ಸೋಮವಾರ, ಮೇ 23, 2022
30 °C

ಲಿಬಿಯಾ : ಹೋರಾಟಗಾರರ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈರೊ/ ನ್ಯೂಯಾರ್ಕ್ (ಪಿಟಿಐ): ಲಿಬಿಯಾದಲ್ಲಿ ಆಡಳಿತ ವಿರೋಧಿ ಪ್ರತಿಭಟನಾಕಾರರ ವಶದಲ್ಲಿದ್ದ ಬೆಂಘಝಿ ನಗರದ ಮೇಲೆ ಶನಿವಾರ ಹಠಾತ್ ವಾಯುದಾಳಿ ಹಾಗೂ ಭೂದಾಳಿ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರನ್ನು ಗುರಿಯಾಗಿಟ್ಟುಕೊಂಡು ಯಾವ ಕ್ಷಣದಲ್ಲಿ ದಾಳಿ ನಡೆಸುವ ಪರಿಸ್ಥಿತಿ ಇದೆ.

ಲಿಬಿಯಾದ ಎರಡನೇ ಅತಿದೊಡ್ಡ ನಗರವಾದ ಬೆಂಘಝಿಯಲ್ಲಿ  ಯುದ್ಧ ವಿಮಾನಗಳು ಶನಿವಾರ ಪ್ರತಿಭಟನಾಕಾರರ ಮೇಲೆ ಬಾಂಬ್ ದಾಳಿ ನಡೆಸಿದ್ದು, ಸಾವು ನೋವಿನ ವರದಿಗಳು ತಿಳಿದುಬಂದಿಲ್ಲ. ಇದೇ ವೇಳೆ ದಂಗೆಕೋರರೆಡೆಗೆ ಶೆಲ್‌ಗಳ ದಾಳಿ ನಡೆಸಿ ಗುಂಡಿನ ಮಳೆಗರೆಯಲಾಗಿದೆ. ಇದಕ್ಕೆ ಮುನ್ನ ಶುಕ್ರವಾರ ರಾತ್ರಿಯಿಡೀ ಎದುರಾಳಿಗಳ ನಡುವೆ ಪರಸ್ಪರ ಗುಂಡಿನ ಕಾದಾಟ ನಡೆಯಿತು ಎನ್ನಲಾಗಿದೆ.

ಈ ದಾಳಿಯಿಂದ ನಾಗರಿಕರು ತತ್ತರಿಸಿದ್ದು, ನ್ಯಾಟೋ ಪಡೆಗಳು ತಡಮಾಡದೆ ತಮ್ಮ ರಕ್ಷಣೆಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗರದ ಯುವ ಜನರು ಅಪಾರ ಪ್ರಮಾಣದಲ್ಲಿ ಬಾಟಲಿಗಳನ್ನು ಸಂಗ್ರಹಿಸಿದ್ದು, ಸ್ವತಃ ಗ್ಯಾಸೊಲಿನ್ ಬಾಂಬ್‌ಗಳ ತಯಾರಿಕೆಗೆ ಕೈಹಾಕಿದ್ದಾರೆ. ಇನ್ನು ಕೆಲವರು ಲೋಹದ ಗುಜರಿ, ಕಂಬಿಗಳು ಇತ್ಯಾದಿಗಳನ್ನು ಹಾದಿ ಬೀದಿಗಳಲ್ಲಿ ಅಡ್ಡವಿಟ್ಟು ರಸ್ತೆಗಳನ್ನು ಮುಚ್ಚಿದ್ದಾರೆ.

ಕೆಲ ಸಮಯದ ನಂತರ ಬೆಂಘಝಿ ಹೊರವಲಯದಲ್ಲಿ ಯುದ್ಧವಿಮಾನವೊಂದನ್ನು ಹೊಡೆದುರುಳಿಸಲಾಗಿದ್ದು, ಪ್ರತಿಭಟನಾಕಾರರು ಹರ್ಷೋದ್ಗಾರದಿಂದ ಕುಣಿದು ಕುಪ್ಪಳಿಸಿದರು.

ಒಬಾಮ ಎಚ್ಚರಿಕೆ: ಪ್ರತಿಭಟನಾಕಾರರ ಮೇಲೆ ದಾಳಿ ನಡೆಸುವ ಮೂಲಕ ಗಡಾಫಿ ವಿಶ್ವಸಂಸ್ಥೆಯ ಕದನ ವಿರಾಮ ಗೊತ್ತುವಳಿಯನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ದಾಳಿ ಮುಂದುವರಿಸಿದರೆ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಅಂತಿಮ ಎಚ್ಚರಿಕೆ ರವಾನಿಸಿದ್ದಾರೆ.

 

ಗಡಾಫಿ ಅವರು ತಮ್ಮ ಪಡೆಗಳನ್ನು ಬೆಂಘಝಿ ಹಾಗೂ ಮತ್ತಿತರ ನಗರಗಳಿಂದ ಹಿಂದಕ್ಕೆ ಕರೆಸಿಕೊಂಡು ನೀರು, ವಿದ್ಯುತ್ ಮತ್ತು ಅಡುಗೆ ಅನಿಲ ಪುನರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಒಬಾಮ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಧಿಸಿದ್ದ ಕದನ ವಿರಾಮ ನಿಯಮಾವಳಿಯನ್ನು ಗಡಾಫಿ ಉಲ್ಲಂಘಿಸಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿರುವ ಸೂಸನ್ ರೈಸ್ ದೂಷಿಸಿದ್ದಾರೆ.

ಅಮೆರಿಕದ ಮಿತ್ರ ಪಡೆಗಳ ವೈಮಾನಿಕ ಬಾಂಬರ್‌ಗಳು, ಟ್ಯಾಂಕರುಗಳು, ಹೆಲಿಕಾಪ್ಟರುಗಳು ಹಾಗೂ ಬೇಹುಗಾರಿಕಾ ವಿಮಾನಗಳನ್ನು ಈಗಾಗಲೇ ಆಯಕಟ್ಟಿನ ಜಾಗದಲ್ಲಿ ಸನ್ನದ್ಧವಾಗಿ ಇರಿಸಲಾಗಿದೆ.

ಅಮೆರಿಕ, ಆಫ್ರಿಕಾ, ಅರಬ್ ರಾಷ್ಟ್ರಗಳು ಹಾಗೂ ಇನ್ನಿತರ ಪಾಶ್ಚಿಮಾತ್ಯ ರಾಷ್ಟ್ರಗಳು ಪ್ಯಾರಿಸ್‌ನಲ್ಲಿ ತುರ್ತು ಸಭೆ ನಡೆಸಿ, ಲಿಬಿಯಾ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಸಾಧ್ಯತೆ ಕುರಿತು ಚರ್ಚಿಸಿದವು.

ಆದರೆ ಪ್ರತಿಭಟನಾಕಾರರ ಮೇಲೆ ನಡೆದಿರುವ ದಾಳಿಗೆ ತಾನು ಕಾರಣ ಅಲ್ಲ ಎಂದು ಲಿಬಿಯಾ ಆಡಳಿತ ಸಮರ್ಥಿಸಿಕೊಂಡಿದೆ. ‘ನಮ್ಮ ಪಡೆಗಳು ಈಗ ಯಾವುದೇ ದಾಳಿ ಕಾರ್ಯಾಚರಣೆ ನಡೆಸುತ್ತಿಲ್ಲ. ಸಶಸ್ತ್ರ ಪಡೆಗಳು ಬೆಂಘಝಿ ನಗರದ ಹೊರವಲಯದಲ್ಲಿ ಬೀಡುಬಿಟ್ಟಿವೆ. ನಗರವನ್ನು ಪ್ರವೇಶಿಸುವ ಯಾವುದೇ ಉದ್ದೇಶ ನಮ್ಮ ಪಡೆಗಳಿಗೆ ಇಲ್ಲ’ ಎಂದು ವಿದೇಶಾಂಗ ಸಚಿವ ಖಾಲಿದ್ ಕಾಯಿಮ್ ಹೇಳಿದ್ದಾರೆ.

 

 

 

 

 

  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.