ಬುಧವಾರ, ಮೇ 18, 2022
24 °C

ಲಿಬಿಯಾ: ವಿಶ್ವಸಂಸ್ಥೆಯಿಂದಲೂ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈರೊ (ಪಿಟಿಐ): ಲಿಬಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸುವಂತೆ ಜಾಗತಿಕ ನಾಯಕರು ಮಾಡಿರುವ ಮನವಿಗೆ ಸ್ಪಂದಿಸದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ  ಆಡಳಿತ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಭಾನುವಾರ ವಾಣಿಜ್ಯ ವ್ಯವಹಾರ ನಿರ್ಬಂಧ, ಪ್ರಯಾಣ ನಿಷೇಧ, ಆಸ್ತಿಪಾಸ್ತಿಗಳ ಸ್ಥಗಿತ ಸೇರಿದಂತೆ ಎಲ್ಲಾ ರೀತಿಯ  ದಿಗ್ಬಂಧನ ಹೇರಿದೆ.ಲಿಬಿಯಾದಲ್ಲಿ ಪ್ರತಿಭಟನಾಕಾರರನ್ನು   ಅಮಾನುಷವಾಗಿ ಹತ್ತಿಕ್ಕುತ್ತಿರುವುದನ್ನು ಖಂಡಿಸಿರುವ ಭಾರತ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಇತರ 14 ಸದಸ್ಯರಾಷ್ಟ್ರಗಳು, ಗಡಾಫಿ ಆಡಳಿತ ವಿರುದ್ಧ ದಿಗ್ಬಂಧನ ಹೇರುವ ನಿರ್ಣಯದ ಪರ ಒಮ್ಮತದಿಂದ ಭಾನುವಾರ ಮತ ಚಲಾಯಿಸಿದವು.ಈ ದಿಗ್ಬಂಧನದ ಪ್ರಕಾರ, ಲಿಬಿಯಾದೊಂದಿಗೆ ಯಾವುದೇ ರೀತಿಯ ವಾಣಿಜ್ಯ ವ್ಯವಹಾರಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಯಾಣಕ್ಕೆ ನಿಷೇಧ ಹಾಗೂ ಗಡಾಫಿ  ಆಸ್ತಿಪಾಸ್ತಿಗಳನ್ನು ಸ್ಥಗಿತಗೊಳಿಸಲಾಗಿದೆ.ಲಿಬಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಸಂಬಂಧ ತಕ್ಷಣ ತನಿಖೆ ನಡೆಸುವಂತೆ ಹೇಗ್ ಮೂಲದ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ (ಐಸಿಸಿ) ಭದ್ರತಾ ಮಂಡಳಿ ಸೂಚಿಸಿದೆ. ಗಡಾಫಿ  ಬೆಂಬಲಿತ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ 1000ಕ್ಕೂ ಅಧಿಕ ನಾಗರಿಕರು ಪ್ರಾಣಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಅತ್ಯುನ್ನತ ಮಾನವ ಹಕ್ಕುಗಳ ಸಂಸ್ಥೆ  ಅಂದಾಜಿಸಿದ ಬಳಿಕ ಭದ್ರತಾಮಂಡಳಿ ಈ ದಿಗ್ಬಂಧನ ಹೇರುವ ನಿರ್ಣಯ ಕೈಗೊಂಡಿದೆ. ‘ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆಯನ್ನು ಬಳಸುವುದನ್ನು ನಾವು ಖಂಡಿಸುತ್ತೇವೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತೀಯ ರಾಯಭಾರಿ ಹರ್‌ದೀಪ್ ಸಿಂಗ್ ನಿರ್ಣಯ ಅಂಗೀಕರಿಸಿದ ಬಳಿಕ ಹೇಳಿದ್ದಾರೆ. ಹಿಂಸಾಚಾರವನ್ನು ತನಿಖೆ ನಡೆಸುವಂತೆ ಐಸಿಸಿಗೆ ಸೂಚಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧಿಸೂಚನೆ ಹೊರಡಿಸಿರುವುದು ಇದೇ ಮೊದಲ ಬಾರಿ ಎಂದು ವಿಶ್ವಸಂಸ್ಥೆಯಲ್ಲಿರುವ ಅಮೆರಿಕ ರಾಯಭಾರಿ ಸುಸಾನ್ ರೈಸ್ ಹೇಳಿದ್ದಾರೆ.ಈ ಮಧ್ಯೆ, ನಲುವತ್ತೊಂದು ವರ್ಷಗಳ ತನ್ನ ಆಡಳಿತದ ವಿರುದ್ಧ ಕಳೆದ ಎರಡು ವಾರಗಳಿಂದ ನಾಗರಿಕರು ನಡೆಯುತ್ತಿರುವ ಪ್ರತಿಭಟನೆಯನ್ನು ಉಗ್ರವಾಗಿ ಹತ್ತಿಕ್ಕಲು ಮುಂದಾಗಿರುವ ಗಡಾಫಿ,  ತನ್ನ ಬೆಂಬಲಿಗರ ಕೈಗೂ ಶಸ್ತ್ರಗಳನ್ನು ನೀಡಿದ್ದಾರೆ. ಇವರು ಟ್ರಿಪೊಲಿಯಾದ್ಯಂತ ಗಸ್ತು ತಿರುಗುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಲ್-ಜಜೀರಾ ಟಿವಿ ವರದಿ ಮಾಡಿದೆ.‘ಯಾವುದೇ  ರೀತಿಯ ವಿದೇಶಿ ಹಾಗೂ ಜನರ ಆಕ್ರಮಣವನ್ನು ನಾವು ಹತ್ತಿಕ್ಕಬಲ್ಲೆವು’  ಎಂದು  ಗಡಾಫಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಭಾಷಣವನ್ನು ಸರ್ಕಾರಿ ಸ್ವಾಮ್ಯದ ಟಿವಿ ವರದಿ ಶನಿವಾರ ಮಾಡಿತ್ತು. ಭದ್ರತಾ ಪಡೆಗಳು ನಡೆಸುತ್ತಿರುವ ದಾಳಿಯನ್ನು ಲೆಕ್ಕಿಸದೆ ಪ್ರತಿಭಟನಾಕಾರು ಗಡಾಫಿ ವಿರೋಧಿ ಹೋರಾಟವನ್ನು ಮುಂದುವರೆಸಿದ್ದಾರೆ.ಇದರ ನಡುವೆಯೇ ಲಿಬಿಯಾದ ಹಲವು ಪ್ರದೇಶಗಳಲ್ಲಿ ಸೈನಿಕರು ಕೂಡ ಸರ್ಕಾರಿ ವಿರೋಧಿ ಆಂದೋಲನದಲ್ಲಿ ನಾಗರಿಕರೊಂದಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಶನಿವಾರ ಚಿತ್ರೀಕರಿಸಿದ್ದು ಎನ್ನಲಾದ ದೃಶ್ಯವೊಂದು ಅಜ್‌ಜವಿಯಾ ನಗರದಲ್ಲಿ ಸೈನಿಕರು ಪ್ರತಿಭಟನಾಕಾರರ ಗುಂಪಿಗೆ ಸೇರುತ್ತಿರುವುದನ್ನು ತೋರಿಸಿದೆ.ಈ ಮಧ್ಯೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಜರ್ಮನಿ ಚಾನ್ಸೆಲರ್ ಆಂಜೆಲಾ ಮಾರ್ಕೆಲ್ ಅವರಿಗೆ ದೂರವಾಣಿ ಕರೆ ಮಾಡಿ ಲಿಬಿಯಾದಲ್ಲಿರುವ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಗಡಾಫಿ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಲಿಬಿಯಾ ನಾಯಕ ಅಧಿಕಾರ ತ್ಯಜಿಸುವ ಕಾಲ ಬಂದಿದೆ ಎಂದಿದ್ದಾರೆ.ರಾಯಭಾರಿ ಕಚೇರಿ ಮುಚ್ಚಿದ ಪಾಶ್ಚಿಮಾತ್ಯ ರಾಷ್ಟ್ರಗಳು: ಏತನ್ಮಧ್ಯೆ ಹಿಂಸಾಚಾರ ಪೀಡಿತ ಲಿಬಿಯಾದಲ್ಲಿರುವ ತಮ್ಮ ರಾಯಭಾರಿ ಕಚೇರಿಗಳನ್ನು  ಹೆಚ್ಚಿನ ರಾಷ್ಟ್ರಗಳು ತಾತ್ಕಾಲಿಕವಾಗಿ ಮುಚ್ಚಿವೆ. ಅಮೆರಿಕ, ಕೆನಡಾ, ಬ್ರಿಟನ್, ಫ್ರಾನ್ಸ್ ರಾಷ್ಟ್ರಗಳು ಟ್ರಿಪೊಲಿಯಲ್ಲಿದ್ದ ತಮ್ಮ ರಾಯಭಾರ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ರಾಯಭಾರಿ ಹಾಗೂ ಕಚೇರಿ ಸಿಬ್ಬಂದಿಯನ್ನು ಸ್ವದೇಶಕ್ಕೆ ವಾಪಸ್ ಕರೆಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.