಾಗೂ ಮತ್ತೊಂದು ಆಟೊಗೆ ವಾಹನ ಗುದ್ದಿಸಿದ. ಈ ವೇಳೆ ನಿತ್ಯಾನಂದ, ಅವರ ಮಗು ಮತ್ತು ತಾಯಿ ಕೆಳಗೆ ಬಿದ್ದು ಗಾಯಗೊಂಡರು. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಆಟೊಗೆ ಡಿಕ್ಕಿ ಹೊಡೆದ ನಂತರ ಅಡ್ಡಾದಿಡ್ಡಿ ಚಲಿಸಿದ ಲಾರಿ, ರಸ್ತೆ ಪಕ್ಕದ ಗುಂಡಿಗೆ ಇಳಿದ ಪರಿಣಾಮ ಬಲ ಭಾಗಕ್ಕೆ ಮಗುಚಿ ಬಿದ್ದಿತು. ಲಾರಿ ಕೆಳಗೆ ಸಿಲುಕಿದ ಎರಡು ಕಾರುಗಳು ಜಖಂಗೊಂಡವು ಎಂದು ಪೊಲೀಸರು ಹೇಳಿದ್ದಾರೆ.ಲಾರಿಯಲ್ಲಿದ್ದ ಕಸ ಇತರೆ ವಾಹನಗಳು ಮತ್ತು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಹಳೆ ಮದ್ರಾಸ್ ರಸ್ತೆ, ಕೆ.ಆರ್.ಪುರ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರ ನೆರವಿನಿಂದ, ಕಸ ಮತ್ತು ಅಪಘಾತಕ್ಕೀಡಾಗಿದ್ದ ವಾಹನಗಳನ್ನು ತೆರವುಗೊಳಿಸಿದರು. ಬಳಿಕ ಸಂಚಾರ ವ್ಯವಸ್ಥೆ ಸುಗಮಗೊಂಡಿತು. ಘಟನೆ ನಂತರ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕೆ.ಆರ್.ಪುರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ವ್ಯಕ್ತಿಯ ಕೊಲೆ

ಚಿಂದಿ ಆಯುವ ವ್ಯಕ್ತಿಯ ತಲೆ ಮೇಲೆ ಆತನ ಸ್ನೇಹಿತರೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ರೆಸಿಡೆನ್ಸಿ ರಸ್ತೆಯ ರಿಚ್ಮಂಡ್ ಮೇಲ್ಸೇತುವೆ ಸಮೀಪ ಶನಿವಾರ ರಾತ್ರಿ ನಡೆದಿದೆ.ಆಡುಗೋಡಿ ಬಳಿಯ ಮೈಕೊ ಬಂಡೆ ಕೊಳೆಗೇರಿ ನಿವಾಸಿ ಪ್ರಭು (30) ಕೊಲೆಯಾದ ವ್ಯಕ್ತಿ. ಆತನ ಜತೆಯೇ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಗಳು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾದಕ ವ್ಯಸನಿಗಳಾದ ಪ್ರಭು ಮತ್ತು ಆತನ ಮೂವರು ಸ್ನೇಹಿತರ ನಡುವೆ ಹಣಕಾಸು ವಿಷಯವಾಗಿ ರಾತ್ರಿ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಈ ವೇಳೆ ಆರೋಪಿಗಳು ಆತನ ತಲೆ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಪ್ರಭು ಮತ್ತು ಆರೋಪಿಗಳಿಗೆ ವೈಟ್ನರ್ ಮೂಸುವ ಮೂಲಕ ನಶೆ ಏರಿಸಿಕೊಳ್ಳುವ ವ್ಯಸನವಿತ್ತು. ಅವರೆಲ್ಲರೂ ಸಂಪಂಗಿರಾಮನಗರ ಬಳಿಯ ಕೆ.ಎಸ್.ಗಾರ್ಡನ್‌ನ ಶೆಡ್‌ನಲ್ಲಿ ವಾಸವಾಗಿದ್ದರು. ಕೊಲೆ ಘಟನೆ ನಂತರ ಪರಾರಿಯಾಗಿದ್ದ ಆರೋಪಿಗಳನ್ನು ಭಾನುವಾರ ನಸುಕಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವು

ಸುಬ್ರಹ್ಮಣ್ಯಪುರ ಬಳಿಯ ಸಿಂಹ ಲೇಔಟ್ ಮೂರನೇ ಅಡ್ಡರಸ್ತೆ ನಿವಾಸಿ ತಮಿಳರಸಿ ಎಂಬುವರ ಮನೆ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಹಣ ಹಾಗೂ ಚಿನ್ನಾಭರಣ ಕಳವು ಮಾಡಿರುವ ಘಟನೆ ಶನಿವಾರ ನಡೆದಿದೆ.ತಮಿಳರಸಿ ಅವರು ಮನೆಗೆ ಬೀಗ ಹಾಕಿಕೊಂಡು ಮಗಳ ಮನೆಗೆ ಹೋಗಿದ್ದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಎರಡು ಚಿನ್ನದ ಬಳೆಗಳು, ಓಲೆಗಳು ಮತ್ತು ಐದು ಸಾವಿರ ನಗದು ಕಳವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry