ಲಾರ್ಡಿಸ್ ವಿಭಾಗ: ಸಿಬ್ಬಂದಿ ನೇಮಕಕ್ಕೆ ತರಾತುರಿ ಸಲ್ಲ

7

ಲಾರ್ಡಿಸ್ ವಿಭಾಗ: ಸಿಬ್ಬಂದಿ ನೇಮಕಕ್ಕೆ ತರಾತುರಿ ಸಲ್ಲ

Published:
Updated:

ಬೆಂಗಳೂರು: ಪ್ರಚಲಿತ ವಿದ್ಯಮಾನಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಒದಗಿಸಲು ಸಂಸತ್ತಿನಲ್ಲಿರುವ ಹಾಗೆ ರಾಜ್ಯ ವಿಧಾನಮಂಡಲದಲ್ಲೂ `ಲಾರ್ಡಿಸ್~ ವಿಭಾಗ ಸ್ಥಾಪಿಸಲು ನಿರ್ಧರಿಸಿದ್ದು, ಇದಕ್ಕೆ ಬೇಕಾಗುವ ಸಿಬ್ಬಂದಿಯ ನೇಮಕ ಕುರಿತು ತರಾತುರಿಯಲ್ಲಿ ಕ್ರಮ ತೆಗೆದುಕೊಳ್ಳುವುದು ಬೇಡ ಎನ್ನುವ ಅಭಿಪ್ರಾಯವನ್ನು ವಿಧಾನಸಭೆಯ ಉಪಾಧ್ಯಕ್ಷ ಎನ್.ಯೋಗೀಶ್ ಭಟ್ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯನ್ನು ಸುರೇಶ್‌ಕುಮಾರ್ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರವಾನಿಸಿದ್ದು, ಯೋಗೀಶ್ ಭಟ್ ಅವರ ಅಭಿಪ್ರಾಯಕ್ಕೆ ತಮ್ಮ ಸಹಮತವೂ ಇದೆ ಎಂದು ಹೇಳಿದ್ದಾರೆ.ಲಾರ್ಡಿಸ್ ವಿಭಾಗದ ರೂಪುರೇಷೆ ಕುರಿತು ಯಾವ ಚರ್ಚೆಯನ್ನೂ ನಡೆಸದೇ ಹುದ್ದೆಗಳನ್ನು ಸೃಷ್ಟಿಸಿ ತರಾತುರಿಯಲ್ಲಿ ಕಡತಕ್ಕೆ ವಿಶೇಷ ಮಂಡಳಿಯ ಅನುಮತಿ ಪಡೆದಿರುವುದಕ್ಕೂ ಯೋಗೀಶ್ ಭಟ್ ವಿಷಾದ ವ್ಯಕ್ತಪಡಿಸಿದ್ದಾರೆ.ವಿಧಾನಮಂಡಲದ ಉಭಯ ಸದನಗಳ ಸದಸ್ಯರ ಸಮಿತಿ ರಚಿಸಿ, ಸಮಿತಿಯ ವರದಿಯನ್ನಾಧರಿಸಿ ನಂತರ ಕ್ರಮ ತೆಗೆದುಕೊಳ್ಳಲು ಮತ್ತು ಅಲ್ಲಿಯವರೆಗೆ ಯಾವುದೇ ನೇಮಕಾತಿ ಅಥವಾ ಪದೋನ್ನತಿ ಮಾಡದಿರಲು ಭಟ್ ವಿನಂತಿ ಮಾಡಿದ್ದಾರೆ ಎಂದು ಸುರೇಶ್‌ಕುಮಾರ್, ಸಭಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಭಟ್ ಅವರ ಅಭಿಪ್ರಾಯದಂತೆ ನೇಮಕಾತಿ ಕುರಿತ ನಿರ್ಧಾರವನ್ನು ಮರು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry