ಸೋಮವಾರ, ಮೇ 23, 2022
30 °C

ಲಿಬಿಯಾ: ಟ್ಯಾಂಕ್‌ಗಳೇ ಈಗ ದಾಳಿಯ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಟ್ರಿಪೋಲಿ/ ವಾಷಿಂಗ್ಟನ್ (ಪಿಟಿಐ): ಅಮೆರಿಕ ನೇತೃತ್ವದಲ್ಲಿ ಮಿತ್ರಪಡೆಗಳು ಲಿಬಿಯಾದಲ್ಲಿ ಇದೀಗ ತಮ್ಮ ದಾಳಿಯ ಗುರಿಯನ್ನು ಬದಲಿಸಿಕೊಂಡಿದ್ದು, ಟ್ಯಾಂಕ್‌ಗಳು, ಪದಾತಿದಳಗಳನ್ನೇ ಗುರಿಯಾಗಿ ಇಟ್ಟುಕೊಂಡು ವಾಯು ದಾಳಿ ಆರಂಭಿಸಿವೆ. ಲಿಬಿಯಾ ವಿರುದ್ಧ ಇದು ಯುದ್ಧವಲ್ಲ ಎಂದು ಅಮೆರಿಕ ಹೇಳಿಕೊಂಡಿದ್ದರೆ, ಈ ಹೋರಾಟ ವಾರಗಟ್ಟಲೆ ಮುಂದುವರಿಯಬಹುದು ಎಂದು ಫ್ರಾನ್ಸ್‌ನ ವಿದೇಶಾಂಗ ಸಚಿವ ಅಲೈನ್ ಜುಪ್ಪೆ ಎಚ್ಚರಿಸಿದ್ದಾರೆ.

ಲಿಬಿಯಾದ ವಾಯುಪಡೆಯ ಶಕ್ತಿ ಸಂಪೂರ್ಣ ದಮನವಾಗಿದೆ. ಇದೀಗ ಲಿಬಿಯಾ ಆಗಸದಲ್ಲಿ ಹಾರಾಡುತ್ತಿರುವುದು ಏನಿದ್ದರೂ ಅಮೆರಿಕ ಮತ್ತು ನ್ಯಾಟೊ ಯುದ್ಧ ವಿಮಾನಗಳು ಮಾತ್ರ. ಕಾರ್ಯಾಚರಣೆಯ ಎರಡನೇ ಹಂತದಲ್ಲಿ ಇನ್ನು ಮುಂದೆ ಗಡಾಫಿಯ ಟ್ಯಾಂಕ್‌ಗಳು, ಸಂಚಾರಿ ರಾಕೆಟ್ ಲಾಂಚರ್‌ಗಳು, ಭಾರಿ ಫಿರಂಗಿಗಳು ಮತ್ತು ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಗುತ್ತದೆ ಎಂದು ಬ್ರಿಟನ್‌ನ ಏರ್ ವೈಸ್ ಮಾರ್ಷಲ್ ಗ್ರೆಗ್ ಬೆಗ್‌ವೆಲ್ ತಿಳಿಸಿದ್ದಾರೆ.

ಗಡಾಫಿಗೆ ಹೊರ ದೇಶಗಳಿಂದ ಶಸ್ತ್ರಾಸ್ತ್ರಗಳು ಪೂರೈಕೆಯಾಗದಂತೆ ನೋಡಿಕೊಳ್ಳಲು ಲಿಬಿಯಾ ಕಡಲ ತೀರದಲ್ಲಿ ನ್ಯಾಟೊ ಪಡೆಗಳು ಗಸ್ತು ತಿರುಗುತ್ತಿವೆ. ಕಾರ್ಯಾಚರಣೆ ಇದೀಗ ಆರನೇ ದಿನಕ್ಕೆ ಕಾಲಿಟ್ಟಿದ್ದು, ವಾರಗಳಲ್ಲ, ತಿಂಗಳುಗಟ್ಟಲೆ ಈ ಕಾರ್ಯಾಚರಣೆ ಮುಂದುವರಿಯಬಹುದು ಎಂದು ಫ್ರಾನ್ಸ್‌ನ ವಿದೇಶಾಂಗ ಸಚಿವ ಅಲೈನ್ ಜುಪ್ಪೆ ಬ್ರುಸೆಲ್ಸ್‌ನಲ್ಲಿ ತಿಳಿಸಿದ್ದಾರೆ.

ರಾಜಧಾನಿ ಟ್ರಿಪೋಲಿಯನ್ನೇ ಗುರಿಯಾಗಿ ಇಟ್ಟುಕೊಂಡು ಬುಧವಾರ ರಾತ್ರಿ ವಾಯುದಾಳಿ ನಡೆಸಲಾಗಿದೆ. ಹಗಲು ಹೊತ್ತು ಸಹ ದಾಳಿ ಮುಂದುವರಿದಿದೆ. ಪಶ್ಚಿಮದ ಮಿಸುರಟ ಮತ್ತು ಪೂರ್ವದ ಅದಜಾಬಿಯಾದಲ್ಲೂ ದಾಳಿ ಮುಂದುವರಿದಿದೆ. ಟ್ರಿಪೋಲಿಯಲ್ಲಿ ಟೊಮಹಾಕ್ ಕ್ಷಿಪಣಿಗಳಿಂದಲೇ ದಾಳಿ ನಡೆಯುತ್ತಿದೆ. ನಗರದಲ್ಲಿ ಒಟ್ಟು ಏಳು ಸ್ಫೋಟಗಳು ಕೇಳಿಸಿವೆ ಎಂದು ಬಿಬಿಸಿ ವರದಿ ಮಾಡಿದೆ.

ಇದು ಲಿಬಿಯಾ ವಿರುದ್ಧ ಯುದ್ಧವಲ್ಲ: ಅಮೆರಿಕ: ಲಿಬಿಯಾದಲ್ಲಿ ನಡೆಯುತ್ತಿರುವುದು ಯುದ್ಧವಲ್ಲ, ಬದಲಿಗೆ ವಿಶ್ವಸಂಸ್ಥೆಯ ವಿಮಾನ ಹಾರಾಟ ನಿಷೇಧದ ನಿರ್ಣಯ ಪಾಲನೆಯಷ್ಟೇ ಎಂದು ಅಮೆರಿಕ ತಿಳಿಸಿದೆ. ‘ವಿಶ್ವಸಂಸ್ಥೆಯ ನಿರ್ಣಯ ಅತ್ಯಂತ ಸ್ಪಷ್ಟವಾಗಿದೆ. ಲಿಬಿಯಾ ಜನರ ರಕ್ಷಣೆ, ಮಾನವೀಯ ಬಿಕ್ಕಟ್ಟು ನಿವಾರಣೆ, ವಿಮಾನ ಹಾರಾಟ ನಿಷೇಧ ಪಾಲನೆಗಳನ್ನು ನಾವು ಜಾರಿಗೆ ತರುತ್ತಿದ್ದೇವೆ. ಇದು ಲಿಬಿಯಾ ಮೇಲೆ ನಡೆಸುತ್ತಿರುವ ಯುದ್ಧವಲ್ಲ’ ಎಂದು ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಬೆನ್ ರ್ಹೋಡ್ಸ್ ತಿಳಿಸಿದರು.

‘ಇದೊಂದು ರಕ್ಷಣಾತ್ಮಕ ಕಾರ್ಯಾಚರಣೆಯೇ ಹೊರತು ಯುದ್ಧವಲ್ಲ. ಯುದ್ಧವಾದ್ದರೆ ಸೇನಾಪಡೆಗಳೂ ಅದರಲ್ಲಿ  ತೊಡಗಿಕೊಳ್ಳಬೇಕಿತ್ತು’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಕ್ ಟೋನರ್ ತಿಳಿಸಿದ್ದಾರೆ.

ಗಡಾಫಿ ಕೈಯಲ್ಲೇ ಬಿಕ್ಕಟ್ಟುಅಂತ್ಯದ ಮಂತ್ರ:  ಗಡಾಫಿ ಅವರು ಅಧಿಕಾರ ತ್ಯಜಿಸಿದ ತಕ್ಷಣ ಲಿಬಿಯಾದಲ್ಲಿ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಹೀಗಾಗಿ ಬಿಕ್ಕಟ್ಟನ್ನು ಬೇಗ ಕೊನೆಗೊಳಿಸುವ ಮಂತ್ರ ಗಡಾಫಿ ಅವರ ಕೈಯಲ್ಲೇ ಇದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ. ‘ಗಡಾಫಿ ಮತ್ತು ಅವರ ಬೆಂಬಲಿಗರು ಕೇವಲ ಯುದ್ಧವಿರಾಮ ಘೋಷಿಸಿದರಷ್ಟೇ ಸಾಲದು, ಎಲ್ಲಾ ನಗರಗಳಿಂದ ತಮ್ಮ ಪಡೆಗಳನ್ನು ಹಿಂದೆಗೆದುಕೊಳ್ಳುವುದರ ಜತೆಗೆ ಅಧಿಕಾರವನ್ನು ಬಿಟ್ಟುಕೊಡಬೇಕು. ಹೊಸ ಸರ್ಕಾರದಲ್ಲಿ ಗಡಾಫಿ ಇರಬಾರದು’ ಎಂದು ಕ್ಲಿಂಟನ್ ಅವರು ಹೇಳಿದ್ದಾರೆ.

ಈ ಮಧ್ಯೆ, ಮುಸ್ಲಿಂ ಜಗತ್ತಿನ ಜತೆಗಿನ ಅಮೆರಿಕದ ಸಂಬಂಧ ಸುಧಾರಣೆಯಲ್ಲಿ ಒಬಾಮ ಅವರು ಎಚ್ಚರಿಕೆಯ ಮತ್ತು ಯೋಜಿತ ನಿರ್ಧಾರವನ್ನೇ ಕೈಗೊಂಡಿದ್ದಾರೆ ಎಂದು ಹೇಳುವ ಮೂಲಕ ಹಿರಿಯ ಡೆಮಾಕ್ರಟ್ ನಾಯಕರು ಗಡಾಫಿ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಆದೇಶಿಸಿರುವ ಒಬಾಮ ಅವರ ಕ್ರಮವನ್ನು ಸಮರ್ಥಿಸಿದ್ದಾರೆ. ಸೆನೆಟ್ ಸದಸ್ಯ ಕಾರ್ನ್ ಲೆವಿನ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಅಂದಾಜು ಕಷ್ಟ: ಲಿಬಿಯಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಫಲಶ್ರುತಿಯನ್ನು ಈಗಲೇ ಅಂದಾಜಿಸುವುದು ಕಷ್ಟ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.‘ಗಡಾಫಿ ಪಡೆಗಳು ವಿಮಾನಗಳ ಮೂಲಕ ತಮ್ಮ ನಾಗರಿಕರನ್ನು ಕೊಲ್ಲಬಾರದು ಎಂಬುದು ನಮ್ಮ ಕಾರ್ಯಾಚರಣೆಯ ಉದ್ದೇಶ. ಆದರೆ ಬೆಂಘಾಝಿ ಸಮೀಪ ಹೆದ್ದಾರಿಯಲ್ಲೇ ಗುಂಡಿನ ಚಕಮಕಿ ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಈ ಕಾರ್ಯಾಚರಣೆ ಯಾವ ರೀತಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಈಗಲೇ ಅಂದಾಜಿಸಲಾಗದು ಎಂದು ಅವರು ಹೇಳಿದ್ದಾರೆ.

ಮುಂದುವರಿದ ದಾಳಿ: ಗಡಾಫಿ ಪಡೆಗಳು ಈಗಲೂ ಮುಗ್ಧ ಜನರ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿವೆ ಎಂದು ಈ ಸೇನಾ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಅಡ್ಮಿರಲ್ ಗೆರಾಲ್ಡ್ ಪಿ. ಹ್ಯೂಬರ್ ಅವರು ಪೆಂಟಗನ್ ವರದಿಗಾರರಿಗೆ ಟೆಲಿಕಾನ್‌ಫರೆನ್ಸ್ ಮೂಲಕ ತಿಳಿಸಿದ್ದಾರೆ.

ನ್ಯಾಟೊ ಪಾತ್ರ ದೊಡ್ಡದು: ಮುಂದಿನ ಕೆಲವು ದಿನಗಳಲ್ಲಿ ಲಿಬಿಯಾ ಮೇಲಿನ ಕಾರ್ಯಾಚರಣೆಯ ನೇತೃತ್ವವನ್ನು ಅಮೆರಿಕವು ನ್ಯಾಟೊ ಪಡೆಗಳಿಗೆ ಬಿಟ್ಟುಕೊಡಲಿದ್ದು, ಈ ವಿಚಾರದಲ್ಲಿ ನ್ಯಾಟೊ ಬಹು ಮುಖ್ಯವಾದ ಪಾತ್ರ ನಿರ್ವಹಿಸುವುದಕ್ಕಿದೆ ಎಂದು ಒಬಾಮ ಆಡಳಿತ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ನ್ಯಾಟೊ ವಹಿಸಬೇಕಾದ ಪಾತ್ರದ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ ಎಂದು ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಬೆನ್ ರೋಡ್ಸ್ ತಿಳಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಅರಬ್ ಜಗತ್ತು ಪಾಲ್ಗೊಂಡ ರೀತಿಗೆ ಅಮೆರಿಕ ತೃಪ್ತಿ ವ್ಯಕ್ತಪಡಿಸಿದೆ.

 

ಕಾರ್ಯಾಚರಣೆಯಲ್ಲಿ ಭಿನ್ನಾಭಿಪ್ರಾಯ ಇದ್ದಾಗ್ಯೂ ನ್ಯಾಟೊ ಪಡೆಗಳು ಲಿಬಿಯಾ ಕರಾವಳಿಯಲ್ಲಿ ಪಹರೆ ನಡೆಸುವುದನ್ನು ಮುಂದುವರಿಸಿವೆ.ಕಾರ್ಯಾಚರಣೆಯಲ್ಲಿ ಜರ್ಮನಿ ಪಾಲ್ಗೊಳ್ಳದೆ ಇರುವುದಕ್ಕೆ ಅಮೆರಿಕದ ಬೇಸರ ಪಟ್ಟಿಲ್ಲ ಎಂದು ಹೇಳಿದ ಅವರು, ಭಾರತ, ಚೀನಾ, ಬ್ರೆಜಿಲ್, ರಷ್ಯಗಳಂತೆ ಜರ್ಮನಿ ಸಹ ತನ್ನ ವಿರೋಧ ವ್ಯಕ್ತಪಡಿಸಿದೆಯಷ್ಟೇ, ಆದರೆ ಜಗತ್ತಿನ ಹಲವು ರಾಷ್ಟ್ರಗಳು ಈ ಕಾರ್ಯಾಚರಣೆಗೆ ಬೆಂಬಲ ಸೂಚಿಸಿವೆ ಎಂದು ಅವರು ಹೇಳಿದರು.ಈ ಕಾರ್ಯಾಚರಣೆಯಲ್ಲಿ ಅರಬ್ ಜಗತ್ತು ಪಾಲ್ಗೊಂಡ ರೀತಿಗೆ ಅಮೆರಿಕ ತೃಪ್ತಿ ವ್ಯಕ್ತಪಡಿಸಿದೆ.ಮತ್ತೊಂದೆಡೆ ಲಿಬಿಯಾ ವಿಚಾರದಲ್ಲಿ ಒಬಾಮ ಆಡಳಿತದ ನೀತಿ ಏನು ಎಂಬ ಪ್ರಶ್ನೆಯನ್ನು ಜನಪ್ರತಿನಿಧಿ ಸಭೆಯ ಸ್ಪೀಕರ್ ಜಾನ್ ಬೋಹ್ನೆರ್ ಕೇಳಿದ್ದಾರೆ.

ಲಿಬಿಯಾದಲ್ಲಿ ನಡೆಸುತ್ತಿರುವ ಈ ಕಾರ್ಯಾಚರಣೆಯಿಂದ ಅಮೆರಿಕ ಗಳಿಸುವುದಾದರೂ ಏನನ್ನು? ಕಾರ್ಯಾಚರಣೆ ಬಗ್ಗೆ ದೇಶದ ಜನತೆಗೆ ಏಕೆ ಸಮರ್ಪಕ ಮಾಹಿತಿ ಕೊಟ್ಟಿಲ್ಲ ಎಂದು ಅವರು ಒಬಾಮ ಅವರಿಗೆ ಬರೆದ ಪತ್ರದಲ್ಲಿ ಕೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.