ಲಾರಿ ಮುಷ್ಕರ: ಕೂಲಿ ಕಾರ್ಮಿಕರ ಪರದಾಟ

7

ಲಾರಿ ಮುಷ್ಕರ: ಕೂಲಿ ಕಾರ್ಮಿಕರ ಪರದಾಟ

Published:
Updated:
ಲಾರಿ ಮುಷ್ಕರ: ಕೂಲಿ ಕಾರ್ಮಿಕರ ಪರದಾಟ

ಬೆಂಗಳೂರು: ಟೋಲ್ ಪ್ರಮಾಣ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿ ಸರಕು ಸಾಗಣೆ ವಾಹನಗಳ ಮಾಲೀಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.ಮುಷ್ಕರದಿಂದ ತರಕಾರಿ, ದಿನಸಿ ಪದಾರ್ಥಗಳು, ಹಾಲು, ಇಂಧನ ಮತ್ತಿತರ ದಿನಬಳಕೆ ವಸ್ತುಗಳ ಸಾಗಣೆ ಸೇವೆಯಲ್ಲೂ ವ್ಯತ್ಯಯವಾಗಲಾರಂಭಿಸಿದೆ. ಮತ್ತೊಂದೆಡೆ ವಾಣಿಜ್ಯ ಚಟುವಟಿಕೆಗಳು, ಕಟ್ಟಡ ನಿರ್ಮಾಣ ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ.ಹಮಾಲಿಗಳು, ಸರಕು ಸಾಗಣೆ ವಾಹನಗಳ ಚಾಲಕರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ತುಮಕೂರು ರಸ್ತೆಯಲ್ಲಿ ಪ್ರತಿನಿತ್ಯ ಸುಮಾರು ಐದು ಸಾವಿರ ಸರಕು ಸಾಗಣೆ ವಾಹನಗಳು ಓಡಾಡುತ್ತಿದ್ದವು. ಮುಷ್ಕರದ ಪರಿಣಾಮ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಮಧ್ಯಾಹ್ನದವರೆಗೆ ಈ ರಸ್ತೆಯಲ್ಲಿ ಸುಮಾರು 300 ಸರಕು ಸಾಗಣೆ ವಾಹನಗಳು ಮಾತ್ರ ಓಡಾಟ ನಡೆಸಿವೆ.ಮರಳು, ಜಲ್ಲಿ, ಇಟ್ಟಿಗೆ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಣೆ ಸೇವೆ ಸ್ಥಗಿತಗೊಂಡಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿದೆ. ಮರಳಿಗೆ ಬೇಡಿಕೆ ಹೆಚ್ಚಿದ್ದು, ಕೆಲವೆಡೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಮರಳನ್ನು ಸಂಗ್ರಹಿಸಿಟ್ಟಿದ್ದವರು ಅದನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ವರದಿಯಾಗಿದೆ.ಮುಷ್ಕರದ ಪರಿಣಾಮ ಯಶವಂತಪುರದ ಆರ್‌ಎಂಸಿ ಯಾರ್ಡ್ ಮತ್ತು ನಾಯಂಡಹಳ್ಳಿ ಜಂಕ್ಷನ್ ಬಳಿ ಲಾರಿ, ಟೆಂಪೊ ಮತ್ತಿತರ ಸರಕು ಸಾಗಣೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಷ್ಕರದ ಹಿನ್ನೆಲೆಯಲ್ಲಿ ಕೆಲಸ ಇಲ್ಲದಂತಾಗಿರುವುದರಿಂದ ಲಾರಿ ಚಾಲಕರು, ಕೂಲಿ ಕಾರ್ಮಿಕರು ವಾಹನಗಳಲ್ಲಿ ಮಲಗಿದ್ದರು. ಮತ್ತೆ ಕೆಲವರು ಜೂಜು ಆಡುತ್ತಾ ಕಾಲ ಕಳೆಯುತ್ತಿದ್ದ ದೃಶ್ಯ ಕಂಡುಬಂತು.ರಾಷ್ಟ್ರ ವ್ಯಾಪಿ ಮುಷ್ಕರ: `ಟೋಲ್ ಪ್ರಮಾಣ ಹೆಚ್ಚಿಸಿರುವ ಆದೇಶವನ್ನು ರದ್ದುಪಡಿಸುವವರೆಗೂ ಮುಷ್ಕರ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ~ ಎಂದು ದಕ್ಷಿಣ ವಲಯ ಮೋಟಾರು ವಾಹನಗಳ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಖಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ಟೋಲ್ ಹೆಚ್ಚಳದ ಆದೇಶ ರದ್ದುಪಡಿಸಲು ಸೋಮವಾರದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸೋಮವಾರ (ಆ.22) ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಸದಸ್ಯರ ತುರ್ತು ಸಭೆ ನಡೆಸಿ ರಾಷ್ಟ್ರ ವ್ಯಾಪಿ ಸರಕು ಸಾಗಣೆ ವಾಹನಗಳ ಮುಷ್ಕರಕ್ಕೆ ಕರೆ ನೀಡಲಾಗುತ್ತದೆ~ ಎಂದು ಹೇಳಿದರು.ಮಧ್ಯ ಪ್ರವೇಶಿಬೇಕು: `ಮುಷ್ಕರದಿಂದ ಬೆಂಗಳೂರಿನಲ್ಲಿ ಸುಮಾರು ಎರಡು ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಕೆಲಸವಿಲ್ಲದ ಕಾರಣ ಕೂಲಿ ಸಿಗದೆ ಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ~ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ (ಸಿಐಟಿಯು) ಅಧ್ಯಕ್ಷ ಕೆ.ವೀರಮಣಿ ತಿಳಿಸಿದರು.`ಮುಷ್ಕರ ಮುಂದುವರೆದರೆ ಕೂಲಿ ಕಾರ್ಮಿಕರಿಗೆ ಮತ್ತಷ್ಟು ತೊಂದರೆಯಾಗಲಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಸರಕು ಸಾಗಣೆ ವಾಹನಗಳ ಮಾಲೀಕರೊಂದಿಗೆ ಶೀಘ್ರವೇ ಮಾತುಕತೆ ನಡೆಸುವಂತೆ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗುತ್ತದೆ~ ಎಂದರು.  ಸಂಪಾದನೆ ಕಡಿಮೆಯಾಗಿದೆ: `ಮುಷ್ಕರಕ್ಕೂ ಮುನ್ನ ಪ್ರತಿನಿತ್ಯ 400ರಿಂದ 500 ರೂಪಾಯಿ ಸಂಪಾದನೆ ಮಾಡುತ್ತಿದೆ.ಮುಷ್ಕರದಿಂದ ಕೆಲಸ ಇಲ್ಲದಂತಾಗಿದ್ದು, ಸಂಪಾದನೆಯೂ ಕಡಿಮೆಯಾಗಿದೆ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ~ ಎಂದು ಯಶವಂತಪುರ ಆರ್‌ಎಂಸಿ ಯಾರ್ಡ್‌ನಲ್ಲಿ ಹಮಾಲಿ ಕೆಲಸ ಮಾಡುವ ಮಹೇಶ್ ಅಳಲು ತೋಡಿಕೊಂಡರು.ದುಪ್ಪಟ್ಟು ಬಾಡಿಗೆ:
`ಮುಷ್ಕರದ ಹಿನ್ನೆಲೆಯಲ್ಲಿ ಸರಕು ಸಾಗಣೆಗೆ ತೊಂದರೆಯಾಗುತ್ತಿದೆ. ಲಾರಿಗಳ ಸೇವೆ ಸ್ಥಗಿತಗೊಂಡಿರುವುದರಿಂದ ದುಪ್ಪಟ್ಟು ಬಾಡಿಗೆ ಕೊಟ್ಟು ಸರಕು ಸಾಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮುಷ್ಕರ ದೈನಂದಿನ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ~ ಎಂದು ಈರುಳ್ಳಿ ಸಗಟು ವ್ಯಾಪಾರಿ ಗಂಗಾಧರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry