ಲಿಂಕ್ ರಸ್ತೆ ಸಂಪೂರ್ಣ ಅಭಿವೃದ್ಧಿಗೆ ಕ್ರಮ

7

ಲಿಂಕ್ ರಸ್ತೆ ಸಂಪೂರ್ಣ ಅಭಿವೃದ್ಧಿಗೆ ಕ್ರಮ

Published:
Updated:

ತಿ.ನರಸೀಪುರ: ಪಟ್ಟಣದ ತಾಲ್ಲೂಕು ಕಚೇರಿ ರಸ್ತೆ ನಿಗದಿಪಡಿಸಿರುವ ಅನುದಾನವನ್ನು ಲಿಂಕ್ ರಸ್ತೆಗೆ ಬಳಸಿ 110 ಲಕ್ಷ ರೂಪಾಯಿ ವೆಚ್ಚದಲ್ಲಿ 18 ಮೀಟರ್ ಅಗಲದ ಪರಿಪೂರ್ಣ ಜೋಡಿ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ಬಸವರಾಜು ತಿಳಿಸಿದರು.ಪಟ್ಟಣ ಪಂಚಾಯಿತಿಯಿಂದ ನಡೆಯುತ್ತಿರುವ ಲಿಂಕ್ ರಸ್ತೆ ಹಾಗೂ ತಾಲ್ಲೂಕು ಕಚೇರಿ ರಸ್ತೆಗಳ ಕಾಮಗಾರಿಯ ಗುಣಮಟ್ಟ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಬಗ್ಗೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪಂಚಾಯಿತಿ ಸಭಾಂಗಣ ದಲ್ಲಿ ಮಂಗಳವಾರ ನಾಗರಿಕ ಸೇವಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕ ಮುಖಂಡರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ಹಿಂದೆ ಲಿಂಕ್ ರಸ್ತೆಗೆ 50 ಲಕ್ಷ ಹಾಗೂ ತಾಲ್ಲೂಕು ಕಚೇರಿ ರಸ್ತೆಗೆ 60 ಲಕ್ಷ ರೂಪಾಯಿಗಳನ್ನು ನಿಗದಿ ಮಾಡಲಾಗಿತ್ತು. ಇದರಿಂದ ಎರಡು ಕಡೆ ಅಪೂರ್ಣ ಕಾಮಗಾರಿಗಳು ಆಗುತ್ತವೆ.

 

ಯಾವುದಾದರೂ ಒಂದು ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಿ ಎಂಬ ಮುಖಂಡರ ಸಲಹೆ ಮೇರೆಗೆ 18 ಮೀಟರ್ ಅಗಲದ ಜೋಡಿ ರಸ್ತೆ ನಡುವೆ ಡಿವೈಡರ್ ಅಳವಡಿಸಿ ಎರಡು ಕಡೆ ಸೂಕ್ತ ಚರಂಡಿ ಕಲ್ಪಿಸುವ ಬಗ್ಗೆ ಸದಸ್ಯರ ತುರ್ತು ಸಭೆ ಕರೆದು ತಾಲ್ಲೂಕು ಕಚೇರಿಯ ಅನುದಾನವನ್ನು ಲಿಂಕ್ ರಸ್ತೆ ಅಭಿವೃದ್ಧಿಗೆ ಬಳಸಲು ಕ್ರಮ ಕೈಗೊಳ್ಳುವಂತೆ ಕಿರಿಯ ಎಂಜಿನಿಯರ್ ಪುರುಷೋತ್ತಮ್‌ಗೆ ಸೂಚಿಸಿದರು. ಇದಕ್ಕೂ ಮುನ್ನ ಮಾತನಾಡಿದ ಸೇವಾ ವೇದಿಕೆಯ ಮುಖಂಡರು, ಎರಡು ರಸ್ತೆಗಳಿಗೂ ಅನುದಾನ ಬಳಸಿ ಅಪೂರ್ಣ ರಸ್ತೆ ಮಾಡುವ ಬದಲು ಪಟ್ಟಣಕ್ಕೆ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಲಿಂಕ್ ರಸ್ತೆಯ ಎರಡು ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಮಾಡಿ ಪರಿಪೂರ್ಣವಾದ ರಸ್ತೆ ನಿರ್ಮಿಸುವಂತೆ ಕೋರಿದರು. ತಾಲ್ಲೂಕು ಕಚೇರಿ ರಸ್ತೆಯಲ್ಲಿ ಕೆಲವು ಭಾಗದಲ್ಲಿ ಚರಂಡಿ ಇಲ್ಲ. ಅದನ್ನು ಮೊದಲು ಪೂರ್ಣಗೊಳಿಸಿ ಕಾಮಗಾರಿ ಮಾಡಿಸಿಸುವಂತೆ ಒತ್ತಾಯಿಸಿದರು.ವೇದಿಕೆಯ ಗೌರವಾಧ್ಯಕ್ಷ ಪಿ. ಪುಟ್ಟರಾಜು, ಅಧ್ಯಕ್ಷ ಎಚ್.ಆರೀಫ್, ಪ್ರಧಾನ ಕಾರ್ಯದರ್ಶಿ ಕೆ.ಎನ್. ಪ್ರಭುಸ್ವಾಮಿ, ಹೋಟೆಲ್ ರಾಜಣ್ಣ, ಕೆ.ಎಸ್.ಶ್ರೀಹರಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ಮಹಾ ದೇವಸ್ವಾಮಿ, ಡಿ.ರಾಮಕೃಷ್ಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಟೆಂಪೊ ಮಹಾದೇವಣ್ಣ ಇರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry