ಲಿಬಿಯಾ ವಿರುದ್ಧ ಅಮೆರಿಕ ದಿಗ್ಬಂಧನ

7

ಲಿಬಿಯಾ ವಿರುದ್ಧ ಅಮೆರಿಕ ದಿಗ್ಬಂಧನ

Published:
Updated:

ಕೈರೊ(ಪಿಟಿಐ): ಪ್ರತಿಭಟನಾಕಾರರನ್ನು ಅಮಾನುಷವಾಗಿ ಹತ್ತಿಕ್ಕುತ್ತಿರುವ ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರನ್ನು ಪದಚ್ಯುತಿಗೊಳಿಸುವ ಯತ್ನವನ್ನು  ಅಂತರರಾಷ್ಟ್ರೀಯ ಸಮುದಾಯ ಶನಿವಾರ ತೀವ್ರಗೊಳಿಸಿದೆ. ಈ ಪ್ರಯುಕ್ತ ಅಮೆರಿಕವು ಲಿಬಿಯಾದಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚಿದೆ. ಅಲ್ಲದೇ ಲಿಬಿಯಾ ಆಡಳಿತ ವಿರುದ್ಧ ಏಕಪಕ್ಷೀಯವಾಗಿ ದಿಗ್ಬಂಧನ ಹೇರಿದೆ ಮತ್ತು ಗಡಾಫಿ ಹಾಗೂ ಆಪ್ತರಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಸ್ಥಗಿತಗೊಳಿಸಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ‘ಮುಅಮ್ಮರ್ ಗಡಾಫಿ ನೇತೃತ್ವದ ಸರ್ಕಾರ ಅಂತರರಾಷ್ಟ್ರೀಯ ನಿಯಮಗಳನ್ನು ಮತ್ತು ಸಾಮಾನ್ಯ ಸಭ್ಯತೆಗಳನ್ನು ಉಲ್ಲಂಘಿಸಿದೆ. ಇದಕ್ಕೆಲ್ಲಾ ಅವರೇ ಜವಾಬ್ದಾರರಾಗಿರುತ್ತಾರೆ’ ಎಂದು ಹೇಳಿಕೆಯಲ್ಲಿ  ತಿಳಿಸಿದ್ದಾರೆ.ಯುರೋಪಿಯನ್ ಒಕ್ಕೂಟದಿಂದ ದಿಗ್ಭಂಧನ ಶೀಘ್ರದಲ್ಲಿ- (ಬರ್ಲಿನ್ ವರದಿ): ಲಿಬಿಯಾದ ಸರ್ವಾಧಿಕಾರಿ ಗಡಾಫಿ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 27 ರಾಷ್ಟ್ರಗಳ ಯುರೂಪಿಯನ್ ಒಕ್ಕೂಟವು ಲಿಬಿಯಾ ವಿರುದ್ಧ ದಿಗ್ಬಂಧನ ಹೇರುವ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಎಲ್ಲಾ ಸದಸ್ಯ ರಾಷ್ಟ್ರಗಳು ಮುಂದಿನ ವಾರ ಒಪ್ಪಂದಕ್ಕೆ ಬರುವ ನಿರೀಕ್ಷೆ ಇದೆ.ನಿರ್ಣಯ ಅಂಗೀಕಾರ: ಈ ಮಧ್ಯೆ, ವಿಶ್ವಸಂಸ್ಥೆಯ ಅತ್ಯುನ್ನತ ಮಾನವ ಹಕ್ಕು ಮಂಡಳಿಯಿಂದ ಲಿಬಿಯಾವನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡುವ ನಿರ್ಣಯವನ್ನು ಮಂಡಳಿ ಶನಿವಾರ ಸರ್ವಾನುಮತದಿಂದ ಅಂಗೀಕರಿಸಿದೆ.ಅಲ್ಲದೇ, ಗಡಾಫಿ  ಆಡಳಿತದಲ್ಲಿ ನಡೆದ ಹಿಂಸಾಚಾರ ಕುರಿತಂತೆ ಸ್ವತಂತ್ರ ತನಿಖೆ ನಡೆಸುವ ನಿರ್ಧಾರವನ್ನೂ ಅದು ಕೈಗೊಂಡಿದೆ.47 ಸದಸ್ಯರಾಷ್ಟ್ರಗಳನ್ನು ಹೊಂದಿರುವ ಈ ಮಂಡಳಿಯು ಲಿಬಿಯಾವನ್ನು ಉಚ್ಚಾಟಿಸುವಂತೆ ಮಾಡಿರುವ ಶಿಫಾರಸು ಜಾರಿಗೆ ಬರಬೇಕಾದರೆ 192 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಬೇಕು.‘ಧೈರ್ಯದ ನಿರ್ಧಾರ ಕೈಗೊಳ್ಳಿ’: ದೇಶದಲ್ಲಿರುವ ಗಡಾಫಿ ಸರ್ವಾಧಿಕಾರವನ್ನು ಖಂಡಿಸಿರುವ ವಿಶ್ವಸಂಸ್ಥೆಯ ಲಿಬಿಯಾ ರಾಯಭಾರಿ ಮಹಮ್ಮದ್ ಶಲ್ಗಾಂ, ಲಿಬಿಯಾವನ್ನು ರಕ್ಷಿಸಲು  ‘ಧೈರ್ಯದ ನಿರ್ಧಾರ’ವನ್ನು  ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡಿದ್ದಾರೆ.ಶುಕ್ರವಾರ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಶಲ್ಗಾಂ, ‘ಲಿಬಿಯಾದಲ್ಲಿ ಗಡಾಫಿ ಮತ್ತು ಅವರ ಪುತ್ರರು, ಒಂದೋ ನಾನು ನಿಮ್ಮನ್ನು ಆಳುತ್ತೇನೆ ಇಲ್ಲವೇ ಕೊಲ್ಲುತ್ತೇನೆ ಎಂಬ ರೀತಿಯಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ನಮ್ಮ ದೇಶವನ್ನು ರಕ್ಷಿಸಲು ನೀವು ಧೈರ್ಯದ ನಿರ್ಧಾರವನ್ನು ಕೈಗೊಳ್ಳುವುದನ್ನು ನಾವು ಬಯಸುತ್ತೇವೆ’ ಎಂದು ಹೇಳಿದ್ದಾರೆ.‘ಆಕ್ರಮಣ ಹತ್ತಿಕ್ಕುವೆ’: ಈ ಮಧ್ಯೆ, ಅಂತರರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡಕ್ಕೆ ಜಗ್ಗದ ಗಡಾಫಿ ಅವರು ಶುಕ್ರವಾರ ರಾಜಧಾನಿ ಟ್ರಿಪೊಲಿಯಲ್ಲಿರುವ ಗ್ರೀನ್ ಚೌಕದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದು; ‘ಅಗತ್ಯ ಬಂದರೆ ನಾವು ಯಾವುದೇ ವಿದೇಶಿ ಆಕ್ರಮಣ ಹಾಗೂ ಜನರ ಹೋರಾಟವನ್ನು ಹತ್ತಿಕ್ಕಬಲ್ಲೆವು’ ಎಂದು ಹೇಳಿದ್ದಾರೆ. ಗಡಾಫಿ ಭಾಷಣವನ್ನು ಸರ್ಕಾರಿ ಸ್ವಾಮ್ಯದ ಲಿಬಿಯನ್ ಟಿವಿ ಪ್ರಸಾರ ಮಾಡಿದೆ. ‘ನಾನು ಜನರ ಮಧ್ಯೆ ಇದ್ದೇನೆ. ನಾವು ಹೋರಾಡುತ್ತೇವೆ. ಅವರು ಬಯಸಿದರೆ ನಾವು ಅವರನ್ನು ಸೋಲಿಸುತ್ತೇವೆ... ಯಾವುದೇ ರೀತಿಯ ವಿದೇಶಿ ಆಕ್ರಮಣವನ್ನು ಮಟ್ಟಹಾಕುತ್ತೇವೆ’ ಎಂದು 68 ವರ್ಷ ವಯಸ್ಸಿನ ಗಡಾಫಿ ಭಾಷಣದಲ್ಲಿ ಗುಡುಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry