ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಲಕ್ಷಕ್ಕೂ ಅಧಿಕ ಮಂದಿ ಭೇಟಿ ನಿರೀಕ್ಷೆ

ಬುಧವಾರ, ಮೇ 22, 2019
24 °C

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಲಕ್ಷಕ್ಕೂ ಅಧಿಕ ಮಂದಿ ಭೇಟಿ ನಿರೀಕ್ಷೆ

Published:
Updated:
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಲಕ್ಷಕ್ಕೂ ಅಧಿಕ ಮಂದಿ ಭೇಟಿ ನಿರೀಕ್ಷೆ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ `ಸಸ್ಯಕಾಶಿ~ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಈ ಬಾರಿ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ದೊರೆಯದಿರುವುದು ಒಂದೆಡೆಯಾದರೆ, ವ್ಯಾಪಾರಿಗಳು ಅವಕಾಶ ನೋಡಿಕೊಂಡು ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿವೆ.ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನಕ್ಕೆ ದಾಖಲೆ ಪ್ರಮಾಣದಲ್ಲಿ ಜನಸಾಗರ ಹರಿದು ಬಂದರೆ, ಈ ವರ್ಷ ತೋಟಗಾರಿಕಾ ಇಲಾಖೆಯು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸಂಖ್ಯೆಯ ಜನ `ಸಸ್ಯ ಕಾಶಿ~ಗೆ ಭೇಟಿ ನೀಡುತ್ತಿದ್ದಾರೆ. ಕೊನೆಯ ದಿನ (ಆ. 15) ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರದರ್ಶನ ವೀಕ್ಷಿಸಬಹುದು ಎಂಬುದು ಇಲಾಖೆಯ ಅಧಿಕಾರಿಗಳ ಅಂದಾಜು.ಇನ್ನು, ಲಾಲ್‌ಬಾಗ್‌ನಲ್ಲಿ ವ್ಯಾಪಾರ ಭರಾಟೆ ಜೋರಾಗಿ ನಡೆಯುತ್ತಿದ್ದರೂ, ಕೆಲ ವ್ಯಾಪಾರಿಗಳು ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಬಾದಾಮಿ ಹಾಲು ದುಬಾರಿ: ಕರ್ನಾಟಕ ಹಾಲು ಮಹಾಮಂಡಳ ಒಕ್ಕೂಟ (ಕೆಎಂಎಫ್) ತೆರೆದಿರುವ ನಂದಿನಿ ಮಳಿಗೆಯಲ್ಲಿಯೇ ಒಂದೆರಡು ರೂಪಾಯಿ ಹೆಚ್ಚಿನ ಬೆಲೆಗೆ ಹಾಲು ಹಾಗೂ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.`ಚಿಕ್ಕ ಬಾಟಲಿ ಬಾದಾಮಿ ಹಾಲಿನ ಎಂಆರ್‌ಪಿ ದರ 17 ರೂಪಾಯಿಗಳಷ್ಟಿದ್ದರೆ, ನಾವು 20 ರೂಪಾಯಿ ಕೊಟ್ಟು ಖರೀದಿಸಿದೆವು. ಸಿಹಿ ಉತ್ಪನ್ನಗಳನ್ನೂ ಒಂದೆರಡು ರೂಪಾಯಿ ಅಧಿಕ ಬೆಲೆ ಮಾರಾಟ ಮಾಡಲಾಗುತ್ತಿದೆ~ ಎಂದು ಕನಕಪುರದ ಶ್ರೀನಿವಾಸ್ ಎಂಬುವರು ದೂರಿದರು.ಹಾಗಾದರೆ, ದರದಲ್ಲಿ ಒಂದೆರಡು ರೂಪಾಯಿ ವ್ಯತ್ಯಾಸವಾಗಿರುವ ಬಗ್ಗೆ ಪ್ರಶ್ನಿಸಲಿಲ್ಲವೇ ಎಂದು ಕೇಳಿದಾಗ, `ಮಕ್ಕಳು ಬಾದಾಮಿ ಹಾಲು ಕುಡಿಯಲು ಕೇಳಿದರು. ಅದಕ್ಕೆ ಕೊಡಿಸಿದೆ. ಒಂದೆರಡು ರೂಪಾಯಿಗೆ ಗಲಾಟೆ ಏಕೆ?~ ಎಂದು ಪ್ರತಿಕ್ರಿಯಿಸಿದರು.ರೂ. 7.5 ಸಾವಿರ ಶುಲ್ಕ ಪಾವತಿ:
