ಮಂಗಳವಾರ, ಜನವರಿ 28, 2020
23 °C

ಲಾಲ್‌ಬಾಗ್: ವಿಶೇಷ ಫಲಪುಷ್ಪ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೋಟಗಾರಿಕೆ ಇಲಾಖೆಯು ಮೈಸೂರು ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಇದೇ 20ರಿಂದ 29ರವರೆಗೆ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ವಿಶೇಷ ಫಲಪುಷ್ಪ ಪ್ರದರ್ಶನದಲ್ಲಿ ಲಕ್ಷಾಂತರ ಹೂವಿನಿಂದ ಅಲಂಕೃತವಾದ ಬೌದ್ಧ ಸ್ತೂಪ ಹಾಗೂ ಬುದ್ಧನ ಪ್ರತಿಕೃತಿಗಳು ಪ್ರಮುಖ ಆಕರ್ಷಣೆ ಎನಿಸಿವೆ. ಹಾಗೆಯೇ ಲಾಲ್‌ಬಾಗ್ ಕೆರೆಯಲ್ಲಿ ಆಕರ್ಷಕ ಹೂಗಳು, ಹಣ್ಣು-ಹಂಪಲನ್ನು ವಿಶೇಷವಾಗಿ ಪೇರಿಸಿಕೊಂಡ ದೋಣಿ, ತೆಪ್ಪಗಳ ಸಂಚಾರ ಗಮನಸೆಳೆಯಲಿದೆ.ಈ ಬಾರಿಯ ಫಲಪುಷ್ಪ ಪ್ರದರ್ಶನವು ಸಂಘದ 100ನೇ ಪ್ರದರ್ಶನವಾಗಿದೆ. ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂಘವು ಆಕರ್ಷಕವಾಗಿ ಹಾಗೂ ವೈಭವಯುತವಾಗಿ ಪ್ರದರ್ಶನ ಏರ್ಪಡಿಸಲು ಮುಂದಾಗಿದೆ.ದಕ್ಷಿಣ ಕೊರಿಯಾದಲ್ಲಿರುವ ವಿಶ್ವ ಶಾಂತಿ ಮತ್ತು ಐಕ್ಯತೆಗಾಗಿ ಬುದ್ಧ ಶರೀರ ಸ್ತೂಪದ ಪ್ರತಿಕೃತಿಯು ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ. ಗಾಜಿನಮನೆ ಆವರಣದ 34 ಅಡಿ ಸುತ್ತಳತೆ ವ್ಯಾಪ್ತಿಯಲ್ಲಿ 30 ಅಡಿ ಎತ್ತರದ ಮೂರು ಅಂತಸ್ತಿನ ಸ್ತೂಪದ ಪ್ರತಿಕೃತಿ ಸಿದ್ಧವಾಗಲಿದೆ.

 

ಇದನ್ನು ವಿವಿಧ ವರ್ಣಗಳ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕರಿಸಲಾಗುತ್ತದೆ. ಸುಮಾರು 1.50 ಲಕ್ಷ ಗುಲಾಬಿ ಹಾಗೂ 1.50 ಲಕ್ಷ ಕಾರ್ನೇಷನ್ ಹೂಗಳು, 25,000 ಆರ್ಕಿಡ್ ಹೂ ಗೊಂಚಲುಗಳು, ಅಸ್ಪರಾಗಸ್, ಡ್ರಾಸೆರಾ ತಳಿಯ 7,500ಕ್ಕೂ ಹೆಚ್ಚು ಹಸಿರು ಎಲೆಗಳನ್ನು ಬಳಸಲಾಗುತ್ತದೆ.

ಹಾಗೆಯೇ 16 ಅಡಿ ವ್ಯಾಸ ಹಾಗೂ 9 ಅಡಿ ಎತ್ತರದ ಸ್ಥಂಭದ ಮೇಲೆ ನಾಲ್ಕು ಅಡಿ ಎತ್ತರದ `ಧ್ಯಾನ ಮಗ್ನ ಬುದ್ಧ~ನ ಪ್ರತಿರೂಪ ನಿರ್ಮಾಣವಾಗಲಿದೆ.ಈ ಪ್ರತಿರೂಪಕ್ಕೆ 75,000 ಶ್ವೇತ ವರ್ಣದ ಸುಗಂಧರಾಜ ಹೂಗಳನ್ನು ಬಳಸಲಾಗುತ್ತದೆ.ಶತಮಾನೋತ್ಸವದ ವಿಶೇಷತೆ:
ಶತಮಾನೋತ್ಸವ ಸಂಭ್ರಮದಲ್ಲಿರುವ ಸಂಘವು ವಿಶೇಷ ಮೆರಗು ನೀಡುವಂತಹ ಪ್ರದರ್ಶನಗಳನ್ನು ಏರ್ಪಡಿಸಿದೆ. ಹಾಲೆಂಡ್‌ನ ಪುಷ್ಪ ವಿನ್ಯಾಸಕಾರರು ಇದೇ ಮೊದಲ ಬಾರಿಗೆ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ. ಫ್ಲಾರೆನ್ಸ್ ಫ್ಲೋರಾ ಸಂಸ್ಥೆಯ ಮುಖ್ಯಸ್ಥ ಗುಟ್ ಗುಟಿಯಾ ನೇತೃತ್ವದ ಕಲಾವಿದರ ತಂಡ ತಮ್ಮ ದೇಶದ ಹೂಗಳಿಂದ ವಿಶೇಷ ಅಲಂಕಾರದ ಪ್ರತಿಕೃತಿಗಳನ್ನು ಪ್ರದರ್ಶಿಸಲಿದೆ.ಆಕರ್ಷಕ ಪುಷ್ಪಾಲಂಕಾರ:
ರಾಷ್ಟ್ರದ ನಾನಾ ಭಾಗದಲ್ಲಿರುವ ನೃತ್ಯ ಸಂಸ್ಕೃತಿಯನ್ನು ವಿವಿಧ ಪ್ರಕಾರದ ಹೂಗಳ ವಿನ್ಯಾಸದ ಮೂಲಕ ಪ್ರತಿಬಿಂಬಿಸುವ ಪ್ರಯತ್ನಕ್ಕೆ ಸಂಘ ಮುಂದಾಗಿದೆ. ಅದರಂತೆ ಕೀಲುಕುದುರೆ, ಯಕ್ಷಗಾನ, ದಾಂಡಿಯಾ, ಡೊಳ್ಳುಕುಣಿತ, ಕರಗ, ಬಾಂಗ್ರಾ, ಕಂಸಾಳೆ, ಭರತನಾಟ್ಯ, ಮಣಿಪುರಿ, ಕಥಕ್ಕಳಿ, ಕೂಚುಪುಡಿ ನೃತ್ಯ ಪ್ರಕಾರಗಳನ್ನು ಹೂಗಳ ವಿನ್ಯಾಸದಲ್ಲಿ ಪ್ರದರ್ಶಿಸಲಿದೆ.ಗಮನ ಸೆಳೆಯಲಿರುವ ಹೂ- ನವಿಲುಗಳು: ಬೋನ್ಸಾಯ್ ಉದ್ಯಾನದಲ್ಲಿ ಸುಮಾರು 150ಕ್ಕೂ ಹೆಚ್ಚು ಆಕರ್ಷಕ ಬೋನ್ಸಾಯ್ ಗಿಡಗಳು ಗಮನಸೆಳೆಯಲಿವೆ. ಹೂಗಳಿಂದಲೇ ವಿನ್ಯಾಸಗೊಳಿಸಲಾದ ವಿವಿಧ ಭಂಗಿಯ ನವಿಲುಗಳು ಆಕರ್ಷಣೆ ಎನಿಸಿವೆ. 17 ಅಡಿ ಎತ್ತರ ಹಾಗೂ 20 ಅಡಿ ಅಗಲದ ನವಿಲಿನ ಪ್ರತಿರೂಪಗಳನ್ನು ಆರ್ಕಿಡ್ಸ್, ಅಂಥೋರಿಯಂ, ಲಿಫಿಯಾಂಥಸ್, ಅಗಪಾಂಥಸ್, ಅಲ್ಪೀನಿಯಾ, ಕಾರ್ನೇಷನ್, ಗುಲಾಬಿ ಸೇರಿದಂತೆ ಒಟ್ಟು ಒಂದು ಲಕ್ಷ ಹೂಗಳಿಂದ ಅಲಂಕರಿಸಲಾಗುತ್ತದೆ.ಗಾಜಿನ ಮನೆಯ ಪ್ರವೇಶ ದ್ವಾರದಲ್ಲಿ ನದಿಯಲ್ಲಿ ನೀರು ಹರಿಯುವ ಮಾದರಿಯಲ್ಲಿ ಹೂಗಳನ್ನು ಜೋಡಿಸಲು ಉದ್ದೇಶಿಸಿದೆ. ಹಂಸ, ಕೊಕ್ಕರೆ, ಬಾತುಕೋಳಿಗಳ ಪ್ರತಿಕೃತಿಗಳು ಮೆರಗು ನೀಡಲಿವೆ. ಹಾಗೆಯೇ ಮರಳಿನಲ್ಲಿ ಮೂಡಲಿರುವ `ಗೀತೋಪದೇಶ~ದ ಚಿತ್ರವನ್ನು ಹೂಗಳಿಂದ ವಿನ್ಯಾಸಗೊಳಿಸಲು ಸಂಘ ಸಿದ್ಧತೆ ನಡೆಸಿದೆ.ಕೆರೆಗೆ ಕಳೆ ತರುವ ಹೂ ದೋಣಿಗಳು: ಧನ್ವಂತರಿ ವನಕ್ಕೆ ಹೊಂದಿಕೊಂಡಂತಿರುವ ಲಾಲ್‌ಬಾಗ್ ಕೆರೆಯ ಒಂದು ಭಾಗದಲ್ಲಿ (ಪಶ್ಚಿಮ ದ್ವಾರ) ಹತ್ತು ತೆಪ್ಪಗಳು, ಎರಡು ಬೃಹತ್ ದೋಣಿಗಳು, ಪೆಡಲ್ ದೋಣಿಗಳಲ್ಲಿ ಆಕರ್ಷಕ ಹೂಗಳು, ಹಣ್ಣು- ಹಂಪಲುಗಳನ್ನು ಪೇರಿಸಿ ವಿಶೇಷ ಸಂಚಾರಕ್ಕೆ ಅವಕಾಶ ನೀಡಿದ್ದು, ವೀಕ್ಷಕರಿಗೆ ಪ್ರಮುಖ ಆಕರ್ಷಣೆ ಎನಿಸಿದೆ.10 ಲಕ್ಷ ಜನರ ಭೇಟಿ ನಿರೀಕ್ಷೆ:
ಲಾಲ್‌ಬಾಗ್‌ನಲ್ಲಿರುವ ಮಾಹಿತಿ ಕೇಂದ್ರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಪಿ. ಹೇಮಲತಾ, `ಇದೇ 20ರಿಂದ 29ರವರೆಗೆ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಸಾಕಷ್ಟು ಹೊಸ ಆಕರ್ಷಣೆಗಳನ್ನು ಮಾಡಲಾಗುತ್ತಿದೆ. ಸುಮಾರು 10 ಲಕ್ಷ ಮಂದಿ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ~ ಎಂದರು.`ವೀಕ್ಷಕರ ಅನುಕೂಲಕ್ಕಾಗಿ ಆಯ್ದ ಸ್ಥಳಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಹಾಗೆಯೇ ಲಘು ಉಪಹಾರ ದೊರೆಯುವ ವ್ಯವಸ್ಥೆ ಕೂಡ ಮಾಡಲಾಗಿದೆ~ ಎಂದು ಮಾಹಿತಿ ನೀಡಿದರು.

`ಇದೇ 20ರಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.ಸಚಿವರಾದ ಆರ್. ಅಶೋಕ, ಎಸ್. ಎ. ರವೀಂದ್ರನಾಥ್, ಸಂಸದ ಅನಂತಕುಮಾರ್, ಮೇಯರ್ ಪಿ. ಶಾರದಮ್ಮ, ಶಾಸಕ ಡಾ.ಡಿ. ಹೇಮಚಂದ್ರಸಾಗರ್ ಇತರರು ಭಾಗವಹಿಸಲಿದ್ದಾರೆ. ಜ. 25ರಂದು ಡಾ.ಎಂ.ಎಚ್. ಮರಿಗೌಡ ಸ್ಮಾರಕ ಭವನದಲ್ಲಿ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ವಿಶೇಷ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶತಮಾನೋತ್ಸವ ಸಂದರ್ಭದ ಸ್ಮರಣೀಯ 100 ವರ್ಷಗಳು ಎಂಬ ಹೆಸರಿನಡಿ ಇಲಾಖೆಯ ಪ್ರಮುಖ ಮೈಲುಗಲ್ಲುಗಳ ಬಗ್ಗೆ ಮಾಹಿತಿ ನೀಡುವ ಕುಟೀರ ತೆರೆಯಲಾಗುವುದು~ ಎಂದು ಹೇಳಿದರು.

 

ಇಲಾಖೆಯ ಉಪ ನಿರ್ದೇಶಕ ಎಂ. ಜಗದೀಶ್, `ಪ್ರದರ್ಶನದ ವೇಳೆ ವೀಕ್ಷಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಆಂತರಿಕ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 265 ಮಂದಿಯ ಸೇವೆಯನ್ನು ಬಳಸಿಕೊಳ್ಳಲಾಗುವುದು. 28 ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. 30 ಲೋಹ ಶೋಧಕ ದ್ವಾರಗಳನ್ನು ಬಳಸಲಾಗುವುದು~ ಎಂದರು.ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ಎಸ್. ವಿ. ಹಿತ್ತಲಮನಿ, ಜಂಟಿ ನಿರ್ದೇಶಕ ಡಾ.ಎಸ್. ಅಶ್ವತ್ಥ್, ಮೈಸೂರು ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಎಚ್. ಕೋದಂಡರಾಮಯ್ಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)