ಲಿಂಗ ಸಮಾನತೆಯ ಪರಿಕಲ್ಪನೆಯಾಗಿ ಅರ್ಧನಾರೀಶ್ವರ

7

ಲಿಂಗ ಸಮಾನತೆಯ ಪರಿಕಲ್ಪನೆಯಾಗಿ ಅರ್ಧನಾರೀಶ್ವರ

Published:
Updated:

ಮನುಷ್ಯರು ತಮ್ಮ ಪತ್ನಿಯ ಬಗ್ಗೆ ಯಾವ ಭಾವವನ್ನೇ ತೋರಲಿ, ಅರ್ಧಾಂಗಿ ಎಂದು ಕರೆದೂ ಶೋಷಣೆಯನ್ನು ಮಾಡಲಿ ಅಥವಾ `ಜೋರೂ ಕಾ ಗುಲಾಮ್~ ಎಂದು ಜೋಕ್ ಮಾಡುತ್ತಲೇ ದಬ್ಬಾಳಿಕೆ ನಡೆಸಲಿ, ನಮ್ಮ ದೇವರುಗಳ ಬಗ್ಗೆ ಮಾತ್ರ ಹಾಗೆ ಹೇಳುವಂತಿಲ್ಲ.

 

ಹೆಂಡತಿಯ ಹೆಸರನ್ನೇ ತಮ್ಮ ಹೆಸರಿನ ಮೊದಲಲ್ಲೇ ಜೋಡಿಸಿಕೊಂಡ ದೇವರುಗಳು ಅದೆಷ್ಟೋ (ಸೀತಾರಾಮ, ಲಕ್ಷ್ಮೀನಾರಾಯಣ, ರಾಧಾಕೃಷ್ಣ, ಶಚೀಂದ್ರ ....... !! ) ಇನ್ನು ಭೋಲಾಶಂಕರನಂತೂ ಅರ್ಧನಾರೀಶ್ವರನಾಗಿ ತನ್ನ ಅರ್ಧಾಂಗಿಯನ್ನು ದೇಹದ ಭಾಗವಾಗಿಯೇ ಇರಿಸಿಕೊಂಡವನು.ಶಿವರಾತ್ರಿಯ ಆಚರಣೆಯ ಹಿಂದೆ ಶಿವ-ಶಿವೆಯರ ಅನ್ಯೋನ್ಯತೆಯ ಸಂದೇಶದ ಬಗೆಗಿನ ಚಿಂತನೆ ಇಂದಿನ ಸಾಮಾಜಿಕ ಸ್ಥಿತಿಗೆ ಉಪಯುಕ್ತವೇ. `ಅರ್ಧನಾರೀಶ್ವರ~ ಎಂಬ ಪರಿಕಲ್ಪನೆ ಭಾರತೀಯ `ಲಿಂಗ~ ಪರಿಕಲ್ಪನೆಗೆ ಕೇಂದ್ರ ಬಿಂದು ಎನ್ನಬಹುದು. ಲಿಂಗ ಸಾಮರಸ್ಯ, ಲಿಂಗ ಸಮಾನತೆಗಳು ಈ `ಅರ್ಧನಾರೀಶ್ವರ~ ತತ್ವದಲ್ಲಿ ಹಾಸುಹೊಕ್ಕಾಗಿವೆ.ಪುರುಷ-ಸ್ತ್ರೀ ತತ್ವಗಳು ಪ್ರತ್ಯೇಕ ಎನ್ನುವುದಕ್ಕಿಂತ ಒಂದಕ್ಕೊಂದು ಹೊಂದಿಕೊಳ್ಳುತ್ತ, ಒಂದನ್ನೊಂದು ಅವಲಂಬಿಸುತ್ತ ನಡೆಯುವುದು ಎಂಬುದನ್ನು  ಈ ಪರಿಕಲ್ಪನೆ ಸೂಚಿಸುತ್ತದೆ. ಪುರುಷ ಸ್ತ್ರೀಯನ್ನು ಶೋಷಿಸುವುದನ್ನು ವಿರೋಧಿಸುವ  ಮನುಷ್ಯತ್ವದ ಒಂದು ಭಾಗವಾಗಿ `ಸ್ತ್ರೀವಾದ~ವನ್ನು ಗುರುತಿಸಿದರೆ, `ಅರ್ಧನಾರೀಶ್ವರ~ ತತ್ವವನ್ನು ಸ್ತ್ರೀವಾದದ ಉತ್ಕೃಷ್ಟ ಉದಾಹರಣೆಯಾಗಿ ಪರಿಗಣಿಸಬಹುದು.ದ್ಯಾವಾಪೃಥ್ವಿ

`ಅರ್ಧನಾರೀಶ್ವರ~ ಕಲ್ಪನೆ ವೇದಗಳ ಕಾಲದಿಂದಲೂ ಬಳಕೆಗೆ ಬಂದದ್ದು. ವೇದದ ದ್ಯಾವಾಪೃಥ್ವೀ ಇಡೀ ವಿಶ್ವವನ್ನು ತಾಯಿ ಪೃಥ್ವಿ ಮತ್ತು ತಂದೆ ದ್ಯಾವಾ ಆಗಿ ಭಾಗ ಮಾಡುತ್ತದೆ. ಹಾಗೆಯೇ ಋಗ್ವೇದದ `ವಿಶ್ವರೂಪ~ ಎಂಬ ಎತ್ತು-ಹಸು ಎರಡೂ ಆಗಿರುವ ದೇವತೆ ತನ್ನಿಂದ ತಾನೇ ವಂಶಾಭಿವೃದ್ಧಿಯನ್ನು ಮಾಡುತ್ತದೆ ಎಂಬ ಕಲ್ಪನೆ ಉಲ್ಲೇಖಾರ್ಹ.ಬೃಹದಾರಣ್ಯಕ ಉಪನಿಷತ್ತಿನ ಒಂದೇ ದೇಹದ ಮನುಷ್ಯ ಸಾಂಗತ್ಯಕ್ಕಾಗಿ ತನ್ನ ದೇಹವನ್ನು ಇಬ್ಭಾಗ ಮಾಡಿ ನರ-ನಾರಿಯರ ಹುಟ್ಟಿಗೆ ಕಾರಣನಾಗುತ್ತಾನೆ. ಇಲ್ಲಿಂದಲೇ ಅರ್ಧನಾರೀಶ್ವರ ಕಲ್ಪನೆಯ ಹುಟ್ಟು.ಬೇರೆ ಬೇರೆ ವರ್ಣಗಳು, ಬೇರೆ ಬೇರೆ ಆಭರಣಗಳು, ವಿಭಿನ್ನ ದೇಹಚರ್ಯೆಗಳಿಂದ ಕೇಂದ್ರ ರೇಖೆಯಿಂದ ಬೇರ್ಪಟ್ಟರೂ ಒಂದೇ ವಿಗ್ರಹದಲ್ಲಿ ಅನ್ಯೋನ್ಯವಾಗಿ ನಿಲ್ಲುವ ಪ್ರಕೃತಿ -ಪುರುಷ ಅರ್ಧನಾರೀಶ್ವರರನ್ನು ಸಾಂಕೇತಿಸುತ್ತವೆ.ಅರ್ಧನಾರೀಶ್ವರ ಜೈವಿಕ ಅವಶ್ಯಕತೆಯನ್ನು ಪ್ರತಿನಿಧಿಸುತ್ತದೆ. ಅಂದರೆ ಸೃಷ್ಟಿಕ್ರಿಯೆಗಾಗಿ ಪುರುಷ-ಪ್ರಕೃತಿ ಇಬ್ಬರ ಸಮಾನ ಅಗತ್ಯತೆ. ಹಠಯೋಗದ ಸಾಧಕನಂತೂ ಪರಸ್ಪರಾವಲಂಬಿಯಾದ, ಭಾಗವಾಗದ ಪರಿಪೂರ್ಣ ಶಿವ ಶಕ್ತಿಯರನ್ನೇ ಗುರಿಯಾಗಿಟ್ಟು ಸಾಧಿಸುತ್ತಾನೆ.ಆ ಸಾಧನೆ ನಿರಾಕಾರ-ನಿರ್ಗುಣ-ಲಿಂಗ ರಹಿತ ಪರಶಿವನೆಡೆಗೆ ಒಯ್ಯುತ್ತದೆ. ಮನೋವೈಜ್ಞಾನಿಕವಾಗಿ ಪ್ರತಿಯೊಬ್ಬ ಪುರುಷನಲ್ಲಿ ಇರುವ `ಹೆಣ್ಣು~ ಗುಣ (ಭಾವನಾತ್ಮಕ ಶಕ್ತಿ) ಮತ್ತು ಪ್ರತಿಯೊಬ್ಬ ಸ್ತ್ರೀಯಲ್ಲಿ ಇರುವ `ಗಂಡು~ಗುಣ (ಪ್ರಾಯೋಗಿಕ ಚಿಂತನೆ)ಗಳನ್ನೂ ಅರ್ಧನಾರೀಶ್ವರ ತತ್ವ ಸಾಂಕೇತಿಕವಾಗಿ ಧ್ವನಿಸುತ್ತದೆ.ಸ್ತ್ರೀ-ಪುರುಷರು ಸಮಾನರು

ಸ್ತ್ರೀ ಇಲ್ಲದ ಹೊರತು ಪುರುಷ ಪರಿಪೂರ್ಣನಾಗಲಾರ ಎಂಬ ವಿವರಣೆಗಿಂತ ಸ್ತ್ರೀ-ಪುರುಷ ಇಬ್ಬರೂ ಸಮಾನರು ಎಂಬ  ಸಂದೇಶವನ್ನು ಆಧುನಿಕರಾದ ನಾವು ತೆಗೆದುಕೊಳ್ಳುವುದು ಅಗತ್ಯ.

 

ಧಾರ್ಮಿಕವಾಗಿ ಹಲವು ನಂಬಿಕೆ-ಪದ್ಧತಿಗಳು ಸಾಮಾಜಿಕವಾದ ನಡವಳಿಕೆಗಳಿಗೆ ತಳಹದಿಯಾಗುವಾಗ, `ಅರ್ಧನಾರೀಶ್ವರ~ ತತ್ವದಿಂದ ಲಿಂಗಾಧಾರಿತ ದೌರ್ಜನ್ಯ- ಶೋಷಣೆಗಳನ್ನು ವಿರೋಧಿಸುವಲ್ಲಿ ನಾವು ಸ್ಫೂರ್ತಿ ಪಡೆದುಕೊಳ್ಳಲು ಸಾಧ್ಯವಿಲ್ಲವೇ? ಮಾತು ಮಾತಿಗೆ ಸ್ತ್ರೀಯರ ನಡವಳಿಕೆಗಳಿಗೆ ಧಾರ್ಮಿಕ ಕಟ್ಟುಪಾಡುಗಳನ್ನು ವಿಧಿಸುವ ನಾವು, ನಮ್ಮ ದೇವರುಗಳು ಅವರ ಪತ್ನಿಯರನ್ನು ಓಲೈಸುವ, ಅವರ ಭಾವನೆಗಳಿಗೆ ಬೆಲೆ ಕೊಡುವ ರೀತಿಯಲ್ಲೇಕೆ ನಮ್ಮ ಕುಟುಂಬದ ಸ್ತ್ರೀಯರನ್ನು ನಡೆಸಿಕೊಳ್ಳುವುದಿಲ್ಲ?! ಹೆಂಡತಿಯನ್ನು ಹೊಡೆಯುವ -ಬಡಿಯುವ, ಅವರಿಗೆ ಆರ್ಥಿಕ-ಸಾಮಾಜಿಕ ನಿರ್ಧಾರಗಳಲ್ಲಿ ಯಾವುದೇ ಹಕ್ಕನ್ನು ನೀಡದಿರುವ ಅಸಂಖ್ಯಾತ ಪುರುಷರು ನಮ್ಮಲ್ಲಿದ್ದಾರೆ.  ಆಶ್ಚರ್ಯವೆಂದರೆ ಅವರೆಲ್ಲರೂ `ಉಮಾಮಹೇಶ್ವರ~ನನ್ನು ಶಿವರಾತ್ರಿಯಂದು ಭಕ್ತಿಯಿಂದ ಪೂಜಿಸುತ್ತಾರೆ. ಅದೇ ಪೂಜೆಯ ಸಲುವಾಗಿ ಮನೆಯ `ಶಕ್ತಿ~ ಸ್ವರೂಪಿಣಿಯ ದೈಹಿಕ-ಮಾನಸಿಕ ಶಕ್ತಿಯನ್ನು ಶೋಷಿಸುತ್ತಾರೆ! ಹಾಗಾಗದೇ ಶಕ್ತಿ ಸ್ವರೂಪಿಯಾದ `ಸ್ತ್ರೀ~ಯ ಮಾನಸಿಕ- ದೈಹಿಕ ಆರೋಗ್ಯ ವರ್ಧಿಸಬೇಕೆಂದರೆ ಶಿವರಾತ್ರಿಯ ಅರ್ಥಪೂರ್ಣ ಆಚರಣೆ `ಶಿವಪೂಜೆ~ `ಜಾಗರಣೆ~ಗಳಷ್ಟೇ ಆಗದೆ ಈ ಪರಿಕಲ್ಪನೆಗಳ ಚಿಂತನೆ, ಪ್ರಾಯೋಗಿಕ ಆಚರಣೆಗಳಲ್ಲಿ ಬದಲಾಗಬೇಕು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry