ಶುಕ್ರವಾರ, ನವೆಂಬರ್ 15, 2019
20 °C

ಲಿಂಗರೆಡ್ಡಿ ಜಿ.ಪಂ. ಉಪಾಧ್ಯಕ್ಷ

Published:
Updated:

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ದುಂಡಪ್ಪ ಸಿದ್ದಪ್ಪ ಲಿಂಗರೆಡ್ಡಿ ಆಯ್ಕೆಯಾದರು.ಹೂವಪ್ಪ ರಾಠೋಡ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಬಿಜೆಪಿ ಸದಸ್ಯರಾದ ಕೃಷ್ಣ ಓಗೆಣ್ಣವರ, ಲಕ್ಷ್ಮಿಬಾಯಿ ನ್ಯಾಮಗೌಡ, ಮಹಾದೇವಿ ಮೂಲಿಮನಿ (2 ನಾಮಪತ್ರ) ಮತ್ತು ಕಾಂಗ್ರೆಸ್‌ನಿಂದ ದುಂಡಪ್ಪ ಲಿಂಗರೆಡ್ಡಿ (2 ನಾಮಪತ್ರ) ಸೇರಿದಂತೆ ಒಟ್ಟು ನಾಲ್ಕು ಅಭ್ಯರ್ಥಿಗಳು ಆರು ನಾಮಪತ್ರ ಸಲ್ಲಿಸಿದ್ದರು.ಲಿಂಗರೆಡ್ಡಿ ಪರ 14 ಮತ: ಜಿಲ್ಲಾ ಪಂಚಾಯಿತಿಯ ಎಲ್ಲ 32 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ನ ಲಿಂಗರೆಡ್ಡಿ ಪರವಾಗಿ 14 ಮತ, ವಿರುದ್ಧವಾಗಿ 8, ತಟಸ್ಥವಾಗಿ 10 ಮತಗಳು ಚಲಾವಣೆಯಾದವು. ಉಳಿದಂತೆ ಬಿಜೆಪಿಯ ಕೃಷ್ಣ ಓಗೆಣ್ಣವರ 5, ಲಕ್ಷ್ಮಿಬಾಯಿ ನ್ಯಾಮಗೌಡ 5 ಮತ್ತು ಮಹಾದೇವಿ ಮೂಲಿಮನಿ 8 ಮತಗಳನ್ನು ಗಳಿಸಿದರು.ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಅವರು, ಲಿಂಗರೆಡ್ಡಿ 14 ಮತ ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.ಬರಕ್ಕೆ ಆದ್ಯತೆ

ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಗರೆಡ್ಡಿ, `ಜಿಲ್ಲೆಯಲ್ಲಿ ಮುಂಗಾರು ಮಳೆಯಾಗದೇ ಬರಗಾಲ ತಲೆದೋರಿದ್ದು, ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. 40 ದಿನಗಳ ಅಧಿಕಾರವಧಿಯಲ್ಲಿ ಕುಡಿಯುವ ನೀರು ಸೇರಿದಂತೆ ಬರ ನಿರ್ವಹಣೆಗೆ ಆದ್ಯತೆ ನೀಡುವುದಾಗಿ~ ತಿಳಿಸಿದರು.`ಇದು ತಮ್ಮ ಗೆಲುವಲ್ಲ, ಕಾಂಗ್ರೆಸ್‌ನ ಗೆಲುವು~ ಎಂದು ಬಣ್ಣಿಸಿದರು.ನೂತನ ಉಪಾಧ್ಯಕ್ಷರನ್ನು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಪ್ರಕಾಶ ಎಮ್ಮಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಜಿ. ಪಾಟೀಲ ಮತ್ತು ಉಪವಿಭಾಗಾಧಿಕಾರಿ ಗೋವಿಂದ ರೆಡ್ಡಿ ಮತ್ತು  ಜಿ.ಪಂ.ಸದಸ್ಯರು ಅಭಿನಂದಿಸಿದರು.ಪಟಾಕಿ ಸಿಡಿಸಿ ಸಂಭ್ರಮ

ಕಾಂಗ್ರೆಸ್ ಸದಸ್ಯರಾದ ಲಿಂಗರೆಡ್ಡಿ ಜಿ.ಪಂ.ನ ನೂತನ ಉಪಾಧ್ಯಕ್ಷರಾಗುತ್ತಿದ್ದಂತೆ ಜಿಲ್ಲಾಡಳಿತ ಭವನದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

ಪ್ರತಿಕ್ರಿಯಿಸಿ (+)