ಲೀಗ್‌ನಿಂದ ಹಿಂದೆ ಸರಿಯುವ ಬೆದರಿಕೆ

7
ಐಬಿಎಲ್ ಹರಾಜು ವಿವಾದಕ್ಕೆ ಸಿಗದ ಮುಕ್ತಿ: ಅನ್ಯಾಯವಾಗಿದೆ ಎಂದು ರೂಪೇಶ್, ಸನಾವೆ ಆಕ್ರೋಶ

ಲೀಗ್‌ನಿಂದ ಹಿಂದೆ ಸರಿಯುವ ಬೆದರಿಕೆ

Published:
Updated:
ಲೀಗ್‌ನಿಂದ ಹಿಂದೆ ಸರಿಯುವ ಬೆದರಿಕೆ

ನವದೆಹಲಿ (ಪಿಟಿಐ/ಐಎಎನ್‌ಎಸ್): ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಹರಾಜು ಪ್ರಕ್ರಿಯೆ ಸಂಬಂಧ ಉದ್ಭವಿಸಿರುವ ವಿವಾದಕ್ಕೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಕಿಡಿಕಾರಿದ ಬೆನ್ನಲ್ಲೇ, ಹರಾಜಿನಲ್ಲಿ ತಮಗೂ ಅನ್ಯಾಯವಾಗಿದೆ ಎಂದು ಅಗ್ರ ಡಬಲ್ಸ್ ಆಟಗಾರರಾದ ರೂಪೇಶ್ ಕುಮಾರ್ ಹಾಗೂ ಸನಾವೆ ಥಾಮಸ್ ಲೀಗ್‌ನಿಂದಲೇ ಹಿಂದೆ ಸರಿಯುವ ಬೆದರಿಕೆ ಹಾಕಿದ್ದಾರೆ.`ಯಾವುದೇ ಮಾಹಿತಿ ನೀಡದೆ ನನ್ನ ಮೂಲಬೆಲೆಯನ್ನು ಸಂಘಟಕರು ಕಡಿಮೆ ಮಾಡಿದ್ದಾರೆ. ಇದು ನನಗೆ ಆಘಾತ ಉಂಟು ಮಾಡಿದೆ. ಈ ಕ್ರಮದಿಂದ ಅನ್ಯಾಯವಾಗಿದೆ. ಏಷ್ಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಕ್ರೀಡಾಕೂಟ, ಥಾಮಸ್ ಕಪ್ ಹಾಗೂ ಸೂಪರ್ ಸರಣಿ ಟೂರ್ನಿಗಳಲ್ಲಿ ಆಡಿದ ಹಿರಿಯ ಆಟಗಾರರ ಮೂಲಬೆಲೆ 9 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ ಎಂದು ಹರಾಜಿನ ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಒಮ್ಮೆಲೇ ಮೂಲಬೆಲೆ ಕಡಿಮೆ ಮಾಡಿದ್ದಾರೆ. ಏಕೆ ಈ ರೀತಿ ಆಗಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ' ಎಂದು ಆಂಧ್ರಪ್ರದೇಶ ಮೂಲದ ರೂಪೇಶ್ ತಿಳಿಸಿದ್ದಾರೆ.`ನಾನು ಮಾತನಾಡುವುದೇ ಕಡಿಮೆ. ಆದರೆ ಈ ಬಾರಿ ಸುಮ್ಮನೆ ಇರಲು ಮನಸ್ಸು ಒಪ್ಪುತ್ತಿಲ್ಲ. ಈ ಬಗ್ಗೆ ನಾನು ಶೀಘ್ರವೇ ಸ್ಪಷ್ಟ ನಿಲುವು ತಾಳಬೇಕು. ಲೀಗ್‌ನ ಜಂಟಿ ಆಯೋಜಕರಾದ ಸ್ಪೋರ್ಟ್ಸ್ ಸಲ್ಯೂಷನ್ಸ್‌ನವರು ನನಗೆ ಒಪ್ಪಂದ ಪತ್ರ ಕಳುಹಿಸಿದ್ದಾರೆ. ಅದಕ್ಕೆ ಸಹಿಹಾಕಿ ವಾಪಸ್ ಕಳುಹಿಸುವಂತೆ ಕೋರಿದ್ದಾರೆ. ಈಗ ಏನು ಮಾಡುವುದು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಇದು ಕೇವಲ ಹಣದ ವಿಷಯವಲ್ಲ. ಗೌರವದ ಪ್ರಶ್ನೆ. ನಾನು ಜಿಲ್ಲಾ ಮಟ್ಟದ ಆಟಗಾರನಲ್ಲ' ಎಂದು ಅವರು ನುಡಿದಿದ್ದಾರೆ.`9 ಲಕ್ಷ ರೂಪಾಯಿ ಮೂಲಬೆಲೆಯ ಒಪ್ಪಂದಕ್ಕೆ ನಾನು ಸಹಿ ಹಾಕಿದ್ದೆ. ಆದರೆ ಮೂಲಬೆಲೆಯನ್ನು ಮೂರು ಲಕ್ಷ ರೂಪಾಯಿಗೆ ಕಡಿತಗೊಳಿಸಲಾಗಿದೆ ಎಂಬ ವಿಷಯ ನನಗೆ ಮಾಧ್ಯಮಗಳಿಂದ ಗೊತ್ತಾಯಿತು. ಈ ವಿಷಯವನ್ನು ಅರಗಿಸಿಕೊಳ್ಳುವುದು ಕಷ್ಟ' ಎಂದು ರೂಪೇಶ್ ಅವರ ಜೊತೆಗಾರ ಸನಾವೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರೂಪೇಶ್ ಹಾಗೂ ಸನಾವೆ ಒಂದು ಹಂತದಲ್ಲಿ ವಿಶ್ವ ಡಬಲ್ಸ್ ರರ‍್ಯಾಂಕಿಂಗ್ ನಲ್ಲಿ 13ನೇ ಸ್ಥಾನದಲ್ಲಿದ್ದರು. ಸೋಮವಾರ ನವದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಐಬಿಎಲ್‌ನ ಚೊಚ್ಚಲ ಹರಾಜು ಪ್ರಕ್ರಿಯೆಯಲ್ಲಿ ಇವರಿಬ್ಬರ ಮೂಲಬೆಲೆಯನ್ನು 15 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಆದರೆ ಸಂಘಟಕರು ಒಮ್ಮೆಲೇ ರೂಪೇಶ್ ಹಾಗೂ ಸನಾವೆ ಅವರ ಮೂಲಬೆಲೆಯನ್ನು 3 ಲಕ್ಷ ರೂಪಾಯಿಗೆ ಇಳಿಸಿದ್ದರು. ಇದೇ ಬೆಲೆಗೆ ಈ ಇಬ್ಬರು ಆಟಗಾರರನ್ನು ಪುಣೆ ಪಿಸ್ಟನ್ಸ್ ಫ್ರಾಂಚೈಸ್ ಖರೀದಿಸಿತು.`10 ವರ್ಷಗಳಿಂದ ನಾವು ವಿಶ್ವ ಚಾಂಪಿಯನ್‌ಷಿಪ್, ಥಾಮಸ್ ಕಪ್, ಸುದೀರ್‌ಮನ್ ಕಪ್, ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇವೆ. ದೇಶವನ್ನು ಪ್ರತಿನಿಧಿಸಿ, ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿರುವ ನಮ್ಮನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು' ಎಂದು ಕೇರಳ ಮೂಲದ ಸನಾವೆ ಬೇಸರದಿಂದ ಹೇಳಿದ್ದಾರೆ.ಡಬಲ್ಸ್ ಆಟಗಾರ್ತಿಯರಾದ ಜ್ವಾಲಾ ಹಾಗೂ ಅಶ್ವಿನಿ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಮೂಲಬೆಲೆಯನ್ನು ಸುಮಾರು 30 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಆದರೆ ಈ ಆಟಗಾರ್ತಿಯರನ್ನು ಯಾರೂ ಖರೀದಿಸದ ಕಾರಣ ಕೊನೆಕ್ಷಣದಲ್ಲಿ ಇವರ ಮೂಲಬೆಲೆಯಲ್ಲಿ ಬದಲಾವಣೆ ಮಾಡಲು ಸಂಘಟಕರು ತೀರ್ಮಾನಿಸಿದ್ದರು. ಇದಕ್ಕೆ ಕಾರಣ ಈ ಲೀಗ್‌ನಲ್ಲಿ ಮಹಿಳೆಯರ ಡಬಲ್ಸ್ ಪಂದ್ಯಗಳು ಇಲ್ಲದಿರುವುದು. ಮೂಲಬೆಲೆ ಕಡಿಮೆ ಮಾಡಿದ ಮೇಲೆ ಅಶ್ವಿನಿ 15 ಲಕ್ಷ ರೂಪಾಯಿಗೆ ಪುಣೆ ಪಿಸ್ಟನ್ಸ್ ತಂಡದ ಪಾಲಾದರು. ಜ್ವಾಲಾ ಅವರಿಗೆ 18.6 ಲಕ್ಷ ರೂಪಾಯಿ ನೀಡಿ ದೆಹಲಿ ಸ್ಮ್ಯಾಷರ್ಸ್ ತಂಡದವರು ಖರೀದಿಸಿದರು.

ಪ್ರದ್ನ್ಯಾಗೆ ಅಚ್ಚರಿ

ಐಬಿಎಲ್ ಹರಾಜಿನಲ್ಲಿ ತಮಗೆ ಲಭಿಸಿರುವ ಹಣದ ಬಗ್ಗೆ ಮಹಾರಾಷ್ಟ್ರದ ಆಟಗಾರ್ತಿ ಪ್ರದ್ನ್ಯಾ ಗಾದ್ರೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರದ್ನ್ಯಾ 27.6 ಲಕ್ಷ ರೂಪಾಯಿ ಮೊತ್ತಕ್ಕೆ ಹೈದರಾಬಾದ್ ಹಾಟ್‌ಷಾಟ್ ತಂಡ ಸೇರಿಕೊಂಡಿದ್ದಾರೆ. ಅವರ ಮೂಲಬೆಲೆಯನ್ನು 6 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಗಾದ್ರೆ ಅವರನ್ನು ಖರೀದಿಸಲು ಲಖನೌ ವಾರಿಯರ್ಸ್ ಹಾಗೂ ಹೈದರಾಬಾದ್ ಹಾಟ್‌ಷಾಟ್ ತಂಡಗಳು ಸ್ಪರ್ಧೆಗಿಳಿದಿದ್ದವು.`ಖಂಡಿತ ಇಷ್ಟೊಂದು ಹಣವನ್ನು ನಿರೀಕ್ಷಿಸಿರಲಿಲ್ಲ. 12ರಿಂದ 15 ಲಕ್ಷ ರೂಪಾಯಿ ಸಿಗಬಹುದು ಎಂದುಕೊಂಡಿದ್ದೆ. ಆದರೆ ಬಳಿಕ ಮಾಹಿತಿ ಲಭ್ಯವಾದಾಗ ನಿಜವೇ ಎಂದು ಹಲವು ಬಾರಿ ಪರಿಶೀಲಿಸಿದೆ' ಎಂದು 22 ವರ್ಷ ವಯಸ್ಸಿನ ನಾಸಿಕ್ ಮೂಲದ ಗಾದ್ರೆ ತಿಳಿಸಿದ್ದಾರೆ.ಡಬಲ್ಸ್ ಪರಿಣತೆ ಹಾಗೂ ಹಿರಿಯ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರಿಗಿಂತ ಹೆಚ್ಚಿನ ಹಣ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೇ, ಅಶ್ವಿನಿ ಹಾಗೂ ಪ್ರದ್ನ್ಯಾ ಅವರ ಸಾಧನೆಗಳು ಅದಲು ಬದಲಾಗಿ ಈ ರೀತಿಯ ಎಡವಟ್ಟಾಗಿದೆ ಎಂದು ಕೆಲ ವೆಬ್‌ಸೈಟ್‌ಗಳಲ್ಲಿ ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry