ಲಿಂಗದೇವರು ನಿಧನಕ್ಕೆ ಸಾಂಸ್ಕೃತಿಕ ಲೋಕ ಸ್ತಬ್ಧ

ಶನಿವಾರ, ಜೂಲೈ 20, 2019
23 °C

ಲಿಂಗದೇವರು ನಿಧನಕ್ಕೆ ಸಾಂಸ್ಕೃತಿಕ ಲೋಕ ಸ್ತಬ್ಧ

Published:
Updated:

ಶಿವಮೊಗ್ಗ: ರಂಗಾಯಣ ನಿರ್ದೇಶಕ, ಭಾಷಾ ವಿದ್ವಾಂಸ, ನಾಟಕಕಾರ ಪ್ರೊ.ಲಿಂಗದೇವರು ಹಳೆಮನೆ ಅವರ ಹಠಾತ್ ನಿಧನಕ್ಕೆ ಶಿವಮೊಗ್ಗದ ಸಾಹಿತ್ಯ ಹಾಗೂ ರಂಗಭೂಮಿ ಲೋಕ ದಿಗ್ಬ್ರಮೆ ವ್ಯಕ್ತಪಡಿಸಿದೆ.ಮಂಗಳವಾರ ಮಧ್ಯಾಹ್ನ ಲಿಂಗದೇವರು ಶಿವಮೊಗ್ಗ ಬಿಡುವರೆಗೂ ಅವರ ಜತೆಗಿದ್ದ ಗೆಳೆಯರು, ಹಿತೈಪಿಗಳು, ಅಭಿಮಾನಿಗಳು ಅವರ ಸಾವಿನ ಸುದ್ದಿ ಕೇಳಿ ಮಮ್ಮಲ ಮರುಗುತ್ತಿದ್ದಾರೆ. ರಂಗಾಯಣ ನಾಟಕೋತ್ಸವಕ್ಕೆ ಆಗಮಿಸಿ, ಎರಡು ದಿವಸ ಶಿವಮೊಗ್ಗದಲ್ಲಿದ್ದಾಗ ಅವರು ಆಡಿದ ಮಾತು, ಹಂಚಿಕೊಂಡ ಚಿಂತನೆಗಳನ್ನು ಮೆಲುಕು ಹಾಕುತ್ತಿದ್ದಾರೆ.`ರಂಗಾಯಣಕ್ಕೆ ಮೈಸೂರು ಒಂದೇ ಕೇಂದ್ರವಾಗಬಾರದು. ಅದು ಕರ್ನಾಟಕದ ರಂಗಾಯಣ ಆಗಬೇಕು ಎಂದಿದ್ದರು. ಯೂರೋಪ್-ಇಂಡಿಯಾ ಸಾಂಸ್ಕೃತಿಕ ವಿನಮಯ ಕಾರ್ಯಕ್ರಮದಡಿ ಎರಡು ದೇಶಗಳ ಕಲೆಗಳ ಕೊಡುಕೊಳ್ಳುವಿಕೆ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು ಯೂರೋಪ್ ಪ್ರವಾಸ ಕೈಗೊಂಡಿದ್ದರು.ರಂಗಾಯಣ ಮತ್ತು ಹವ್ಯಾಸಿ ನಾಟಕ ತಂಡಗಳ ಜತೆ ಕೊಡುಕೊಳ್ಳುವಿಕೆ ನಡೆಸುವ ಉದ್ದೇಶ ಹೊಂದಿದ್ದರು. ಅಲ್ಲದೇ, ದುಡಿಯುವ ವರ್ಗದ ಪುರಾಣಗಳನ್ನು ಎತ್ತಿಕೊಂಡು ನಾಟಕ ಆಡಬೇಕು. ದುಡಿಯುವ ವರ್ಗದಿಂದ ನಾಟಕ ಹುಟ್ಟಿಬರುವ ರೀತಿ ಚಿಂತನೆ ನಡೆಸಬೇಕು~ ಎನ್ನುತ್ತಿದ್ದರು ಎಂದು ಲಿಂಗದೇವರು ಹಳೆಮನೆ ಜತೆಗೆ ಮಂಗಳವಾರ ಬೆಳಿಗ್ಗೆ ಅಷ್ಟೇ ಸಂವಾದ ನಡೆಸಿದ್ದ ವಿಮರ್ಶಕ ಡಾ.ಕುಂಸಿ ಉಮೇಶ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಬುಧವಾರ ಬೆಳಿಗ್ಗೆ ಕುವೆಂಪು ರಂಗಮಂದಿರದಲ್ಲಿ ಲಿಂಗದೇವರು ನಿಧನಕ್ಕೆ  ಕಲಾವಿದರು, ಗೆಳೆಯರು ಮೌನಾಚರಣೆ ನಡೆಸಿದರು. ದುಃಖ ತುಂಬಿಕೊಂಡಿದ್ದರಿಂದ ಮಾತು ಹೊರಡಲಿಲ್ಲ. ಸಂತಾಪ ಸಭೆಯಲ್ಲಿ ಹೊ.ನಾ. ಸತ್ಯ, ಡಾ.ನಾಗಭೂಷಣ್, ಡಾ.ಮಲ್ಲಿಕಾರ್ಜುನ ಮೇಟಿ, ಮಂಜುನಾಥ ಬೆಳಕೆರೆ, ಹೊನ್ನಾಳಿ ಚಂದ್ರಶೇಖರ್, ಎಸ್.ಆರ್. ಹಾಲಸ್ವಾಮಿ, ಹರಿಗೆ ಗೋಪಾಲಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.ರಂಗನಮನ: ಸಂಜೆ ರಂಗಾಯಣ ನಾಟಕೋತ್ಸವ ಮುನ್ನಾ ಲಿಂಗದೇವರು ನೆನಪಿಗೆ ಅವರೇ ರಚಿಸಿದ ರಂಗಗೀತೆಗಳನ್ನು ನಾಟಕದ ವಿದ್ಯಾರ್ಥಿಗಳು ಹಾಡಿ, ರಂಗನಮನ ಸಲ್ಲಿಸಿದರು. ತದನಂತರ ಅವರ ಸ್ಮರಣಾರ್ಥ ಪ್ರೊ. ಚಂದ್ರಶೇಖರ ಪಾಟೀಲರ `ಗೋಕರ್ಣದ ಗೌಡಶಾನಿ~ ನಾಟಕ ಪ್ರದರ್ಶಿಸಿದರು.ಸಂತಾಪ: ಕರ್ನಾಟಕ ಸರ್ಕಾರದ ಭಾಷಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಕುವೆಂಪು ಸಾಹಿತ್ಯ ಪದವಿವರಣಕೋಶಗಳನ್ನು ಸಿದ್ಧಪಡಿಸುತ್ತಿದ್ದು. ಆ ಯೋಜನೆಯ ಸಲಹಾ ಸಮಿತಿಯ ಸದಸ್ಯರಾಗಿ ಹಲವಾರು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದ ಭಾಷಾತಜ್ಞ ಪ್ರೊ. ಲಿಂಗದೇವರು ಹಳೆಮನೆ ಅವರ ನಿಧನ ಅಪಾರವಾದ ದುಃಖವನ್ನು ಉಂಟುಮಾಡಿದೆ ಎಂದು ಕನ್ನಡ ಭಾಷಾಭಿವೃದ್ಧಿ ಯೋಜನೆಯ ಸಂಯೋಜಕ ಪ್ರೊ. ಕುಮಾರಚಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry