ಗುರುವಾರ , ಮೇ 6, 2021
31 °C

`ಲಿಗಾಡೆ ಸಾಧನೆ ಮಾದರಿಯಾಗಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಮೂಲತಃ ಮರಾಠಿ ಭಾಷಿಕರಾಗಿದ್ದರೂ ಕನ್ನಡದಲ್ಲಿ ಮಹಾಕಾವ್ಯ ರಚಿಸುವ ಮೂಲಕ ಡಾ. ಜಯದೇವಿ ತಾಯಿ ಲಿಗಾಡೆ ಮಾಡಿರುವ ಸಾಧನೆ ಎಲ್ಲರಿಗೂ ಮಾದರಿ ಆಗಬೇಕು ಎಂದು ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಹೇಳಿದರು.ಕನ್ನಡ ಸಾಹಿತ್ಯ ಸಂಘವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಜಯದೇವಿ ತಾಯಿ ಲಿಗಾಡೆ ಅವರ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಿಗಾಡೆ ಮೂರು ಮಕ್ಕಳ ತಾಯಿಯಾದ ನಂತರ ಕನ್ನಡ ಕಲಿತಿದ್ದರು. ಬಳಿಕ ಕನ್ನಡದಲ್ಲಿ ಮಹಾಕಾವ್ಯ ರಚಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೂ ಪಾತ್ರರಾದರು ಎಂದರು.ಕರ್ನಾಟಕ ಏಕೀಕರಣ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ನಡೆದ ಹೋರಾಟಕ್ಕೆ ಲಿಗಾಡೆ ಶಕ್ತಿ ತುಂಬಿದ್ದರು ಎಂದು ಬಣ್ಣಿಸಿದರು.

ಕನ್ನಡ ನಾಡು-ನುಡಿಗೆ ಲಿಗಾಡೆ ಅವರ ಸೇವೆ ಸ್ಮರಣೀಯ ಎಂದು ಉದ್ಘಾಟನೆ ನೆರವೇರಿಸಿದ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ನುಡಿದರು.

ಕನ್ನಡ ವಚನ ಹಾಗೂ ಕರ್ನಾಟಕದ ಚರಿತ್ರೆಯನ್ನು ಮರಾಠಿಗೆ ಅನುವಾದಿಸಿದ ಲಿಗಾಡೆ ಸಾಂಸ್ಕೃತಿಕ ರಾಯಭಾರಿ ಆಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯೂ ಆಗಿದ್ದರು. ಆದರೂ, ಅವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ಅವರ ಸ್ಮಾರಕ ಸಹ ನಿರ್ಮಿಸದೇ ಇರುವುದು ವಿಷಾದದ ಸಂಗತಿ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಬಸವರಾಜ ಬಲ್ಲೂರು ನುಡಿದರು.ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಡಾ. ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಚಿನ್ನದ ಪದಕ ಪ್ರಾಯೋಜಿಸಿರುವ ಗುತ್ತಿಗೆದಾರ ಗುರುನಾಥ ಕೊಳ್ಳೂರು ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಸಂಘದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಚನಶೆಟ್ಟಿ, ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಪಂಚಯ್ಯ ಸ್ವಾಮಿ ಉಪಸ್ಥಿತರಿದ್ದರು. ಜಗನ್ನಾಥ ಶಿವಯೋಗಿ ನಿರೂಪಿಸಿದರು. ಪ್ರಶಾಂತ್ ಹೊನ್ನಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.