ಶುಕ್ರವಾರ, ಮೇ 7, 2021
18 °C

ಲಿಚಿ! ವಾಹ್ ಏನ್ ರುಚಿ!

ಬಿ.ಸಿ. ಅರವಿಂದ್, ಭೂತನಕಾಡು Updated:

ಅಕ್ಷರ ಗಾತ್ರ : | |

ಮಾನವನ ಆಹಾರ ಪದ್ಧತಿಯಲ್ಲಿ ಹಣ್ಣುಗಳು ಸಮತೋಲಿತ ಪೋಷಕಾಂಶಗಳನ್ನು ಹೊಂದಿವೆ. ಇವುಗಳಿಂದಾಗಿ ಮನುಷ್ಯನು ಆರೋಗ್ಯ ಹಾಗೂ ಶಕ್ತಿಯುತವಾಗಿರಲು ಸಾಧ್ಯವಾಗುತ್ತದೆ. ಹಣ್ಣುಗಳು ನೋಡಲು ಆಕರ್ಷಕ, ತಿನ್ನಲು ಸ್ವಾದಮಯ ಹಾಗೂ ಜೀರ್ಣಗೊಳ್ಳಲು ಸುಲಭ. ಹೀಗಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ದೇಶದಲ್ಲಿ ಪ್ರಸ್ತುತ 25.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಬಾಳೆ, ಕಲ್ಲಂಗಡಿ, ಕರಬೂಜ, ಮಾವು, ಕಿತ್ತಳೆ, ಸಪೋಟ, ಸೇಬು, ಮೂಸಂಬಿ, ದ್ರಾಕ್ಷಿ, ಪರಂಗಿ, ಸೀತಾಫಲ, ದಾಳಿಂಬೆ, ಅನಾನಸ್ ಇವೆಲ್ಲಾ ಮುಖ್ಯವಾದ ಹಣ್ಣುಗಳು. ಸಾಮಾನ್ಯವಾಗಿ ಇದೆಲ್ಲದರ ರುಚಿಯನ್ನು ಬಹುತೇಕ ಜನರು ಸವಿದಿರುತ್ತಾರೆ.ಆದರೆ, ಕೆಲವೊಂದು ಹಣ್ಣುಗಳು ಬಹಳ ಅಪರೂಪ. ಇದರಲ್ಲಿ ಮ್ಯೋಂಗೋಸ್ಟಿನ್, ರಾಂಬುಟಾ ಮತ್ತು ಲಿಚಿ ಹಣ್ಣು ಸೇರಿವೆ. ಈ ಹಣ್ಣುಗಳ ರುಚಿ ಬಲ್ಲವರೇ ಬಲ್ಲವರು. ಹುಡುಕಿಕೊಂಡು ಹೋಗಿ ಮಾರುಕಟ್ಟೆಯಲ್ಲಿ ಖರೀದಿಸುವವರೂ ಇದ್ದಾರೆ. ಇದರಲ್ಲಿ ಅತ್ಯಂತ ಆಕರ್ಷಕ ಮತ್ತು ರುಚಿಯಾದ ಹಣ್ಣು ಎಂದರೆ ಲಿಚಿ ಎನ್ನಬಹುದು. ಇಲ್ಲೂ ಬೆಳೆಯಬಹುದು:

ಆದರೆ ಕೊಡಗು, ಚಿಕ್ಕಮಗಳೂರಿನ ಕೆಲವು ಭಾಗದಲ್ಲಿ ಇತ್ತೀಚೆಗೆ ಕೆಲ ರೈತರ ಮನೆ ಮುಂದೆ ನೆಟ್ಟ ಲಿಚಿ ಗಿಡಗಳು ಹಣ್ಣು ಬಿಟ್ಟಿವೆ. ಹಾಗಾಗಿ ಮಲೆನಾಡಿನಲ್ಲಿ ಸಹ ಈ ಗಿಡವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ, ಆದಾಯ ಗಳಿಸಬಹುದು ಎಂಬ ಆಶಾಭಾವನೆ ಮೂಡಿದೆ.ಕಾರ್ಮಿಕರ ಅಭಾವದಿಂದ ಮಲೆನಾಡಿನಲ್ಲಿ ಭತ್ತ ಬೆಳೆಯುವುದನ್ನು ಈಗ ನಿಲ್ಲಿಸಿದ್ದಾರೆ. ಅಂತಹವರು ಸಪೋಟ (ಚಿಕ್ಕು) ಮತ್ತು ಲಿಚಿಯನ್ನು ಬೆಳೆಯಬಹುದು. ಇದಕ್ಕೇನೂ ವಿಶೇಷ ಆರೈಕೆ ಬೇಡ. ಮೂಡಿಗೆರೆ ಸಮೀಪದ ದೇವಾನಾಥ್ ಎಸ್ಟೇಟ್‌ನ ಮಾಲೀಕ ಅಮರ್ ಈಗಾಗಲೇ ಸಪೋಟದ ಜೊತೆಗೆ 50 ಲಿಚಿ ಗಿಡವನ್ನು ಗದ್ದೆಯಲ್ಲಿ ನೆಟ್ಟು ಹುಲುಸಾಗಿ ಬೆಳೆಸಿದ್ದಾರೆ.ಲಿಚಿ ಸಮಶೀತೋಷ್ಣ ವಲಯದ ಪ್ರಮುಖ ಹಣ್ಣು ಬೆಳೆಗಳಲ್ಲೊಂದು. ಇದರ ವೈಜ್ಞಾನಿಕ ಹೆಸರು `ಲಿಚಿ ಚೈನೆನ್‌ಸಿಸ್~. ಇದು ಸಾಪಿಂಡೇಸಿಯೆ ಪ್ರಭೇದಕ್ಕೆ ಸೇರಿದೆ. ಹಣ್ಣು ಮಾಗಿದ ನಂತರ ಹೊರ ತೊಗಟೆಯನ್ನು ಬೇರ್ಪಡಿಸಿದಾಗ ಸಿಗುವ ಬಿಳಿಬಣ್ಣದ ಒಳ ತಿರುಳು ತುಂಬಾ ರುಚಿಕರ. ಎಲ್ಲರೂ ಇಷ್ಟಪಡುವಂಥ ಸ್ವಾದ.

 

ಒಳ್ಳೆಯ ಸುವಾಸನೆಯಿಂದ ಕೂಡಿದ್ದು ಸ್ಕ್ವಾಶ್ ಹಾಗೂ ಇತರೆ ಹಣ್ಣು ಆಧಾರಿತ ಪದಾರ್ಥಳನ್ನು ಮಾಡಬಹುದಾಗಿದೆ. ಅಲ್ಲದೆ ಉತ್ತಮ ಪೋಷಕಾಂಶಗಳಿಂದ ಕೂಡಿದ್ದು ಶೇ 10-12 ಸಕ್ಕರೆ, ಶೇ 0.2 ರಿಂದ 0.6 ರಷ್ಟು ಹುಳಿ, ಪ್ರೋಟೀನ್, ವಿಟಮಿನ್, ಪೆಕ್ಟಿನ್ ಹೊಂದಿದೆ.ಲಿಚಿ ಹಣ್ಣಿನ ಮೂಲ ದಕ್ಷಿಣ ಚೀನಾದ ಓಮನ್ ಪ್ರಾಂತ. ಆದರೆ ಇದನ್ನು ಭಾರತ, ಮ್ಯೋನ್ಮಾರ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಹವಾಯಿ, ಥಾಯ್ಲೆಂಡ್, ಹಾಂಕಾಂಗ್ ಮುಂತಾದೆಡೆ ಬೆಳೆಸುತ್ತಿದ್ದಾರೆ. ಚೀನಾ ಬಿಟ್ಟರೆ ಪ್ರಪಂಚದ್ಲ್ಲಲೇ ಅತಿ ಹೆಚ್ಚು ಲಿಚಿ ಬೆಳೆಯುವ ದೇಶ ಭಾರತ. ನಮ್ಮಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಅಸ್ಸಾಂ, ತ್ರಿಪುರ, ಒರಿಸ್ಸಾ, ತಮಿಳುನಾಡು ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಬೆಳೆಯುತ್ತಿದ್ದಾರೆ.

ಈ ಹಣ್ಣಿಗೆ ಸಮಶೀತೋಷ್ಣ ವಲಯದ ವಾತಾವರಣ ಉತ್ತಮ. ಅತೀ ಹೆಚ್ಚು ಬಿಸಿಲು ಹಾಗೂ ಗಾಳಿ ಇರುವ ಪ್ರದೇಶ ಸೂಕ್ತವಲ್ಲ. ಗಿಡ ಹೂವು ಬಿಡುವ ಹಂತದಲ್ಲಿ 15-20 ಸೆಂಟಿಗ್ರೇಡ್ ಹಾಗೂ ಹಣ್ಣು ಮಾಗುವಾಗ 30-35 ಡಿ ಸೆ ಉಷ್ಣಾಂಶ ಹಾಗೂ ವಾತಾವರಣದಲ್ಲಿ ಆರ್ದ್ರತೆಯ ಅವಶ್ಯಕತೆ ಇದೆ. ಹುಳಿ ಹಾಗೂ ಇತರೆ ಮಣ್ಣಲ್ಲೂ ಬೆಳೆಸಬಹುದು. ಫಲವತ್ತಾದ ಕಡೆ ಉತ್ತಮ ಬೆಳೆ ಪಡೆಯಬಹುದು.ಬೆಳೆಸುವ ವಿಧಾನ

ಲಿಚಿ ಗಿಡದ ಸಸಿಗಳನ್ನು ಬೀಜದಿಂದ ಬೆಳೆಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಗೂಟಿ ವಿಧಾನ (Air layering) ಹಾಗೂ ಮೃದು ಕಾಂಡ ಕಡ್ಡಿಗಳಿಂದ ಮಾಡಿದ ಸಸಿಗಳನ್ನು ನಾಟಿಗೆ ಉಪಯೋಗಿಸುತ್ತಿದ್ದಾರೆ. 3 ಘನ ಅಡಿ ಗಾತ್ರದ ಗುಂಡಿಗಳನ್ನು ತೆಗೆದು ಗಿಡದಿಂದ ಗಿಡಕ್ಕೆ ಹಾಗೂ ಸಾಲಿನಿಂದ ಸಾಲಿಗೆ 8 ಅಥವಾ 10 ಮೀ. ಅಂತರ ಕೊಡಬೇಕು. ನಾಟಿಗೆ ಮುನ್ನ ಕೊಟ್ಟಿಗೆ ಗೊಬ್ಬರ ಕೊಡಬೇಕು.ಮಳೆಗಾಲದಲ್ಲಿ ಅಥವಾ ನಂತರ ಸಸಿ ನೆಟ್ಟು ನೀರು ಹಾಯಿಸಬೇಕು. ಉತ್ತಮ ಗುಣಮಟ್ಟದ ಹಣ್ಣು ಪಡೆಯಲು ಪೋಷಕಾಂಶಗಳ ಅವಶ್ಯಕತೆಯಿದೆ. ಆದ್ದರಿಂದ ಈ ಗಿಡಕ್ಕೆ ನಾಟಿ ಮಾಡಿದ 5 ವರ್ಷದವರೆಗೆ ಶಿಫಾರಿತ ಪ್ರಮಾಣದ ಪೋಕಾಂಶ  ಕೊಡಬೇಕು. ಪ್ರತಿ ವರ್ಷ ಪ್ರತಿ ಗಿಡಕ್ಕೆ 30-40 ಕಿಲೊ ಕೊಟ್ಟಿಗೆ ಗೊಬ್ಬರ ಹಾಕಬೇಕು. ಗೂಟಿ ಅಥವಾ ಕಡ್ಡಿಗಳಿಂದ ಬೆಳೆಸಿದ ಗಿಡಗಳು ನಾಟಿಯಾದ 3-4 ವರ್ಷಗಳ ನಂತರ ಹೂವು ಬಿಡುತ್ತವೆ.ಆದರೆ ಬೀಜದಿಂದ ಬೆಳೆದ ಗಿಡ ಹೂ ಬಿಡಲು 8-12 ವರ್ಷ ಕಾಯಬೇಕು. ಜನವರಿ- ಫೆಬ್ರುವರಿಯಲ್ಲಿ ಹೂ ಬಿಟ್ಟು ಏಪ್ರಿಲ್ ನಲ್ಲಿ ಹಣ್ಣು ಕಟಾವಿಗೆ ಬರುತ್ತದೆ. ಮಲೆನಾಡಿನಲ್ಲಿ ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಹೂ ಬಿಟ್ಟು ಡಿಸೆಂಬರ್‌ನಲ್ಲಿ ಹಣ್ಣು ಕಟಾವಿಗೆ ಬರುತ್ತದೆ.  ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹಣ್ಣುಗಳಿರುವುದಿಲ್ಲ. ಹಾಗಾಗಿ, ಬೇಡಿಕೆ ಜಾಸ್ತಿ ಇದ್ದು ಒಳ್ಳೆಯ ಬೆಲೆ ಸಿಗುತ್ತದೆ.ಮಾಗುವಾಗ ಏಣುಗಳು ಸಮವಾಗಿ ಹಣ್ಣಿನ ಮೆಲ್ಭಾಗ ಮೃದುವಾಗುತ್ತದೆ ಹಾಗೂ ಹಣ್ಣಿನ ಬಣ್ಣ ಹಸಿರಿನಿಂದ ತಿಳಿ ಕೆಂಪಾಗುತ್ತದೆ. ನಂತರ ಹಣ್ಣುಗಳನ್ನು ಗೊನೆ ಸಮೇತ ಕಟಾವು ಮಾಡಬಹುದು. ಪ್ರತೀ ಗಿಡದಿಂದ ಸುಮಾರು 80-150 ಕಿಲೊ ಇಳುವರಿ ಸಿಗುತ್ತದೆ.

 

ಆದರೆ ಹಣ್ಣುಗಳನ್ನು ಹೆಚ್ಚೆಂದರೆ 5 ವಾರದ ವರೆಗೆ ಪಾಲಿಥೀನ್ ಚೀಲದಲ್ಲಿ 1.6-7.2 ಡಿ ಸೆ ಉಷ್ಣಾಂಶದಲ್ಲಿ ಶೇಖರಣೆ ಮಾಡಬಹುದಾಗಿದೆ. ಮಾಹಿತಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತೋಟಗಾರಿಕೆ ಕಾಲೇಜಿನ ಡಾ. ಡಿ. ತಿಪ್ಪೇಶ ಅವರನ್ನು ಸಂಪರ್ಕಿಸಬಹುದು. ದೂರವಾಣಿ:08263 228 152.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.