ಲುಂಗಿ ತೊಟ್ಟ ಕಷ್ಟ

7

ಲುಂಗಿ ತೊಟ್ಟ ಕಷ್ಟ

Published:
Updated:
ಲುಂಗಿ ತೊಟ್ಟ ಕಷ್ಟ

ಗಾಢ ನೀಲಿ ಜೀನ್ಸ್, ಕಡು ಹಸಿರು ಬಣ್ಣದ ಟಿ-ಶರ್ಟ್, ಅರ್ಧ ಮುಖ ಮುಚ್ಚುವಂಥ ತಂಪು ಕನ್ನಡಕ... ಆರಾಮಾಗಿ ಮೈ ಚಾಚಿಕೊಂಡು ಸೋಫಾದ ಮೇಲೆ ಅಭಯ್ ಡಿಯೊಲ್ ಕುಳಿತಿದ್ದರು.ಯಾವುದೇ ಕ್ಯಾಮೆರಾಗೂ ಮುಖ ಕೊಡದೆ, ಯಾರನ್ನೂ ಎದುರಿಸದೆ... ಕನ್ನಡಕದ ಹಿಂದಿನ ಕಣ್ಣೊಳಗಿನ ಗುಟ್ಟನ್ನು ಬಿಟ್ಟುಕೊಡದೇ ಕಾಲುಚಾಚಿ ಕುಳಿತಿದ್ದರು.ದಿವಾಕರ್ ಬ್ಯಾನರ್ಜಿ ನಿರ್ದೇಶನದ `ಶಾಂಘೈ~ ಚಿತ್ರ ಪ್ರಚಾರದ ಗೋಷ್ಠಿ ಅದಾಗಿತ್ತು. ಮಾಧ್ಯಮದಿಂದ ಅದೆಷ್ಟೇ ಪ್ರಶ್ನೆಗಳು ಅಭಯ್ ಅವರತ್ತ ತೂರಿದರೂ ಉತ್ತರ ಸಿಕ್ಕಿದ್ದು ಕೆಲವಕ್ಕೆ ಮಾತ್ರ.ಅಭಯ್, ನಿಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂದೆನಿಸಿದೆಯೇ?

ಆ ಬಗ್ಗೆ ಪ್ರೇಕ್ಷಕರು ಹೇಳಬೇಕು.ಇದು ಸವಾಲಿನ ಪಾತ್ರ ಎನಿಸಿತ್ತೆ?

ಪಂಜಾಬಿ ಯುವಕನಿಗೆ ದಕ್ಷಿಣ ಮೂಲದ ಐಎಎಸ್ ಅಧಿಕಾರಿಯಾಗುವುದು, ಲುಂಗಿ ಉಡುವುದು ಸವಾಲಿನ ಪಾತ್ರವೇ ಅಲ್ಲವೇ? ಇನ್ನು ತಮಿಳು ಉಚ್ಚಾರಕ್ಕಾಗಿ ಕಷ್ಟ ಪಟ್ಟಿದ್ದೇನೆ. ಮಾಗಿ ಎಂಬುವವರು ದಕ್ಷಿಣ ಭಾರತೀಯ ಶೈಲಿಯಲ್ಲಿ ಹಿಂದಿ ಮಾತನಾಡುವುದನ್ನು ಹೇಳಿಕೊಟ್ಟರು. ಚಿತ್ರ ಮಾಡುತ್ತ ಮಾಡುತ್ತ ಸರಳವೆನಿಸತೊಡಗಿತು.

ನೀವು ಈ ಚಿತ್ರದ ನಾಯಕರೋ ಅಥವಾ ಖಳನಾಯಕರೋ?

ಚಿತ್ರದ ಕೊನೆಯವರೆಗೂ ನಾನು ಖಳನಾಗಿ ನಟಿಸಿದ್ದೇನೆಯೇ... ನ್ಯಾಯಪರವಾಗಿದ್ದೇನೆಯೇ ಎಂಬುದು ಗೊತ್ತಾಗದಂಥ ಪಾತ್ರ. ಅಧಿಕಾರ ಕೈಯಲ್ಲಿದ್ದಾಗ ಜನಹಿತಕ್ಕಾಗಿ ಅಥವಾ ಸ್ವಹಿತಕ್ಕಾಗಿ ಎಂಬ ಎರಡು ಆಯ್ಕೆಗಳಿರುತ್ತವೆ. ಆ ಆಯ್ಕೆಗಳಲ್ಲಿ ಯಾವುದು ನನ್ನನ್ನು ಸೆಳೆಯುತ್ತದೆ ಎಂಬುದನ್ನು ಚಿತ್ರ ನೋಡಿ ನಿರ್ಧರಿಸಿ.`ಶಾಂಘೈ~ಗೂ ಲುಂಗಿಗೂ ಏನು ಸಂಬಂಧ?

`ಗೆಹರಾ ಸಂಬಂಧ್~ (ಆಳವಾದ ಸಂಬಂಧ ಇದೆ). ಇಲ್ಲಿ ನಾನು ದಕ್ಷಿಣ ಭಾರತೀಯ ಮೂಲದವ. ನಾನು ಯಾವಾಗಲೂ ಒಂದು ಟೀ ಷರ್ಟ್, ಜೀನ್ಸ್ ಅನ್ನು ಮಾತ್ರ ಧರಿಸುವವ. ಅಪರೂಪಕ್ಕೆ ಮೇಲೊಂದು ಕೋಟು ಧರಿಸುತ್ತೇನೆ. ಇಡೀ ಸಿನಿಮಾದಲ್ಲಿ ಐಎಎಸ್ ಗೆಟಪ್ ನೀಡಲು ಫಾರ್ಮಲ್ಸ್ ಅನ್ನೇ ಧರಿಸಿದ್ದೇನೆ.

 

ಇನ್ನು ದಕ್ಷಿಣ ಮೂಲದವ ಎಂಬುದನ್ನು ತೋರಿಸಲು ಲುಂಗಿ ಉಡಲೇಬೇಕಾಗಿತ್ತು. ದಿವಾಕರ್ ಇದನ್ನು ಹೇಳಿದಾಗ ನಾನು ಬೆವೆತುಹೋಗಿದ್ದೆ. ದೇಹ ಪ್ರದರ್ಶನದಲ್ಲಿ ನಾನು ಯಾವತ್ತೂ ನಂಬಿಕೆ ಇರಿಸಿದವನಲ್ಲ. ಯಾವ ಚಿತ್ರಗಳಲ್ಲೂ ಅಂಗಿ ಬಿಚ್ಚಿಲ್ಲ.ಈ ಚಿತ್ರಕ್ಕಾಗಿಯೂ ಜಿಮ್‌ಗೆ ಹೋಗಿ ದೇಹ ಹುರಿಗೊಳಿಸಬೇಡ ಎಂದು ದಿವಾಕರ್ ಹೇಳಿದ್ದರು. ಸ್ಟಿರಾಯ್ಡ ಬಳಸಿ ಮೈಕೈತುಂಬಿಸಿಕೊಳ್ಳುವುದೂ ಬೇಡ ಎಂದೂ ಸೂಚಿಸಿದ್ದರು. `ಸಾವರಿಯಾ~ ಚಿತ್ರದಲ್ಲಿ ಟವಲ್ ಸುತ್ತಿಕೊಂಡಿದ್ದ ರಣಬೀರ್ ನೆನಪಾಗುತ್ತಿದ್ದ. `ಆದರೆ ಇದು, ಟವಲ್ ಅಲ್ಲ~ ಎಂದು ದಿವಾಕರ್ ಒತ್ತಿ ಒತ್ತಿ ಹೇಳಿದ್ದರು. ಲೈಟ್ ವ್ಯವಸ್ಥೆಯ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ ಮೇಲೆಯೇ ಒಪ್ಪಿಕೊಂಡಿದ್ದು.ನಿಮ್ಮ ಜೊತೆಗಾತಿ ಹೇಗಿರಬೇಕು?


ಸಾಹಸಿಯಾಗಿರಬೇಕು. ನಾನು ಅಡ್ವೆಂಚರಸ್ ಆಗಿರುವುದನ್ನು ಇಷ್ಟ ಪಡುತ್ತೇನೆ. ನಾನು ಹೇಳದೆಯೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವಂತಿರಬೇಕು. ಪ್ರವಾಸವನ್ನು ಇಷ್ಟಪಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ನಾನು ಇದ್ದಂತೆಯೇ ಇಷ್ಟಪಡಬೇಕು.ಈ ವರ್ಷವಾದರೂ ಧರ್ಮೇಂದ್ರ, ಸನ್ನಿ ದೇವನ್ ಜೊತೆಗೆ ನಟಿಸುತ್ತಿದ್ದೀರಾ?

ಕುಟುಂಬದವರೊಡನೆ ನಟಿಸುವುದು ಅತಿ ಕಷ್ಟ. ನಾನು ಈ ವರೆಗೂ ನನಗಿಷ್ಟವಾದ ಪ್ರಾಜೆಕ್ಟ್‌ಗಳಲ್ಲಿ ಮಾತ್ರ ನಟಿಸಿದ್ದೇನೆ. ಸದ್ಯಕ್ಕೆ ಏನೂ ಹೇಳಲಾಗದು ಎಂದು ಮಾತ್ರ ಹೇಳಬಲ್ಲೆ.ಇಮ್ರಾನ್ ಹಶ್ಮಿ ಜೊತೆಗಿನ ಅನುಭವ?


ಅದ್ಭುತ... ಅವನೊಬ್ಬ ಉತ್ತಮ ನಟ. ಆದರೆ ಚಿತ್ರೋದ್ಯಮದಲ್ಲಿ ನನ್ನನ್ನು ಕಡೆಗಣಿಸಿರುವಂತೆಯೇ ಇಮ್ರಾನ್ ಸಾಮರ್ಥ್ಯವನ್ನು ಕೂಡ ಕಡೆಗಣಿಸಲಾಗಿದೆ. ನಮಗಿಬ್ಬರಿಗೂ ನಮ್ಮ ಸಾಮರ್ಥ್ಯಕ್ಕೆ ತಕ್ಕ ಅವಕಾಶಗಳು ಸಿಕ್ಕಿಲ್ಲ ಅಂತ ಅನ್ನಿಸಿದೆ. ಈ ಚಿತ್ರದಲ್ಲಿ ಇಮ್ರಾನ್ ನನಗಿಂತ ಚೆನ್ನಾಗಿ ನಟಿಸಿದ್ದಾನೆ ಎಂಬ ವಿಮರ್ಶೆ ಬಂದರೂ ನನಗೆ ಅಚ್ಚರಿಯಾಗಲೀ, ಹೊಟ್ಟೆ ಉರಿಯಾಗಲೀ ಆಗುವುದಿಲ್ಲ. ಆತ ಅದ್ಭುತ ನಟ.ನಿಮ್ಮ ಲುಕ್ ಬದಲಾಗಿದೆಯಲ್ಲ?


ಬಹಳಷ್ಟು... ಮೀಸೆ ಇದೆ. ಕೇವಲ ಫಾರ್ಮಲ್ಸ್ ಧರಿಸಿದ್ದೇನೆ. ಪಾರದರ್ಶಕ ಕನ್ನಡಕವನ್ನು ಬಳಸಿದ್ದೇನೆ. ಈ ಕನ್ನಡಕ ನನ್ನ ಪಾತ್ರಕ್ಕೆ ಅನೇಕ ಆಯಾಮಗಳನ್ನು ಒದಗಿಸಿದೆ. ಯಾವುದೇ ಚಿತ್ರದಲ್ಲೂ ಇಷ್ಟೊಂದು ಕ್ಲೋಸಪ್ ದೃಶ್ಯಗಳಿರಲಿಲ್ಲ. ಇಲ್ಲಿ ನನ್ನ ಮುಖದ ಭಾವಗಳನ್ನು ಸರಳವಾಗಿಯಷ್ಟೇ ಅಲ್ಲ, ಸ್ಪಷ್ಟವಾಗಿ ಓದುವಂತೆ ಕ್ಯಾಮೆರಾ ವರ್ಕ್ ಮಾಡಿದೆ.ಪ್ರಚಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದಲ್ಲವೇ?

ದಿವಾಕರ್‌ಗೆ ಪ್ರಚಾರ ಪ್ರವಾಸಗಳಲ್ಲೆಲ್ಲ ನಂಬಿಕೆ ಇಲ್ಲ. ಆದರೆ ನನ್ನ ಚಿತ್ರವನ್ನು ನಾನು ಶ್ರದ್ಧೆಯಿಂದ ಮಾಡಿರುತ್ತೇನೆ. ಅದು ಎಲ್ಲರೂ ನೋಡಲಿ ಎಂದು ಸಹಜವಾಗಿಯೇ ಬಯಸುತ್ತೇನೆ. ಚಿತ್ರ ಜನರವರೆಗೂ ತಲುಪಲು ಏನು ಬೇಕಾದರೂ ಮಾಡಲು ಸಿದ್ಧನಾಗಿದ್ದೇನೆ. ಅದಕ್ಕೆ ಬೆಂಗಳೂರಿಗೂ ಬಂದಿಲ್ಲವೇ? (ನಗು)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry