ಶನಿವಾರ, ಮೇ 8, 2021
26 °C

ಲಾರಿ ಹರಿದು ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಲಸಂದ್ರ ಸಮೀಪದ ನಾಯ್ಡು ಲೇಔಟ್‌ನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.ಆಂಧ್ರಪ್ರದೇಶ ಮೂಲದ ರವಿ ಎಂಬುವರ ಪುತ್ರ ಸಾಗರ್ (5) ಮೃತಪಟ್ಟ ಬಾಲಕ. ಆತ ಚಿಕ್ಕಲಸಂದ್ರದ ಶಾಲೆಯೊಂದರಲ್ಲಿ ಯು.ಕೆ.ಜಿ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ರವಿ ಮತ್ತು ಅವರ ಪತ್ನಿ ನಾಯ್ಡು ಲೇಔಟ್ 2ನೇ ಮುಖ್ಯ ರಸ್ತೆಯ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ದಂಪತಿ ಕಟ್ಟಡದ ಒಳ ಭಾಗದಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಸಾಗರ್, ಕಟ್ಟಡದ ಬಳಿಯ ಮರಳಿನ ರಾಶಿಯಲ್ಲಿ ಆಟವಾಡುತ್ತಿದ್ದ ವೇಳೆ ಕಟ್ಟಡದ ಬಳಿ ಬಂದ ಲಾರಿಯ ಚಾಲಕ, ಸಾಗರ್‌ನನ್ನು ಗಮನಿಸದೆ ಹಿಮ್ಮುಖವಾಗಿ ವಾಹನ ಚಾಲನೆ ಮಾಡಿದ.

 

ಈ ವೇಳೆ ಲಾರಿಯ ಚಕ್ರ ಆತನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿದ್ದಾರೆ.ಚಿನ್ನಾಭರಣ ಕಳವು

ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಸುಮಾರು 1.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಜಕ್ಕೂರಿನಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ. ಶೋಭಾ ಅಪಾರ್ಟ್‌ಮೆಂಟ್ ನಿವಾಸಿ ನೀರಜ್ ವಿನಾಯಕ್ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ.ನೀರಜ್ ಮತ್ತು ಅವರ ಪತ್ನಿ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಿಟಕಿ ಮೂಲಕ ಕೈ ಹಾಕಿ ಹಿಂಬಾಗಿಲ ಚಿಲಕ ತೆಗೆದು ಮನೆಯೊಳಗೆ ನುಗ್ಗಿ ಈ ಕೃತ್ಯ ಎಸಗಿರುವ ದುಷ್ಕರ್ಮಿಗಳು ಅಲ್ಮೇರಾದಲ್ಲಿದ್ದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಮೃತಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಅಪಘಾತ

ಎಂ.ಜಿ.ರಸ್ತೆಯ ಮೆಟ್ರೊ ರೈಲು ನಿಲ್ದಾಣದ ಬಳಿ ಸೋಮವಾರ ಬೆಳಿಗ್ಗೆ ಚಿಕ್ಕಣ್ಣ ಎಂಬುವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರ ಎಡಗಾಲು ಮುರಿದಿದೆ.ಜಾಲಹಳ್ಳಿ ನಿವಾಸಿಯಾದ ಚಿಕ್ಕಣ್ಣ ಅವರು ಕುಟುಂಬ ಸದಸ್ಯರೊಂದಿಗೆ ಬೆಳಿಗ್ಗೆ ಎಂ.ಜಿ.ರಸ್ತೆಗೆ ಬಂದಿದ್ದರು. ಅವರು ಮತ್ತು ಕುಟುಂಬ ಸದಸ್ಯರು ಮೆಟ್ರೊ ರೈಲು ನಿಲ್ದಾಣಕ್ಕೆ ಹೋಗುವ ಉದ್ದೇಶದಿಂದ ರಸ್ತೆ ದಾಟುತ್ತಿದ್ದಾಗ ಅನಿಲ್ ಕುಂಬ್ಳೆ ವೃತ್ತದ ಕಡೆಯಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಅವರ ಎಡಗಾಲಿನ ಮೂಳೆ ಮುರಿದಿದೆ ಎಂದು ಪೊಲೀಸರು ಹೇಳಿದ್ದಾರೆ.ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.