ಲಿಂಗ ಅಸಮಾನತೆಗೆ ಬಡತನ ಕಾರಣ

7

ಲಿಂಗ ಅಸಮಾನತೆಗೆ ಬಡತನ ಕಾರಣ

Published:
Updated:

ಬೆಂಗಳೂರು: `ಬಡತನ ಹಾಗೂ ಶಿಕ್ಷಣದ ಕೊರತೆಯ ಕಾರಣದಿಂದಾಗಿ ದೇಶದಲ್ಲಿ ಲಿಂಗ ಅಸಮಾನತೆ ಹೆಚ್ಚುತ್ತಲೇ ಇದೆ. ಇದೊಂದು ಗಂಭೀರವಾದ ಸಾಮಾಜಿಕ ಸಮಸ್ಯೆ~ ಎಂದು ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ಪ್ರೇಮಾ ಕಾರ್ಯಪ್ಪ ಕಳವಳ ವ್ಯಕ್ತ ಪಡಿಸಿದರು.ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಸಮಾರಂಭದಲ್ಲಿ ಇ-ಅವೇದನ್ ಸಾಫ್ಟ್‌ವೇರ್ ಉದ್ಘಾಟಿಸಿ ಅವರು ಮಾತನಾಡಿದರು.`ಎಪ್ಪತ್ತರ ದಶಕದ ನಂತರ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. 2010ರ ಜನಗಣತಿಯ ಪ್ರಕಾರ ಒಂದು ಸಾವಿರ ಗಂಡುಗಳಿಗೆ 916 ಹೆಣ್ಣು ಮಕ್ಕಳಿದ್ದಾರೆ. ಈ ಅಸಮಾನತೆ ಪ್ರತಿ ವರ್ಷವೂ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಹೆಣ್ಣು ಭ್ರೂಣ ಹತ್ಯೆ. ಭ್ರೂಣ ಹತ್ಯೆ ನಿಷೇಧ ಕಾಯ್ದೆ ಇದ್ದರೂ ಇಂದಿಗೂ ಭ್ರೂಣ ಹತ್ಯೆಗಳು ನಡೆಯುತ್ತಲೇ ಇವೆ. ಈ ವಿಷಯದಲ್ಲಿ ಸಾಮಾಜಿಕ ಮನೋಭಾವ ಬದಲಾಗದೇ ಸುಧಾರಣೆ ಸಾಧ್ಯವಿಲ್ಲ~ ಎಂದು ಅವರು ಅಭಿಪ್ರಾಯ ಪಟ್ಟರು.`ಕೇವಲ ಶೇಕಡ 33 ರಷ್ಟು ಮೀಸಲಾತಿಗೆ ಮಾತ್ರ ತೃಪ್ತರಾಗದೇ, ಶೇಕಡಾ 50 ರ ಮೀಸಲಾತಿಗಾಗಿ ಇಂದಿನ ಹೆಣ್ಣು ಮಕ್ಕಳು ಹೋರಾಟ ನಡೆಸಬೇಕು~ ಎಂದು ಅವರು ಕರೆ ನೀಡಿದರು.`ತಳವರ್ಗದ ಮಹಿಳೆಯರೊಂದಿಗೆ ವೇತನ ತಾರತಮ್ಯ ಕೂಡ ಅವ್ಯಾಹತವಾಗಿ ನಡೆಯುತ್ತದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಎಲ್ಲಾ ಕ್ಷೇತ್ರದಲ್ಲಿಯೂ ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಗ್ರಾಮಗಳಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚಾಗಬೇಕು~ ಎಂದರು.ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, `ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿವರ್ಷವೂ ಸಾವಿರಾರು ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಲೇ ಇದ್ದಾರೆ. ಆದರೆ ಇವರ ಪತ್ತೆ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ಹೆಣ್ಣು ಮಕ್ಕಳನ್ನು ಮಾರುವ ದಂಧೆಗಳನ್ನು ತಡೆಯುವ ನಿಟ್ಟಿನಲ್ಲಿ ಕಾನೂನುಬಲಗೊಳ್ಳಬೇಕಿದೆ~ ಎಂದರು.`ಪ್ರಸ್ತುತ ಜಾಗತಿಕ ಯುಗದಲ್ಲಿ ಮಹಿಳೆಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ತೋರುವ ಅನಿವಾರ್ಯತೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಹೆಗ್ಗುರುತನ್ನು ತೋರಿರುವ ಮಹಿಳೆ ತನ್ನ ಘನತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯ ಹಾಗೂ ಸಮಾನತೆಗಳಿಗಾಗಿ ಹೋರಾಡುವ ಹೆಣ್ಣು ಮಕ್ಕಳು ಸ್ವೇಚ್ಛಾಚಾರದ ಬಗ್ಗೆ ಎಚ್ಚರವಾಗಿರಬೇಕು~ ಎಂದು ಅವರು ನುಡಿದರು.ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವಿನೋದ ನಟರಾಜ್ ಮಾತನಾಡಿ, `ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಬೇಕಾಗಿದೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಬದುಕನ್ನು ರೂಪಿಸಿಕೊಳ್ಳಲು ಅಗತ್ಯವಾದ ವೃತ್ತಿ ಶಿಕ್ಷಣವನ್ನು ನೀಡಬೇಕು~ ಎಂದು ಆಶಿಸಿದರು.ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಪಿ.ಇಳಂಗೊ ಮತ್ತಿತರರು ಉಪಸ್ಥಿತರಿದ್ದರು.

ಇ-ಅವೇದನ್ ಸಾಫ್ಟ್‌ವೇರ್

ತನ್ನ ಯೋಜನೆಗಳನ್ನು ಪಾರದರ್ಶಕವಾಗಿಸಲು ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಹೊರ ತಂದಿರುವ ನೂತನ ತಂತ್ರಾಂಶ ಇದಾಗಿದೆ. ಕೇಂದ್ರ ಹಾಗೂ ರಾಜ್ಯಗಳ ಸಮಾಜ ಕಲ್ಯಾಣ ಮಂಡಳಿಗಳಲ್ಲಿ ನೋಂದಣಿಯಾಗಿರುವ ಎನ್‌ಜಿಓ ಗಳು ಇ-ಅವೇದನ್ ಮೂಲಕ ಯೋಜನೆಗಳ ಪ್ರಯೋಜನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ತಮ್ಮ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯಲೂ ಇ-ಅವೇದನ್ ಸಹಕಾರಿಯಾಗಲಿದೆ. ಕರ್ನಾಟಕವೂ ಸೇರಿದಂತೆ ಸದ್ಯ ದೇಶದ 6 ರಾಜ್ಯಗಳಲ್ಲಿ ಜಾರಿಗೊಳಿಸಿರುವ ಈ ಸಾಫ್ಟ್‌ವೇರ್ ಅನ್ನು ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರುವ ಉದ್ದೇಶ ಮಂಡಳಿಯದ್ದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry