ಲಾಲು ಜೈಲುಪಾಲು

7

ಲಾಲು ಜೈಲುಪಾಲು

Published:
Updated:
ಲಾಲು ಜೈಲುಪಾಲು

ರಾಂಚಿ (ಪಿಟಿಐ): ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ­ಗಳಾದ ಲಾಲು ಪ್ರಸಾದ್‌, ಜಗನಾಥ ಮಿಶ್ರಾ ಮತ್ತು ಆರು ಮಂದಿ ರಾಜಕಾರಣಿಗಳು ಹಾಗೂ ನಾಲ್ವರು ಐಎಎಸ್‌ ಅಧಿಕಾರಿಗಳು ಸೇರಿದಂತೆ ಒಟ್ಟು 45 ಜನರನ್ನು ಅಪರಾಧಿಗಳೆಂದು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣ  ಗುರುವಾರ (ಅ.3) ಪ್ರಕಟಿಸಲಿದೆ.ಇತರ ತಪ್ಪಿತಸ್ಥರು: ಐಎಎಸ್‌ ಅಧಿಕಾರಿಗಳಾದ ಮಹೇಶ್‌ ಪ್ರಸಾದ್‌, ಫೂಲ್‌ಚಂದ್‌ ಸಿಂಗ್‌, ಬೆಕ್‌ ಜುಲಿಯಸ್‌, ಕೆ. ಆರ್ಮುಗಂ, ಆದಾಯ ತೆರಿಗೆ ಇಲಾಖೆ ಅಧಿಕಾರಿ ಎ.ಸಿ. ಚೌಧರಿ, ಬಿಹಾರದ ಪಶುಸಂಗೋಪನೆ ಮತ್ತು ಕಾರ್ಮಿಕ ಖಾತೆ ಮಾಜಿ ಸಚಿವ ವಿದ್ಯಾ ಸಾಗರ್‌ ನಿಶ್ಹಾದ್‌, ಮಾಜಿ ಶಾಸಕ ಧ್ರುವ ಭಗತ್‌, ಪಶುಸಂಗೋಪನಾ ಇಲಾಖೆಯ ಕೆಲವು ನಿವೃತ್ತ ಅಧಿಕಾರಿಗಳು ಮತ್ತು ಮೂರು ವರ್ಷಗಳ ಕಾಲ ಮೇವು ಪೂರೈಕೆ ಮಾಡಿದ ಐವರು ಗುತ್ತಿಗೆದಾರರನ್ನೂ ಅಪರಾಧಿಗಳು ಎಂದು ಕೋರ್ಟ್‌ ಹೇಳಿದೆ.ಕಲಾಪದ ಹಿನ್ನೆಲೆ: ಈ ಪ್ರಕರಣದಲ್ಲಿ ಸೆ. 9ರಂದು ಆರೋಪಿ ಮತ್ತು ಸಿಬಿಐ ಪರ ವಕೀಲರ ವಾದವು ಆರಂಭವಾಗಿ, ಸೆ 17ರಂದು   ಮುಕ್ತಾಯ­ಗೊಂಡಿತ್ತು. ಇದಕ್ಕೂ ಮೊದಲು, ಲಾಲು ಪರ ವಕೀಲರು ಪದೇ ಪದೇ ಕಲಾಪಕ್ಕೆ ಹಾಜರಾಗದ ಕಾರಣ ನ್ಯಾಯಾಧೀಶ ಪ್ರವಾಸ್‌ ಕುಮಾರ್‌ ಸಿಂಗ್‌ ಅವರು ಜುಲೈ 15ಕ್ಕೆ ತೀರ್ಪು ನೀಡುವುದಾಗಿ ಹೇಳಿ, ಅವರ ವಾದ ಮಂಡನೆಯನ್ನು ಜುಲೈ 1ರೊಳಗೆ ಮುಗಿಸುವಂತೆ ಸೂಚಿಸಿದ್ದರು.>ಈ ಮಧ್ಯೆ, ಲಾಲು ಅವರು ನ್ಯಾಯಾಧೀಶರಿಗೆ ರಾಜಕೀಯದ ನಂಟಿದೆ ಎಂದು ಆಪಾದಿಸಿ ಅವರನ್ನು ಬದಲಿಸುವಂತೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿ ಗಳನ್ನು  ನ್ಯಾಯಾ­ಲಯ­ಗಳು ತಳ್ಳಿಹಾಕಿದ್ದವು. ನಂತರ ನ್ಯಾಯಾಧೀಶ ಪ್ರವಾಸ್‌ ಕುಮಾರ್‌ ಸಿಂಗ್‌ ಅವರು ಸೆ. 30ಕ್ಕೆ ತೀರ್ಪು ನೀಡುವು­ದಾಗಿ ದಿನಾಂಕ ಗೊತ್ತು­ಮಾಡಿದ್ದರು.

ಶಾಂತಚಿತ್ತ ಲಾಲು: 65 ವರ್ಷದ ಲಾಲು ಪ್ರಸಾದ್‌ ಅವರು ಬಿಳಿ ಅಂಬಾಸಿಡರ್‌ ಕಾರ್‌ನಲ್ಲಿ ತಮ್ಮ ಮಗ ತೇಜಸ್ವಿ ಯಾದವ್‌ ಅವರೊಂದಿಗೆ  ಕೋರ್ಟ್‌ಗೆ ಬೆಳಿಗ್ಗೆ ಹಾಜರಾದರು. ಶಾಂತಚಿತ್ತರಾಗಿದ್ದ ಅವರು, ಕೋರ್ಟ್‌ ಹೊರಗೆ ಸೇರಿದ ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಕೋರ್ಟ್‌ ಕೋಣೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತರು. ನಂತರ ನ್ಯಾಯಾಧೀಶರು ತೀರ್ಪನ್ನು ಪ್ರಕಟಿಸಿದರು.ಯಾವುದೇ ಆತಂಕ, ದುಗುಡ ಲಾಲು ಅವರ ಮೊಗ ದಲ್ಲಿ ಕಾಣಲಿಲ್ಲ. ಕೋರ್ಟ್‌ ಆವರಣದಿಂದ ಹೊರಬಂದ ಅವರು, ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಆ ನಂತರ ಅವರು ನೇರವಾಗಿ ರಾಂಚಿಯ ಹೊರಭಾಗ ದಲ್ಲಿರುವ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ತಮ್ಮ ಕಾರಿನಲ್ಲೇ ಹೋದರು.ಆದರೆ ಲಾಲು ಅವರ ಪುತ್ರ ತೇಜಸ್ವಿ ಯಾದವ್‌ ಪ್ರತಿ ಕ್ರಿಯಿಸಿ, ‘ನಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ನಾವು ಮೇಲಿನ ನ್ಯಾಯಾಲಯಗಳಲ್ಲಿ ಈ ತೀರ್ಪನ್ನು ಪ್ರಶ್ನಿಸು ವೆವು. ನಮ್ಮ ತಂದೆ ವಿರುದ್ಧ  ರಾಜಕೀಯ ಪಿತೂರಿ ನಡೆ ಯುತ್ತದೆ. ಇದನ್ನು ಜನರ ನ್ಯಾಯಾಲಯದಲ್ಲಿ (ಚುನಾವಣೆ) ಎದುರಿಸುವೆವು’ ಎಂದಿದ್ದಾರೆ.ಆರೋಪ ಸಾಬೀತಾದ ಕಲಂಗಳು

ಎಲ್ಲಾ ಅಪರಾಧಿಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) 120ಬಿ (ಕ್ರಿಮಿನಲ್‌ ಒಳಸಂಚು), 420 (ವಂಚನೆ), 467 (ಖಜಾನೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಇಲ್ಲವೆ ತೆಗೆಯುವುದು), 468 (ವಂಚ ನೆಯ ಉದ್ದೇಶದಿಂದ ಫೋರ್ಜರಿ) 477ಎ (ಮೋಸ ದಿಂದ ಸಾಕ್ಷ್ಯ ನಾಶ ಇಲ್ಲವೆ ವಿರೂಪಗೊಳಿಸುವ ಅಥವಾ ಅದನ್ನು ರಹಸ್ಯವಾಗಿರಿಸಲು ಯತ್ನ). ಇದಲ್ಲದೆ 1988 ರ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಯಲ್ಲೂ ಆರೋಪ ಸಾಬೀತು.ಪ್ರಕರಣದ ‘ಗಡಿ’ ತಕರಾರು

ಅವಿಭಜಿತ ಬಿಹಾರದ ಛೈಬಾಸಾ ಜಿಲ್ಲಾ ಖಜಾನೆ ಯಿಂದ ಮೇವು ಖರೀದಿಸುವ ನೆಪದಲ್ಲಿ ₨ 37.7 ಕೋಟಿ ಹಣವನ್ನು ಅಕ್ರಮವಾಗಿ ತೆಗೆದು ಭ್ರಷ್ಟಾಚಾರ ನಡೆಸಿದ ಆಪಾದನೆ ಮೇಲೆ ಸಿಬಿಐ 17 ವರ್ಷಗಳ ಹಿಂದೆ (1996ರ ಏಪ್ರಿಲ್‌)ನಲ್ಲಿ ಈ ಪ್ರಕರಣ ದಾಖಲಿಸಿತ್ತು.ನವೆಂಬರ್‌ 15, 2000ರಲ್ಲಿ  ಬಿಹಾರವನ್ನು ವಿಭಜಿಸಿ ಪ್ರತ್ಯೇಕ ಜಾರ್ಖಂಡ್‌ ರಾಜ್ಯ ರಚನೆ ಬಳಿಕ ಈ ಪ್ರಕರಣದ ವಿಚಾರಣೆ ಯಾವ ರಾಜ್ಯದಲ್ಲಿ ನಡೆಯ ಬೇಕು ಎಂಬ ಬಗ್ಗೆ  ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಕೆ ಆಗಿತ್ತು. ಆದ್ದರಿಂದ ಪ್ರಕರಣದ ವಿಚಾರಣೆ ಯು ಡಿಸೆಂಬರ್‌ 2000ದಿಂದ 2001ರ ಡಿಸೆಂಬರ್‌ ವರೆಗೆ ಸ್ಥಗಿತವಾಗಿತ್ತು.ನಂತರ ಸುಪ್ರೀಂ ಕೋರ್ಟ್‌, ಪ್ರಕರಣದ ವಿಚಾರಣೆ ಜಾರ್ಖಂಡ್‌ ರಾಜಧಾನಿಯಲ್ಲಿ ವಿಶೇಷ ಕೋರ್ಟ್ ರಚಿಸುವಂತೆ ಸೂಚಿಸಿದ ಮೇಲೆ 2002ರ ಮಾರ್ಚ್‌ ನಲ್ಲಿ  ಮತ್ತೆ ವಿಚಾರಣೆ ಆರಂಭವಾಗಿತ್ತು. ಈ ಪ್ರಕರಣ ದ ವಿಚಾರಣೆಗಾಗಿಯೇ ಏಳು ವಿಶೇಷ ಕೋರ್ಟ್‌ಗಳನ್ನು ರಚಿಸಲಾಗಿತ್ತು.ಬಿಹಾರದ ಪಶುಸಂಗೋಪನಾ ಇಲಾಖೆಯಲ್ಲಿ ನಡೆದ ಈ ಹಗರಣವು ‘ಮೇವು ಹಗರಣ’ವೆಂದು ದೇಶದ ಗಮನಸೆಳೆದಿತ್ತು. ಈ ಹಗರಣದ ನಂತರ ಬಿಹಾ ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಾಲು, ತಮ್ಮ ಪತ್ನಿಯನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಿ, 1997ರ ಜುಲೈ ಅಂತ್ಯದಲಿ್ಲ ಪಟ್ನಾದಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದರು.ಆಸ್ಪತ್ರೆಗೆ ಮಿಶ್ರಾ ದಾಖಲು

ತೀರ್ಪು ಪ್ರಕಟವಾದ ನಂತರ ಅಪರಾಧಿ  ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಜಗನಾಥ ಮಿಶ್ರಾ (76) ಅವರು ರಾಂಚಿಯಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆಯ ವೈದ್ಯರು ಮಿಶ್ರಾ ಅವರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ನಿಖರವಾಗಿ ಹೇಳಿಲ್ಲ.ಲೋಕಸಭಾ ಸದಸ್ಯತ್ವ ಅನರ್ಹತೆ

ತೀರ್ಪು ಹೊರಬೀಳುತ್ತಿದ್ದಂತೆಯೇ  ಲಾಲು ಪ್ರಸಾದ್‌ ಮತ್ತು ಜಹಾನಾಬಾದ್‌ ಲೋಕಸಭಾ ಕ್ಷೇತ್ರದ ಸದಸ್ಯ ‘ಜೆಡಿಯು’ ಪಕ್ಷದ ಜಗದೀಶ್‌ ಶರ್ಮಾ ಅವರ ಲೋಕಸಭಾ ಸದಸ್ಯತ್ವ ತಕ್ಷಣ­ದಿಂದಲೇ ಅನರ್ಹ-­ಗೊಂಡಂತಾಗಿದೆ. ಅಲ್ಲದೆ ಇವರು ಕನಿಷ್ಠ ಆರು  ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಕೋರ್ಟ್‌ ಏನು ಹೇಳಿತ್ತು?: ಜೈಲು ಶಿಕ್ಷೆಗೆ ಗುರಿ­ಯಾಗು­ವಂತಹ ಪ್ರಕರಣಗಳಲ್ಲಿ, ಆರೋಪ ಸಾಬೀತಾದ ಕ್ಷಣ­ದಿಂದಲೇ ಅಂಥ ಸಂಸದ ಅಥವಾ ಶಾಸಕನ ಸದಸ್ಯತ್ವ ರದ್ದಾ­ಗುತ್ತದೆ ಎಂದು ಸುಪ್ರೀಂ ಕೋರ್ಟ್ ಕಳೆದ ಜುಲೈ 10ರಂದು  ಐತಿಹಾಸಿಕ ತೀರ್ಪು ನೀಡಿತ್ತು.">ಅಧಿಕಾರಿ ಶ್ಲಾಘನೆ

;">ಈ ಹಗರಣದಲ್ಲಿ ಭಾಗಿಯಾದವರನ್ನು ಅಪರಾಧಿಗಳು ಎಂದು ಘೋಷಿಸಿರುವ ಸಿಬಿಐ ನ್ಯಾಯಾಲಯದ ತೀರ್ಪನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಉನ್ನತ ಹುದ್ದೆಯಲ್ಲಿರುವ ಐಎಎಸ್‌ ಅಧಿಕಾರಿ ಅಮಿತ್‌ ಖರೆ ಶ್ಲಾಘಿಸಿದ್ದಾರೆ.

ಖರೆ ಅವರು ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ (1996ರ ಜನವರಿ) ಪಶುಸಂಗೋಪನಾ ಇಲಾಖೆ ಕಚೇರಿಗಳ ಮೇಲೆ ದಾಳಿ ನಡೆಸಿ ಅನೇಕ ನಕಲಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದಾಗಿ ಈ ಹಗರಣ ಬೆಳಕಿಗೆ ಬಂತು.

ಕಾಯ್ದೆಯಲ್ಲಿ ಏನಿತ್ತು?

ಜನತಾ ಪ್ರಾತಿನಿಧ್ಯ ಕಾಯ್ದೆ ಕಲಂ 8 (4)ರ ಪ್ರಕಾರ, ತಪ್ಪಿತಸ್ಥ ಎಂದು ವಿಚಾರಣಾ ಕೋರ್ಟ್‌ ತೀರ್ಪು ನೀಡಿದರೂ 3 ತಿಂಗಳ ಒಳಗೆ ಮೇಲಿನ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಅದು ಇತ್ಯರ್ಥವಾಗು ವವರೆಗೂ ಸದಸ್ಯತ್ವ ರದ್ದಾಗುತ್ತಿರಲಿಲ್ಲ.  ಆದರೆ ಈ ಕಲಂ ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪನ್ನು ನಿರರ್ಥಕಗೊಳಿಸಲು ಕೇಂದ್ರ ರೂಪಿಸಿದ ಸುಗ್ರೀವಾಜ್ಞೆ ಈಗ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆಯದ ಕಾರಣ ಲಾಲು ಮತ್ತು ಶರ್ಮಾ ಅವರ ಸದಸ್ಯತ್ವ ರದ್ದಾಗಿದೆ.ಸ್ಪೀಕರ್‌ ನಿಲುವು

ರಾಂಚಿ ಕೋರ್ಟ್‌ ತೀರ್ಪಿನ ಪ್ರತಿ ದೊರಕಿದ ಬಳಿಕವಷ್ಟೇ ಲಾಲು ಪ್ರಸಾದ್‌ ಅವರ ಸದಸ್ಯತ್ವ  ರದ್ದು  ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಲೋಕಸಭೆ ಸ್ಪೀಕರ್‌ ಮೀರಾಕುಮಾರ್‌  ಕೊಯಮತ್ತೂರಿನಲ್ಲಿ ಸೋಮವಾರ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry