`ಲಿಂಗಾಯತ ಸಮಾಜಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ'

ಭಾನುವಾರ, ಜೂಲೈ 21, 2019
22 °C

`ಲಿಂಗಾಯತ ಸಮಾಜಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ'

Published:
Updated:

ಗುಲ್ಬರ್ಗ: ವೀರಶೈವ ಲಿಂಗಾಯತ ಸಮಾಜಕ್ಕೆ ಅಲ್ಪಸಂಖ್ಯಾತ ಸ್ಥಾನ ದೊರಕಿಸಿ ಕೊಡಲು ಶಕ್ತಿಮೀರಿ ಶ್ರಮಿಸುವುದಾಗಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಹೇಳಿದರು.ಭಾನುವಾರ ಸೋಲಾಪುರದ ನಾರ್ಥಕೋಟ ಪ್ರೌಢಶಾಲೆಯ ಮೈದಾನದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾ ಮಹಾರಾಷ್ಟ್ರ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾ ಸಮ್ಮೇಳನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಈ ಸಮಾಜದ ಜನರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಲುವಾಗಿ ಸರ್ಕಾರದಲ್ಲಿ ಚಿಂತನೆ ನಡೆದಿದೆ. ಇದ್ದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.ಎಲ್ಲ ಧರ್ಮಗಳಲ್ಲಿ ವೀರಶೈವ ಧರ್ಮ ವಿಶಿಷ್ಟ ಧರ್ಮ. ಜೈನ, ಸಿಖ್ ಧರ್ಮಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದೆ. ಇಂಥ ಅವಕಾಶ ವೀರಶೈವ ಸಮಾಜಕ್ಕೂ ಸಿಗಬೇಕು. ಆದಷ್ಟು ಬೇಗನೆ ಈ ಕಾರ್ಯ ಈಡೇರುತ್ತದೆ. 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಮಾಡಿದ್ದಾರೆ. ಮಾನವ ಸಮಾಜವನ್ನು ಒಟ್ಟಾಗಿ ಸೇರಿಸುವ ಪ್ರಯತ್ನ ಅವರಿಂದ ನಿರಂತರವಾಗಿ ನಡೆದಿತ್ತು. ಸರ್ವ ಧರ್ಮ, ಸಹಬಾಳು ಸಹಿಷ್ಣುತೆಯ ಜೀವನ ಸಾಗಿಸಬೇಕು. ಬಸವಣ್ಣನವರು ತತ್ವ ಆದರ್ಶ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.ಮಹಾರಾಷ್ಟ್ರ ವೀರಶೈವ ಮಹಾಸಭೆ ಅಧ್ಯಕ್ಷ ವಿಶ್ವನಾಥ ಚಾಕೋತೆ ಮಾತನಾಡಿ, ಸರ್ಕಾರದಿಂದ ವೀರಶೈವ ಸಮಾಜಕ್ಕೆ ಮಾನ್ಯತೆ ಸಿಗಬೇಕು. ವೀರಶೈವ ಸಮಾಜ ವ್ಯವಸ್ಥಿತವಾಗಿ ಸಂಘಟಿತವಾದಾಗ ಮಾತ್ರ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು.ವೀರಶೈವ ಮಹಾಸಭಾ ಮುಖಂಡ ಭೀಮಣ್ಣ ಖಂಡ್ರೆ ಮಾತನಾಡಿದರು. ಶಾಸಕಿ ಪ್ರಣತಿ ಶಿಂಧೆ, ವಿಜಯ ದೇಶಮುಖ, ಸಿದ್ದರಾಮ ಮೇತ್ರಿ, ಸಚಿವ ಮಧುಕರರಾವ್ ಚವಾಣ್,ಬಸವರಾಜ ಪಾಟೀಲ, ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಶಾಸಕ ಈಶ್ವರ ಖಂಡ್ರೆ, ಮಹಾರಾಷ್ಟ್ರ ವೀಶಶೈವ ಮಹಿಳಾ ಸಮಿತಿ ಅಧ್ಯಕ್ಷೆ ಉಮಾದೇವಿ ನಾಯಕ, ಡಾ.ಜಯಸಿದ್ಧೇಶ್ವರ ಶಿವಾಚಾರ್ಯ, ಶ್ರೀಕಂಠೇಶ್ವರ ಶಿವಾಚಾರ್ಯ, ಶೈಲೇಶ ಪಾಟೀಲ ಚಾಕೂರಕರ್, ಶಿವರಾಜ ಪಾಟೀಲ , ದತ್ತಾತ್ರೇಯ ಪಾಟೀಲ ರೇವೂರ್, ಅಲ್ಲಮಪ್ರಭು ಪಾಟೀಲ, ಎ.ಬಿ. ಮಾಲಕರಡ್ಡಿ, ಅಮರನಾಥ ಪಾಟೀಲ, ಸಚಿವ ಶಾಮನೂರು ಶಿವಶಂಕರಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವೀರಶೈವ ರತ್ನ ಹಾಗೂ ವೀರಶೈವ ಭೂಷಣ ಪ್ರಶಸ್ತಿ ಪಡೆದ ಗಣ್ಯರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಶಿವರಾಜ ಶಾಸ್ತ್ರಿ ಉಪನ್ಯಾಸ ನೀಡಿದರು. ಬಿ. ಹೇಮಂತ್‌ಕುಮಾರ ತಂಡದವರು ವಚನಗಾಯನ ಹಾಡಿದರು. ಕಾಶೀನಾಥ ಭತಗುಣಕಿ ಹಾಗೂ ಶ್ವೇತಾ ಹುಲ್ಲೆ ಕಾರ್ಯಕ್ರಮ ನಿರೂಪಿಸಿದರು. ಈಶ್ವರ ಖಂಡ್ರೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry