ಲಿಂಗಸಗೂರು ಜಿಪಂ ಎಂಜಿನಿಯರ್ ಅಮಾನತು

7

ಲಿಂಗಸಗೂರು ಜಿಪಂ ಎಂಜಿನಿಯರ್ ಅಮಾನತು

Published:
Updated:

ಸಿಂಧನೂರು: ಕಾರ್ಯನಿರ್ವಹಿಸದೇ ಲಿಂಗಸಗೂರು ತಾಲ್ಲೂಕಿನ ಐದನಾಳದಿಂದ- ನಿಲೋಗಲ್‌ವರೆಗಿನ 1150 ಮೀಟರ್ ರಸ್ತೆ ನಿರ್ಮಿಸಿರುವುದಾಗಿ ದಾಖಲೆ ಸೃಷ್ಟಿಸಿ 4.48ಲಕ್ಷ ಹಣ ದುರುಪಯೋಗ ಪಡಿಸಿಕೊಂಡಿರುವ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಎನ್. ಪಾಟೀಲ್ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ಎಚ್.ಕೆ.ಡಿ.ಬಿ. ಅಧ್ಯಕ್ಷ ಅಮರನಾಥ ಪಾಟೀಲ್ ತಿಳಿಸಿದರು.ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ರವಿಕುಮಾರ ಅವರಿಗೆ ಶಿಫಾರಸು ಮಾಡಿದ್ದು  ಅದರನ್ವಯ ಪಾಟೀಲರನ್ನು ಅಮಾನತುಗೊಳಿಸಿದ್ದಾರೆಂದು ಹೇಳಿದರು. ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು 9 ಕೋಟಿ ಹಣ ಉಪಯೋಗಿಸಿರುವ ಬಗ್ಗೆ ಇನ್ನೂ ವರದಿ ನೀಡಿಲ್ಲ. ಸರ್ಕಾರದಲ್ಲಿ ಸಾಕಷ್ಟು ಹಣವಿದ್ದರೂ ಅಧಿಕಾರಿಗಳ ವಿಳಂಬ ನೀತಿಯಿಂದ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. 6 ಜಿಲ್ಲೆಗಳಲ್ಲಿ ಜಿಲ್ಲಾವಾರು ಸಭೆಗಳನ್ನು ನಡೆಸಿ ಕಾಮಗಾರಿಗಳನ್ನು ಚುರುಕುಗೊಳಿಸುತ್ತಿರುವುದಾಗಿ ಹೇಳಿದರು.ರಾಯಚೂರಿನ ಪ್ರೆಸ್ ಕ್ಲಬ್, ಗುಲ್ಬರ್ಗ ಕನ್ನಡ ಸಾಹಿತ್ಯ ಭವನದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಚುರುಕಗೊಳಿಸಲಾಗಿದೆ. ಗುಲ್ಬರ್ಗದ ಸಾಹಿತ್ಯ ಭವನಕ್ಕೆ 2.9 ಕೋಟಿ ಕಾಯ್ದಿರಿಸಲಾಗಿದ್ದ ಹಣದಲ್ಲಿ 1.55 ಕೋಟಿ ಎಚ್.ಕೆ.ಡಿ.ಬಿ.ಯ ಹಣಕೊಡಲಾಗಿತ್ತು. ಇನ್ನುಳಿದ ಹಣವನ್ನು ಶಾಸಕ, ಸಂಸದರ ಅನುದಾನದಿಂದ ಪಡೆಯಲಾಗಿತ್ತು ಎಂದರು. ಉತ್ತರ ಕರ್ನಾಟಕದಲ್ಲಿಯೇ  ಪ್ರಥಮವಾಗಿ ಎನ್ನಲಾದ ಸಮಗ್ರ ಮಾಹಿತಿಯನ್ನು ಉಪಗ್ರಹದ ಮೂಲಕ ಸಂಗ್ರಹಿಸುವ ನಿಟ್ಟಿನಲ್ಲಿ 1 ಕೋಟಿ ಹಣ ಖರ್ಚುಮಾಡಿ ದೂರ ಸಂವೇದಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಿಂದ ರಸ್ತೆ, ಗೈರಾಣ, ಚೆಕ್‌ಡ್ಯಾಂ ಮತ್ತಿತರ ಮಾಹಿತಿಗಳನ್ನು ಅಭಿವೃದ್ಧಿ ಕೈಗೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.

 

2010-11ನೇ ಸಾಲಿನಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 60 ಕೋಟಿ ಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ 23 ಕೋಟಿ ಮಂಜೂರಾಗಿದ್ದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 39.20 ಲಕ್ಷ ಹಂಚಲಾಗಿದೆ. ಆಯಾ ಕ್ಷೇತ್ರದಲ್ಲಿ ರಸ್ತೆ ಅಂತರ್ಜಲ ಅಭಿವೃದ್ಧಿ, ಶಾಲಾ ಕೊಠಡಿಗಳು ಮತ್ತಿತರ ಸಾಮಾಜಿಕ ಕೆಲಸಗಳಿಗೆ ಖರ್ಚು ಮಾಡುವಂತೆ ಶಾಸಕರಿಗೆ ಸೂಚಿಸಿರುವುದಾಗಿ ಹೇಳಿದರು. 20ರಂದು ಸಮಾವೇಶ: ಸರ್ಕಾರ 1000 ದಿನ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಫೆ.20ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿನೂತನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದೂ ವಿವರಿಸಿದರು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry