ಲಿಡ್ಕರ್ ಅಭಿವೃದ್ಧಿಗೆ ವಿವಿಧ ಯೋಜನೆ: ವರ್ಮಾ

7

ಲಿಡ್ಕರ್ ಅಭಿವೃದ್ಧಿಗೆ ವಿವಿಧ ಯೋಜನೆ: ವರ್ಮಾ

Published:
Updated:

ಗುಲ್ಬರ್ಗ: ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ವನ್ನು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕು, ಲಿಡ್ಕರ್ ಉತ್ಪನ್ನಗಳ ಮೌಲ್ಯಾಧಾರಿತ ತೆರಿಗೆಯನ್ನು (ವ್ಯಾಟ್) ಶೇ.16ರಿಂದ 5ಕ್ಕೆ ಇಳಿಸಬೇಕು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ, ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ (ಶೂ, ಬೆಲ್ಟ್, ಚೀಲ...) ಲಿಡ್ಕರ್ ಉತ್ಪನ್ನಗಳನ್ನು ಖರೀದಿಸಲು ಆದೇಶ ನೀಡಬೇಕು ಎಂದು ನಿಗಮದ ಅಧ್ಯಕ್ಷ ರಾಜೇಂದ್ರ ವರ್ಮಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಸೂಪರ್ ಮಾರ್ಕೆಟ್‌ನ ಜನತಾ ಬಜಾರ್ ಕಟ್ಟಡದಲ್ಲಿರುವ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, `ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸುವ ಭರವಸೆ ನೀಡಿದ್ದಾರೆ~ ಎಂದರು.ವರ್ಷದ ಹಿಂದೆ ನಷ್ಟದಲ್ಲಿದ್ದ ನಿಗಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವಧಿಯಲ್ಲಿ 15 ಕೋಟಿ ರೂಪಾಯಿ ಮತ್ತು ಡಿವಿಎಸ್ ಅವಧಿಯಲ್ಲಿ ನಾಲ್ಕು ಕೋಟಿ ರೂಪಾಯಿ ಅನುದಾನವು ಸರ್ಕಾರದಿಂದ ದೊರೆತಿದೆ. ಪ್ರಸ್ತುತ ತಿಂಗಳಿಗೆ 25 ಲಕ್ಷ ರೂಪಾಯಿ ಲಾಭದಲ್ಲಿದೆ. ಈ ಲಾಭವನ್ನು ತಿಂಗಳಿಗೆ 50 ಲಕ್ಷದಿಂದ ಕೋಟಿ ರೂಪಾಯಿ ತನಕ ಏರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ನಿಗಮದ ವತಿಯಿಂದ 40 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಸ್ವಉದ್ಯೋಗ ಕೈಗೊಳ್ಳುವ ಚರ್ಮ ಕುಶಲಕರ್ಮಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದ ಅವರು, ಜಿಲ್ಲಾಡಳಿತ ಸುಮಾರು 10 ಎಕರೆ ಜಮೀನು ಒದಗಿಸಿದಲ್ಲಿ ಚರ್ಮೋದ್ಯಮ ಸಂಬಂಧಿತ ಕೈಗಾರಿಕೆಯನ್ನು ಗುಲ್ಬರ್ಗದಲ್ಲಿ ಆರಂಭಿಸಲು ನಾವು ಸಿದ್ಧರಿದ್ದೇವೆ. ನಿಗಮದ ಜಾಗದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಕುರಿತು ನಿರ್ಣಯ ಅಂಗೀಕರಿಸಿದ್ದೇವೆ ಎಂದರು.ಮಾರಾಟ ಹೆಚ್ಚಳಕ್ಕೆ ವಿವಿಧ ಕ್ರಮ ಕೈಗೊಂಡಿದ್ದು, ಗ್ರಾಹಕರಿಗೆ ಸೂಕ್ತವಾಗಿ ಸ್ಪಂದಿಸದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಉತ್ಪನ್ನಗಳ ಪ್ರಚಾರ ನಿಮಿತ್ತ ಮಾರಾಟ ಮಳಿಗೆ ಹೊಂದಿರುವ ರಾಜ್ಯದ 24 ಜಿಲ್ಲೆಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಹೇಳಿದರು.ಇದಕ್ಕೆ ಮೊದಲು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮಾರಾಟ ಮಳಿಗೆ ತನಕ ಜಾಥಾ ನಡೆಯಿತು. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕ ಹೊನ್ನೂರಪ್ಪ, ರಮೇಶ್ ಕುಸಮನಹಳ್ಳಿ, ಎಸ್.ಜಿ. ಭಾರತಿ, ದಶರಥ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry