ಭಾನುವಾರ, ಜನವರಿ 26, 2020
28 °C

ಲಿಂಗಪತ್ತೆ ಕಾರ್ಯ ತಡೆಗೆ ವಿನೂತನ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಐಎಎನ್‌ಎಸ್): ದೇಶದಲ್ಲೇ ಅತ್ಯಂತ ಕಡಿಮೆ ಲಿಂಗಾನುಪಾತವನ್ನು ಹೊಂದಿರುವ ರಾಜಸ್ತಾನದಲ್ಲಿ ಹೆಚ್ಚಾಗಿರುವ ಲಿಂಗ ಪತ್ತೆ ಕಾರ್ಯವನ್ನು ತಡೆಯುವುದಕ್ಕಾಗಿ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.ಜನನ ಪೂರ್ವದಲ್ಲೇ ಲಿಂಗ ಪತ್ತೆ ಮಾಡುವ ಅಲ್ಟ್ರಾಸೌಂಡ್ ವೈದ್ಯಕೀಯ ಕೇಂದ್ರಗಳ ಮೇಲೆ ನಿಗಾ ಇಡಲು ವೃತ್ತಿಪರ ಮಾಹಿತಿದಾರರ ಜಾಲವನ್ನು ಸರ್ಕಾರ ರೂಪಿಸುತ್ತಿದೆ. ಇದಕ್ಕಾಗಿ ಮಾಹಿತಿದಾರರಿಗೆ ತಲಾ 25 ಸಾವಿರ ರೂಪಾಯಿ ನೀಡಲಾಗುತ್ತದೆ. ಒಂದು  ವೇಳೆ ಅಪರಾಧವು ನ್ಯಾಯಾಲಯದಲ್ಲಿ ಸಾಬೀತಾದಲ್ಲಿ ಮಾಹಿತಿದಾರರಿಗೆ ಇನ್ನೂ 25 ಸಾವಿರ ರೂಪಾಯಿ ನೀಡಲಾಗುತ್ತದೆ.ಈ ಮೂಲಕ ಕಾನೂನು ಬಾಹಿರವಾದ ಈ ಲಿಂಗ ಪತ್ತೆ ಕಾರ್ಯದಲ್ಲಿ ತೊಡಗುವ ವೈದ್ಯಕೀಯ ಕೇಂದ್ರಗಳನ್ನು ಪತ್ತೆ ಹಚ್ಚಿ `ಜನನ ಪೂರ್ವ ಲಿಂಗ ಪತ್ತೆ ಪರೀಕ್ಷೆ ಕಾಯಿದೆ~ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಾಹಿತಿದಾರರನ್ನು ನಿಯೋಜಿಸಲಾಗಿದ್ದು, ಪ್ರತಿ ಜಿಲ್ಲೆಗೂ ನೇಮಿಸಬೇಕೇ ಬೇಡವೇ ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ರಾಜಸ್ತಾನವು ರಾಜ್ಯ ಮಟ್ಟದ ಆರೋಗ್ಯ ಇಲಾಖೆಯ ತಂಡವನ್ನು ಹೊಂದಿದೆ. ಈ ತಂಡದ ಸದಸ್ಯರ ಬಲವನ್ನು ಇನ್ನೂ ಹೆಚ್ಚಿಸುವ ಜೊತೆಗೆ ಪತ್ತೆ ಕಾರ್ಯಕ್ಕಾಗಿ ಅವರಿಗೆ ರಹಸ್ಯ ಕ್ಯಾಮೆರಾ, ಧ್ವನಿ ಮುದ್ರಣ ಸಾಧನ ಸೇರಿದಂತೆ ಕೆಲವು ಸಾಧನಗಳನ್ನು ನೀಡುವ ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.ಅಲ್ಟ್ರಾಸೌಂಡ್ ಕ್ಲಿನಿಕ್‌ಗಳಲ್ಲಿ ನಡೆಯುವ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದಲ್ಲಿ ಮತ್ತು ಅದು ನಿಜವಾಗಿದ್ದಲ್ಲಿ ಈ ಹಿಂದೆ 5 ಸಾವಿರ ರೂಪಾಯಿ ನೀಡಲಾಗುತ್ತಿತ್ತು.2001ರ ಜನಗಣತಿಯ ಪ್ರಕಾರ ರಾಜಸ್ತಾನದಲ್ಲಿ 0-6ರ ವಯಸ್ಸಿನ 1000 ಗಂಡು ಮಕ್ಕಳಿಗೆ 883 ಹೆಣ್ಣು ಮಕ್ಕಳಿರುವುದಾಗಿ ತಿಳಿದುಬಂದಿತ್ತು.   `ರಾಜಸ್ತಾನದಲ್ಲಿ ದಿನವಹಿ 300 ಹೆಣ್ಣು ಮಕ್ಕಳ ಭ್ರೂಣ ಹತ್ಯೆ ನಡೆಯುತ್ತಿದ್ದು ರಾಜ್ಯದಾದ್ಯಂತ ಸುಮಾರು 1800 ಲಿಂಗ ಪತ್ತೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ~ ಎಂದು `ಶಿಕ್ಷಿತ್ ರೋಜ್ರಾ ಕೇಂದ್ರ ಪ್ರಬಂಧಕ ಸಮಿತಿ~ ಎಂಬ ಸರ್ಕಾರೇತರ ಸಂಸ್ಥೆಯ ಕಾರ್ಯದರ್ಶಿ ರಾಜನ್ ಚೌಧರಿ ತಿಳಿಸಿದ್ದಾರೆ.ಹೆಣ್ಣು ಮಕ್ಕಳ ಭ್ರೂಣ ಹತ್ಯೆಯಲ್ಲಿ ಜೈಪುರ ಅತಿ ಮುಂದಿದೆ.ಅಲ್ಲದೆ 1000 ಗಂಡುಗಳಿಗೆ ಕೇವಲ 831 ಹೆಣ್ಣುಗಳನ್ನು ಹೊಂದುವ ಮೂಲಕ ರಾಜ್ಯದಲ್ಲೇ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಹಣೆಪಟ್ಟಿಯನ್ನು ಜುಂಜುನು ಎಂಬ ಜಿಲ್ಲೆ ಅಂಟಿಸಿಕೊಂಡಿದೆ.

 

ಪ್ರತಿಕ್ರಿಯಿಸಿ (+)