ಗುರುವಾರ , ಜೂನ್ 17, 2021
29 °C
ಲೋಡಿಂಗ್‌, ಅನ್‌ಲೋಡಿಂಗ್‌ ವೆಚ್ಚವನ್ನು ಸರಕು ಮಾಲೀಕರೇ ಭರಿಸಬೇಕು

ಲಾರಿ ಮಾಲೀಕರಿಗೆ ಕಿರುಕುಳ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲಾರಿ ಮಾಲೀಕರು ಇತ್ತೀಚೆಗೆ ವಿಪರೀತ ಕಿರುಕುಳ ಅನುಭವಿಸುವಂತೆ ಆಗಿದೆ. ಕಿರುಕುಳ ನೀಡುವ ಅಧಿಕಾರಿಗಳ ಹಾಗೂ ಮತ್ತಿತರ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಲಾರಿ ಮಾಲೀಕರು ಒತ್ತಾಯಿಸಿದರು.ನಗರದಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ ಕಾರ್ಯಕಾರಿಣಿಯಲ್ಲಿ ಈ ಒತ್ತಾಯ ಕೇಳಿಬಂತು. ಓವರ್‌ ಲೋಡಿಂಗ್‌, ಮೂರನೇ ವ್ಯಕ್ತಿಯ ವಿಮಾ ಯೋಜನೆ, ಚಾಲನಾ ಪರವಾನಗಿಗೆ ವಿದ್ಯಾರ್ಹತೆ ಕಡ್ಡಾಯ ಮಾಡಿರುವುದು, ಜಿಲ್ಲಾಮಟ್ಟದಲ್ಲಿ ವಾಹನ ನಿಲುಗಡೆಗೆ ಟ್ರಕ್‌ ಟರ್ಮಿನಲ್ಸ್‌ ನಿರ್ಮಿಸುವ ಬಗ್ಗೆ, ಹೆದ್ದಾರಿ ಟೋಲ್‌ ಸಂಗ್ರಹ, ಹೆದ್ದಾರಿಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಹಾಗೂ ಪೊಲೀಸರು ನೀಡುವ ಕಿರುಕುಳದ

ಬಗ್ಗೆ, ಲೋಡಿಂಗ್‌ ಹಾಗೂ ಅನ್‌ಲೋಡಿಂಗ್‌ ವೆಚ್ಚ ಹಾಗೂ ಹೆದ್ದಾರಿ ಶುಲ್ಕವನ್ನು ಸರಕು ಸಾಗಣೆ ಮಾಲೀಕರೇ ಭರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಿರುಕುಳ ನೀಡುವವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.ಗದಗ, ಬೆಳಗಾವಿ, ಸಿರಗುಪ್ಪ, ಮಂಗಳೂರು, ಉಡುಪಿ, ಕಾರವಾರ, ಬೆಂಗಳೂರು, ದಾವಣಗೆರೆ, ಹಿರೇಕೆರೂರು, ಕೊಪ್ಪಳ, ಬೀದರ್‌, ಮೈಸೂರು, ಚಾಮರಾಜನಗರ, ಮಂಡ್ಯ, ಗುಲ್ಬರ್ಗ, ಹೊಸಪೇಟೆ, ಹರಿಹರ, ಬಂಕಾಪುರ, ಮುಂಡಗೋಡ್‌, ತುಮಕೂರು, ಹುಮನಾಬಾದ್‌, ಕುಷ್ಠಗಿ, ಬಳ್ಳಾರಿ, ಗಂಗಾವತಿ, ಹುಬ್ಬಳ್ಳಿ, ಕುಂದಾಪುರ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ, ಉಪಾಧ್ಯಕ್ಷ ಜಿ.ಎಚ್‌.ಪರಮಶಿವಯ್ಯ, ಸುರೇಶ್‌ ಸಿಂಗನಾಳ್‌, ಶಶಿಧರ್‌ ಕೊರವಿ, ಸೈಯದ್‌ ಸೈಫುಲ್ಲಾ, ಶ್ರೀಕಂಠಸ್ವಾಮಿ, ಸೋಮಶೇಖರ್‌ ಪಾಟೀಲ್‌, ಎಂ.ಶ್ರೀರಾಮ, ಮನ್ಸೂರ್‌ ಇಬ್ರಾಹಿಂ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.