ಒಂದೆರಡು ರೂಪಾಯಿ ದುಬಾರಿ ದರದಲ್ಲಿ ಬಾದಾಮಿ ಹಾಲು ಹಾಗೂ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಕೆಎಂಎಫ್ ಮಳಿಗೆಯ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, `ನಾವು ಮಳಿಗೆ ತೆರೆಯಲು ಏಳೂವರೆ ಸಾವಿರ ರೂಪಾಯಿ ಶುಲ್ಕ ಪಾವತಿಸಿದ್ದೇವೆ. ಹೀಗಾಗಿ, ಒಂದು ರೂಪಾಯಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ~ ಎಂಬುದನ್ನು ಒಪ್ಪಿಕೊಂಡರು.ಈ ನಡುವೆ, `ವ್ಯಾಪಾರಿಗಳು ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಯಂತ್ರಿಸಲು 2 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ದರ ಪರಿಶೀಲನೆ ನಡೆಸುವ ಮೂಲಕ ಸಾರ್ವಜನಿಕರಿಗಾಗುವ ಅನ್ಯಾಯ ತಪ್ಪಿಸಲಿವೆ. ಒಂದು ವೇಳೆ ಸಾರ್ವಜನಿಕರಿಂದ ನಿರ್ದಿಷ್ಟ ದೂರು ಬಂದಲ್ಲಿ  ಅಂಥ ವ್ಯಾಪಾರಿಗಳನ್ನು ಹೊರಗೆ ಕಳಿಸುತ್ತೇವೆ~ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಚ್. ಎಸ್. ಶಿವಕುಮಾರ್ `ಪ್ರಜಾವಾಣಿ~ ಗೆ ತಿಳಿಸಿದರು.`ನಾವು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಗೆ ಉಚಿತವಾಗಿ ಮಳಿಗೆಗಳನ್ನು ಒದಗಿಸಿದ್ದೇವೆ. ಖಾಸಗಿ ಸಂಸ್ಥೆಗಳಿಂದ ಮಳಿಗೆಗೆ 15 ಸಾವಿರ ರೂಪಾಯಿ ಶುಲ್ಕ ಪಡೆದಿದ್ದೇವೆ. ಅಧಿಕ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಂತಹ ವ್ಯಾಪಾರಿಗಳಿಗೆ 15 ಸಾವಿರ ರೂಪಾಯಿ ಶುಲ್ಕವನ್ನು ವಾಪಸು ನೀಡಿ ಹೊರಗೆ ಕಳಿಸುತ್ತೇವೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ನಾವು ಮಳಿಗೆಗಳಿಗೆ ಅವಕಾಶ ನೀಡಿದ್ದೇವೆಯೇ ಹೊರತು ನಮಗೆ ಹಣ ಮುಖ್ಯವಲ್ಲ~ ಎಂದು ಸ್ಪಷ್ಟಪಡಿಸಿದರು. ಇನ್ನು, ರಸ್ತೆ ಬೀದಿ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಇಲಾಖೆಯು ಹೆಣಗಾಡುತ್ತಿದೆ. `ಇಂತಹ ವ್ಯಾಪಾರಿಗಳ ಬಗ್ಗೆ ಪೊಲೀಸರಿಗೆ ಸಾಕಷ್ಟು ಬಾರಿ ದೂರು ನೀಡಿ, ಹೊರ ಕಳಿಸಿದರೂ ಅದು ಹೇಗೋ ಎಲ್ಲರ ಕಣ್ತಪ್ಪಿಸಿ ಮತ್ತೆ ಉದ್ಯಾನದೊಳಗೆ ಪ್ರವೇಶಿಸುತ್ತಿದ್ದಾರೆ~ ಎಂದು ಶಿವಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು.ಲಾಲ್‌ಬಾಗ್‌ನಲ್ಲಿ ಎಳನೀರನ್ನು 20 ರೂಪಾಯಿಗೆ ಮಾರಾಟ ಮಾಡಿದರೆ, ಸಣ್ಣ ಪ್ಲಾಸ್ಟಿಕ್ ಲೋಟದ ಕಾಫಿ-ಟೀ ಬೆಲೆ 10 ರೂಪಾಯಿಗಿಂತ ದುಬಾರಿ ಇದೆ. ಬೇಲ್ ಪುರಿ ಬೆಲೆ 20 ರೂಪಾಯಿಗಳಷ್ಟಿದೆ. ವ್ಯಾಪಾರಿಗಳು ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರೂ ಸಾರ್ವಜನಿಕರು ಮಾತ್ರ ಪ್ರಶ್ನೆ ಮಾಡದೆ ಖರೀದಿಸುತ್ತಿದ್ದಾರೆ. ಹೀಗಾಗಿ, ಲಾಲ್‌ಬಾಗ್‌ನಲ್ಲಿ ವ್ಯಾಪಾರದ ಭರಾಟೆಯೂ ಜೋರಾಗಿ ನಡೆದಿದೆ.ಇದುವರೆಗೆ 1.6 ಲಕ್ಷ ಜನರ ಭೇಟಿ 

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾದ (ಆ. 9) ದಿನದಿಂದ ಸೋಮವಾರದವರೆಗೆ ಸುಮಾರು 1.5ರಿಂದ 1.6 ಲಕ್ಷ ಜನ ಭೇಟಿ ನೀಡಿದ್ದಾರೆ. ಸೋಮವಾರ 25 ಸಾವಿರ ಮಂದಿ (ಮಕ್ಕಳನ್ನು ಹೊರತುಪಡಿಸಿ) ಭೇಟಿ ನೀಡಿದ್ದರು.ಒಟ್ಟು ಏಳು ದಿನಗಳ ಅವಧಿಯಲ್ಲಿ 4 ಲಕ್ಷ ಜನ ಪ್ರದರ್ಶನ ವೀಕ್ಷಿಸಬಹುದು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಆದರೆ, ಇದುವರೆಗಿನ ಜನರ ಭೇಟಿ ಇಲಾಖೆ ಅಧಿಕಾರಿಗಳಿಗೂ ನಿರಾಸೆ ಮೂಡಿಸಿದೆ. ಭಾನುವಾರ (ಆ. 12) ಒಂದು ಲಕ್ಷ ಜನರ ಪ್ರವೇಶ ನಿರೀಕ್ಷಿಸಿದ್ದರೆ, ಬಂದದ್ದು ಕೇವಲ 65ರಿಂದ 70 ಸಾವಿರ ಜನರಷ್ಟೇ.ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುತ್ತಿರುವ ಸಾರ್ವಜನಿಕರ ಸಂಖ್ಯೆ ಈ ವರ್ಷ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಆದಾಯ ಕೂಡ ಕಡಿಮೆಯಾಗಬಹುದು ಎಂಬುದು ಇಲಾಖೆ ಅಧಿಕಾರಿಗಳ ಲೆಕ್ಕಾಚಾರ. `ನಾವು ಈ ಬಾರಿ ಒಂದು ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿದ್ದೆವು. ಆದರೆ, ಇದುವರೆಗೆ ಜನಸ್ಪಂದನೆ ನೋಡಿದರೆ 80ರಿಂದ 85 ಲಕ್ಷ ರೂಪಾಯಿ ವರಮಾನ ನಿರೀಕ್ಷಿಸಬಹುದು~ ಎಂದು ಜಂಟಿ ನಿರ್ದೇಶಕ ಎಸ್.ಎಚ್. ಶಿವಕುಮಾರ್ ತಿಳಿಸಿದರು.`ಕಳೆದ ವರ್ಷ 10 ದಿನ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿತ್ತು. ಇದೀಗ ಏಳು ದಿನ ಪ್ರದರ್ಶನ ಏರ್ಪಡಿಸಿದ್ದೇವೆ. ಹೀಗಾಗಿ, ಆದಾಯದಲ್ಲಿ ಸ್ವಲ್ಪ ಖೋತಾ ಆಗಬಹುದು. ಆದರೆ, ಮಳೆ ಮತ್ತಿತರ ಕಾರಣಗಳಿಂದ ಜನರ ಸಂಖ್ಯೆ ಕಡಿಮೆಯಾಗಿರಬಹುದು~ ಎಂದು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry